ADVERTISEMENT

ಹುಲಿಗಳ ದಾಹ ತಣಿಸಲು ಟೈಗರ್‌ ಟ್ಯಾಂಕ್

ಎಂ.ಆರ್.ಮಂಜುನಾಥ
Published 3 ಏಪ್ರಿಲ್ 2017, 19:30 IST
Last Updated 3 ಏಪ್ರಿಲ್ 2017, 19:30 IST
ಚಿತ್ರ- ಎಂ.ಆರ್. ಮಂಜುನಾಥ್
ಚಿತ್ರ- ಎಂ.ಆರ್. ಮಂಜುನಾಥ್   

ನಾಗರಹೊಳೆ ಅಭಯಾರಣ್ಯವು ಕೊಡಗು ಹಾಗೂ ಮೈಸೂರು ಜಿಲ್ಲೆಗಳ ನಡುವಿನ ಬ್ರಹ್ಮಗಿರಿ ಬೆಟ್ಟಗಳ ಸಾಲು ಮತ್ತು ದಕ್ಷಿಣ ಕೇರಳ ರಾಜ್ಯದ ಕೆಲಭಾಗಕ್ಕೆ ಹರಡುವ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇದೆ.  634.39 ಚದರ ಕಿ.ಮೀ. ವ್ಯಾಪ್ತಿಯ ಈ ಅರಣ್ಯದಲ್ಲಿ 158 ಕೆರೆಗಳಿವೆ. ಆದರೆ ಅಂತರಸಂತೆ ವಿಭಾಗದ ದಮ್ಮನಕಟ್ಟೆ ಬಳಿ ಇರುವ ‘ಟೈಗರ್‌ಟ್ಯಾಂಕ್’(ಹುಲಿ ಕೆರೆ) ಮಾತ್ರ ಬಹು ಪ್ರಸಿದ್ಧಿ ಹೊಂದಿದೆ.

ಒಂದು ಕಾಲದಲ್ಲಿ ಸಣ್ಣದೊಂದು ಕಟ್ಟೆಯಾಗಿದ್ದ ಈ ಕೆರೆಯ ಆಸುಪಾಸು ಸದಾ ಹುಲಿಗಳ ದಂಡೇ ಇರುತ್ತಿದ್ದವು. ಆದ್ದರಿಂದ ಈ ಕಟ್ಟೆ ‘ಹುಲಿ ಕಟ್ಟೆ’ ಎಂದು ಹೆಸರಾಯಿತು. ಕಾಡುಗಳ ಸುತ್ತ ಮುತ್ತ ಎಷ್ಟೇ ಕೆರೆಗಳು ಇದ್ದರೂ ಸಾಮಾನ್ಯವಾಗಿ ಹುಲಿಗಳು ಒಂದು ವ್ಯಾಪ್ತಿಯನ್ನು ತಮ್ಮ ಆವಾಸ ಸ್ಥಳವಾಗಿ ಮಾಡಿಕೊಂಡಿರುತ್ತವೆ. ಎಷ್ಟೇ ಸುತ್ತಾಡಿ ಬೇಟೆಯಾಡಿ ಬಂದರೂ ಅಲ್ಲಿಯೇ ಬಂದು ವಿಶ್ರಮಿಸುತ್ತವೆ. ಇಲ್ಲಿ ಕೂಡ ‘ಹುಲಿಕೆರೆ’ ಇಲ್ಲಿನ ಹುಲಿಗಳ ವಿಶ್ರಾಂತಿ ಸ್ಥಳವಾಗಿತ್ತು. ಹುಲಿಗಳ ಸಂಖ್ಯೆ ಹೇರಳವಾಗಿರುವ ಕಾರಣದಿಂದಲೇ ಇದನ್ನು 1998ರಲ್ಲಿ ಹುಲಿ ಮೀಸಲು ಅರಣ್ಯವೆಂದು ಘೋಷಿಸಿರುವುದು ವಿಶೇಷ.

ಇಂತಿಪ್ಪ ಹುಲಿಕೆರೆಯಲ್ಲಿ ಭೀಕರ ಬರದಿಂದ ನೀರೆಲ್ಲಾ ಬಹುತೇಕ ಆವಿಯಾಗಿದ್ದವು. ಆದ್ದರಿಂದ ಈಗ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ಸೌರ ಕೊಳವೆಬಾವಿ ಟೈಗರ್‌ ಟ್ಯಾಂಕ್‌ ಬಳಿ ಅಳವಡಿಸಲಾಗಿದೆ. ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ಒಂದು ದಿವಸಕ್ಕೆ ಸುಮಾರು 50 ಸಾವಿರ ಲೀಟರ್ ನೀರು ಸರಬರಾಜು ಆಗುತ್ತಿದೆ.

ADVERTISEMENT

‘ಬೇಸಿಗೆಯ ಝಳದಿಂದಲೇ ನೀರಿನ ಕೊರತೆ ಆಗಿದ್ದರೂ ಅದೇ ಝಳವನ್ನು ವರದಾನ ಮಾಡಿಕೊಂಡಿದ್ದೇವೆ. ಸೂರ್ಯಕಿರಣದ ಶಾಖ ಹೆಚ್ಚಿಗೆ ಬೀಳುತ್ತಿರುವ ಕಾರಣ, ವಿದ್ಯುತ್‌ ಉತ್ಪತ್ತಿ ಹೆಚ್ಚುತ್ತಿದ್ದು ಕೆರೆಗೆ ನೀರನ್ನು ಪಂಪ್ ವೇಗವಾಗಿ ಮಾಡಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ. ಈ ಕೊಳವೆಬಾವಿ ನೂರಕ್ಕೆ ನೂರರಷ್ಟು ಯಶಸ್ಸು ಕಂಡಿದು ಇನ್ನು ಮುಂದೆ ಬೇಸಿಗೆಯಲ್ಲಿ ವನ್ಯಜೀವಿಗಳು ನೀರಿಗಾಗಿ ಅಲೆದಾಡುವಂತಿಲ್ಲ’ ಎನ್ನುವುದು ಅವರ ವಿಶ್ವಾಸ.

‘ಕರ್ನಾಟಕದ ಕಾಡುಗಳಲ್ಲಿ 406 ಹುಲಿಗಳಿವೆ. ಅದರಲ್ಲಿ ಅಧಿಕ ಪಾಲು ನಾಗರಹೊಳೆಯಲ್ಲಿಯೇ ಇದೆ. ಇಲ್ಲಿ ಬೇಟೆ ನಿಯಂತ್ರಣ, ಸೋಲಾರ್ ತಂತಿಬೇಲಿಯ ಅಳವಡಿಕೆ, ಇಪಿಟಿ ವ್ಯವಸ್ಥೆ ಮಾಡಿರುವುದರಿಂದ ಹುಲಿಗಳಿಗೆ ಹೆಚ್ಚಾಗಿ ರಕ್ಷಣೆ ದೊರಕುತ್ತಿದೆ. ಇಂಥ ಹೆಸರು ಉಳಿಸಿಕೊಂಡಿರುವ ಅಭಯಾರಣ್ಯದಲ್ಲಿ ನೀರಿನ ಕೊರತೆಯಿಂದ ಹುಲಿಗಳು ವಲಸೆ ಹೋಗಬಾರದು ಎಂದು ಈ ಯೋಜನೆ ರೂಪಿಸಲಾಗಿದ್ದು ಇದು ಸಂಪೂರ್ಣ ಯಶ ಕಂಡಿದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್.

ಅರಣ್ಯದಲ್ಲಿ ಒಟ್ಟು ಎಂಟು ವಿಭಾಗಗಳಿವೆ. ಈಗ ಹುಲಿಕೆರೆ ಇರುವ ಒಂದು ವಿಭಾಗದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಪ್ರತಿ ವಿಭಾಗದಲ್ಲಿಯೂ ಅಳವಡಿಸುವ ಬಗ್ಗೆ ಕಾರ್ಯ ನಡೆದಿದೆ. ಈಗಾಗಲೇ ಇಪ್ಪತ್ತು ಸೋಲಾರ್ ಬೋರ್‌ವೆಲ್ ಅಳವಡಿಸಲಾಗುತ್ತಿದೆ. ಅರಣ್ಯದಲ್ಲಿ ವಿದ್ಯುತ್ ತಂತಿ ಹಾದು ಹೋಗಿಲ್ಲದ ಕಾರಣ ವಿದ್ಯುತ್‌ ಸೌಲಭ್ಯವಿಲ್ಲ. ಜನರೇಟರ್‌ ಅಳವಡಿಸಿ ನೀರನ್ನು ಪಂಪ್ ಮಾಡುವಾಗ ವಿಪರೀತ ಶಬ್ದ ಬರುವ ಕಾರಣ ಪ್ರಾಣಿಗಳು ಹೆದರುತ್ತಿವೆ. ಆದ್ದರಿಂದ ಸೋಲಾರ್‌ ಪಂಪ್‌ನಿಂದ ನೀರು ಎತ್ತುವ ಪ್ರಯೋಗ ಮಾಡಲಾಗಿದ್ದು ಇದರಿಂದ ಪ್ರಾಣಿಗಳಿಗೂ ತೊಂದರೆ ಇಲ್ಲ ಎಂಬುದನ್ನು ಮನಗಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಸಿಬ್ಬಂದಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.