ADVERTISEMENT

ಗಡಿಬಿಡಿಯಿಲ್ಲದ ಗಡಿ ‘ಬುಮ್ ಲಾ ಪಾಸ್’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST
ಗಡಿಬಿಡಿಯಿಲ್ಲದ ಗಡಿ ‘ಬುಮ್ ಲಾ ಪಾಸ್’
ಗಡಿಬಿಡಿಯಿಲ್ಲದ ಗಡಿ ‘ಬುಮ್ ಲಾ ಪಾಸ್’   
-ರವಿರಾಜ್ ವಳಲಂಬೆ
 
**
ನಾನೂ ಚೀನಾ ಗಡಿ ದಾಟಿದೆ... ಅದೂ ವೀಸಾ ಇಲ್ಲದೇ! 
 
ಒಬ್ಬನೇ ಒಬ್ಬ ಚೀನಾದ ವ್ಯಕ್ತಿ ‘ವೀಸಾ ಇಲ್ಲದೇ ಹೇಗೆ ಬಂದೆ?’ ಎಂದು ನನ್ನನ್ನು ಕೇಳಲೇ ಇಲ್ಲ! ಹಾಗೆ ಕೇಳುವುದಕ್ಕೆ ಅಲ್ಲಿ ಯಾರೂ ಇರಲಿಲ್ಲ. ಹೌದು, ನಾನು ಹೇಳುತ್ತಿರುವುದು ನಿಜ. ಅಲ್ಲಿ ನನ್ನನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. 
 
ಅದು ‘ಬುಮ್ ಲಾ ಪಾಸ್’. ಭಾರತ ಮತ್ತು ಚೀನಾ ದೇಶದ ಗಡಿ ಪ್ರದೇಶ. 
 
ಸಮುದ್ರ ಮಟ್ಟದಿಂದ ಸುಮಾರು 16,500 ಅಡಿ ಎತ್ತರದಲ್ಲಿರುವ ಭೂ ಬಾಗವದು. ಗಡಿ ಎಂದರೆ ಅಲ್ಲಿ ಭಯದ ವಾತಾವರಣ ಇರುತ್ತದೆ ಎಂಬ ನಿರೀಕ್ಷೆ ಸಹಜ. ಆದರೆ ಬುಮ್ಲಾ ಪಾಸ್‌ನಲ್ಲಿ ಅಂಥಹ ಯಾವುದೇ ಉದ್ವೇಗವಿಲ್ಲ. ಹಿಮಾಲಯದ ಶಿಖರಶ್ರೇಣಿಯ   ಅಲ್ಲಿ ಕಾಣಿಸುವುದು ರುದ್ರರಮಣೀಯ ಸೌಂದರ್ಯ ಹಾಗೂ ನೀರವ ಮೌನ. ಬುಮ್ ಲಾ ಪಾಸ್ ಇತರ ಗಡಿಗಳಂತೆ ಅಲ್ಲ – ಅದೊಂದು ಪ್ರವಾಸಿ ತಾಣ ಕೂಡ.
 
ನಾವು ಬುಮ್ ಲಾ ಪಾಸ್‌ಗೆ ಭೇಟಿ ಕೊಟ್ಟಿದ್ದು ಸೆಪ್ಟೆಂಬರ್‌ನಲ್ಲಿ. ಆಗ ಅಂಥ ಚಳಿಯೇನಿರಲಿಲ್ಲ. ಹೆಚ್ಚೆಂದರೆ ೮–೧೦ ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಇದ್ದಿರಬಹುದಷ್ಟೇ. ಅದರೂ ಕರಾವಳಿ ಪ್ರದೇಶದ ನಮಗೆ ಅದು ಚಳಿಯೇ. ಹಿಮಾಲಯದ ಪ್ರದೇಶಗಳಲ್ಲಿ ಸತತ ಪ್ರವಾಸ ಮಾಡಿದ್ದ ಜೊತೆಗಾರ ರಾಘು ಕೊಟ್ಟ ಸಲಹೆಯಂತೆ – ಬೆಚ್ಚಗಿನ ವಾರ್ಮರ್ ಧರಿಸಿ, ಕೈಗಳಿಗೆ ಗ್ಲೌಸ್ ತೊಟ್ಟು, ಐದು ಜನರಿದ್ದ ನಮ್ಮ ತಂಡ ಚೀನಾ ಗಡಿಗೆ ಭೇಟಿ ಕೊಟ್ಟಿತ್ತು.
 
ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ಎಂಬ ಪಟ್ಟಣದಿಂದ ಬುಮ್ ಲಾ ಪಾಸ್ ಸುಮಾರು 37 ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಹೋಗಬೇಕೆಂದರೆ, ಜಿಲ್ಲಾಡಳಿತ ಮತ್ತು ಸೇನೆಯ ಅನುಮತಿ ಪಡೆದಿರಬೇಕು. ನಮ್ಮನ್ನು ಕರೆದೊಯ್ಯುವ ವಾಹನ ಆ ಪ್ರದೇಶದ್ದು ಆಗಿರಬೇಕು, ಚಾಲಕನೂ ಸ್ಥಳೀಯನೇ ಆಗಿರಬೇಕು. ಹೋಗುವ ಹಾದಿಯಂತೂ ದುರ್ಗಮ. ಕಡಿದಾದ ಬೆಟ್ಟಗುಡ್ಡಗಳ ಹಾದಿಯದು. ಕಸುಬುದಾರ ಚಾಲಕನಷ್ಟೇ ಸುರಕ್ಷಿತವಾಗಿ ಕರೆದೊಯ್ಯಬಲ್ಲ ಹಾದಿಯದು. ಒಂಚೂರು ಆಯ ತಪ್ಪಿದರೂ, ಇಹಲೋಕಕ್ಕೆ ಯಾತ್ರೆ ಖಚಿತ. ಕಡಿದಾದ ಆ ರಸ್ತೆಯಲ್ಲಿ ಪ್ರಯಾಣಿಸುವುದೇ ಒಂದು ರೋಚಕ ಅನುಭವ. 
 
ತವಾಂಗ್‌ನಿಂದ ಬುಮ್ ಲಾ ಪಾಸ್‌ಗೆ ಮೂವತ್ತೇಳೇ ಕಿಲೋಮೀಟರ್ ದೂರವಿದ್ದರೂ, ಪ್ರಯಾಣದ ಅವಧಿ ಮೂರು ತಾಸಿನದು. ಅಲ್ಲಿಗೆ ಟಾಟಾ ಸುಮೋ ಅಥವಾ ಜೀಪ್‌ನಂತಹ ವಾಹನದಲ್ಲೇ ಪಯಣಿಸಬೇಕು. ಎಲ್ಲಿ ನೋಡಿದರಲ್ಲಿ ಕಡಿದಾದ ಭಯಾನಕ ರಸ್ತೆಗಳು, ಗಳಿಗೆಗೊಮ್ಮೆ ಎದುರಾಗುವ ಮಿಲಿಟರಿ ವಾಹನಗಳು, ಶಿಖರಗಳ ಮೇಲೆ ಲಾಸ್ಯವಾಡುತ್ತಲೇ ಇರುವ ಮೋಡಗಳು... ಹೀಗೆ ಯಾವುದೋ ಲೋಕದಲ್ಲಿ ಪ್ರಯಾಣಿಸುತ್ತಿದ್ದ ಅನನ್ಯ ಅನುಭವ ನೀಡುವ ಮೂರು ಗಂಟೆಗಳ ಪ್ರಯಾಣದ ನಂತರ ಬಂದು ಸೇರಿದ್ದು ಬುಮ್ ಲಾ ಪಾಸ್‌ಗೆ. 
 
ಟಾಟಾ ಸುಮೋದಿಂದ ಇಳಿದಾಗಅಲ್ಲಿ ಕಂಡದ್ದು ಮಿಲಿಟರಿ ಕ್ಯಾಂಪ್. ಕೈಯಲ್ಲಿ ಮೆಷಿನ್ ಗನ್ ಹಿಡಿದು ಓಡಾಡುತ್ತಿರುವ ಸೈನಿಕರು ಕಾಣಲಿಲ್ಲ. ಸುಂದರ ಉದ್ಯಾನವೊಂದಕ್ಕೆ ಬಂದಿಳಿದ ಅನುಭವವಾಯಿತು. ಅಲ್ಲಿನ ಸೈನಿಕ ಕ್ಯಾಂಪ್‌ಗೆ ಹೋದ ಕೂಡಲೇ ನಮ್ಮನ್ನು ಸಿಪಾಯಿಯೊಬ್ಬ ಸ್ವಾಗತಿಸಿದ, ಅವರ ಕಚೇರಿಯ ಒಳಗೇ ಕುಳ್ಳಿರಿಸಿದ. ಅಲ್ಲೇ ಹಚ್ಚಿದ್ದ ಸೀಮೆ ಎಣ್ಣೆ ಸ್ಟೌ ಮುಂದೆ ಮೈ ಬಿಸಿ ಮಾಡಿಕೊಳ್ಳುವಂತೆ ಹೇಳಿದ. ಒಂದೆರಡು ಮಾತಿನ ವಿನಿಮಯ ಬಿಟ್ಟರೆ, ಹೆಚ್ಚು ಮಾತನಾಡುವ ಧೈರ್ಯವಿರಲಿಲ್ಲ. 
 
ನಮ್ಮನ್ನು ಅಲ್ಲೇ 50 ಮೀಟರ್ ದೂರದಲ್ಲಿದ್ದ ಭಾರತ–ಚೀನಾ ಗಡಿಗೆ ಕರೆದೊಯ್ದರು. ಆತ ಬುಮ್ ಲಾ ಪಾಸ್‌ನ ಇತಿಹಾಸದ ಪುಠಗಳನ್ನು ನಮ್ಮ ಮುಂದೆ ತೆರೆದಿಟ್ಟ. ಅವರದೇ ಬೈನಾಕ್ಯುಲರ್‌ನಲ್ಲಿ ಸುಮಾರು 43 ಕಿ.ಮೀ. ದೂರದಲ್ಲಿರುವ ಚೀನಾದ ಗಡಿಭದ್ರತಾ ಪಡೆಯ ಪೋಸ್ಟ್ ಇರುವ ತಾಣವನ್ನು ತೋರಿಸಿದ... ಅದನ್ನು ನೋಡಿ ರೋಮಾಂಚನಗೊಳ್ಳುವ ಸರದಿ ನಮ್ಮದು. ದೂರದಲ್ಲೆಲ್ಲೋ ಕುಳಿತು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಅರುಣಾಚಲಪ್ರದೇಶದ ಬಿಕ್ಕಟ್ಟುಗಳು, ಚೀನಾದ ಅತಿಕ್ರಮಣ – ಮುಂತಾದ ಸುದ್ದಿಗಳನ್ನು ತಿಳಿಯುತ್ತಿದ್ದ ನಮಗೆ ಗಡಿ ಪ್ರದೇಶ ಹೇಗಿರುತ್ತದೆ ಎನ್ನುವ ವಾಸ್ತವದ ಅರಿವಾಯಿತು. 
 
ಬುಮ್ ಲಾ ಪಾಸ್ ಅಧಿಕೃತ ಅಂತರರಾಷ್ಟ್ರೀಯ ಗಡಿಯೇನಲ್ಲ. 1962ರ ಇಂಡೋ ಚೈನಾ ಯುದ್ಧದ ಬಳಿಕ ಚೀನಾ ಸೈನ್ಯ ಇಲ್ಲಿಂದಾಚೆಗೆ ಹಿಂದಕ್ಕೆ ಹೋಗಿತ್ತು. ಆಗ ಭಾರೀ ಯುದ್ದ ನಡೆದ ಸಮರ ಭೂಮಿಯದು. ಯುದ್ಧದ ಬಳಿಕ ಶಾಂತಿ ಮಾತುಕತೆಯ ವೇಳೆ   ಪರಸ್ಪರ ಒಪ್ಪಂದದೊಂದಿಗೆ ಗುರುತಿಸಿಕೊಂಡ ಗಡಿಯಿದು. ಯುದ್ಧ ಕೊನೆಗೊಂಡ ನಂತರ, ಬುಮ್ ಲಾ ಪಾಸ್‌ನ ಈ ಭಾಗವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಭಾರತದ ಭಾಗವಾದ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಯಾವತ್ತಾದರೊಮ್ಮೆ ಕ್ಯಾತೆ ತೆಗೆಯುವುದನ್ನು ಬಿಟ್ಟರೆ, ಈ ಭಾಗದಲ್ಲಿ ಶಾಂತಿ ಕದಡುವ ವಾತಾವರಣವೇನೂ ಇಲ್ಲ. ಹಾಗಾಗಿ, 2006ರ ನಂತರ ವಾಣಿಜ್ಯ ಸಂಪರ್ಕಕ್ಕೆ ಬುಮ್ ಲಾ ಪಾಸ್‌ನ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ‘ಗಡಿಬಿಡಿ ಇಲ್ಲ’ ಎಂದಮಾತ್ರಕ್ಕೆ ಭಾರತೀಯ ಸೈನ್ಯ ಸುಮ್ಮನೇ ಕೈಕಟ್ಟಿ ಕುಳಿತಿರುವುದಿಲ್ಲ. ಗಡಿಯಾಚೆಗೆ ಸದಾ ಒಂದು ಕಣ್ಣು ನೆಟ್ಟಿರುತ್ತದೆ. ಅನುಮಾನಾಸ್ಪದ ಚಲನವಲನಗಳ ಬಗ್ಗೆ ಗಮನಿಸುತ್ತಲೇ ಇರುತ್ತದೆ.
 
ಈಶಾನ್ಯ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗನಿಗೆ ಬುಮ್ ಲಾ ಪಾಸ್ ಒಂದು ಅದ್ಭುತ ಅನುಭವ ನೀಡುವುದರಲ್ಲಿ ಸಂಶಯವಿಲ್ಲ. ಅಲ್ಲಿಗೆ ಭೇಟಿ ನೀಡಿದ್ದ ನೆನಪಿಗಾಗಿ ‘ಬಿಎಸ್‌ಎಫ್‌’ನಿಂದ ಪ್ರಮಾಣಪತ್ರ ಕೊಡುವ ರೂಢಿಯೂ ಅಲ್ಲಿದೆ. ಗಡಿಭದ್ರತಾ ಪಡೆಯ ಜವಾನರೊಂದಿಗೆ ಒಂದಷ್ಟು ಸಮಯ ಕಳೆದು ಹಿಂದಿರುಗುವಾಗ – ‘ನಮ್ಮ ನೆಮ್ಮದಿಗಾಗಿ,  ದೇಶದ ಸುರಕ್ಷತೆಗಾಗಿ ಕೊರೆಯುವ ಚಳಿಯಲ್ಲೂ ಶ್ರಮಿಸುವ ಸೈನಿಕರ ಬದುಕು ನೆಮ್ಮದಿಯಾಗಿರಲಿ’ ಎಂದು ಮನಸ್ಸುಗಳು ಆಶಿಸುತ್ತವೆ.
 
**
ಈಶಾನ್ಯ ಭಾಗದಲ್ಲಿ ಚೀನಾಕ್ಕೆ ಸಂಪರ್ಕಿಸುವ ಅತ್ಯಂತ ಹತ್ತಿರದ ದಾರಿ ಎನ್ನುವ ಅಗ್ಗಳಿಕೆಯ ಬುಮ್ ಲಾ ಪಾಸ್‌ ಚಾರಿತ್ರಿಕ ಮಹತ್ವವಿರುವ ಗಡಿ ಪ್ರದೇಶ. ಭಾರತ–ಚೀನಾ ಯುದ್ಧಕ್ಕೆ ಸಾಕ್ಷಿಯಾದ ಪ್ರದೇಶವಿದು. ಟಿಬೆಟ್‌ನಿಂದ ತಪ್ಪಿಸಿಕೊಂಡು ಬೌದ್ಧ ಧರ್ಮಗುರು ದಲೈಲಾಮಾ ಭಾರತವನ್ನು ಪ್ರವೇಶಿಸಿದ್ದು ಇದೇ ಗಡಿಯಿಂದ. ಇಲ್ಲಿ ವರ್ಷಕ್ಕೆ ಒಂದೆರಡು ಬಾರಿ  ಚೀನಾ ಮತ್ತು ಭಾರತದ ಸೈನ್ಯಾಧಿಕಾರಿಗಳ ಸಭೆಗಳು ನಡೆಯುತ್ತವೆ.
 
ಪ್ರವಾಸಿಗರು ಫೋಟೋ ತೆಗೆಯುವುದಕ್ಕೆ ಇಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ. ಸೈನಿಕರೊಂದಿಗೆ ಫೋಟೋ ತೆಗೆದುಕೊಂಡು, ವಾಟ್ಸಾಪ್ ಮೂಲಕ ದೇಶಭಕ್ತಿ ತೋರಿಸಲು ಹೋಗಿ ಅನಪೇಕ್ಷಿತ ಘಟನೆಗಳು ಸಂಭವಿಸುವುದು ಬೇಡ ಎನ್ನುವ ಕಾರಣಕ್ಕೆ ಈ ನಿರ್ಬಂಧ.
 
ಜೂನ್‌ನಿಂದ ಅಕ್ಟೋಬರ್‌ ಮತ್ತು ನವೆಂಬರ್‌ನಿಂದ  ಮೇ ತಿಂಗಳ ಅವಧಿಯಲ್ಲಿ ಇಲ್ಲಿ ವಿಪರೀತ ಹಿಮ ಸುರಿಯುತ್ತದೆ.ಹಾಗಾಗಿ ರಸ್ತೆ ಸಂಪರ್ಕ ಬಹುತೇಕ ಹಾಳಾಗಿರುತ್ತದೆ, ಇಲ್ಲವೇ ಸ್ಥಗಿತಗೊಂಡಿರುತ್ತದೆ. ಬುಮ್ ಲಾ ಪಾಸ್‌ನಿಂದ ಚೀನಾ ಸೈನ್ಯದ ಪೋಸ್ಟ್ ಇರುವ ತ್ಸೊನಾಜೊಂಗ್ ಪಟ್ಟಣ 43 ಕಿ.ಮೀ. ದೂರದಲ್ಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.