ADVERTISEMENT

ಪ್ರವಾಸಕ್ಕೆ ಐದು ಸರಳ ಸೂತ್ರಗಳು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2014, 19:30 IST
Last Updated 9 ನವೆಂಬರ್ 2014, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೊನೆ ಕ್ಷಣದಲ್ಲಿ ವೀಕೆಂಡ್‌ಗೆ ಪ್ರವಾಸದ ಯೋಜನೆ ಹಾಕಿಕೊಂಡು ನಿತ್ಯದ ವಸ್ತುಗಳೊಂದಿಗೆ ಕೇವಲ ಮೂವತ್ತು ನಿಮಿಷದಲ್ಲಿ ಸಿದ್ಧರಾಗಿ ಗೆಳೆಯರ ಕಾರಿನಲ್ಲಿ ಕುಳಿತುಕೊಂಡರೆ ಅವರು ಗಲಿಬಿಲಿಗೊಳ್ಳುವುದು ಸಾಮಾನ್ಯ. ಎಲ್ಲಿಗಾದರೂ ಪ್ರವಾಸ ಕೈಗೊಳ್ಳಬೇಕೆಂದರೆ ಕೆಲವರು ಅವರ ವಸ್ತುಗಳನ್ನು ಹೊಂದಿಸಿಕೊಳ್ಳಲು ಸಾಕಷ್ಟು ಪರದಾಡುತ್ತಾರೆ. ಆದರೆ, ಬಹಳ ಕಡಿಮೆ ಅವಧಿಯಲ್ಲಿ ವಸ್ತುಗಳನ್ನು ಜೊತೆಗಿಟ್ಟುಕೊಂಡು ಪ್ರಯಾಣಕ್ಕೆ ಅಣಿಯಾಗುವುದು ಹೇಗೆ ಎಂಬ ಐದು ಸರಳ ಸೂತ್ರಗಳಿವೆ. ಅವುಗಳನ್ನು ಪಾಲಿಸಿದರೆ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ.

ಮೊದಲನೇ ಹಂತ
ಕೆಲವು ಸಣ್ಣ ವಸ್ತುಗಳು ನಿತ್ಯದ ಅಗತ್ಯಕ್ಕಾಗಿ ಬೇಕಿರುತ್ತವೆ. ವ್ಯಾಲೆಟ್‌, ಗುರುತು ಪತ್ರ (ಐ.ಡಿ.), ತಂಪು ಕನ್ನಡಕ, ಕ್ಯಾಮೆರಾ, ಸ್ಮಾರ್ಟ್‌ಫೋನ್‌ ಮತ್ತು ಚಾರ್ಜರ್‌, ಬ್ಯಾಗಿನ ಕೀಲಿ ಕೈ, ಟವೆಲ್‌, ಫ್ಲ್ಯಾಷ್‌ಲೈಟ್‌, ಪ್ರಥಮ ಚಿಕಿತ್ಸೆಯ ಕಿರುಪೆಟ್ಟಿಗೆ, ಛತ್ರಿ, ಪಾಕೆಟ್‌ ಚಾಕು, ಮೇಕಪ್‌ ಕ್ರೀಂ ಸೇರಿದಂತೆ ಇತರ ವಸ್ತುಗಳನ್ನು ಒಂದೇ ಟ್ರಾವೆಲ್‌ ಕಿಟ್‌ನಲ್ಲಿ ಹಾಕಬೇಕು.

ಎರಡನೇ ಹಂತ
ಇಡೀ ವಾರ್ಡ್‌ರೋಬ್‌ ಜೊತೆಗೆ ಪ್ರವಾಸ ಕೈಗೊಳ್ಳಲು ಯಾರಿಗೂ ಸಾಧ್ಯವಿಲ್ಲ. ಎರಡು ಜೊತೆ ಜೀನ್ಸ್‌ ಮತ್ತು ಕೆಲವು ಟಾಪ್ಸ್‌/ಅಂಗಿಗಳನ್ನು ಹೊಂದಿಸಿಕೊಳ್ಳಬೇಕು. ಇದಕ್ಕಾಗಿ ಕೇವಲ ಒಂದು ನಿಮಿಷ ವಿನಿಯೋಗಿಸಬೇಕು. ಏಕೆಂದರೆ ಈ ಬಟ್ಟೆಗಳಿಗೆ ಇಸ್ತ್ರಿ ಮಾಡುವ ಅಗತ್ಯವಿಲ್ಲ. ನಾವು ಹೋಗುವ ಸ್ಥಳದಲ್ಲಿ ಆಗಾಗ್ಗೆ ಮಳೆ ಬರುವ ಸಾಧ್ಯತೆಯಿದ್ದರೆ  ಜಾಕೆಟ್‌ ತೆಗೆದುಕೊಂಡು ಹೋಗುವುದು ಒಳಿತು. ಯಾವುದೇ ಕಾರಣಕ್ಕೂ ಹೀಲ್ಸ್‌ ಚಪ್ಪಲಿಗಳನ್ನು ಕೊಂಡೊಯ್ಯಬಾರದು.

ಮೂರನೇ ಹಂತ
ಪ್ರವಾಸದ ಸಂದರ್ಭದಲ್ಲಿ ಕಾಲ ಕಳೆಯಲು ಕೆಲವು ವಸ್ತುಗಳು ಬೇಕಿರುತ್ತವೆ. ಆದರೆ, ನಾವು ಅಂತಹ ವಸ್ತುಗಳನ್ನು ಮರೆತು ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಿರಿದಾಗಿರುವ ಬ್ಲೂಟೂತ್‌ ಸ್ಪೀಕರ್ಸ್‌ ಅಥವಾ ಒಳ್ಳೆಯ ಇಯರ್‌ಫೋನ್‌ ಜೊತೆಗೆ ಇಟ್ಟುಕೊಳ್ಳಬೇಕು. ಪ್ರಯಾಣದ ಸಂದರ್ಭದಲ್ಲಿ ಸಂಗೀತ ಆಲಿಸಬಹುದು. ಟ್ಯಾಬ್ಲೆಟ್‌ ಇದ್ದರೆ ಅದನ್ನು ಜೊತೆಗಿಟ್ಟುಕೊಂಡರೆ ಸಿನಿಮಾ ಕೂಡ ನೋಡಬಹುದು. ಒಂದು ವೇಳೆ ನೀವು ಪುಸ್ತಕದ ಹುಳು ಆಗಿದ್ದರೆ, ನಿಮ್ಮ ನೆಚ್ಚಿನ ಪುಸ್ತಕವೊಂದನ್ನು ತೆಗೆದುಕೊಂಡು ಹೋಗಬಹುದು. ಇದಕ್ಕಿಂತ ಉತ್ತಮ ಜೊತೆಗಾರ ಬೇರೊಂದು ಇರಲಾರದು.

ನಾಲ್ಕನೇ ಹಂತ
ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಗ್‌ ತೆಗೆದುಕೊಳ್ಳಬಾರದು. ತುಂಬಾ ದೀರ್ಘ ಸಮಯದ ಪ್ರವಾಸ ಇದ್ದಲ್ಲಿ ಮಾತ್ರ ಹೆಚ್ಚಿನ ಲಗೇಜನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು. ನಿಮ್ಮ ಹತ್ತಿರ ಬ್ಯಾಕ್‌ಪ್ಯಾಕ್‌ ಇದ್ದರೆ ಮಡಚಿ ಇಡಬಹುದಾದ ಬಹಳ ಹಗುರವಾದ ಬ್ಯಾಗ್‌ ಒಂದನ್ನು ಇಟ್ಟುಕೊಳ್ಳಬಹುದು. ಪ್ರವಾಸದ ಸಂದರ್ಭದಲ್ಲಿ ಯಾವುದಾದರೂ ವಸ್ತು ಖರೀದಿಸಿದರೆ ಅದರಲ್ಲಿ ಇಡಬಹುದು.

ಐದನೇ ಹಂತ
ಪ್ರವಾಸದ ಸಂದರ್ಭದಲ್ಲಿ ಆಹಾರಕ್ಕಾಗಿಯೇ ಬೇಕಾದಲ್ಲಿ ನಿಂತು ಕಾಲಹರಣ ಮಾಡುವುದು ಸರಿಯಾದ ಕ್ರಮವಲ್ಲ. ಶೀಘ್ರ ಶಕ್ತಿ ಹೆಚ್ಚಿಸುವ ಕೆಲವು ಚಾಕೋಲೇಟ್‌, ಚಿಪ್ಸ್‌, ಚಿಕ್‌ಪೀಸ್‌ಗಳನ್ನು ಬಳಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು. ಏನಾದರೂ ತಿನ್ನಬೇಕು ಎಂದು ಬಯಸಿದರೆ ಅದು ನಿಮ್ಮ ಬಳಿಯಲ್ಲೇ ಇರಬೇಕು. ಆದರೆ, ಬೇಕಾದದ್ದು, ಬೇಡವಾದದ್ದೆಲ್ಲ ಜೊತೆಗೆ ಒಯ್ಯುವುದು ಬೇಡ.  z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.