ADVERTISEMENT

ಸುಸ್ಥಿರತೆಯ ನಭಕ್ಕೇರಿದ ಹಳ್ಳಿ

ಪೂರ್ಣಪ್ರಜ್ಞ ಬೇಳೂರು
Published 23 ನವೆಂಬರ್ 2015, 19:30 IST
Last Updated 23 ನವೆಂಬರ್ 2015, 19:30 IST

ರಾಮವ್ವ ಬಡಿಗೇರರ ಮನೆಯ ಅಡುಗೆ ಮನೆ ಝಗಮಗ ಹೊಳೆಯುತ್ತಿತ್ತು. ಏರಿಕೆ ಕ್ರಮದಲ್ಲಿ ಸೇರಿಸಿಟ್ಟ ಸ್ಟೀಲ್‌ಪಾತ್ರೆಗಳು, ಸಾಲು ಸಾಲಾಗಿ ಜೋಡಿಸಿಟ್ಟ ದಿನಸಿ ಡಬ್ಬಿಗಳು, ರೊಟ್ಟಿ ಬಾಣಲೆ, ಗ್ಯಾಸ್ ಸ್ಟೌವ್, ಹೊಗೆರಹಿತ ಚುಲ್ಲಾ, ಕಡಪಾ ಕಲ್ಲಿನ ಕಟ್ಟೆ, ಫಳಫಳ ಹೊಳೆಯುತ್ತಿದ್ದ ನೆಲ... ಇವನ್ನೆಲ್ಲಾ ನೋಡಿ ಬೆರಗಾಗಿ ಅಲ್ಲಿಯೇ ತಟಸ್ಥರಾಗಿದ್ದೆವು. ರೊಟ್ಟಿ ಸುಡುವ ಒಲೆ, ಚಿಮಣಿಗಳೆಲ್ಲಾ ಇದ್ದರೂ ಎಲ್ಲಿಯೂ ಹೊಗೆಯ ಕುರುಹೇ ಇಲ್ಲ! ಗಂಜಲ, ಹಳಸಿದ ವಾಸನೆಯಿಲ್ಲ! ಒಂದೇ ಒಂದು ನೊಣ ಸಹ ಹಾರಿದ್ದು ಕಾಣಲಿಲ್ಲ.

ಪಕ್ಕದ ಧನಸಿಂಗ್ ಮನೆ, ದೂರದ ತುಳಜಕ್ಕರ ಮನೆ-ಯಾರ ಮನೆಗೆ ಹೋದರೂ ಇದೇ ಶಿಸ್ತು, ಇಷ್ಟೇ ಸ್ವಚ್ಛತೆ. ಇದು ನಭಾಪುರ. ಗದಗದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ತಾಂಡಾ. 90 ಹೆಕ್ಟೇರ್ ಸಾಗುವಳಿ ಜಮೀನು. 77 ಕುಟುಂಬಗಳಿವೆ. ಉಳಿದ 75ಕುಟುಂಬಗಳಿಗೆ ಕೂಲಿಯೇ ಜೀವನಾಧಾರ. 750 ಜನಸಂಖ್ಯೆ. ಗುಡ್ಡದ ಮೇಲಿರುವ ಹಳ್ಳಿ ಸಾಲುಗೇರಿಗಳು, ಕಾಂಕ್ರೀಟ್ ರಸ್ತೆ, ಶುದ್ಧವಾಗಿರುವ ಚರಂಡಿಗಳು. ತಿಪ್ಪೆಗೂ ಕಲ್ಲು ಕಟ್ಟಿ ತೊಟ್ಟಿ ನಿರ್ಮಾಣ.

ಇಡೀ ಊರನ್ನು ಹುಡುಕಿದರೂ ಕೆಸರುಗುಂಡಿ, ಕೊಳಚೆ ನಿಂತ ಜಾಗ, ಸೆಗಣಿ-ಬಟ್ಟೆ-ಪಾತ್ರೆ ತೊಳೆದ ನೀರಿನ ಹೊಳೆ ಯಾವುದೊಂದೂ ಕಾಣಿಸದು. ಬರಿಗಾಲಲ್ಲೇ ಊರು ಸುತ್ತಬಹುದು. ಪ್ಯಾಂಟ್ ಏರಿಸಬೇಕಿಲ್ಲ. ಮೂಗು ಮುಚ್ಚಿಕೊಳ್ಳಬೇಕಿಲ್ಲ. ಮುಖ ಹಿಂಡಬೇಕಿಲ್ಲ. ನಮ್ಮೊಂದಿಗಿದ್ದ ಧನಸಿಂಗ್, ಪಾಂಡಪ್ಪ, ಹಂಜಪ್ಪ, ಹಾಮೇಶ್, ತುಕಾರಾಮ್, ಕಾಶಪ್ಪ ಇವರಿಗೆಲ್ಲಾ ಊರನ್ನು ತೋರಿಸಲು ವಿಪರೀತ ಉತ್ಸಾಹ. ವಿವರಿಸಲು ಹೆಮ್ಮೆ.

ಊರಿನ ಬೀದಿಗಳಲ್ಲೆಲ್ಲ ಸೋಲಾರ್ ದೀಪಗಳ ವ್ಯವಸ್ಥೆ. ಹಿತ್ತಲಿನಲ್ಲಿ ಡ್ರಮ್ ಮಾದರಿಯ ಗೋಬರ್‌ಗ್ಯಾಸ್ ಘಟಕಗಳು. ಅದರ ಪಕ್ಕ ಚಿಕ್ಕ ಕೈತೋಟ. ಚಿಕ್ಕ ಜಾಗದಲ್ಲಿ ಕೊಟ್ಟಿಗೆ, ಕೊಟ್ಟಿಗೆಯ ಮೂಲೆಯಲ್ಲಿ ಎರೆತೊಟ್ಟಿ. ಆಚೆಯಲ್ಲಿ ಅಜೋಲ ತೊಟ್ಟಿ. ಮೂಲೆಯಲ್ಲಿ ದೊಡ್ಡ ಡ್ರಮ್ ತುಂಬಾ ನೀರು ಶೌಚಾಲಯಕ್ಕೆ ಮಾತ್ರ ಬಳಕೆ. ಇರುವ ಸ್ವಲ್ಪ ಜಾಗದಲ್ಲಿ ಚಾವಣಿ ನೀರಿನ ಸಂಗ್ರಹ. ಕಟ್ಟಿಗೆ ಬಳಸಿ ಕಟ್ಟಿದ ಹೆಂಚಿನ ಮನೆಗಳು, ತಾರಸಿ ಮನೆಗಳು, ಕಲ್ಲಿನ ಮನೆಗಳು. ಕಚ್ಚಾಮನೆಗಳಂತೂ ಇಲ್ಲವೇ ಇಲ್ಲ. ಜಗಲಿಕಟ್ಟೆಯಲ್ಲಿ ಧಾನ್ಯ ಸಂಗ್ರಹಚೀಲ. ಕೃಷಿ ಉಪಕರಣಗಳ ಕ್ರಮಬದ್ಧ ಜೋಡಣೆ. ಹೀಗೆ  ಎಲ್ಲೆಲ್ಲೂ ಶಿಸ್ತು.

ಕೊಟ್ಟಿಗೆಯಲ್ಲಿ ಹಸಿರು ಮೇವು ಕಾಣಿಸಿತು. ‘ಅರೆ... ಇಂಥಾ ಬರ ಬಂದಾಗಲೂ ಹಸಿರು ಮೇವು ಬಂದಿದ್ದೆಲ್ಲಿಂದ? ಊರವರೆಲ್ಲಾ ಹಸು ಸಾಕಾಣಿಕೆ ಮಾಡುತ್ತಿರುವುದು ಹೇಗೆ?’ ಎಂಬಿತ್ಯಾದಿ ನಮ್ಮ ಪ್ರಶ್ನೆಗಳಿಗೆ  ಹಾಲಿನ ಡೈರಿಯಲ್ಲಿ ಉತ್ತರವಿತ್ತು. ‘ನಾವೆಲ್ಲಾ ಹಾಲು ಹಾಕಲು ನಾಲ್ಕು ಕಿಲೋಮೀಟರ್ ದೂರದ ಬೆಳದಡಿಗೆ ಹೋಗಬೇಕಿತ್ತು. ಹೀಗಾಗಿ ಊರಿನ ಏಳೆಂಟು ಕುಟುಂಬಗಳು ಮಾತ್ರ ಹಸು ಸಾಕಿದ್ದವು. ಅಲ್ಲಿಗೆ ಹೋಗುವ ಸಮಯ, ಶ್ರಮ ಹಾಗೂ ಖರ್ಚು ಮೂರೂ ವ್ಯರ್ಥವೆನಿಸುತ್ತಿತ್ತು. ನಮ್ಮೂರಲ್ಲೇ ಹಾಲಿನ ಡೈರಿ ಇದ್ದರೆ ನಾವೆಲ್ಲಾ ಹಾಲು ಹಾಕಬಹುದಿತ್ತು ಎಂದು ಆಗಾಗ ನಾಲ್ಕಾರು ಜನ ಸೇರಿದಾಗ ಮಾತನಾಡುತ್ತಿದ್ದೆವು’ ಎಂದು ಗ್ರಾಮ ರೈತಸಂಘದ ಮಾಜಿ ಅಧ್ಯಕ್ಷ ಧನಸಿಂಗ್ ನಾಯಕ್ ಡೈರಿ ಹುಟ್ಟಿದ ಕತೆ ಹೇಳಲು ಪ್ರಾರಂಭಿಸಿದರು.

‘ನಮ್ಮಲ್ಲಿ ಹಸುಗಳಿಲ್ಲ; ನಾವೆಲ್ಲಾ ಗೋವಾಕ್ಕೆ ಗುಳೇ ಹೋಗುವವರು. ಬೇಸಿಗೆಯಲ್ಲಿ ಮೇವಿನ ವ್ಯವಸ್ಥೆ ಕಷ್ಟ. ಹಸು ಕೊಳ್ಳಲು ಹಣವಿಲ್ಲ. ಕೊಟ್ಟಿಗೆಗೆ ಜಾಗವಿಲ್ಲ- ಹೀಗೆ  ಗ್ರಾಮಸ್ಥರಿಂದ ತಕರಾರುಗಳು ವಿಪರೀತ ಬಂದವು. ಒಂದೆರಡು ಸಭೆಯಲ್ಲಿ ಪ್ರಸ್ತಾಪ ಬಿದ್ದುಹೋಯಿತು. ಅಂತೂ ಕೆಲವರು ಹಸು ಸಾಕದಿದ್ದರೂ ಸದಸ್ಯರಾಗಲು ಒಪ್ಪಿಕೊಂಡರು. ಹೀಗೆ ಸಂಘಕ್ಕೆ 115ಸದಸ್ಯರು ಸೇರಿದರು. ಕರ್ನಾಟಕ ಹಾಲು ಉತ್ಪಾದಕರ ಸಂಘಟನೆಯ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಮಾನ್ಯತೆ ಪಡೆದುಕೊಳ್ಳಲಾಯಿತು. ಡೈರಿಗೆ ಬೇಕಾದ ಉಪಕರಣಗಳಿಗೆ ಅಂದರೆ ಲ್ಯಾಕ್ಟೋಮೀಟರ್, ಥರ್ಮೋಮೀಟರ್, ಫ್ಯಾಟ್ ಮೀಟರ್, ಕ್ಯಾನ್, ಟ್ರೇ, ಅಳತೆ ಪಾತ್ರೆ ಹೀಗೆ ಸಂಗ್ರಹ ಮಾಡಲಾಯಿತು.

ತಾಂಡಾದಲ್ಲಿರುವ ಚಿಕ್ಕದೊಂದು ಮನೆಯಲ್ಲಿ ಹಾಲಿನ ಡೈರಿ ಹುಟ್ಟಿತು. 15 ಜನ ರೈತರಿಗೆ ಸಂಘದ ವತಿಯಿಂದ ಸಾಲ ನೀಡಲಾಯಿತು. ಡೈರಿ ಪ್ರಾರಂಭವಾಯಿತು. ಒಂದು ವರ್ಷದಲ್ಲಿ ದಿನದ ಹಾಲಿನ ಸಂಗ್ರಹ 150 ಲೀಟರ್ ಆಗಿದೆ. ಊರಿನ ಯುವಕ ಗೋಪಾಲ ನಾಯಕ್‌ರವರು ಸೆಕ್ರೆಟರಿಯಾಗಿದ್ದಾರೆ...’ ಕಥೆ ಮುಂದುವರಿಸಿದರು. ಊರಿನ ದಾರಿಯಲ್ಲಿ, ಹೊಲದಲ್ಲಿ, ಗುಡ್ಡಗಳಲ್ಲಿ ಕಾಲಿಟ್ಟರೆ ಈ ರೀತಿಯ ಒಂದೊಂದೇ ಕತೆಗಳು ತೆರೆದುಕೊಳ್ಳುತ್ತವೆ. ಇಷ್ಟು ಪುಟ್ಟ ಹಳ್ಳಿಯಲ್ಲಿ, ಎಷ್ಟೆಲ್ಲಾ ಸುಧಾರಣೆ ಆಗಿರುವ ಹಿಂದಿನ ಕೈ ಇರುವುದು ರಿಲಾಯನ್ಸ್ ಫೌಂಡೇಶನ್. ‘ಬಿಜ (BI) ಭಾರತ್-ಇಂಡಿಯಾ ಜೋಡೋ’ ಕಾರ್ಯಕ್ರಮದಡಿ ಈ ಕಾರ್ಯ ಸಾಗಿದೆ.

ಗ್ರಾಮೀಣಾಭಿವೃಧ್ಧಿ ಯೋಜನೆ
ಕರ್ನಾಟಕದಲ್ಲಿ ಗದಗ ಜಿಲ್ಲೆಯ 10 ಹಳ್ಳಿಗಳನ್ನು ಆಯ್ದು ತನ್ನ ಗ್ರಾಮೀಣಾಭಿವೃಧ್ಧಿ ಯೋಜನೆ ರೂಪಿಸುತ್ತಿದೆ ಸಂಸ್ಥೆ.  ಗ್ರಾಮ ರೈತಸಂಘದ ಸ್ಥಾಪನೆ,  ಜನರಲ್ಲಿ ಅಭಿವೃದ್ಧಿಯ ಮನೋಭೂಮಿಕೆಯ ಬೀಜದ ಬಿತ್ತನೆ, ಒಕ್ಕೂಟ, ಒಗ್ಗಟ್ಟಿನ ಶಕ್ತಿಯ ಕುರಿತು ಜಾಗೃತಿ, ಕೊನೆಯಲ್ಲಿ ಧರ್ತಿ ಫಾರಂ ಎನ್ನುವ ಪರಿಕಲ್ಪನೆಯ ಅನುಷ್ಠಾನ, ಅದಕ್ಕಾಗಿ ಕೃಷಿ ತರಬೇತಿ, ಕ್ಷೇತ್ರಭೇಟಿ, ಬದುಗಳ ನಿರ್ಮಾಣ, ಟ್ರಂಚ್‌ಗಳು, ಬದುಗಳ ಮೇಲೆ ಗಿಡಗಳು, ಒಡ್ಡು, ಒಳಗಟ್ಟೆಗಳು, ಇಳಿಜಾರಿಗೆ ತಡೆ, ಹಳ್ಳಗಳಿಗೆ ಬಾಂದಾರ, ಕೃಷಿಹೊಂಡ, ಮಣ್ಣುಪರೀಕ್ಷೆ, ಸುಧಾರಿತ ತಿಪ್ಪೆ, ಎರೆಗೊಬ್ಬರ, ಬೀಜ ನೀಡಿಕೆ, ಅಜೋಲಾ ಬೆಳೆಸುವಿಕೆ, ಕೈತೋಟ ಹೀಗೆ ಸಮಗ್ರದೆಡೆಗೆ ರೈತರಿಗೆ ಮಾರ್ಗದರ್ಶನ ಮಾಡುತ್ತಿದೆ.

ರೈತರು ಇದಕ್ಕೂ ಹೆಚ್ಚಿನದನ್ನು ಬಯಸಿದರೆ ಅವುಗಳಿಗೂ ಅನುಮೋದನೆ. ಇವುಗಳಲ್ಲಿ ಯಾವುದೇ ಕೆಲಸವಿರಲಿ ರೈತರ ಭಾಗವಹಿಸುವಿಕೆ ಕಡ್ಡಾಯ. ‘ರಿಲಾಯನ್ಸ್ ಸಂಸ್ಥೆಯವರು ಬಂದಾಗ ನಾವು ನಂಬಲು ಸಿದ್ಧರಿರಲಿಲ್ಲ ಸಾರ್’ ಎನ್ನುವ ವಿವರಣೆ ಹಂಜಪ್ಪನವರದು. ‘ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿದೆವು. ಅವರು ನಿಮಗೆ ಅಭಿವೃದ್ಧಿ ಬೇಕಿದ್ದರೆ ಸಹಕರಿಸಿ ಎಂದರು.  ಇದನ್ನು ಕೇಳಿ ನಾವು ಹಾಗೆಯೇ ನಡೆದುಕೊಂಡ ಪರಿಣಾಮ ಇಂದು ಈ ಪರಿಯ ಸುಧಾರಣೆ ಕಂಡಿದೆ’ ಎಂದರು ಹಂಜಪ್ಪ. ಅವರ ಕೃಷಿಹೊಂಡ, ಬದುಗಳು, ಕೈತೋಟ, ಗೋಬರ್‌ಗ್ಯಾಸ್, ಚಾವಣಿ ನೀರಿನ ಸಂಗ್ರಹ ಇವೆಲ್ಲಾ ಅವರಿಗೊಂದು ಭವಿಷ್ಯದ ಬಗೆಗಿನ ನೆಮ್ಮದಿಯನ್ನು ಮೂಡಿಸಿದೆ.

ವಿಭಿನ್ನ ಬೆಳೆಗಳು
ನಭಾಪುರ ಪ್ರದೇಶ ಗದಗ ಜಿಲ್ಲೆಯ ಉಳಿದ ಪ್ರದೇಶಗಳಿಗಿಂತ ಭಿನ್ನ. ಗುಡ್ಡಗಳು, ಕುರುಚಲು ಕಾಡು, ಅದಕ್ಕಿಂತಲೂ ಮಸಾರಿ ಮಣ್ಣಿನ ಭೂಮಿ. ಅಂದರೆ ಫಲವತ್ತಾದ ಕಪ್ಪು ಮಣ್ಣಿರುವ ಎರೆಭೂಮಿಯಲ್ಲ. ಕೆಂಪುಮಣ್ಣಿನ ಕಡಿಮೆ ಫಲವತ್ತತೆಯ ನೆಲ. ಇವರೂ  ಶೇಂಗಾ, ಹೆಸರು, ಗೊಂಜೋಳ, ಹತ್ತಿಗಳನ್ನು ಮುಂಗಾರಿನಲ್ಲಿ ಬೆಳೆಯುತ್ತಾರೆ. ಸಿಡಿಗಾಳಾಗಿ ತೊಗರಿ, ಗುರೆಳ್ಳು, ರಾಗಿ, ಎಳ್ಳು, ನವಣೆ ಅಂಚಿನ ಬೇಳೆಗಳನ್ನು ಹಾಕುತ್ತಾರೆ. ಸೆಪ್ಟೆಂಬರ್‌ನಲ್ಲಿ ಬರುವ ಹಿಂಗಾರಿಗೆ ಬಿಳಿಜೋಳ, ಕಪ್ಪು ಕಡ್ಲೆ ಇತ್ಯಾದಿ ಬೆಳೆಯುತ್ತಾರೆ. ಈಗ ನೀರಿನ ಅನುಕೂಲವಾದ ಮೇಲೆ ಸೂರ್ಯಕಾಂತಿ ಸಹ ಸೇರಿಕೊಂಡಿದೆ.

‘ಮೊದಲು ಒಂದು ಎಕರೆಗೆ ಒಂದು ಚೀಲ ರಾಸಾಯನಿಕ ಗೊಬ್ಬರ, ಅರ್ಧ ಲೀಟರ್ ಕೀಟನಾಶಕ ತರಲೇಬೇಕಿತ್ರಿ. ಈಗ ನಮ್ಮದೇ ಎರೆಹುಳು ತೊಟ್ಟಿ ಐತ್ರಿ. ಎಲ್ಡ್ ಸಾರಿ ಇಪ್ಪತ್‌ಬ್ಯಾಗ್ ಗೊಬ್ರಾ ತೆಗೆದೀವ್ರಿ’ ಪಾಂಡಪ್ಪ ಕರ್ಜಗಿಯವರು ವಿಷಮುಕ್ತರಾದ ಕತೆ ಹೇಳುತ್ತಾರೆ. ಹಾಗಂತ ಊರಿನವರು ರಾಸಾಯನಿಕ ವಿಷಗಳ ಬಳಕೆಯನ್ನು ಪೂರ್ತಿ ಬಿಟ್ಟಿಲ್ಲ. ಬಿಟಿ ಹತ್ತಿಯನ್ನು ಹಾಕುತ್ತಿದ್ದಾರೆ. ಜಯಧರವನ್ನೋ, ಲಕ್ಷ್ಮೀ, ಡಿಸಿಎಚ್‌ಗಳನ್ನೋ ಬೆಳೆಯಬೇಕೆಂಬುದು ಇದೆ. ಉತ್ತಮ ಬೀಜದ ನಿರೀಕ್ಷೆಯಲ್ಲಿದ್ದಾರೆ. ‘ರಿಲಾಯನ್ಸ್ ಫೌಂಡೇಶನ್’ ನೀಡಿರುವ ಶೇಂಗಾ, ಹೆಸರು ಹಾಗೂ ಮೆಣಸಿನಕಾಯಿ ಬೀಜಗಳನ ಮುಂದಿನ ವರ್ಷದ ಬಳಕೆಗಾಗಿ ಬೀಜಬ್ಯಾಂಕ್‌ನಲ್ಲಿ ಶೇಖರಿಸಿಟ್ಟಿದ್ದಾರೆ.

ಆಲಪ್ಪ ಗಂಗಪ್ಪ ಲಾಮಾಣಿಯವರ ಕೃಷಿಹೊಂಡದಲ್ಲಿ ನೀರು ತುಂಬಿರುವ ಬಗ್ಗೆ ವಿಚಾರಿಸಿದೆ. ‘ಒಮ್ಮೆ ಮಳಿ ಬಂದ್ರಾ 15 ದಿನ ನೀರು ಗ್ಯಾರಂಟಿ ಸರ್ರ. ಒಂದೇ ಕಡೆ ಇಳಿಯೋ ತರ ಮಾಡೀವ್ರಿ. ಇದ್ರ ನೀರನ್ನೇ ಮಾವು, ಸಾಗವಾನಿಗೆ ಉಣಿಸಿ ಬೆಳಸ್ಯಾರೆ’ ಎಂದರು. ಅತ್ತ ಹೊಲದ ಇಳಿಜಾರಿನ ಗಡಿಯಲ್ಲಿ ಕಟ್ಟಿದ ಒಳಗಟ್ಟಿ ಚಪ್ಪಟೆಕಲ್ಲುಗಳಿಂದ ಕೂಡಿತ್ತು. ಇದಕ್ಕೆ ಕಾರಣ ಕೇಳಿದಾಗ  ಧನಸಿಂಗ್ ನಾಯಕ್ ‘ತಾಂಡಾದಲ್ಲಿ ಕಟ್ಟಿದ 60 ಒಳಗಟ್ಟಿಗಳಿಗೂ ಚಪ್ಪಟೆ ಕಲ್ಲನ್ನೇ ಕಟ್ಟಿದ್ದೇವೆ. ದುಂಡನೆಯ ಕಲ್ಲು ಹಾಗೂ ಚೂಪಾದ ಕಲ್ಲುಗಳಾದರೆ ಒಂದೇ ಮಳೆಗೆ ಕೊಚ್ಚಿಹೋಗುತ್ತವೆ’ ಎಂದರು.

75ಕ್ಕೂ ಹೆಚ್ಚು ರೈತರ ಹೊಲಗಳಲ್ಲಿ ಕೈತೋಟ ಅತ್ಯುತ್ತಮವಾಗಿದೆ. ಇದು ಮನೆಯ ಊಟಕ್ಕೆ, ಸಾರ್ವಜನಿಕ ಕೂಟಕ್ಕೆ ಬಳಕೆ. ಮುಂದೆ ಹೆಚ್ಚಾದರೆ ಸಂತೆಗೆ ಹೋಗಿ ಮಾರುವ ಯೋಜನೆ ಸಹ ಇವರಲ್ಲಿದೆ. ಅದಕ್ಕಾಗಿ ಊರಿಗೇ ವಸತಿ ಬಸ್ ಬರುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಗದಗದಿಂದ ಬರುವ ಬಸ್ ಬೆಳಧಡಿಯಲ್ಲಿ ರಾತ್ರಿ ತಂಗುತ್ತಿತ್ತು. ತಾಂಡಾದವರಿಗೆ ನಾಲ್ಕು ಕಿಲೋಮೀಟರ್ ನಡೆದುಬರುವುದೇ ಹರಸಾಹಸ.

ಡಿಪೋದವರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು. ಅವರು ಬೆಳಧಡಿ ಬಸ್ಸನ್ನು ನಭಾಪುರಕ್ಕೆ ಮುಂದುವರಿಸಿದರು. ಬೆಳಧಡಿಯವರು ವಿರೋಧಿಸಿದರೂ ಕಂಡಕ್ಟರ್ ಹಾಗೂ ಡ್ರೈವರ್ ನಭಾಪುರಕ್ಕೇ ತಂದು ನಿಲ್ಲಿಸುತ್ತಿದ್ದರು. ಕಾರಣ ಸೊಗಸಾಗಿತ್ತು. ನಭಾಪುರದಲ್ಲಿ ರಾತ್ರಿಯೆಲ್ಲಾ ನಾಯಿಗಳ ಕೂಗಾಟವಿಲ್ಲ. ಸೊಳ್ಳೆಗಳೇ ಇಲ್ಲ. ಕುಡುಕರ ಗಲಾಟೆ, ಜಗಳ ಏನೂ ಇಲ್ಲ. ಹಾಗೇ ಇಲ್ಲಿನ ಗ್ರಾಮಸ್ಥರು ವಸತಿ, ಉಪಚಾರಗಳನ್ನು ಕೈಗೊಂಡಿದ್ದರು. ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದರು.

ಒಗ್ಗಟ್ಟಿನ ಮಂತ್ರ
ಊರಿನ ಅಭಿವೃದ್ಧಿಗೆ ಒಗ್ಗಟ್ಟಿನ ಕೆಲಸ ಅತ್ಯವಶ್ಯಕ. ಸರ್ಕಾರದವರ ಯೋಜನೆಗಳು ಸರಿಯಾಗಿ ಜಾರಿಯಾಗುವಂತೆ ಮಾಡಲು ಗ್ರಾಮ ರೈತ ಸಂಘದೊಂದಿಗೆ ಪಂಚಾಯ್ತಿ ಕೂಡ ಕೈ ಜೋಡಿಸಿ ಊರಿಗೆ ಸಮುದಾಯಭವನ ನಿರ್ಮಾಣಕ್ಕೆ ಅನುದಾನ ತರಿಸಿ ಕಟ್ಟಡ ನಿರ್ಮಿಸಿದೆ. ಅನುದಾನ, ಶುಲ್ಕ, ಸಾಲ ವಾಪಸಾತಿಯ ಕ್ರಮಬದ್ಧವಾದ ದಾಖಲಾತಿಗಳು ಸಂಘದಲ್ಲಿವೆ. ಇದರಲ್ಲೀಗ ಹೊಸ ಸೇರ್ಪಡೆ ತುರ್ತು ಪರಿಹಾರನಿಧಿ. ತೀವ್ರ ಸಂಕಟಕ್ಕೆ ತಕ್ಷಣದ ಹಣದ ಸಹಾಯ ನೀಡುವ ಯೋಜನೆ. ಊರಿನ ತಾರವ್ವ ತಾವರಪ್ಪ ಹೇಳುತ್ತಾರೆ.

‘ಹಾಲಿನ ಡೈರಿಯಲ್ಲಿ ಮಾಡಿಸಿದ ಯಶಸ್ವಿನಿ ಕಾರ್ಡ್ ಇದ್ದದ್ದಕ್ಕಾಗಿ ಗರ್ಭಾಶಯ ಕ್ಯಾನ್ಸರ್‌ಗೆ ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಯಿತು. ಉಳಿಕೆ ಹಣವನ್ನು ಸಂಘದ ತುರ್ತು ಪರಿಹಾರ ನಿಧಿ ನೀಡಿದೆ. ನಾನು ಸಂಘದಲ್ಲಿ ಇದ್ದುದಕ್ಕೆ ಇದೆಲ್ಲಾ ಸಾಧ್ಯವಾಯಿತು’ ಎಂದು ನೆಮ್ಮದಿಯ ನಗು ಬೀರುತ್ತಾರೆ. ಹತ್ತು ಹಳ್ಳಿಗಳ ಅಭಿವೃದ್ಧಿ ಸಮಾವೇಶದಲ್ಲಿ ನಭಾಪುರಕ್ಕೆ ಸದಾ ಪ್ರಥಮ ಬಹುಮಾನ. ಅಲ್ಲಿ ಆಶುಕವಿ ತುಕಾರಾಮ್ ರಾಥೋಡ್ ಹಾಡಲು ತೊಡಗಿದರೆ ಅವರ ಸುತ್ತಲೂ ಜನರ ಗುಂಪು ಹೆಚ್ಚುತ್ತಲೇ ಹೋಗುತ್ತದೆ.

...ವರ್ಷಕ್ಕೊಮ್ಮೆ ಮಾಡ್ತಿದ್ವಿ ದಲಾಲ್ ಕಡೆ ಸಾಲ
ಈಗ ಮೂರು ವರ್ಷಾತ್ರಿ ನಮ್ಮೂರಲ್ಲಿ ಬಂದೈತಿ
ಹೊಸ ಕಾಲ
ಬನ್ನಿರಿ ರೈತರೆ ಕೂಡೋಣ. ನೆಲ-ಜಲವನ್ನು ಉಳಿಸೋಣ...


ನಭಾಪುರದಲ್ಲಿ ಕೇವಲ ವ್ಯಕ್ತಿಗತ ಕೆಲಸಗಳಷ್ಟೇ ಅಲ್ಲ ಸಮುದಾಯದ ಕೆಲಸಗಳೂ ಆಗಿವೆ ಎಂಬುದನ್ನು ಸಮಾವೇಶದಲ್ಲಿ ಮಾದರಿ ಮಾಡಿ ತೋರಿಸುತ್ತಾರೆ. ನಭಾಪುರ ರೈತಸಂಘದ ವತಿಯಿಂದ ಶಾಲೆಗೆ ಟೇಬಲ್, ಬೆಂಚ್‌ಗಳನ್ನು ಕೊಡಲಾಗಿದೆ. ಏಳು ಬೀದಿದೀಪಗಳಿವೆ. ಶುದ್ಧನೀರಿನ ಘಟಕ ಸ್ಥಾಪನೆಯಾಗಿದೆ. ಜಾನುವಾರುಗಳ ಹಾಗೂ ಮನುಷ್ಯರ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತವೆ. ಮೂರು ಬಾವಿಗಳ ಪುನರುಜ್ಜೀವನ, ಸ್ಕೂಲಿಗೊಂದು ಚಾವಣಿ ನೀರಿನ ಸಂಗ್ರಹ ಘಟಕ ಇವೆಲ್ಲಾ ಆಗಿವೆ. ಪ್ರತಿ ವಾರದ ಶ್ರಮದಾನದಂದು ಮುಳ್ಳುಕಂಟಿ ಬೆಳೆದ ಜಾಗವನ್ನೆಲ್ಲಾ ಸವರಿ ಸರಿ ಮಾಡಿದ್ದಕ್ಕೆ ಸುಮಾರು 25 ಎಕರೆಯಷ್ಟು ಜಮೀನು ಸಾಗುವಳಿಗೆ ಸಿಕ್ಕಿದೆ. ಹಾಗೇ ಸಂಘದಲ್ಲಿ ಮೂರೂವರೆ ಲಕ್ಷ ರೂಪಾಯಿಗಳ ಉಳಿತಾಯವಿದೆ. ಸದಸ್ಯರಲ್ಲಿ ಸಹಮತವಿದೆ.

ಊರಿನ ಕೆರೆಯ ಹರಿವಿಗೆ, ಪಕ್ಕದ ಕಾಡಿನಲ್ಲಿರುವ ಹೊಳೆಗೆ ಅಲ್ಲಲ್ಲಿ ಚೆಕ್‌ಡ್ಯಾಮ್ ಆಗುವ ಕೆಲಸ ಬಾಕಿ ಇದೆ. ಬೋರ್‌ವೆಲ್ ಮರುಪೂರಣ ಆಗಬೇಕಿದೆ. ನೀರಿನ ನೆಮ್ಮದಿ ಹೆಚ್ಚಿದಂತೆ ಊರಿನ ಜನ ನೆಲಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ. ಯಾವುದೇ ವ್ಯವಸ್ಥೆಯು ಸಂಕೀರ್ಣವಾದಷ್ಟೂ ಅದು ಹೆಚ್ಚು ಸ್ವಾವಲಂಬನೆ ಹಾಗೂ ಸುಸ್ಥಿರತೆಗೆ ಕಾರಣವಾಗುತ್ತದೆ. ಪ್ರತಿಯೊಂದು ವ್ಯವಸ್ಥೆಯೂ ಒಂದಕ್ಕೊಂದು ಅವಲಂಬಿತ. ಹೀಗಾಗಿ ಹೆಚ್ಚು ಹೆಚ್ಚು ಉದ್ಯಮಗಳು, ಅನುಕೂಲತೆಗಳು ಸಿಕ್ಕತೊಡಗಿದರೆ ಗುಳೇ ಹೋಗುವವರ ಸಂಖ್ಯೆ ಕಡಿಮೆಯಾಗುತ್ತದೆ. ಸುಸ್ಥಿರತೆಯು ನೈಸರ್ಗಿಕ ಸಂಪನ್ಮೂಲಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ.

ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಿಲಾಯನ್ಸ್ ಫೌಂಡೇಶನ್ ಗ್ರಾಮ ರೈತ ಸಂಘದ ಜೊತೆ ಸೇರಿ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಗ್ರಾಮವನ್ನು ಸುಸ್ಥಿರ ಗ್ರಾಮವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದೆ. ಈ ರೀತಿ ಒಂದರ ಒಂದೊಂದು ಯೋಜನೆಗಳು ನಭಾಪುರದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿವೆ. ಕಳೆದ ಸಾಲಿನಲ್ಲಿ 70 ಮನೆಗಳು ಸಿಕ್ಕರೆ ಈಗ ಇನ್ನೂ 25ಮನೆಗಳಿಗೆ ಅನುದಾನ ಸಿಕ್ಕಿದೆ. 40 ಜನರಿಗೆ ಮಾಸಾಶನ ಬರುತ್ತಿದೆ. ಪಶು ಇಲಾಖೆಯಿಂದ 45ಹಸುಗಳು.

ಎಲ್ಲಾ ಮನೆಗಳಿಗೆ ಶೌಚಾಲಯ ಇದೆ. 75ಮನೆಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಹಾಗೂ 35ಮನೆಗಳಿಗೆ ಸಿಲಿಂಡರ್ ಗ್ಯಾಸ್ ಅರಣ್ಯ ಇಲಾಖೆಯ ಯೋಜನೆಯೊಂದರಲ್ಲಿ ಸಿಕ್ಕಿದೆ. ಈಚೆಗೆ ಧಾರವಾಡ ವಿಶ್ವವಿದ್ಯಾನಿಲಯದ ಹೋಮ್‌ಸೈನ್ಸ್ ವಿಭಾಗ100 ಹೊಗೆರಹಿತ ಒಲೆಗಳನ್ನು ಕೊಟ್ಟಿದೆ. ಇಲ್ಲೆಲ್ಲೂ ಕಿಂಚಿತ್ ಭ್ರಷ್ಟಾಚಾರವಾಗದಂತೆ ಊರವರ ಅರ್ಥಾತ್ ಸಂಘಟನೆಯ ಎಚ್ಚರದ ಕಾವಲಿದೆ. ಹಂಚಿಕೆಯಲ್ಲಿ ತಕರಾರಿಲ್ಲ. ಅಷ್ಟೇ ಅಲ್ಲ, ಸಂಘಕ್ಕೆ ಇದರಿಂದ ಆದಾಯ ಸಿಗುವಂತೆ ಶುಲ್ಕ ವಿಧಿಸುವ ಪದ್ಧತಿಯೂ ಇದೆ.

ನಭಾಪುರಕ್ಕೆ ಭೇಟಿ ಕೊಡುವವರು ಸಂಪರ್ಕಿಸಿ: ಧನಸಿಂಗ್ ನಾಯಕ್-9844680661, ಹಾಮೇಶ್: 9901861480.

ಸಭೆ: ಹೆಂಗಸರಿಗೆ ರೆಸ್ಟ್‌
ಹಾಗೇ ಮಾತು ಅಲ್ಲಿಯ ಏಕತಾ ಮಹಾಸಭೆಯತ್ತ ಹೊರಳಿತು. ‘ಅದೊಂದು ವಿಶೇಷ ಸಭೆ ಸಾರ್... ಗಡ್ಡ ತುರಿಸಿಕೊಳ್ಳುತ್ತಾ ಹೇಳಲೋ ಬೇಡವೋ ಎಂದು ಹಾಮೇಶ ಜೀವಲಪ್ಪ ನಾಯಕ್ ಹೇಳಿದರು. ಕುತೂಹಲದ ಮುಖದಿಂದ ಅವರನ್ನೆಲ್ಲಾ ದಿಟ್ಟಿಸಿದೆ. ‘ಅದೊಂಥರಾ ಊರಿನ ಸಮಾವೇಶ. ಎಲ್ಲಾ ವಿಚಾರಗಳನ್ನೂ ಚರ್ಚಿಸ್ತೇವೆ. ವಿಶೇಷ ಅನುದಾನಗಳನ್ನೆಲ್ಲಾ ಸೂಕ್ತ ವ್ಯಕ್ತಿಗಳಿಗೆ ವಿವಾದವಿಲ್ಲದಂತೆ ಹಂಚ್ತೀವಿ. ಬೆಳಿಗ್ಗೆ ಸ್ವಚ್ಛತಾ ಕಾರ್ಯ.

10 ಗುಂಪುಗಳನ್ನು ಮಾಡಿದ್ದೀವಿ. ಪ್ರತಿ ಗುಂಪಿನಲ್ಲೂ 15 ಜನರು,  ಪ್ರತಿ ತಿಂಗಳೂ ನಿರ್ದಿಷ್ಟ ದಿನದಂದು ಏಕತಾ ಸಭಾ ನಿರ್ವಹಣೆ ಒಂದು ಗುಂಪಿನದು. ಸುಮಾರು ಎಂಟು ಸಾವಿರ ರೂಪಾಯಿಗಳ ಖರ್ಚು. ರೇಶನ್ ಅಕ್ಕಿ, ನಮ್ಮದೇ ಕೈತೋಟದ ಕಾಯಿಪಲ್ಲೆ...’ ಎಂದು ವಿವರಣೆ ನೀಡಿದ ನಾಯಕರು ಇನ್ನೂ ಕುತೂಹಲ ಅಂಶ ಬಿಚ್ಚಿಟ್ಟರು. ‘ಸಭೆಯ ದಿನ ನಮ್ಮದೇ ಅಡುಗೆ. ಹೆಣ್ಣುಮಕ್ಕಳೆಲ್ಲಾ ಕುಳಿತು ಊಟ ಮಾಡ್ತಾರೆ. ದಿನಾಲೂ ನಮ್ಮೊಂದಿಗೆ ಸಮನಾಗಿ ದುಡಿದು ಅಡುಗೆ ಸಹ ಮಾಡಿ ನಮ್ಮನ್ನು ಉಪಚರಿಸುವ ಅವರ ಕೆಲಸಕ್ಕೆ ಬಿಡುವು.

ಇದರಿಂದ ಈಗ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ’ ಎಂದರು. ಹಾಗಿದ್ದರೆ ಏನೇನ್ ಅಡುಗೆ ಮಾಡ್ತಾರೆ ಎನ್ನುವ ಪ್ರಶ್ನೆ ಮೂಡಿತು. ಸಿರಾ, ಅನ್ನ, ಸಾರು, ಚಪಾತಿ, ಬದ್ನೆಕಾಯಿ ಪಲ್ಲೆ ಎಂದು ಧನಸಿಂಗ್ ನಾಯಕ್ ಎದೆಯುಬ್ಬಿಸಿ ಹೇಳಿದರು. ಟೀ ಕುಡಿದ ಲೋಟಾ ಎತ್ತಿ, ತೊಳೆವ ರೂಢಿ ಇಲ್ಲದ ಬಯಲುಸೀಮೆಯ ಗಂಡಸರಿಗೆ ಈ ಕೆಲಸ ಬಹು ದೊಡ್ಡದೆನಿಸಿದ್ದು ಸಹಜ. ಸ್ವಲ್ಪ ಕೆಣಕಿದೆ; ರೊಟ್ಟಿ, ಹುಗ್ಗಿ ಅಥವಾ ಹೋಳಿಗೆ, ಚಟ್ನಿಪುಡಿ, ಕಾಳುಪಲ್ಲೆ, ಪಲಾವ್ ಹೀಗೆಲ್ಲಾ ಮಾಡುವುದನ್ನು ಕಲಿತ ಮೇಲೆ ನನ್ನನ್ನೂ ಕರೆಯಿರಿ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT