ADVERTISEMENT

ಸ್ವಿಟ್ಜರ್‌ಲೆಂಡ್–ಮನಾಲಿ ಹಿಮದ ರುಜು

ಮರೆಯಲಿ ಹ್ಯಾಂಗ

​ಪ್ರಜಾವಾಣಿ ವಾರ್ತೆ
Published 5 ಜುಲೈ 2014, 19:30 IST
Last Updated 5 ಜುಲೈ 2014, 19:30 IST
ಸ್ವಿಟ್ಜರ್‌ಲೆಂಡ್–ಮನಾಲಿ ಹಿಮದ ರುಜು
ಸ್ವಿಟ್ಜರ್‌ಲೆಂಡ್–ಮನಾಲಿ ಹಿಮದ ರುಜು   

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿದೆ. ನಟನಾಗಿರುವುದರಿಂದ ನನಗೆ ದೇಶ ಸುತ್ತುವ ಅವಕಾಶ ಹೆಚ್ಚೇ ಸಿಕ್ಕಿದೆ. ಸಾಕಷ್ಟು ಸ್ಥಳಗಳಿಗೆ ಹೋಗಿದ್ದೇನೆ. ಯಾವುದೇ ಜಾಗಕ್ಕೆ ಹೋದರೂ ಅದರ ಬಗ್ಗೆ ಒಂದು ಕುತೂಹಲ ಇಟ್ಟುಕೊಂಡೇ ಹೋಗುತ್ತೇನೆ. ಇದರಿಂದ ಆ ಸ್ಥಳ ನನಗೆ ಹೆಚ್ಚು ಆಪ್ತವಾಗುತ್ತದೆ. ಅದನ್ನು ನೋಡುವ ನನ್ನ ದೃಷ್ಟಿಕೋನ ಬದಲಾಗುತ್ತದೆ.

ನನಗೆ ತುಂಬಾ ಹೆಚ್ಚು ಇಷ್ಟವಾದ ಸ್ಥಳಗಳೆಂದರೆ ಸ್ವಿಟ್ಜರ್‌ಲೆಂಡ್ ಮತ್ತು ಭಾರತದ ಮನಾಲಿ. ಇದಕ್ಕೆ ಕಾರಣ ಹಿಮದ ಸೌಂದರ್ಯ. ಚಿಕ್ಕವನಿಂದಲೂ ನನಗೆ ಹಿಮವೆಂದರೆ ವಿಪರೀತ ಪ್ರೀತಿ. ಅದರ ಸೊಬಗನ್ನು ನೋಡುವುದೇ ಚೆಂದ. ಪರ್ವತವನ್ನು ಮುದ್ದಿನಿಂದ ಆವರಿಸಿಕೊಂಡಿರುವ ಹಿಮದ ರಾಶಿಯನ್ನು ನೋಡುತ್ತಾ ಮನಸ್ಸು ಮುದಗೊಳ್ಳುತ್ತದೆ. ಈ ಪ್ರಕೃತಿಯಲ್ಲಿ ಏನೋ ಒಂದು ಶಕ್ತಿ ಇದೆ, ಅದಕ್ಕೊಂದು ಚೆಲುವು ಇದೆ. ಅದನ್ನು ಮನಸಾರೆ ಸವಿದವನೇ ಜಾಣ ಅನಿಸುತ್ತದೆ.

ಮನಾಲಿಯ ಸೊಬಗೇ ಹಿಮ. ಆ ಹಿಮದ ಸೌಂದರ್ಯ ಆಸ್ವಾದಿಸುತ್ತ  ಮನಸ್ಸು ಮಗುವಿನಂತಾಗಿತ್ತು. ಕಣ್ಣು ಹಾಯಿಸಿದಷ್ಟು ದೂರ ಹಿಮವೇ ಕಾಣಿಸುತ್ತಿತ್ತು. ಆ ಹಿಮದ ರಾಶಿ ನೋಡಿದಾಗ ಮೊದಲು ನನಗೆ ನೆನಪಿಗೆ ಬಂದಿದ್ದು ನನ್ನ ಬಾಲ್ಯ. ಚಿಕ್ಕವನಿರುವಾಗ ಸಿನಿಮಾದಲ್ಲಿ ಬರುವ ನಾಯಕ, ನಾಯಕಿ ಸ್ವೆಟರ್‌, ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಕೈಯಲ್ಲಿ ತೆಳ್ಳಗಿನ ಕೋಲಿನಂತಹ ವಸ್ತುವನ್ನು ಹಿಡಿದುಕೊಂಡು ಹಿಮದ ಮೇಲೆ ಆಟವಾಡುವುದನ್ನು ನೋಡುತ್ತಿದ್ದೆ. ಹಾಲಿನಂತಿರುವ ಹಿಮವನ್ನು ತಮ್ಮ ಕೈಯಲ್ಲಿ ಹಿಡಿದು ಅದನ್ನು ಚೆಂಡಿನಂತೆ ಮಾಡಿ ಒಬ್ಬರ ಮುಖಕ್ಕೆ ಇನ್ನೊಬ್ಬರು ಎಸೆಯುವುದನ್ನು ನೋಡುವುದೇ ಚೆಂದವಾಗಿತ್ತು. ನಾನು ಮನಸ್ಸಿನಲ್ಲಿಯೇ ಆ ಕ್ಷಣವನ್ನು ಸವಿಯುತ್ತಿದ್ದೆ. ಆ ಹಿಮದ ಗೊಂಬೆ ಕೂಡ ನನ್ನನ್ನು ಇನ್ನಿಲ್ಲದಂತೆ ಸೆಳೆಯುತ್ತಿತ್ತು.

ಕಾಮಿಕ್‌ ಶೋ ನೋಡುವಾಗ ಹಿಮದಿಂದ ಮಾಡಿದ ಗೊಂಬೆಯಾಕಾರದ ಚೆಂಡಿಗೆ ಒಂದು ಕ್ಯಾರೆಟ್‌ ಅನ್ನು ಮೂಗಿನ ಆಕಾರದಂತೆ ಅಂಟಿಸುತ್ತಾರೆ. ಅದನ್ನು ನೋಡುವುದೇ ಒಂದು ಚೆಂದ. ಇದೇ ಕಾರಣಕ್ಕೆ ನನಗೆ ಹಿಮದ ರಾಶಿ ಇಷ್ಟವಾಗುತ್ತಿತ್ತು. ಅದನ್ನು ಮುಟ್ಟಿ ಅನುಭವಿಸುವುದರಲ್ಲಿಯೇ ಏನೋ ಪ್ರೀತಿ.

ಮನಾಲಿಗೆ ಹೋದಾಗ ನನ್ನೆಲ್ಲಾ ಆಸೆ ನೆರವೇರಿತು. ಮನಾಲಿಯ ಸೌಂದರ್ಯವನ್ನು ಇಂಚಿಂಚು ನನ್ನ ಮನಸ್ಸಿನಲ್ಲಿ ತುಂಬಿಸಿಕೊಳ್ಳಬೇಕು ಎಂದು ನಾನಲ್ಲಿ ಹೋಗಿದ್ದೆ. ಹಿಮದ ಸೌಂದರ್ಯ ನೋಡಿ  ಆ ಕ್ಷಣ ನಾನು ನನ್ನನ್ನೇ ಮರೆತಿದ್ದೆ.  ಇನ್ನು ಸ್ವಿಟ್ಜರ್‌ಲೆಂಡ್‌ಗೆ ಹೋದಾಗ ಅಲ್ಲಿನವರು ಪ್ರವಾಸಿಗರನ್ನು ನೋಡಿಕೊಳ್ಳುವ ರೀತಿ ತುಂಬಾ ಹಿಡಿಸಿತ್ತು. ತುಂಬಾ ಆತ್ಮೀಯವಾಗಿ ಅವರು ಸ್ವಾಗತಿಸುತ್ತಾರೆ. ಅಲ್ಲಿನ ಸ್ಥಳಗಳು ಮನಸ್ಸಿಗೆ ಕಚಗುಳಿ ಇಡುತ್ತವೆ.

ಯಾವುದೇ ಜಾಗಕ್ಕೆ ಹೋದರೂ ತಲುಪಲು ಸರಿಯಾದ ಸಾರಿಗೆ ವ್ಯವಸ್ಥೆ ಇದೆ. ಅಲ್ಲಿ ‘ಟಾಪ್‌ ಆಫ್‌ ದಿ ಯುರೋಪ್‌’ ಎಂಬ ಸ್ಥಳವಿದೆ. ಎತ್ತರದಲ್ಲಿರುವ ಆ ಜಾಗವನ್ನು ನೋಡುವುದೇ ಒಂದು ಸೊಗಸು. ನಡೆಯುವುದಕ್ಕೆ ಆಗದವರೂ ಕೂಡ ಆ ಜಾಗಕ್ಕೆ ಹೋಗಲು ವ್ಯವಸ್ಥೆ ಮಾಡಿದ್ದಾರೆ. ಪ್ರತಿಯೊಬ್ಬರೂ ನಿಸರ್ಗದ ರಮಣೀಯತೆಯನ್ನು ಸವಿಯಬೇಕು ಎಂಬುದು ಅಲ್ಲಿನವರ ಆಶಯವಾಗಿತ್ತು ಅನಿಸುತ್ತದೆ.

ಸ್ವಿಟ್ಜರ್‌ಲೆಂಡ್‌ನವರಿಂದ ನಾವು ಕಲಿಯುವುದು ಬೇಕಾದಷ್ಟಿದೆ.
ಅಲ್ಲಿನ ಇನ್ನೊಂದು ಪ್ರಸಿದ್ಧ ಸ್ಥಳ ಡಾಜಾ. ಮೈಕೊರೆಯುವ ಚಳಿಯಲ್ಲೂ ಆ ಜಾಗದ ಚೆಲುವನ್ನು ಕಣ್ಣು ತುಂಬಿಸಿಕೊಳ್ಳುವ ತವಕ ನನ್ನಲ್ಲಿತ್ತು. ಅದರ ಸೌಂದರ್ಯವನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ. ಸುತ್ತಲೂ ಹಿಮದ ಪರ್ವತ. ಮಧ್ಯೆ ಕುಳಿತಾಗ ಪ್ರಕೃತಿಯ ಎದುರು ಈ ಮಾನವ ಪ್ರಾಣಿ ಎಷ್ಟು ಚಿಕ್ಕವನು ಅನಿಸಿಬಿಟ್ಟಿತು.

ಇಡೀ ಸ್ವಿಟ್ಜರ್‌ಲೆಂಡ್‌ ತುಂಬಾ ಚೆನ್ನಾಗಿದೆ. ಶೂಟಿಂಗ್‌ಗೆ ಜಾಗವನ್ನು ಹುಡುಕಬೇಕಾಗಿಲ್ಲ. ಎಲ್ಲಿಯೇ ಕ್ಯಾಮೆರಾ ಇಟ್ಟರೂ ಸುಂದರವಾದ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸಿಗುತ್ತವೆ. ಅಲ್ಲಿನ ಪ್ರತಿಯೊಂದು ಇಂಚು ಕೂಡ ಪ್ರವಾಸಿಗರನ್ನು ರಂಜಿಸುತ್ತದೆ.

ಮನಾಲಿಯಲ್ಲಿ ಸ್ಕೈ ಡೈವಿಂಗ್‌ ಹಾಗೂ ಸ್ವಿಟ್ಜರ್‌ಲೆಂಡ್‌ನ ಮೋಹಕ  ದೃಶ್ಯಗಳು ಯಾಕೆ ಮತ್ತೆ ಮತ್ತೆ ಇಷ್ಟವಾಗುತ್ತವೆ ಎಂದರೆ ಆ ಎರಡೂ ಸುಂದರ ತಾಣಗಳಿಗೆ ಭೇಟಿ ನೀಡಿದಾಗ ನನ್ನ ಕುಟುಂಬ ನನ್ನ ಜತೆ ಇದ್ದುದು. ನನ್ನ ಹೆಂಡತಿ, ಮಗ, ಮಗಳೊಂದಿಗೆ ಕಳೆದ ಆ ಕ್ಷಣಗಳು ಮನಸ್ಸಿನಲ್ಲಿ ಸದಾ ಹಸಿರಾಗಿವೆ.

ಯಾವುದಾದರೂ ಒಂದು ಸ್ಥಳ ನಮಗೆ ಇಷ್ಟವಾಗಬೇಕಾದರೆ ನಮ್ಮ ಮನಸ್ಸು ಸರಿಯಾಗಿರಬೇಕು. ನಮ್ಮ ಜತೆಗೆ ಇರುವವರು ಕೂಡ ಇಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಮನೆಯಲ್ಲಿ ಇರಬೇಕಾದರೆ ಒಬ್ಬೊಬ್ಬರು ಒಂದೊಂದು ಕೋಣೆಯಲ್ಲಿ ಇರುತ್ತೇವೆ. ನಮ್ಮ ನಮ್ಮ ಪ್ರಪಂಚದಲ್ಲಿ ಇರುತ್ತೇವೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಎಲ್ಲರೂ ಒಂದೇ ಕೋಣೆಯಲ್ಲಿ ಬಂಧಿಯಾಗುತ್ತೇವೆ. ಅಷ್ಟು ಹೊತ್ತು ಜತೆಯಲ್ಲಿಯೇ ಕಾಲ ಕಳೆಯುತ್ತೇವೆ.

ಒಂದು ಸ್ಥಳದ ಶ್ರೇಷ್ಠತೆಯ ಜತೆಗೆ ಕುಟುಂಬದ ಮಧ್ಯೆ ಒಂದು ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಅದು ಸ್ವಿಟ್ಜರ್‌ಲೆಂಡ್‌ ಆಗಿರಲೇಬೇಕು ಎಂದೇನೂ ಇಲ್ಲ. ರಸ್ತೆ ಬದಿಯಲ್ಲಿರುವ ಎಸ್‌.ಎಲ್‌.ವಿ ದರ್ಶಿನಿ ಆಗಿರಬಹುದು, ಇಲ್ಲವೇ ದಿನಾ ವಾಕಿಂಗ್‌ ಹೋಗುವ ಪಾರ್ಕ್‌ನ ಬೆಂಚಾಗಿರಬಹುದು, ಗೆಳೆಯರೆಲ್ಲಾ ಸೇರಿ ತಿಂಡಿ ತಿಂದ ಸ್ಥಳವಾಗಿರಬಹುದು. ಇವೆಲ್ಲವೂ ಒಂದೊಂದು ನೆನಪಿನ ಬುತ್ತಿ ಕಟ್ಟಿಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.