ADVERTISEMENT

ನೆಲಕೆ ಕಾಲುಗಳ ಬರವಣಿಗೆ...

ಉಜ್ಜಿನಿ ರುದ್ರಪ್ಪ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
-ಚಿತ್ರಗಳು: ಲೇಖಕರವು
-ಚಿತ್ರಗಳು: ಲೇಖಕರವು   

ಅದೊಂದು ಕಾಲವಿತ್ತು... ಯಾರಾದರೂ ಯಾತ್ರಿಕರು, ಆ ಊರಿನ ಮಾರ್ಗವಾಗಿ ಪ್ರಯಾಣಿಸುತ್ತಿದ್ದರೆ, ಅಂತಹವರಿಗಾಗಿಯೇ ಊರಿನ ಅಗಸಿ ಬಾಗಿಲಿನಲ್ಲಿ ಕಾದು ಕುಳಿತವರು ‘ನಮ್ಮ ಮನೆಗೆ ಬನ್ನಿ, ದಣಿವಾರಿಸಿಕೊಂಡು ನಮ್ಮ ಅತಿಥ್ಯ ಸ್ವೀಕರಿಸಿ ಮುಂದೆ ಹೋಗಿ’ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತಿದ್ದರು. ಯಾತ್ರಿಕರು ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ, ಶುಭಕೋರಿ ಮುನ್ನಡೆಯುತ್ತಿದ್ದರು.

ಇಂದಿನ ಕಾಲದಲ್ಲಿ ಇಂತಹ ದೃಶ್ಯವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ, ಪಾದಯಾತ್ರಿ ಗಳನ್ನು ಆಹ್ವಾನಿಸಿ, ನಿಷ್ಕಲ್ಮಶ ಮನಸ್ಸಿನಿಂದ ಸತ್ಕರಿಸಿ ಅವರಲ್ಲಿ ದೈವತ್ವ ಕಾಣುವ ಜನತೆಗೆ ಇಂದಿಗೂ ಬರವಿಲ್ಲ.

ಇಂತಹ ಕಾರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವು ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಗುರುಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಬರಬೇಕು. ಫೆಬ್ರುವರಿ 11ರಂದು ಜರುಗುವ ರಥೋತ್ಸವಕ್ಕೆ ನಾಡಿನ ದಶದಿಕ್ಕುಗಳಿಂದ ತಂಡೋಪತಂಡವಾಗಿ ಪಾದಯಾತ್ರಿಗಳು ಈಗಾಗಲೇ ಹೆಜ್ಜೆ ಹಾಕತೊಡಗಿದ್ದಾರೆ.

ADVERTISEMENT

ಕೊಟ್ಟೂರಿಗೆ ಬರುವ ಎಲ್ಲಾ ಮಾರ್ಗಗಳು ಫೆಬ್ರುವರಿ 10ರ ಬೆಳಗಿನ ಜಾವ ಪಾದಯಾತ್ರಿಗಳಿಂದ ತುಂಬಿ ಹೋಗಿರುತ್ತವೆ. ವೃದ್ಧರು, ಮಹಿಳೆಯರು, ಯುವಕರು, ಚಿಕ್ಕಮಕ್ಕಳು ಕೊಟ್ಟೂರೇಶ್ವರ ಸ್ವಾಮಿಗೆ ಜೈಕಾರ ಹಾಕುತ್ತ ಬರುವ ದೃಶ್ಯ ರೋಮಾಂಚನ ಉಂಟುಮಾಡುತ್ತದೆ.

ಮೊದಲೆಲ್ಲಾ ಪಾದಯಾತ್ರಿಗಳ ಸಂಖ್ಯೆ ವಿರಳವಿತ್ತು. ಈಗ ಅತ್ಯಧಿಕವಾಗಿದೆ. ಕೊಟ್ಟೂರಿಗೆ ಬರುವ ಯಾವ ರಸ್ತೆಯಲ್ಲಿ ಕಣ್ಣು ಹಾಯಿಸಿದರೂ ಪಾದಯಾತ್ರಿಗಳೇ ಕಾಣುತ್ತಾರೆ. ಕಳೆದ ವರ್ಷ, ಗುರು ಬಸವೇಶ್ವರಸ್ವಾಮಿ ರಥವನ್ನು ಭಕ್ತರು ಎಳೆಯುತ್ತಿರುವಾಗಲೇ ನೆಲಕ್ಕುರುಳಿತು. ಆದರೆ, ಸುದೈವವಶಾತ್‌ ಯಾವುದೇ ಸಾವು ನೋವು ಸಂಭವಿಸಲಿಲ್ಲ.

ಧಾರ್ಮಿಕ ದತ್ತಿ ಇಲಾಖೆ, ಎರಡು ಕೋಟಿಗೂ ಅಧಿಕ ವೆಚ್ಚ ಮಾಡಿ, ಕಣ್ಮನ ಸೆಳೆಯುವ ಸುಂದರವಾದ ರಥ ನಿರ್ಮಾಣ ಮಾಡಿದೆ. ಭಕ್ತರಲ್ಲಿ ನೂತನ ರಥ ವೀಕ್ಷಿಸಬೇಕು ಎಂಬ ಹಂಬಲ. ಧಾರವಾಡ, ಹುಬ್ಬಳ್ಳಿ, ಗದಗ, ಚಿತ್ರದುರ್ಗ, ಶಿವಮೊಗ್ಗ, ಹಿರಿಯೂರು ಭಾಗದ ಭಕ್ತರು ರಥೋತ್ಸವ ಐದಾರು ದಿನಗಳಿರುವ ಮುಂಚೆಯೇ ಪಾದಯಾತ್ರೆ ಮೂಲಕ ಕೊಟ್ಟೂರು ಕಡೆಗೆ ಮುಖ ಮಾಡುತ್ತಾರೆ. ಆದರೆ ಶಿವಮೊಗ್ಗ ಹಾವೇರಿ, ರಾಣೆಬೆನ್ನೂರು ಚನ್ನಗಿರಿ ಶಿಕಾರಿಪುರ ಸಂತೆಬೆನ್ನೂರು ಭಾಗದ ಭಕ್ತರು ರಥೋತ್ಸವ ಎರಡು, ಮೂರು ದಿವಸ ಇರುವಾಗಲೇ ದಾವಣಗೆರೆಯ ಬಕ್ಕೇಶ್ವರ ದೇವಾಲಯದಲ್ಲಿ ಸೇರುತ್ತಾರೆ.

ದಾವಣಗೆರೆಯಿಂದ ಕೊಟ್ಟೂರಿಗೆ 70 ಕಿ.ಮೀ ದೂರ. ಬಕ್ಕೇಶ್ವರ ದೇವಾಲಯದಲ್ಲಿ ಜಮೆಯಾಗುವ ಸಾವಿರಾರು ಭಕ್ತರಿಗೆ, ಪಾದಯಾತ್ರೆ ಸಮಿತಿ ದಾನಿಗಳೊಂದಿಗೆ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸುತ್ತದೆ. ಇಲ್ಲಿ ಗಣ್ಯರಿಂದ ಸ್ವಾಮೀಜಿಗಳಿಂದ ಉಪದೇಶ, ಆಶೀರ್ವಚನದ ನಂತರ ಪಾದಯಾತ್ರಿಗಳನ್ನು ಬೀಳ್ಕೊಡಲಾಗುತ್ತದೆ ಮೊದಲಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಇಲ್ಲಿಂದಲೇ ಪಾದಯಾತ್ರಿಗಳಿಗೆ ಉಚಿತವಾಗಿ ಹಣ್ಣು, ಜ್ಯೂಸ್, ಬಿಸ್ಲೆರಿ ಬಾಟಲ್, ಉಪ್ಪಿಟ್ಟು, ಚಿತ್ರಾನ್ನ ವಿತರಣೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರೆಗೆ ಬಟ್ಟೆಯಿಂದ ಸಿದ್ಧ ಪಡಿಸಿದ ಮೆತ್ತನೆಯ ಪಾದರಕ್ಷೆ ಕೊಡುವವರೂ ಇದ್ದಾರೆ. ಹೀಗೆ ದಾವಣಗೆರೆ ನಗರದಿಂದ ಹೊರ ಬರುವಷ್ಟರ ಹೊತ್ತಿಗೆ ಹಲವು ಕಡೆ ಉಚಿತ ಪ್ರಸಾದ ಸ್ವೀಕರಿಸಿಯೇ ಮುಂದೆ ಹೋಗಬೇಕು ಎನ್ನುತ್ತಾರೆ ಸತತ 24 ವರ್ಷಗಳಿಂದ ಪಾದಯಾತ್ರೆ ಬರುತ್ತಿರುವ ಸಮಿತಿಯ ಸದಸ್ಯೆ ಸುಜಾತ.

ಪಾದಯಾತ್ರೆಗೆ ಯಾವುದೇ ನಿರ್ಬಂಧವಿಲ್ಲ. ಸ್ವಯಂ ಪ್ರೇರಣೆಯಿಂದ ಯಾರಾದರೂ ಬರಬಹುದು. ಜಾತಿ, ಧರ್ಮದ ಬೇಧವಿಲ್ಲ. ಸುಶಿಕ್ಷಿತ ಪಾದಯಾತ್ರಿಗಳೇ ಹೆಚ್ಚು. ಬರಿಗಾಲಲ್ಲಿ ನಡೆದು ಅಭ್ಯಾಸ ಇಲ್ಲದವರು, ಬರಿಗಾಲಲ್ಲಿ ನಡೆದು, ಪಾದಗಳೂ ಗಟ್ಟಿಯಾದ ಮೇಲೆ ಪ್ರಯಾಣಕ್ಕೆ ಸಿದ್ಧವಾಗುತ್ತಾರೆ.

ಹೆಗಲಿಗೊಂದು ಚೀಲ ನೇತಾಕಿಕೊಂಡರೆ ಸಾಕು, ರೊಟ್ಟಿ ಬುತ್ತಿಯ ಹಂಗಿಲ್ಲ. ಕೊಟ್ಟೂರೇಶ್ವರ ಸ್ಮರಣೆ ಮಾಡುತ್ತಾ ಗುಂಪುಗುಂಪಾಗಿ ಹಗಲು ರಾತ್ರಿ ದಾರಿ ತುಳಿಯುತ್ತಾರೆ. ಪಾದಯಾತ್ರಿಗಳು ಬರುವ ಮಾರ್ಗದ ಗ್ರಾಮಸ್ಥರು ಊರ ಮುಂದೆ ಟೆಂಟ್‍ಗಳನ್ನು ಹಾಕಿಕೊಂಡು ಟೀ, ಬಿಸ್ಕತ್, ಶರಬತ್, ಹಣ್ಣುಗಳು ಉಪ್ಪಿಟ್ಟು, ಮೊಸರನ್ನ, ವಿವಿಧ ಉಪಾಹಾರದೊಂದಿಗೆ ಕಾದು ಕುಳಿತಿರುತ್ತಾರೆ. ನಗು ಮುಖದೊಂದಿಗೆ ಸ್ವಾಗತಿಸಿ ಸ್ವಂತ ಬಂಧುಗಳಂತೆ ಕೈಹಿಡಿದು ಕರೆದು ಕೂಡ್ರಿಸಿ ಉಪಚಾರ ಮಾಡುತ್ತಾರೆ. ಪಾದಯಾತ್ರಿ ಯಾವ ಊರು, ಯಾವ ಮತ, ಇವೆಲ್ಲ ನಗಣ್ಯ. ಆತ ಕೊಟ್ಟೂರೇಶ್ವರ ಭಕ್ತ ಎಂಬುದಷ್ಟೇ ಮುಖ್ಯ. ಸಂಘ-ಸಂಸ್ಥೆಗಳು ಉಳಿಯಲು, ಸ್ನಾನಕ್ಕೂ ವ್ಯವಸ್ಥೆ ಮಾಡುವುದುಂಟು.

ಪಾದಯಾತ್ರಿಗಳನ್ನು ಸತ್ಕರಿಸುವಲ್ಲಿ ಉಪಚರಿಸುವಲ್ಲಿ ಕೊಟ್ಟೂರೇಶ್ವರನನ್ನು ಕಾಣಲು ಯತ್ನಿಸುತ್ತಾರೆ ಗ್ರಾಮಸ್ಥರು.
ತೌಡೂರು ಬಳಿ ದಾವಣಗೆರೆಯ ವೈದ್ಯರ ತಂಡ, ರಸ್ತೆ ಪಕ್ಕ, ತಮ್ಮ ಕಾರು ವ್ಯಾನ್‍ಗಳನ್ನು ನಿಲ್ಲಿಸಿ, ವಾಹನಗಳಲ್ಲಿಯೇ ಪುಟ್ಟ ಕ್ಲಿನಿಕ್ ತೆಗೆದಿರುತ್ತಾರೆ. ಪಾದದಲ್ಲಿ ಬೊಬ್ಬೆ ಬಂದಿದ್ದರೆ ಅದನ್ನು ಹೊಡೆಸಿ, ಮುಲಾಮು ಹಚ್ಚಿ, ಬ್ಯಾಂಡೇಜ್ ಕಟ್ಟುತ್ತಾರೆ. ಜ್ವರ ಬಂದವರಿಗೆ ಇಂಜೆಕ್ಷನ್, ಮಾತ್ರೆ ಕೊಡುತ್ತಾರೆ. ರಕ್ತ ಪರೀಕ್ಷೆಯನ್ನೂ ಉಚಿತವಾಗಿ ಮಾಡಲಾಗುತ್ತದೆ.

ಸುಮಾರು 40 ಜನರ ವೈದ್ಯರ ತಂಡವೊಂದಕ್ಕೆ ಈಗ ಪಾದಯಾತ್ರಿಗಳ ಈ ಸೇವೆಯನ್ನು ತೌಡೂರುನಿಂದ 16 ಕಿ.ಮೀ. ದೂರದ ಮತ್ತಿಹಳ್ಳಿ ತನಕ ರಸ್ತೆ ಪಕ್ಕ ತಮ್ಮ ವಾಹನಗಳಲ್ಲಿ ಉಚಿತ ಕ್ಲಿನಿಕ್ ಆರಂಭಿಸುವ ತವಕ.

ನೂರಾರು ಊರುಗಳಿಂದ ಬರುವ ಪಾದಯಾತ್ರಿಗಳೂ ಮೊದಲೆಲ್ಲಾ ಅಪರಿಚಿತರು. ನಂತರ ಪರಿಚಿತರಾಗುತ್ತಾರೆ. ನಡೆಯಲು ಕಷ್ಟವಾಗಿದ್ದರೆ, ಕೈಹಿಡಿದು ಮುನ್ನಡೆಸುತ್ತಾರೆ. ಮಕ್ಕಳಿದ್ದರೆ ಸರದಿಯಂತೆ ಹೆಗಲಮೇಲೆ ಕೂಡಿಸಿಕೊಂಡು ಹೋಗುತ್ತಾರೆ. ಗರ್ಭಿಣಿಯರು ಪಾದಯಾತ್ರೆ ಬಂದರೆ ಮಹಿಳೆಯರ ತಂಡ ಆಕೆಯ ಬಗ್ಗೆ ಹೆಚ್ಚು ಕಾಳಜಿವಹಿಸಿ ಸುರಕ್ಷಿತವಾಗಿ ಊರು ತಲುಪಿಸುತ್ತಾರೆ ಎಂದು ಕುಸುಮ ನೆನೆಯುತ್ತಾರೆ.

ಪಾದಯಾತ್ರಿಯನ್ನು ನಿಲ್ಲಿಸಿ, ‘ಎಷ್ಟು ವರ್ಷದಿಂದ ಬರ್ತಾ ಇದ್ದೀಯಾ ಯಾಕೆ’ ಅಂತ ಕೇಳಿದರೆ ಸಾಕು, ‘ಹತ್ತು ಹದಿನೈದು ವರ್ಷದಿಂದ ಬರ್ತಾ ಇದ್ದೀನಿ, ಕೊಟ್ಟೂರೇಶ್ವರನ ಕೃಪೆ ಮನೆತನ, ಅಭಿವೃದ್ಧಿಯಾಗಿದೆ ವ್ಯಾಪಾರ ಕೈ ಹಿಡಿದಿದೆ’ ಅನ್ನುತ್ತಾರೆ. ಹಾವೇರಿಯ ಬಸಪ್ಪ ಕೋರ್ಟ್‌ ತೀರ್ಪು ನಮ್ಮಂತಾದರೆ ಪಾದಯಾತ್ರೆ ಬರ್ತೀನಿ ಅಂದುಕೊಂಡಿದ್ದರಂತೆ. ತೀರ್ಪು ನಮ್ಮಂತಾಗಿದೆ, ನಾಲ್ಕು ವರ್ಷಗಳಿಂದ ಪಾದಯಾತ್ರೆಗೆ ಬರ್ತಾ ಇದ್ದೀನಿ ಎಂದು ಹೇಳುತ್ತಾರೆ.

ಹೀರೆ ಕೊಳಚಿಯ ಮೋದಿನಾಬಿ, ಲಂಡನ್‍ನಲ್ಲಿ ವೈದ್ಯರಾಗಿರುವ ದಾವಣಗೆರೆಯ ಡಾ. ರವೀಶ್, ಪತ್ನಿ ಮಾನಸ ಎಷ್ಟೇ ಕೆಲಸದ ಒತ್ತಡ ಇದ್ದರೂ, ಕಳೆದ ಎಂಟು ವರ್ಷಗಳಿಂದ ಪಾದಯಾತ್ರೆಗೆ ಬರ್ತಾ ಇದ್ದಾರೆ. ನೌಕರಿ ಸಿಕ್ಕವರು, ಸಂತಾನ ಭಾಗ್ಯ ಪಡೆದವರು, ಕಷ್ಟ ನಿವಾರಣೆಯಾದವರು... ಹೀಗೆ ಪಾದ ಯಾತ್ರೆಗೆ ಬರಲು ಒಬ್ಬೊಬ್ಬರಿಗೂ ಒಂದೊಂದು ಕಾರಣ.

ಕೊಟ್ಟೂರಿಗೆ ಬಂದು ಸೇರುವ ಎಲ್ಲಾ ಮಾರ್ಗಗಳಲ್ಲಿಯೂ ಪಾದಯಾತ್ರಿಗಳಿಗೆ ಕಿಂಚಿತ್ತೂ ತೊಂದರೆಯಾಗದಂತೆ ಭಕ್ತರು ಇವರ ಸೇವೆಗೆ ನಿಂತಿರುತ್ತಾರೆ. ಕೊಟ್ಟೂರು ಜನತೆ ರಸ್ತೆ ಪಕ್ಕ ಟೆಂಟ್ ಹಾಕಿಕೊಂಡು ಪಾದಯಾತ್ರಿಗಳ ಬರುವಿಕೆಗಾಗಿ ಕಾದುಕುಳಿತಿರುತ್ತಾರೆ. ಅಲ್ಲಿಯೂ ಊಟ–ತಿಂಡಿ, ಹಣ್ಣು–ಹಂಪಲಿನ ಸಮಾರಾಧಾನೆ. ಉಚಿತ ಔಷಧಿ ವಿತರಣೆ. ಪಟ್ಟಣದಲ್ಲಿ ಪಾದಯಾತ್ರಿಗಳು ಉಳಿಯಲು ಕಲ್ಯಾಣಮಂಟಪಗಳು, ಶಾಲೆ–ಕಾಲೇಜುಗಳು ಸಿದ್ಧವಾಗಿರುತ್ತವೆ. ಇಲ್ಲಿನ ಜನರು ಜಾತ್ರಾರ್ಥಿಗಳ ಸೇವೆಗೆ ಟೊಂಕಕಟ್ಟಿ ನಿಂತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.