ADVERTISEMENT

ಅಂಚೆಚೀಟಿಗಳಲ್ಲಿ ವೈದ್ಯಕೀಯ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಅಂಚೆಚೀಟಿಗಳಲ್ಲಿ ವೈದ್ಯಕೀಯ ಬೆಳವಣಿಗೆ
ಅಂಚೆಚೀಟಿಗಳಲ್ಲಿ ವೈದ್ಯಕೀಯ ಬೆಳವಣಿಗೆ   

* ಎನ್‌.ಜಗನ್ನಾಥ್‌ ಪ್ರಕಾಶ್‌

ಅವರೊಬ್ಬ ಪರಿಣಿತ ವೈದ್ಯರು. ಸದಾ ಒತ್ತಡದಲ್ಲೇ ಇರುವ ಈ ವೈದ್ಯರು ವಿಶಿಷ್ಟ ಹವ್ಯಾಸವೊಂದನ್ನು ರೂಢಿಸಿಕೊಂಡಿದ್ದಾರೆ. ಅದು ವಿಶ್ವದ ಹವ್ಯಾಸಗಳ ರಾಜ– ಅಂಚೆಚೀಟಿಗಳ ಸಂಗ್ರಹ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಮೂಲದ ಡಾ.ಪ್ರದೀಪ್‌ ರಂಗಪ್ಪ ವೈದ್ಯಕೀಯ ವ್ಯಾಸಂಗದ ನಂತರ ಹಲವು ದೇಶಗಳ ವೈದ್ಯಕೀಯ ಸಂಸ್ಥೆಗಳಲ್ಲಿ ಉನ್ನತ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಯಶವಂತಪುರದ ಕೊಲಂಬಿಯ ಏಷ್ಯಾ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಸದಾ ಗಂಭೀರ ಪರಿಸ್ಥಿತಿಯ ರೋಗಿಗಳ ಜತೆಯಲ್ಲೇ ದಿನದೂಡುವ ಡಾ.ಪ್ರದೀಪ್‌ ಅವರಿಗೆ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸ ಚಿಕ್ಕಂದಿನಿಂದಲೂ ಇತ್ತು. ಇದೀಗ ತಮ್ಮ ವೈದ್ಯಕೀಯ ಅಧ್ಯಯನಗಳನ್ನು ಅಂಚೆಚೀಟಿಗಳ ಮೂಲಕ ವಿವರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಪ್ರಪಂಚದ ಹತ್ತು ಹಲವು ವೈದ್ಯ ವಿಜ್ಞಾನಿಗಳ ಸಾಧನೆಗಳನ್ನು ಅಧ್ಯಯನ ಮಾಡಿ, ಅವರನ್ನು ಕುರಿತು ಹೊರಬಂದಿರುವ ಅಂಚೆಚೀಟಿಗಳನ್ನು ಸಂಗ್ರಹಿಸಿರುವ ಇವರು ಅಂಚೆಚೀಟಿ ಹಾಗೂ ವೈದ್ಯ ವಿಜ್ಞಾನ ಮಿಳಿತಗೊಳಿಸಿ ಮಾಹಿತಿ ನೀಡುವಲ್ಲಿ ಸಿದ್ಧಹಸ್ತರು. 1929ರ ನಂತರ ಜಗತ್ತಿನ ವಿವಿಧೆಡೆ ಬಿಡುಗಡೆಗೊಂಡಿರುವ ವೈದ್ಯ ವಿಜ್ಞಾನ ಹಾಗೂ ವಿಜ್ಞಾನಿಗಳ ಬಹುತೇಕ ಅಂಚೆಚೀಟಿಗಳು ಇವರ ಸಂಗ್ರಹದಲ್ಲಿವೆ.

ಕಾಯಿಲೆ, ಅದಕ್ಕೆ ಕಂಡುಹಿಡಿದಿರುವ ಔಷಧ, ಇದನ್ನು ಅನ್ವೇಷಿಸಿದ ವಿಜ್ಞಾನಿಗಳು, ವೈದ್ಯಕೀಯ ವಿಚಾರಕ್ಕೆ ಸಬಂಧಪಟ್ಟ ದಿನಾಚರಣೆಗಳು, ಅವುಗಳ ವೈಶಿಷ್ಟ್ಯ, ವೈದ್ಯಕೀಯ ಇತಿಹಾಸ, ಬಗೆಬಗೆಯ ಔಷದೋಪಚಾರಗಳು, ವೈದ್ಯಕೀಯ ಕ್ಷೇತ್ರದ ಬೆಳವಣಿಗೆ– ಹೀಗೆ ಹಲವಾರು ವಿಷಯಗಳನ್ನು ಅಂಚೆಚೀಟಿಗಳ ಮೂಲದ ಪ್ರಸ್ತುತಪಡಿಸುವಲ್ಲಿಯೂ ನೈಪುಣ್ಯತೆ ಪಡೆದಿದ್ದಾರೆ. ಕ್ಷ-ಕಿರಣಯಂತ್ರವೂ ಸೇರಿದಂತೆ ವೈದ್ಯಕೀಯ ವಲಯಗಳಲ್ಲಿ ಉಪಯೋಗಿಸುವ ಯಂತ್ರಗಳ ಬಗೆಗೂ ಇವರ ಬಳಿ ಅಂಚೆಚೀಟಿ ಸಂಗ್ರಹ ಇದೆ.

ಭಾರತೀಯ ವೈದ್ಯಶಾಸ್ತ್ರದ ಹೆಜ್ಜೆ ಗುರುತುಗಳನ್ನೂ ಇವರ ಸಂಗ್ರಹದಲ್ಲಿರುವ ಅಂಚೆಚೀಟಿಗಳು ನಿರೂಪಿಸುತ್ತವೆ. ಪುರಾತನ ಭಾರತೀಯ ವೈದ್ಯ ಪದ್ಧತಿಯನ್ನು ಪರಿಚಯಿಸುವ ಹಲವು ಅಂಚೆಚೀಟಿಗಳನ್ನು ಭಾರತ ಹಾಗೂ ನೇಪಾಳ ದೇಶಗಳು ಹೊರತಂದಿವೆ. ಇದರಲ್ಲಿ ಧನ್ವಂತ್ರಿ, ಸುಶ್ರುತ, ವಾಲ್ಮೀಕಿ ಅವರ ಚಿತ್ರಗಳಿರುವ ಅಂಚೆಚೀಟಿಗಳೂ ಸೇರಿವೆ.

ದೇಶದ ವಿವಿಧೆಡೆ ಮತ್ತು ವಿಶ್ವದ ಹಲವೆಡೆ ಅಂಚೆಚೀಟಿ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದು ಅನೇಕ ಗೌರವ–ಪುರಸ್ಕಾರಗಳನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ವೈದ್ಯಕೀಯಕ್ಕೆ ಸಂಬಂಧಪಟ್ಟ ಅಂಚೆಚೀಟಿಗಳ ಚರಿತ್ರೆಯನ್ನು ವೈದ್ಯ ಸಮೂಹಕ್ಕೆ ಹಾಗೂ ಆಸಕ್ತ ಸಾವರ್ಜನಿಕರಿಗೆ ತಿಳಿಹೇಳಲು ಪುಟ್ಟ ಮ್ಯೂಸಿಯಂ ಸ್ಥಾಪಿಸುವ ಇರಾದೆಯೂ ಡಾ.ಪ್ರದೀಪ್ ಅವರಿಗಿದೆ.

ವೈದ್ಯಕೀಯ ಅಂಚೆಚೀಟಿಗಳ ಮೂಲಕ ಆರೋಗ್ಯ ಚಿಕಿತ್ಸೆ ಒಟ್ಟಾರೆ ವೈದ್ಯ ಇತಿಹಾಸ ಯಾನವನ್ನು ಕೃತಿಗಳ ಮೂಲಕ ಕಾಯ್ದಿಡುವುದನ್ನು ಪ್ರದೀಪ್‌ ಪುಟ್ಟ ಕೃತಿಗಳ ಮೂಲಕ ಈಗಾಗಲೇ ಶುರು ಮಾಡಿದ್ದು ಇನ್ನೂ ಇಂತಹ ಹೊತ್ತಿಗೆಗಳಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಪ್ರದೀಪ್ ಅವರ ಸಂಪರ್ಕ ಸಂಖ್ಯೆ- 9611700888

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.