ADVERTISEMENT

ಕೆಂಗೇರಿ ಕೆರೆಯ ಕೊನೆಯ ಸ್ವಗತ...

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2015, 19:30 IST
Last Updated 10 ಏಪ್ರಿಲ್ 2015, 19:30 IST
ಕೆಂಗೇರಿ ಕೆರೆಯ ಈ ತಿಳಿನೀರ ನೋಟ ಇನ್ನೆಷ್ಟು ದಿನ?
ಕೆಂಗೇರಿ ಕೆರೆಯ ಈ ತಿಳಿನೀರ ನೋಟ ಇನ್ನೆಷ್ಟು ದಿನ?   

ಸ್ವಾತಂತ್ರ್ಯ ಪೂರ್ವದಲ್ಲಿ  ಗಾಂಧೀಜಿಯವರು ಒಮ್ಮೆ ಕೆಂಗೇರಿಗೆ ಭೇಟಿಯಿತ್ತಿದ್ದರು. ಅಲ್ಲಿ ನಾನು ನನ್ನಷ್ಟಕ್ಕೆ ನಿರ್ಮಲವಾಗಿ ನಿಂತಿದ್ದ ನನ್ನೊಡಲಿನಲ್ಲಿನ ಸ್ಫಟಿಕದಂತಹ ನೀರನ್ನು ಪಿತಾಮಹ ಮನದಣಿಯೆ ಕುಡಿದು ದಾಹ ಹಿಂಗಿಸಿಕೊಂಡಿದ್ದರು. ಹಾಗೇ ನನ್ನ ಮತ್ತೊಂದು ಪಾರ್ಶ್ವದಲ್ಲಿ ಹರಿಯುತ್ತಿದ್ದ ವೃಷಭಾವತಿಯಲ್ಲಿ ಸ್ನಾನ ಮಾಡಿದ್ದರೆಂಬುದು ಈಗ ಇತಿಹಾಸ. ಹೀಗೆ ಪಿತಾಮಹನ ಬದುಕಿನಲ್ಲಿಯೂ ಕಿರುಪಾಲು ಪಡೆದ ಇತಿಹಾಸ ನನ್ನದು.

‘ಕೆಂಗೇರಿ ಕೆರೆ’ ಎಂದೇ ಗುರ್ತಿಸಲಾಗುವ ನನ್ನ ವಾಸ್ತವ್ಯ ಬೆಂಗಳೂರು ನಗರದಿಂದ 17 ಕಿ.ಮೀ. ದೂರದಲ್ಲಿರುವ ಕೆಂಗೇರಿಯಲ್ಲಿ.
ಮಹಾತ್ಮನ ದಾಹವನ್ನು ಹಿಂಗಿಸಿದ ದಿನಗಳಲ್ಲಿ ನಾನು ತಿಳಿನೀರಿನಿಂದ ಕಂಗೊಳಿಸುತ್ತಿದ್ದೆ. ಪ್ರಕೃತಿಯ ಮಡಿಲಲ್ಲಿ ನಿಶ್ಶಬ್ದವಾಗಿ ನಿರುಪದ್ರವಿಯಾಗಿ ನಿಂತಿದ್ದೆ. ಮಹಾನಗರದ ವಿಸ್ತರಣೆಯ ಹಸಿವು ಯಾವುದನ್ನೂ ಇದ್ದಹಾಗೆ ಇರಲು ಬಿಡಲಿಲ್ಲ. ನೆಮ್ಮದಿಯ ಮಡುವಾಗಿದ್ದ ನನ್ನ ಸುತ್ತಲೂ ತನ್ನ ಕಬಂಧಬಾಹುಗಳನ್ನು ಚಾಚಿತು. ಬೆಂಗಳೂರಿನ ವಿಸ್ತರಣೆಯ ಹಸಿವಿನ ಕಣ್ಣುಗಳು ನನ್ನ ಮೇಲೆ ಬೀರಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.

2006ರಲ್ಲಿ ನನ್ನ ಉಸಾಬರಿಯನ್ನು ಕೆರೆ ಅಭಿವೃದ್ಧಿ ಮತ್ತು ಪುರಸಭೆಯ ವ್ಯಾಪ್ತಿಗೆ ಒಪ್ಪಿಸುವುದರೊಂದಿಗೆ ನಾನೂ ಅಧಿಕೃತವಾಗಿ ಮಹಾನಗರದ ಭಾಗವಾದೆ. 27 ಎಕರೆ 14 ಗುಂಟೆಯುದ್ದಕ್ಕೂ ಹರಡಿ ಜುಳುಜುಳನೆ ಹರಿಯುತ್ತಿದ್ದ ನನ್ನನ್ನು ಸುತ್ತಲೂ ಬೇಲಿ ಹಾಕಿ ಬಂಧಿಸಿದರು. ಬೇಲಿಯ  ಆಚೆ ಬದಿಯಲ್ಲಿ ನಿಂತು ನನ್ನನ್ನು ವೀಕ್ಷಿಸುತ್ತಾ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಜನರು ಸಮಯ ಕಳೆಯುತ್ತಿದ್ದರು. ಹಾಗೆ ಸಮಯ ಕಳೆಯಲೆಂದೇ ಕೈಯಲ್ಲಿ ಕುರುಕಲು ತಿಂಡಿ ಮುಂತಾದವನ್ನು ಹಿಡಿದುಕೊಂಡು ಬರುತ್ತಿದ್ದರು.

ಹಾಗೆ ತಿಂದು ಮಿಕ್ಕಿದ್ದನ್ನು, ತಿಂದು ಖಾಲಿಯಾದ ಪ್ಲಾಸ್ಟಿಕ್, ಪೇಪರ್ ಮುಂತಾದ ತ್ಯಾಜ್ಯಗಳನ್ನು ನನ್ನ ಮೈಗೆ ಎಸೆಯುತ್ತಿದ್ದರು.
ನಿರ್ಮಲತೆಗೆ ಮತ್ತೊಂದು ಹೆಸರಂತಿದ್ದ ನನ್ನ ಒಡಲು ಕ್ರಮೇಣ ಕಲುಷಿತಗೊಳ್ಳತೊಡಗಿತು. ಜೊತೆಗೆ ನನ್ನ ಸುತ್ತ ನಗರವೂ ಬೆಳೆದು ನನಗೆ ಪ್ರತ್ಯೇಕತೆಯೇ ಇಲ್ಲವಾಯ್ತು. ಆವರೆಗೂ ದಾಹವೆಂದು ಬಂದವರಿಗೆ ನೀರುಣಿಸಿ ದಣಿವಾರಿಸಿ ಕಳಿಸುತ್ತಿದ್ದ ನಾನು ಕ್ರಿಮಿಕೀಟಗಳಿಗೆ ಆವಾಸ ಸ್ಥಾನವಾಗಿ ಕೊಳೆತು ನಾರತೊಡಗಿದೆ. ನನ್ನ ದಡದಲ್ಲಿ ಕುಳಿತು ಎಲ್ಲ ಜಂಜಡ ಮರೆಯುತ್ತಿದ್ದ ಅದೇ ಜನರು ನನ್ನ ಬಳಿ ಸುಳಿಯುವಾಗ ಮೂಗು ಮುಚ್ಚಿಕೊಂಡು ಓಡಾಡತೊಡಗಿದರು.     
   
ಇದ್ದಕ್ಕಿದ್ದಂತೆ ಯಾರಿಗೆ ನನ್ನ ಮೇಲೆ ಮರುಕ ಉಂಟಾಯಿತೋ ಏನೋ! ನನ್ನೊಡಲ ಕೊಳೆ ತೊಳೆಯುವ ಕೆಲಸ ಆರಂಭವಾಯಿತು. ನೀರು ಇಂಗಿಹೋಗಿ ಬರಡಾಗುವ ಹಂತವನ್ನು ತಲಪಿದ್ದ ನಾನು ಮತ್ತೆ ಕಳೆಕಳೆಯಾಗಿ ತಿಳಿನೀರ ಕೊಳವಾಗಿ ಕಂಗೊಳಿಸಿದೆ.
ಸುತ್ತಲೂ ಸ್ಫಟಿಕದಂತಹ ನೀರು, ಮಧ್ಯೆ ಚಿಕ್ಕ ದ್ವೀಪದಂತೆ ಕಾಣುವ ನಡುಗಡ್ಡೆ, ಮೀನುಗಳಿಗಾಗಿ ಕಾಯುವ ಬಾತು ಕೊಕ್ಕರೆ, ಪಕ್ಷಿ ಸಂಕುಲ! ನನ್ನ ಮೇಲೆ ದೋಣಿಯಲ್ಲಿ ಸವಾರಿ ಮಾಡುತ್ತಾ ಈ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವ ಪ್ರಕೃತಿ ಪ್ರಿಯರು!

ಮರುಜನ್ಮ ಪಡೆದು ಜೀವುದುಂಬಿ ನಿಂತ ನನ್ನ ಅದೃಷ್ಟಕ್ಕೆ ನನ್ನಷ್ಟಕ್ಕೆ ನಾನು ಸಂಭ್ರಮದಿಂದ ಬೀಗುತ್ತಿದ್ದ ಕಾಲವದು. ಆದರೆ ಈ ನನ್ನ ಬೀಗುವಿಕೆ ಬಹಳ ಕಾಲವೇನೂ ಬಾಳಲಿಲ್ಲ. ಆನಂದಕ್ಕೆ ಆಯುಸ್ಸು ಕಮ್ಮಿ ಎಂಬ ಮಾತು ನನ್ನ ವಿಷಯದಲ್ಲಿ ನಿಜವಾಯಿತು. 2008ರಲ್ಲಿ ನನ್ನ ಉಸ್ತುವಾರಿಯನ್ನು ಬಿ.ಬಿ.ಎಂ.ಪಿ ಗೆ ಹಸ್ತಾಂತರಿಸಲಾಯಿತು. ಆ ನಂತರದ ದಿನಗಳು ನನ್ನ ಪಾಲಿಗೆ ದುರ್ದಿನಗಳಾದವು. ನಗರ ಬೆಳೆದಂತೆ ಬೇರೆ ಬೇರೆ ನೀರಿನ ವ್ಯವಸ್ಥೆಗೆ ಜನ ಸಜ್ಜಾಗುತ್ತಿದ್ದರು.

ನಾನು ಮೂಲೆ ಗುಂಪಾಗುತ್ತಿದ್ದೆ. ಮನೆ ಮನೆಗೆ ನೀರು ಬಾರದಿದ್ದರೆ ಖಾಲಿ ಕೊಡ ಹಿಡಿದು ಜನ ಪ್ರತಿಭಟಿಸುತ್ತಿದ್ದರೇ ಹೊರತು ನನ್ನೆಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಅತ್ತ ಕುಡಿಯಲೂ ಉಪಯೋಗಿಸದೆ, ಇತ್ತ ಪ್ರೇಕ್ಷಣೀಯ ಸ್ಥಳವನ್ನಾಗಿಯೂ ಮಾಡದೆ ನನ್ನನ್ನು ಕಡೆಗಣಿಸಿದರು. ನನ್ನ ಮೇಲೆ ಜೊಂಡು ಪಾಚಿ ಬೆಳೆದು, ಮಣ್ಣಿನೊಳಗೆ ಕಳೆದುಹೋಗತೊಡಗಿದೆ. ಬಂಧಿಸಿರುವ ಬೇಲಿ, ಆ ಬೇಲಿಯ ಮೂಲೆಯಲ್ಲೆಲ್ಲೋ ನೇತಾಡುತ್ತಿರುವ ನನ್ನ ಹೆಸರಿನ ಫಲಕ- ಇವಿಷ್ಟರಿಂದಷ್ಟೇ ನನ್ನ ಇರುವಿಕೆಯನ್ನು ಗುರುತಿಸಲು ಸಾಧ್ಯವಾಗುವ ದುರ್ಬರ ಪರಿಸ್ಥಿತಿಯಲ್ಲಿ ಇದ್ದೇನೆ. ಈ ನಡುವೆ ನನ್ನ ಜಂಘಾಬಲವನ್ನು ಉಡುಗಿಸುವಂತಹ ಹೊಸ ಸುದ್ದಿ ನನ್ನ ಕಿವಿಗೆ ಬಿದ್ದಿದೆ.

ಬೆಂಗಳೂರಿನ ಹೈಟೆಕ್‌ ರೂಪಕವಾಗಿ ರೂಪುಗೊಳ್ಳುತ್ತಿರುವ ಮೆಟ್ರೋ ಯೋಜನೆಯೂ ನನ್ನ ಆವಾಹನೆ ತೆಗೆದುಕೊಳ್ಳಲು ಸಜ್ಜಾಗಿದೆ. ನನ್ನ ಸಮಾಧಿಯ ಮೇಲೆ ಮೆಟ್ರೊ ರೈಲ್ವೇ ನಿಲ್ದಾಣ ಬರುವ ಎಲ್ಲಾ ಸಾಧ್ಯತೆಗಳೂ ಇವೆಯಂತೆ! ಅಲ್ಲಿಗೆ ನನ್ನ ಅಸ್ತಿತ್ವ ನಾಶವಾದಂತೆಯೇ ಸರಿ! ಯಾರಿಗೆ ಬೇಕಾಗಿದೆ ನನ್ನನ್ನು ಉಳಿಸುವ ಪ್ರಯತ್ನ? ಎಲ್ಲರಿಗೂ ಅಭಿವೃದ್ಧಿಯ ಕನಸು.

ಪ್ರಾಕೃತಿಕ ಸಂಪನ್ಮೂಲಗಳನ್ನು ಧ್ವಂಸ ಮಾಡಿ ಅದರ ಗೋರಿಯ ಮೇಲೆ  ಅರಮನೆಯನ್ನು ನಿರ್ಮಿಸುವದನ್ನೆ ಅಭಿವೃದ್ಧಿ ಎಂದು ಕರೆಯುವ  ಜನರನ್ನು ಪ್ರಜ್ಞಾವಂತ ನಾಗರಿಕರು ಎಂದು ಕರೆಯುವದು ಎಷ್ಟು ಸರಿ? ಇದು ಕೇವಲ ನನ್ನದೊಂದೇ ಕಥೆಯಲ್ಲ. ಮಹಾನಗರದ ಕಾಂಟ್ರೀಟ್‌ ಜಗತ್ತಿನ ಅಡಿಗೆ ಮಡಿದುಹೋದ ನೂರಾರು ಕೆರೆಗಳ ದುರಂತಕಥನವೂ ಹೌದು. ಬಹುಶಃ ಈ ನಾಗರಿಕ ಜಗತ್ತಿನೆದುರಲ್ಲಿನ ನನ್ನ ಕಡೆಯ ಸ್ವಗತವೂ ಇದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.