ADVERTISEMENT

ಸುತ್ತೆಲ್ಲ ನೋಡಾ, ಕೂಡ್ಯಾವ ಮೋಡ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಸುತ್ತೆಲ್ಲ ನೋಡಾ, ಕೂಡ್ಯಾವ ಮೋಡ
ಸುತ್ತೆಲ್ಲ ನೋಡಾ, ಕೂಡ್ಯಾವ ಮೋಡ   

ರಾತ್ರಿಯೆಲ್ಲಾ ರಚ್ಚೆಹಿಡಿದು ಬೆಚ್ಚಗೆ ಮಲಗಿದ ಮಗು ಬೆಳಿಗ್ಗೆ ಹಾಲುಗಲ್ಲ ಹೊತ್ತು ನಗುತ್ತದಲ್ಲಾ...
ವಾರಾನುಗಟ್ಟಲೆ ಕೆನೆ ಕೂಡಿಟ್ಟು ಅಮ್ಮ ಬೆಣ್ಣೆಯುಂಡೆ ಮಾಡಿ ಒಟ್ಟಿಗೆ ಮಗುವಿನ ಬಾಯಿಗೆ ಹಾಕುತ್ತಾಳಲ್ಲ...
ಇನ್ನು ಹಿಡಿದಿಡಲು ಸಾಧ್ಯವೇ ಇಲ್ಲ ಎಂಬಂತೆ ಒಮ್ಮೆಗೇ ಕರಿಮುಗಿಲು ಕಟ್ಟಿ ಮಳೆ ಸುರಿದು ಮಣ್ಣೆಲ್ಲಾ ಹಾಯೆನ್ನುತ್ತದಲ್ಲ...
ಥೇಟ್ ಹಾಗೇ...

ತನ್ನೆಲ್ಲಾ ಸೌಂದರ್ಯವನ್ನು ಒಮ್ಮೆಗೇ ನರಹರಿ ಪರ್ವತ ಆವಾಹಿಸಿಕೊಂಡಿದ್ದು... ಮೋಡ, ಮಂಜು ಎರಡೂ ಮಿಸುಕಾಡುತ್ತಲೇ ಕಣ್ಣಾ ಮುಚ್ಚಾಲೆಗೆ ಇಳಿದಿದ್ದವು ಇಲ್ಲಿ. ಬೆಟ್ಟಗಳಿಗೂ ಇವುಗಳ ಕಂಡರೆ ಮುದ್ದು. ಹತ್ತಿರತ್ತಿರ ಬಂದಂತೆ ನಟಿಸುತ್ತಾ ಮತ್ತೆ ದೂರ ಓಡುವ ಇವನ್ನು ಕಂಡರೆ ಜಿದ್ದಿಗೆ ಬಿದ್ದಂತೆ ಪ್ರೀತಿ. ಹಾಗಾಡುತ್ತಿರುವಾಗಲೇ ಮುಗಿಲ ಮುತ್ತಿಡುವ ಸುಖ ಅವುಗಳಿಗೆ ಮಾತ್ರ ಗೊತ್ತು.

ಪ್ರಪಾತ, ಜಲಪಾತ, ನದಿ, ತೊರೆ, ಕಿನಾರೆ, ಗಿರಿ ಶಿಖರ, ಮಣ್ಣು, ಮುಗಿಲು... ಏನಿಲ್ಲವಿಲ್ಲಿ? ಮಂಜಿನ ಪರದೆ ಬಿದ್ದೊಡನೆ ಅರೆಕ್ಷಣದಲ್ಲೇ ಮಂಗಮಾಯ. ಪರದೆ ಸರಿದೊಡನೆ ಮತ್ತೆ ಎಲ್ಲ ಪ್ರತ್ಯಕ್ಷ!

ADVERTISEMENT

ಹೌದು, ಪ್ರಕೃತಿಯ ಚೆಲುವೆಲ್ಲಾ ಒಟ್ಟಿಗೇ ರಟ್ಟಾಗಿದ್ದನ್ನು ಕಂಡೊಡನೆ ಮತ್ತೆ ಬೀಳುತ್ತದೆ ಮಂಜಿನ ಪರದೆ.

ಕ್ಷಣಕ್ಷಣಕ್ಕೂ ಅಂದಾಜು ತಪ್ಪುವ ಮೋಡದ ಆಟಗಳಿಗೆ ಇಲ್ಲಿ ಕೊನೆಯೆಲ್ಲುಂಟು? ಅಲ್ಲೆಲ್ಲೋ ಮರೆಯಲ್ಲಿ ಕಂಡೂ ಕಾಣದಂತೆ ಇಣುಕುವ ಸೂರ್ಯನ ಬೆಳ್ಳಿರೇಖೆಗೆ ಅವಿತಿರಲು ಸಾಧ್ಯವೇ?

ಮಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ನರಹರಿ ಪರ್ವತ, ಅರೆಕ್ಷಣ ಧರೆಗಿಳಿದು, ವಾಪಸಾಗಲು ದಾರಿ ಮರೆತ ನಾಕದಂತೆ. ಸಮುದ್ರದಿಂದ ಸಾವಿರ ಅಡಿಗಳಷ್ಟು ಎತ್ತರವಿರುವ ಈ ಚೆಲುವು ಅಂದಾಜಿಗೆ ಎಟುಕಲು ಸಾಧ್ಯವೇ ಇಲ್ಲ...

ಒಂದೆಡೆ ನೇತ್ರಾವತಿಯ ಹರಿವು. ಮತ್ತೊಂದೆಡೆ ಮಾನವನ ಇರುವು ನೆನಪಿಸುವ ತೆಂಗು, ಭತ್ತದ ಗದ್ದೆ. ಹಸಿರನ್ನು ಸೀಳಿಕೊಂಡು ತನ್ನ ತಾವು ತಿಳಿಸಲೆಂದೇ ಸಿಳ್ಳು ಹೊಡೆಯುವ ರೈಲು.

ಆಧ್ಯಾತ್ಮಕ ಕಳೆ ಈ ಬೆಟ್ಟಕ್ಕೂ ತಾಕಿದೆ. ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗೆ ಕೈಗೊಂಡ ಯಾತ್ರೆ ಸಂದರ್ಭ ಹರಿ ಮತ್ತು ನರ ಈ ಬೆಟ್ಟ ಏರಿದ್ದರಂತೆ. ಏರಿದ್ದ ಕುರುಹು ಶಂಖ, ಚಕ್ರ, ಗದಾ ಪದ್ಮ ಎಂಬ ತೀರ್ಥಕೂಪಗಳಾಗಿವೆ. ಹಸಿರ ನಡುವೆ ಶಿವಲಿಂಗ ಸ್ವಚ್ಛಂದ ತಪಸ್ಸಿನಲ್ಲಿದೆ.

‘ಬೆಳ್ಳನೆ ಲಾಲಿಕುಲಾಲಿ ಮಿಠಾಯಿಯ
ಬಾನೊಳು ಹರಡಿಹರೇನಮ್ಮ?
ತೆಳ್ಳನೆ ಹಿಂಜಿದ ಬೂರುಗದರೆಳೆಯ
ಬಿಸಿಲಿಗೆ ಕೆದರಿಹರೇನಮ್ಮ?’

–ಹೌದಲ್ಲ, ಕುವೆಂಪು ಏಕೆ ಈ ಪದ ಕಟ್ಟಿದರು ಎಂಬುದನ್ನು ಇಲ್ಲಿನ ವಾತಾವರಣ ಪ್ರಾಯೋಗಿಕವಾಗಿ ತೋರಿಸಿಕೊಡುತ್ತದೆ!

ಸೂರ್ಯನೇ ಬೆಟ್ಟಕ್ಕೆ ಮೊದಲ ಅತಿಥಿ. ಅವ ಬರುವುದು, ಹೋಗುವುದು ಎರಡೂ ವಿಶೇಷ. ಸಂಜೆ ಕರಗುತ್ತಲೇ ಲೌಕಿಕದ ಜಾಡು ತೊರೆಯುವ ಈ ಬೆಟ್ಟ ಕತ್ತಲಲ್ಲಿ ಕರಗಿಬಿಡುತ್ತದಲ್ಲ! ಆ ಬೆಳ್ಮುಗಿಲು, ಆ ಹಸಿರು ಎಲ್ಲಿ ಹೋಯಿತು ಎಂಬ ಚಿಂತೆ ನಿಮಗೇಕೆ, ಬೆಳ್ಳಂಬೆಳಿಗ್ಗೆ ಮತ್ತೆ ಬನ್ನಿ, ಹೊಸ ಸೊಬಗು ಸವಿಯೋಕೆ ಎನ್ನುವ ಬೆಚ್ಚನೆ ಆಮಂತ್ರಣ ನೀಡುತ್ತದೆ ಈ ನರಹರಿ ಬೆಟ್ಟ.

ಚಿತ್ರಗಳು: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.