ADVERTISEMENT

ಸಿಳ್ಳೆ ಹೊಡೆಯುವ ಹರಟೆ ಮಲ್ಲರು!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಚಿತ್ರಗಳು: ಆಕಾಶ
ಚಿತ್ರಗಳು: ಆಕಾಶ   

ಪ್ರಕಾಶ.ಎಸ್.ಮನ್ನಂಗಿ

ಹರಟೆ ಯಾರಿಗೆ ಬೇಡ? ಒಂದಿಷ್ಟು ಬಿಡುವು ಸಿಕ್ಕರೂ ಹರಟೆಗೆ ಜಾರುವವರೇ ಹೆಚ್ಚಿನವರು. ಹಳ್ಳಿಗಳಲ್ಲಿ ಊರ ಮುಂದಿನ ಹರಟೆ ಕಟ್ಟೆಯಲ್ಲಿ ಪಾಲ್ಗೊಳ್ಳುವ ಖುಷಿಯೇ ಸಖತ್ತಾಗಿರುತ್ತದೆ. ಅಲ್ಲಿರುವವರೆಲ್ಲ ಹರಟೆ ಮಲ್ಲರೇ! ರಾತ್ರಿಯಾದರೂ ಹರಟೆ ಮುಗಿಯುವುದೇ ಇಲ್ಲ. ಅಲ್ಲವೇ?

ಆದರೆ ಹರಟೆ ಮನುಷ್ಯರಿಗಷ್ಟೇ ಅಲ್ಲ, ಪಕ್ಷಿಗಳಿಗೂ ಇಷ್ಟ. ಅದರಲ್ಲಿ ಎತ್ತಿದ ಕೈ ಹಳದಿ ಕಣ್ಣಿನ ಹರಟೆ ಮಲ್ಲನದು. ಸದಾ ಟ್ವೀ ಟ್ವೀಟ್ ಎಂದು ಸಿಳ್ಳೆ ಹಾಕಿಕೊಂಡು ಸಂಭಾಷಿಸುತ್ತ, ಬೇರೆ ಹಕ್ಕಿಗಳೊಂದಿಗೆ ಹರಟೆ ಹೊಡೆಯುತ್ತ ತಿರುಗುತ್ತಿರುವುದಕ್ಕೇ ಇದಕ್ಕೆ ಹೆಸರಲ್ಲೇ ಹರಟೆ ಎಂಬುದೂ ಸೇರಿಕೊಂಡುಬಿಟ್ಟಿದೆ.

ADVERTISEMENT

ಸಿಲ್ವಿಡೇ ಕುಟುಂಬದಲ್ಲಿರುವ ಈ ಹಕ್ಕಿಯ ವೈಜ್ಞಾನಿಕ ಹೆಸರು ಕ್ರೈಸೋಮಾ ಸೈನೆನ್ಸ್. ಆಂಗ್ಲ ಭಾಷೆಯಲ್ಲಿ ಯೆಲ್ಲೋ ಐಡ್ ಬಾಬ್ಲರ್ ಎನ್ನುತ್ತಾರೆ. ಇದರ ಸಿಳ್ಳಿನ ಕೂಗಿನಿಂದಲೇ ಇದು ಹರಟೆ ಮಲ್ಲ ಎಂದು ಕಂಡುಕೊಳ್ಳಬಹುದಾದಷ್ಟು ಪ್ರಸಿದ್ಧಿ.

18 ಸೆಂ.ಮೀ ಉದ್ದದ ಬಾಲ ಇದಕ್ಕಿದೆ. ಹಾರಾಡುವುದಕ್ಕಿಂತ ನೆಲದ ಮೇಲೆ ನಡೆದಾಡುವುದೇ ಇದಕ್ಕೆ ಹೆಚ್ಚು ಖುಷಿಕೊಡುತ್ತದೆ. ಸಂಘಜೀವಿಯಾದ ಇವು 5ರಿಂದ 15 ಹಕ್ಕಿಗಳ ಗುಂಪಿನಲ್ಲಿ ಒಂದರ ಹಿಂದೊಂದು ಕೂಗುತ್ತ ಹಾರಿ ಹೋಗುವುದನ್ನು ರೂಢಿಸಿಕೊಂಡಿರುತ್ತವೆ.

ದೇಹದ ಮೇಲ್ಭಾಗ ಕಂದು ಬಣ್ಣ. ಪ್ರೌಢ ಪಕ್ಷಿಗಳಲ್ಲಿ ಕಣ್ಣಿನ ಸುತ್ತಲೂ ಹಳದಿ-ಕಿತ್ತಳೆ ಬಣ್ಣದ ಉಂಗುರವಿರುತ್ತದೆ. ಕುತ್ತಿಗೆಯ ಕೆಳಭಾಗ ಮತ್ತು ಎದೆ ಬಿಳಿಯಾಗಿದೆ. ದಾಲ್ಚಿನ್ನಿ ಬಣ್ಣದ ರೆಕ್ಕೆಯುಂಟು. ಕಪ್ಪಾದ ಚಿಕ್ಕ ಕೊಕ್ಕು ಇದ್ದು, ತೆಳ್ಳಗಿರುವ ತಿಳಿ ಗುಲಾಬಿ ಕಾಲುಗಳಿವೆ. ಬೆರಳಿನ ತುದಿಗಿರುವ ಉಗುರು ಓಡಾಡಲು, ಆಹಾರ ಕೆದರಲು ನೆರವಾಗುವುದಂತೆ. ಭಾರತ, ಬರ್ಮಾ, ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಕಂಡುಬರುತ್ತವೆ. ಕೀಟಗಳು, ಬೀಜಗಳು, ಹಣ್ಣುಗಳು ಹಾಗೂ ಹೂವಿನ ಮಕರಂದ ಇದರ ಆಹಾರ.

ಈ ಹಕ್ಕಿಯಲ್ಲಿ ಸುಲಭವಾಗಿ ಗಂಡು, ಹೆಣ್ಣನ್ನು ಗುರುತಿಸಲು ಸಾಧ್ಯವಿಲ್ಲ. ಸಂತಾನೋತ್ಪತ್ತಿ ಕ್ರಿಯೆ ಜೂನ್‌ನಿಂದ ಆಗಸ್ಟ್ ತಿಂಗಳಿನಲ್ಲಿ ನಡೆಯುತ್ತದೆ. ಅದರಲ್ಲೂ ಒಂದು ವೈಶಿಷ್ಟ್ಯವಿದೆ. ಸಂತಾನೋತ್ಪತ್ತಿ ಕಾಲದಲ್ಲಿ ಬಾಯಿಯ ಒಳಭಾಗ ಕಿತ್ತಳೆ- ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ನಾರು, ಹುಲ್ಲಿನಿಂದ ನೇರವಾಗಿರುವ ಗಿಡದ ಟೊಂಗೆಯಲ್ಲಿ ಗೂಡು ಕಟ್ಟಿ ವಾಸ್ತವ್ಯ ಹೂಡುತ್ತದೆ. ಗೂಡಿನ ಹೊರಭಾಗ ಜೇಡರ ಬಲೆಯಿಂದ ಆವೃತವಾಗಿರುತ್ತದೆ. ಒಂದು ಸಲಕ್ಕೆ 3-4 ತತ್ತಿಗಳನ್ನಿಡುತ್ತದೆ. ತತ್ತಿಗಳು ಕೆಂಪು ಪಟ್ಟಿಯಿರುವ ಬಿಳಿ ಗುಲಾಬಿ ಬಣ್ಣದವಿರುತ್ತವೆ. ಗಂಡು, ಹೆಣ್ಣು ಎರಡೂ ಸೇರಿ ಕಾವು ಕೊಡುತ್ತವೆ. ಆಹಾರ ತಿನಿಸುತ್ತವೆ. ತತ್ತಿಗಳಿಂದ 15-16 ದಿನದಲ್ಲಿ ಮರಿಗಳು ಹೊರಬರುತ್ತವೆ. ಆಮೇಲೆ ಹದಿಮೂರು ದಿನದಲ್ಲಿ ಗರಿಗಳು ಮೂಡುತ್ತವೆ.

ಆದರೆ ಕೃಷಿಗೆ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ರೈತರು ಬಳಸು ತ್ತಿರುವುದರಿಂದ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬುದೇ ಬೇಸರದ ಸಂಗತಿ.

ಏಕಾಂತವನ್ನು ಬಯಸದ ಈ ಪಕ್ಷಿಗಳು ಸಾಲುಸಾಲಾಗಿ ಅಕ್ಕಪಕ್ಕ ಕುಳಿತುಕೊಳ್ಳುತ್ತವೆ. ಒಂದಕ್ಕೊಂದು ಗರಿಗಳನ್ನು ಸರಿಪಡಿಸಿಕೊಳ್ಳುತ್ತವೆ. ಹಾಡುತ್ತಿರುವ ಒಂದು ಜೋಡಿಯ ಎದುರಿಗೆ ಹಾಡುತ್ತಿರುವ ಮತ್ತೊಂದು ಜೋಡಿ ಕುಳಿತಿರುತ್ತದೆ. ಹಾಡಿಗೆ ತಲೆದೂಗುತ್ತ ಎತ್ತರ ಕಾಣಲೆಂದು ಕಾಲನ್ನೆತ್ತರಿಸಿ ಕುಳಿತುಕೊಳ್ಳುವುದು ಈ ಹಕ್ಕಿಗಳ ರೂಢಿ. ಹಾವೇರಿ ಬಳಿ ಈ ಹರಟೆ ಮಲ್ಲರು ಈಚೆಗೆ ದರ್ಶನ ಕೊಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.