ADVERTISEMENT

ಹಿಮದ ಮುತ್ತಿನ ಬೆಟ್ಟ...

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:30 IST
Last Updated 22 ಜುಲೈ 2016, 19:30 IST
ಹಿಮದಿಂದ ಆವೃತವಾಗಿರುವ ಬೆಟ್ಟದಲ್ಲಿರುವ ಗೋಪಾಲಸ್ವಾಮಿ ದೇವಸ್ಥಾನ 	ಚಿತ್ರಗಳು: ವಿಶ್ವನಾಥ ಸುವರ್ಣ
ಹಿಮದಿಂದ ಆವೃತವಾಗಿರುವ ಬೆಟ್ಟದಲ್ಲಿರುವ ಗೋಪಾಲಸ್ವಾಮಿ ದೇವಸ್ಥಾನ ಚಿತ್ರಗಳು: ವಿಶ್ವನಾಥ ಸುವರ್ಣ   

ಆಷಾಢದ ಕೊರೆಯುವ ಥಂಡಿ, ಗಾಳಿಗೆ ಮೈಯೊಡ್ಡಿ ನಿಂತರೆ ಮೇಲಕ್ಕೆ ಹಾರುವ ಅನುಭವ, ಮೋಡ ಮುಸುಕಿದ ವಾತಾವರಣ, ಸುತ್ತಲೂ ಹಿಮ. ಎತ್ತ ನೋಡಿದರತ್ತ ಗಿರಿ ಶಿಖರಗಳು, ಕೈಗೆ ಇನ್ನೇನು ಮೋಡ  ಸಿಕ್ಕೇಬಿಟ್ಟಿತು ಎನ್ನುವ ಪರಿ. ಇದನ್ನು ಅನುಭವಿಸಬೇಕೆಂದರೆ ಒಮ್ಮೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಡಲೇಬೇಕು.

ಕಣ್ಣು ಹಾಯಿಸಿದಷ್ಟೂ ದೂರ ಹಸಿರಿನೊಂದಿಗೆ ಕಂಗೊಳಿಸುವ ಗಿರಿ ಕಂದರಗಳು. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ, ಮಂಜು ಮುಸುಕಿದ ಆಹ್ಲಾದಕರ ವಾತಾವರಣ.  ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣವೇ ‘ಹಿಮವದ್ ಗೋಪಾಲಸ್ವಾಮಿ ಬೆಟ್ಟ’.

ಒತ್ತಡ, ಜಂಜಾಟ, ಗೌಜು ಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳನ್ನು ಕಳೆಯಲು, ಏಕಾಂತ ಬಯಸುವ ಪ್ರೇಮಿಗಳು ಈ ಬೆಟ್ಟಕ್ಕೆ ಬರುತ್ತಾರೆ. ಬಂದವರು ಹಾಗೆಯೇ ದಟ್ಟ ಅರಣ್ಯದ  ಹಚ್ಚ ಹಸಿರಿನ ಬೆಟ್ಟವನ್ನು ನೋಡುತ್ತಾ, ಪ್ರಕೃತಿ ವಿಸ್ಮಯ ಸವಿಯುತ್ತಾ ಮೈಮರೆಯುತ್ತಾರೆ.

ಸಮುದ್ರ ಮಟ್ಟದಿಂದ ಸುಮಾರು 1,440 ಮೀಟರ್‌ ಎತ್ತರದಲ್ಲಿರುವ ಈ ಬೆಟ್ಟದ ತುದಿಯಲ್ಲಿ ಶ್ರೀಕೃಷ್ಣನ ದೇವಾಲಯವಿದೆ. ಇಲ್ಲಿ ಶ್ರೀಕೃಷ್ಣನು ಇಲ್ಲಿ ನಾಟ್ಯಭಂಗಿಯಲ್ಲಿ ನೆಲೆಯೂರಿದ್ದಾನೆ. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲಿನ ಭಾಗದಿಂದ ನಿರಂತರ ಹಿಮ ಜಿನುಗುತ್ತಿರುತ್ತದೆ. ಆದ್ದರಿಂದಲೇ ಇಲ್ಲಿನ ಶ್ರೀಕೃಷ್ಣನನ್ನು ‘ಹಿಮವದ್‌ ಗೋಪಾಲಸ್ವಾಮಿ’ ಎಂದು ಕರೆಯುತ್ತಾರೆ.

ವರ್ಷವಿಡೀ ತಂಪಿನ ವಾತಾವರಣವಿದ್ದು, ಪ್ರವಾಸಿಗರು  ಚಳಿಗಾಲ ಮತ್ತು ಮಳೆಗಾಲದಲ್ಲಿ ಮುಂಜಾನೆಯೇ ಬೆಟ್ಟಕ್ಕೆ  ತೆರಳಿದರೆ ಹಿಮರಾಶಿಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ದ್ರಾವಿಡ ಶೈಲಿ
ಬೆಟ್ಟದ ಮೇಲೆ 700 ವರ್ಷಗಳಷ್ಟು ಹಳೆಯದಾದ ದ್ರಾವಿಡ ಶೈಲಿಯ ಭವ್ಯ ದೇವಾಲಯವಿದೆ. ಈಗ ಇದನ್ನು ಜೀರ್ಣೋದ್ಧಾರಗೊಳಿಸಲಾಗಿದೆ.     ಶ್ರೀಕೃಷ್ಣನು ರುಕ್ಮಿಣಿ, ಸತ್ಯಭಾಮೆ ಜತೆ ನೆಲೆಸಿದ್ದಾನೆ. ಸ್ಥಳೀಯರು ಸಂತಾನ ಗೋಪಾಲಸ್ವಾಮಿ ಎಂದು ಕರೆಯುತ್ತಾರೆ. ಮೂಲ ದೇವರನ್ನು ಅಗಸ್ತ್ಯ ಮಹರ್ಷಿ ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. 

ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಅರಣ್ಯ ಇಲಾಖೆ ಈ ಪ್ರದೇಶವನ್ನು ವನ್ಯಜೀವಿ ಕಾಯ್ದೆ 1972ರ ಅನ್ವಯ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿ ಹುಲಿ ಸಂಚಾರವೂ ಇದೆ.

ದೂರದಿಂದ ನೋಡಲು ಹಸುವಿನ ಆಕಾರದಲ್ಲಿರುವುದರಿಂದ ಈ ಬೆಟ್ಟವನ್ನು ‘ಗೋವರ್ಧನಗಿರಿ’ ಎಂದು ಕರೆಯುತ್ತಾರೆ. ಹಸಿರಿನಿಂದ ಕೂಡಿದ ಈ ಬೆಟ್ಟದಲ್ಲಿ ದನ, ಕರು ಮೇಯಿಸಲು ಬೆಟ್ಟದ ತಪ್ಪಲಿನ ಗೋಪಾಲಪುರದ ಗೋಪಾಲಕರು ಬರುತ್ತಿದ್ದರು. ಗೋವರ್ಧನ ಗಿರಿಯನ್ನೇ ಎತ್ತಿ ಗೋಪಾಲಕರನ್ನು ರಕ್ಷಿಸಿದ ಕೃಷ್ಣನ ಮೂರ್ತಿಯನ್ನು ಪೂಜಿಸುತ್ತಿದ್ದರು. ಹೀಗಾಗಿ ಈ ಬೆಟ್ಟಕ್ಕೆ ಗೋವರ್ಧನಗಿರಿ ಎಂಬ ಹೆಸರು ಬಂತು ಎಂದು ಸ್ಥಳೀಯರು ಹೇಳುತ್ತಾರೆ.

ಅರಣ್ಯ ಇಲಾಖೆಯ ಅಧೀನದಲ್ಲಿರುವ ಈ ಪ್ರದೇಶದಲ್ಲಿ ಆನೆ, ಹುಲಿ ಸೇರಿದಂತೆ ಅಸಂಖ್ಯಾತ ಕೀಟ, ಪ್ರಾಣಿ, ಸಸ್ಯ ಸಂಕುಲವಿದೆ. ಹಿಮವದ್ ಗೋಪಾಲಸ್ವಾಮಿ ದೇಗುಲದ ಬಳಿ ನಿಂತು ಸುತ್ತಮುತ್ತ ಕಣ್ಣು ಹಾಯಿಸಿದರೆ ಬಂಡೀಪುರ ಹಾಗೂ ಕೇರಳದ ವಯನಾಡ್ ಅರಣ್ಯ ಪ್ರದೇಶ ಗೋಚರಿಸುತ್ತದೆ.

ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಒಳಪಟ್ಟಿರು ವುದರಿಂದ ಅರಣ್ಯ ಇಲಾಖೆಯು ಕೆಲ ನಿಯಮಗಳನ್ನು ವಿಧಿಸಿದೆ.  ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆ ಸಮಯ ನಿಗದಿಪಡಿಸಿದೆ.

ಹೋಗುವುದು ಹೇಗೆ?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ.

ADVERTISEMENT

ಗುಂಡ್ಲುಪೇಟೆ– ಊಟಿ ರಸ್ತೆಯಲ್ಲಿ 20 ಕಿ.ಮೀ. ಸಾಗಿದರೆ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿದರೆ ಬೃಹದಾಕಾರದ ಗೋಪಾಲಸ್ವಾಮಿ ಬೆಟ್ಟ ಎದುರಾಗುತ್ತದೆ. ಗುಂಡ್ಲುಪೇಟೆಯಿಂದ ಸಾರಿಗೆ ಸೌಲಭ್ಯವಿದೆ. ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಈ ಬೆಟ್ಟಕ್ಕೆ ತೆರಳುವವರು ಪ್ಲಾಸ್ಟಿಕ್ ವಸ್ತುಗಳನ್ನು ತಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಬೆಟ್ಟದಲ್ಲಿ ಅಂಗಡಿಗಳೂ ಇಲ್ಲ. ಆಹಾರ ಮತ್ತು ನೀರು ಕೊಂಡೊಯ್ಯುವುದು ಒಳಿತು.

ಬೆಟ್ಟಕ್ಕೆ ತೆರಳಿದವರು ಎಲ್ಲೆಂದರಲ್ಲಿ ಟ್ರಕ್ಕಿಂಗ್ ಮಾಡಲು ಅವಕಾಶವಿಲ್ಲ. ಫೋಟೊ ತೆಗೆಯಲು ಇದು ಮತ್ತು ಸ್ಥಳ. ಹೀಗಾಗಿ ಅನೇಕ ಛಾಯಾಗ್ರಾಹಕರು ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತಿರುತ್ತಾರೆ. ಗೋಪಾಲಸ್ವಾಮಿ ಬೆಟ್ಟದಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ 21 ಕಿ.ಮೀ ದೂರವಿದೆ. ಬಂಡೀಪುರವೂ ನಿಸರ್ಗ ಪ್ರೇಮಿಗಳು ಭೇಟಿ ನೀಡಬೇಕಾದ ತಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.