ADVERTISEMENT

ಸಿಂಗಳೀಕ ಧಾಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2014, 19:30 IST
Last Updated 13 ಅಕ್ಟೋಬರ್ 2014, 19:30 IST
ಸಿಂಗಳೀಕ ಧಾಮ
ಸಿಂಗಳೀಕ ಧಾಮ   

ಸಿಂಹದ ಹಾಗೆ ಮುಖದ ಮೇಲೆ ಹರಡಿರುವ ರೋಮ, ಉದ್ದನೆ ಬಾಲ, ಭಯ ಹುಟ್ಟಿಸುವ ಕೋರೆ ಹಲ್ಲು, ಜೀವಿತದ ಶೇ 99ರಷ್ಟು ಭಾಗ ಮರದ ಮೇಲೆಯೇ ಕಳೆಯುವ, ಕೆಂಪು ಮುಖದ ಕೋತಿಗಳನ್ನು ಕಂಡರೆ ಬೆದರಿ ಕ್ಷಣ ಮಾತ್ರದಲ್ಲಿ ಮಿಂಚಿ ಮರೆಯಾಗುವ ಪ್ರಾಣಿಯೇ ಸಿಂಗಳೀಕ.

ಪರಿಸರ ನಾಶದಿಂದ ಹಾಗೂ ಬೇಟೆಗೆ ಬಲಿಯಾಗಿ ವಿನಾಶದತ್ತ ಸಾಗಿ ಕೇವಲ ಚಿತ್ರದಲ್ಲಷ್ಟೇ ಕಾಣಬಹುದಾದ ಈ ಪ್ರಾಣಿಯನ್ನು ಸಂರಕ್ಷಿಸಿ ಕಾಪಾಡುತ್ತಿದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರಣ್ಯ ಇಲಾಖೆ. ತಾಲ್ಲೂಕಿನ ಗೇರುಸೊಪ್ಪದ ಬಳಿ ಈ ಪ್ರಾಣಿಗಾಗಿ ಈಗ ನಿಸರ್ಗಧಾಮ ಸ್ಥಾಪನೆಗೊಂಡಿದೆ.

ಕರ್ನಾಟಕ, ತಮಿಳುನಾಡು ಕೇರಳದ ಕೆಲವು ಕಡೆಗಳಲ್ಲಿ ಮಾತ್ರ ಕಾಣಸಿಗುವ ಈ ಪ್ರಾಣಿಯನ್ನು ಇಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಈ ಧಾಮ ನಿರ್ಮಿಸಲಾಗಿದ್ದು, ಅವುಗಳ ಸಂತತಿ ಕಾಪಾಡುವ ನಿಟ್ಟಿನಲ್ಲಿ ಹಲವಾರು ನೂತನ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇಲ್ಲಿ 300ಕ್ಕಿಂತಲೂ ಹೆಚ್ಚು ಸಿಂಗಳೀಕಗಳಿದ್ದು, ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿವೆ.

ಇವುಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗಾಗಿ ನಾಲ್ಕು ವಿನೂತನ ಕಾಟೇಜ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಊಟ ಮತ್ತು ವಸತಿ ಸೌಲಭ್ಯದ ಜೊತೆಗೆ ಸಕಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಈ ನಿಸರ್ಗಧಾಮದಿಂದ 5 ಕಿ.ಮೀ ದೂರದಲ್ಲಿ ಮೆಟ್ಟಿನ ಗದ್ದೆ ವೀಕ್ಷಣಾ ಗೋಪುರವಿದೆ. ಇಲ್ಲಿಂದ ಸಿಂಗಳೀಕಗಳ ವೀಕ್ಷಣೆ ಮಾಡಬಹುದು. ಅವುಗಳ ಕುರಿತು ಮಾರ್ಗದರ್ಶನ ನೀಡಲು ಅರಣ್ಯ ಇಲಾಖೆಯ ಸಿಬ್ಬಂದಿ ಲಭ್ಯವಿರುತ್ತಾರೆ.

ಇಲ್ಲಿ ಟ್ರೆಕಿಂಗ್‌ ವ್ಯವಸ್ಥೆ ಕೂಡ ಇದೆ. ಟ್ರೆಕಿಂಗ್ ಮಾಡುವವರಿಗೆ ಸಿಂಗಳೀಕಗಳಿಂದಾಗಲೀ ಅಥವಾ ಇನ್ನಿತರೆ ಪ್ರಾಣಿಗಳಿಂದಾಗಲಿ ಅಪಾಯವಿರುವುದಿಲ್ಲ. ಇವುಗಳಿಗೆ ಮನುಷ್ಯರನ್ನು ಕಂಡರೆ ತುಂಬಾ ಭಯವಾದ್ದರಿಂದ ಒಂದು ಕ್ಷಣ ನಮ್ಮನ್ನು ಕಂಡರೂ ಮಿಂಚಿ ಮಾಯವಾಗುತ್ತವೆ.

ಹೀಗೆ ಬನ್ನಿ
ಇದು ಜೋಗಜಲಪಾತದಿಂದ 35 ಕಿ.ಮೀ. ದೂರದಲ್ಲಿದ್ದು, ಬೆಂಗಳೂರು ಹೊನ್ನಾವರ ಹೆದ್ದಾರಿಯಲ್ಲಿ ಕ್ರಮಿಸಿದರೆ ಗೇರುಸೊಪ್ಪ ನಿಸರ್ಗಧಾಮ ಸಿಗುತ್ತದೆ. ಹತ್ತಿರದ ಪ್ರೇಕ್ಷಣೆಯ ಸ್ಥಳಗಳು ಹೊನ್ನಾವರದ ಶರಾವತಿ ನದಿ ಅರಬ್ಬೀ ಸಮುದ್ರ ಸೇರುವ ದೃಶ್ಯ ಮತ್ತು ಇಡುಗುಂಜಿ, ಮುರುಡೇಶ್ವರ, ಗೋಕರ್ಣ, ಶಿರಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT