ADVERTISEMENT

ಹೀಗೊಬ್ಬ ಜಲ ಸೇವಕ

ಬೀರಣ್ಣ ನಾಯಕ ಮೊಗಟಾ
Published 6 ಮಾರ್ಚ್ 2017, 19:30 IST
Last Updated 6 ಮಾರ್ಚ್ 2017, 19:30 IST
ಹೀಗೊಬ್ಬ ಜಲ ಸೇವಕ
ಹೀಗೊಬ್ಬ ಜಲ ಸೇವಕ   

‘ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮೇಲು...’ ಎಂಬ ಮಹಾತ್ಮ ಗಾಂಧೀಜಿಯವರ ನುಡಿಯಲ್ಲಿ ಎಂತಹ ತತ್ವ ಅಡಗಿದೆ. ಆದರೆ ಈ ತತ್ವವನ್ನು ಜೀವನದಲ್ಲಿ ಅಳವಡಿಸಿ ಕೊಂಡವರೆಷ್ಟು. ಅಪರೂಪದಲ್ಲಿ ಅಪರೂಪ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿಯ ಜನತಾ ಕಾಲೊನಿಯ ನಿವಾಸಿ, ಕೂಲಿಕಾರ್ಮಿಕ ಸುಬ್ರಾಯ ಮಂಜಾ ನಾಯ್ಕ ಇವರು ಈ ತತ್ವವನ್ನು ಇಡಿಯಾಗಿ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದು ಹೆಮ್ಮೆಯ ಸಂಗತಿ.

49 ವರ್ಷದ ಸುಬ್ರಾಯ ಮಂಜಾ ನಾಯ್ಕರ ಮನೆಯಲ್ಲಿ ಕುಕ್ಕಿ ತಿನ್ನುವ ಬಡತನ. ತುತ್ತಿನ ಚೀಲ ತುಂಬಲು ಕೂಲಿಯೇ ಗತಿ. ಆಸ್ತಿ, ಸಂಪತ್ತು ಎನ್ನುವ ಪದ ಇವರ ಹತ್ತಿರವೂ ಸುಳಿಯಲಿಲ್ಲ. ಆದರೂ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂಬ ತುಡಿತ ಇವರನ್ನು ಕಾಡುತ್ತಲೇ ಇತ್ತು.

ಸಭೆ, ಸಮಾರಂಭ, ಕ್ರೀಡಾಕೂಟ, ಮೆರವಣಿಗೆ, ಜಾತ್ರೆ, ಉತ್ಸವ, ಸಾಂಸೃತಿಕ ಕಾರ್ಯಕ್ರಮ, ಸಮ್ಮೇಳನ ಮುಂತಾದವುಗಳು ನಡೆಯುವ ಸಂದರ್ಭದಲ್ಲಿ ಜನರು ವಿಶೇಷವಾಗಿ ಮಕ್ಕಳು ಹಾಗೂ ಮಹಿಳೆಯರು ಕುಡಿಯುವ ನೀರಿಗಾಗಿ ಪರದಾಡುವುದನ್ನು ಗಮನಿಸಿದ ಸುಬ್ರಾಯ ನಾಯ್ಕರಿಗೆ ಅದೇ ಪ್ರೇರಣೆ ಆಯಿತು.

‘ಆಯಾಸಕ್ಕಾಗಿ ವಿಶ್ರಾಂತಿ, ಬಾಯಾರಿಕೆಗೆ ನೀರು, ನೀರಿಗಾಗಿ ನಾನು’ ಎಂಬ ಘೋಷವಾಕ್ಯ ದೊಂದಿಗೆ ಶುದ್ಧ ಕುಡಿಯುವ ನೀರನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಾರಂಭಿಸಿದ ಸುಬ್ರಾಯ ನಾಯ್ಕರ ಜಲ ಸೇವೆಗೆ ಆರು ವರುಷ. ಜೀವನದುದ್ದಕ್ಕೂ ಈ ಜಲಸೇವೆ ಮುಂದುವರಿಸುತ್ತೇನೆನ್ನುವ ಇವರು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಹಲವಾರು ಕಡೆ ಜಲಸೇವೆ ಮಾಡಿದ್ದಾರೆ.

ಕದಂಬೋತ್ಸವ, ಶಿರಸಿ ಮಾರಿಕಾಂಬಾ ಜಾತ್ರೆ, ಮೈಸೂರು ದಸರಾ ಮುಂತಾದ ಕಡೆ ಅವು ನಡೆಯುವಷ್ಟು ದಿನ ಜಲಸೇವೆ ಮಾಡಿ ಜನಮನ ಗೆದ್ದಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಜಲಸೇವೆ ಮಾಡಿದ ಸುಬ್ರಾಯ ನಾಯ್ಕರು ಹತ್ತುಲಕ್ಷ ಜನರ ಬಾಯಾರಿಕೆ ನೀಗಿಸಿ ಕೂಲಿ ಮಾಡಿ ದುಡಿದ ದುಡ್ಡಿನಲ್ಲಿ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾರೆ.

ADVERTISEMENT

ಈ ಸೇವೆಯ ಜೊತೆಗೆ ನೀರಿನ ಕುರಿತ ಮಹತ್ವವನ್ನು ಜನರಿಗೆ ತಿಳಿಯಪಡಿಸುತ್ತಾರೆ. ನೀರು ನೀಡುವ ಸ್ಥಳದಲ್ಲಿ ನೀರಿನ ಮಹತ್ವ ಸಾರುವ ಫಲಕಗಳನ್ನು ತೂಗು ಹಾಕುತ್ತಾರೆ. ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡುತ್ತಾ, ಗಿಡಮರ ಬೆಳೆಸುವಂತೆ ವಿನಂತಿಸುತ್ತಾರೆ.

ಇವರ ಸೇವೆಯನ್ನು ಮನಗಂಡು ಅನೇಕ ಸಂಘ ಸಂಸ್ಥೆಗಳು ಸುಬ್ರಾಯ ನಾಯ್ಕರನ್ನು ಸನ್ಮಾನಿಸಿವೆ. ವಿದೇಶಿಯರನ್ನು ಒಳಗೊಂಡು ಅನೇಕರು ಇವರನ್ನು ಅಭಿನಂದಿಸಿದ್ದಾರೆ. ಈ ಕಾಯಕಕ್ಕೆ ಪತ್ನಿ ವಿಜಯಾ, ಮಕ್ಕಳಾದ ವಾಮನ ಹಾಗೂ ದೀಪಾರ ಬೆಂಬಲವಿದೆ.

ಕಾರ್ಯಕ್ರಮಗಳಿಗೆ ಯಾರೂ ಆಮಂತ್ರಣ ನೀಡಬೇಕಿಂದಿಲ್ಲ. ಯಾರೋ ಅಪಹಾಸ್ಯ ಮಾಡಿದ್ದಾರೆ ಎಂದು ನೊಂದುಕೊಂಡಿಲ್ಲ. 400 ರೂಪಾಯಿ ಇಂದಿನ ಕೂಲಿ ಹೋಯ್ತಲ್ಲ ಎಂಬ ಕೊರಗಿಲ್ಲ. ‘ಕೈಕಾಲು ಗಟ್ಟಿ ಇರುವವರೆಗೆ ಈ ಜಲಸೇವೆಯ ಕಾಯಕ ನಿಲ್ಲಿಸುವುದಿಲ್ಲ’ ಎನ್ನುವುದು ಸುಬ್ರಾಯ ಮಂಜು ನಾಯ್ಕರ ದೃಢ ನಿರ್ಧಾರ. ಇವರ ಸಂಪರ್ಕಕ್ಕೆ: 9481709359.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.