ADVERTISEMENT

‘ಅಡುಗೆ ಮಾಡೋದು ಆಧ್ಯಾತ್ಮಿಕ ಅನುಭವ’

ಸುಮನಾ ಕೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಶಾಜಿಯಾ ಖಾನ್‌
ಶಾಜಿಯಾ ಖಾನ್‌   

ಸ್ಟಾರ್‌ ಪ್ಲಸ್‌ ಚಾನೆಲ್‌ನ  ರಿಯಾಲಿಟಿ ಷೋ ‘ಮಾಸ್ಟರ್ ಶೆಫ್- ಸೀಸನ್ 2’ರ ರನ್ನರ್ ಅಪ್‌ ಶೆಫ್‌ ಶಾಜಿಯಾ ಖಾನ್‌  ಬೆಂಗಳೂರಿನವರು. ಉದ್ಯಮಿಯೂ ಆಗಿರುವ ಶಾಜಿಯಾ, ‘ಫುಡ್‌ಫುಡ್‌’ ಚಾನೆಲ್‌ನಲ್ಲಿ  ಅಡುಗೆಗಳಲ್ಲಿ ಸೃಜನಶೀಲತೆ ತೋರಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದಾರೆ.

‘ಅಡುಗೆ ಎಂದರೆ ಆಧ್ಯಾತ್ಮಿಕ ಅನುಭವ’ ಎನ್ನುವುದು ಅವರ ಪ್ರತಿಪಾದನೆ. ಬೆಂಗಳೂರು, ಚೆನ್ನೈ, ಗೋವಾ ಮುಂತಾದೆಡೆ ಅಡುಗೆ ಸಂಬಂಧಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಅವರು ‘ವಾಟ್ಸ್ ಆನ್ ದ ಮೆನು?’ ಎಂಬ  ಕೃತಿಯನ್ನೂ ಬರೆದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು  ಚಿಕನ್ ಸ್ಕೀವರ್ಸ್, ಚಾಕಲೇಟ್ ಲಾವಾ, ತಂದೂರಿ ಚಿಕನ್‌ ಖಾದ್ಯಗಳನ್ನು ವೇದಿಕೆಯಲ್ಲಿ ಸಿದ್ಧಪಡಿಸಿದರು.  ಅಲ್ಲಿದ್ದವರು ಅದನ್ನು ಆಸ್ವಾದಿಸುತ್ತಿರುವಾಗ ಶಾಜಿಯಾ ‘ಮೆಟ್ರೊ’ ಜತೆ ಮಾತನಾಡಿದರು.

*ನೀವು ಶೆಫ್ ಆಗಬೇಕೆಂದು ಬಯಸಿದ್ದೇಕೆ?
ಚಿಕ್ಕಂದಿನಲ್ಲಿ ನನ್ನ ಕನಸುಗಳು ಬೇರೆಯೇ ಇತ್ತು. ದೊಡ್ಡವಳಾಗುತ್ತಿದ್ದಂತೆ ಅಡುಗೆ ಮಾಡುವುದನ್ನು ಆಸಕ್ತಿಯಿಂದ ನೋಡುತ್ತಿದ್ದೆ. ಸಮಯ ಸಿಕ್ಕಾಗಲೆಲ್ಲಾ  ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ವಿಶೇಷ ಅಡುಗೆ ತಯಾರಿಸಿ ಬಡಿಸುತ್ತಿದ್ದೆ. ಅದೃಷ್ಟವೆಂಬಂತೆ ನಾನು ಮಾಸ್ಟರ್‌ಶೆಪ್‌ಗೆ ಆಯ್ಕೆಯಾದೆ. ಅಲ್ಲಿಂದ ನಾನು ಪೂರ್ಣಪ್ರಮಾಣದ ಶೆಫ್‌ ಆದೆ. ಅಲ್ಲಿಂದ ನನ್ನ ಪಯಣ  ನಿರಂತರವಾಗಿದೆ.

* ಯಾವುದಾದರೂ ತರಬೇತಿ ಪಡೆದಿದ್ದೀರಾ?
ನಾನು ಅಡುಗೆ ಕಲಿಕೆ ಬಗ್ಗೆ ಎಲ್ಲಿಯೂ ತರಬೇತಿ ಪಡೆದಿಲ್ಲ. ಅಡುಗೆ ನನ್ನ ಆಸಕ್ತಿ ಕ್ಷೇತ್ರ. ನಾನು ಮನೆಯಲ್ಲಿಯೇ ಅಡುಗೆ ಬಗ್ಗೆ ಕಲಿತಿದ್ದು, ಆದರೆ ಮಾಸ್ಟರ್‌ಶೆಫ್‌ ಷೋ ಹಾಗೂ ಆ ಬಳಿಕದ ಅನುಭವಗಳು ಡಿಗ್ರಿಗಿಂತಲೂ  ಜಾಸ್ತಿ. ಅದು ಈ ಕ್ಷೇತ್ರದಲ್ಲಿ ಮುಂದುವರಿಯಲು ತುಂಬಾ ನೆರವು ನೀಡಿವೆ. ನನ್ನ ಅಮ್ಮ, ಅಜ್ಜಿ ಹಾಗೂ  ಚಿಕ್ಕಮ್ಮನವರು ಅಡುಗೆ ಮಾಡುವುದನ್ನು ನೋಡುತ್ತಾ ನಾನು ಬೆಳೆದಿದ್ದು. ಅಡುಗೆ ಮನೆ ಅಂದರೆ ಸಂತೋಷದ ಕೂಟ ಎಂಬಂತೆ ನಾನು ಬೆಳೆದಿದ್ದರಿಂದ ಹೊಸ ಪ್ರಯೋಗಗಳಿಗೆ ಪ್ರೇರಣೆಯಾಯಿತು. 

* ‘ಮಾಸ್ಟರ್‌ಶೆಫ್‌’ ಶೋದ ಅನುಭವ ಹೇಗಿತ್ತು?
ಅದೊಂದು ಸುಂದರ ನೆನಪು. ಅದು ನನ್ನ ಬದುಕಿಗೆ ಮಹತ್ವದ ತಿರುವು ನೀಡಿತು.   ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಾಧಾರಣ ವ್ಯಕ್ತಿ  ಆ ಮಟ್ಟಕ್ಕೆ ತಲುಪುವ, ಅನೇಕ ಸೆಲೆಬ್ರಿಟಿ ಶೆಫ್‌ಗಳನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಆ ಎಲ್ಲಾ ಅನುಭವಗಳನ್ನು ಕೆಲವು ಪದಗಳಿಂದ ವಿವರಿಸಲು  ಸಾಧ್ಯವಿಲ್ಲ.

*‘ಮಾಸ್ಟರ್‌ಶೆಫ್‌ ಸೀಸನ್‌ 2’ನ ಕೆಲವು ನೆನಪುಗಳನ್ನು ಹಂಚಿಕೊಳ್ಳಿ.
ಷೋನಲ್ಲಿ ಮತ್ತೊಬ್ಬ ಸಹಸ್ಪರ್ಧಿಯ ಜೊತೆ ಸೇರಿಕೊಂಡು ಒಂದು ಖಾದ್ಯ ಮಾಡಬೇಕಿತ್ತು. ನಾನು ಮೊದಲ 20 ನಿಮಿಷಗಳಲ್ಲಿ ಅಡುಗೆ ಮಾಡಿ, ಉಳಿದಿದ್ದನ್ನು ಆಕೆ ಪೂರ್ಣಗೊಳಿಸಬೇಕು. ಈ ಟಾಸ್ಕ್‌ ವಿಶೇಷ ಅಂದರೆ ನಾನು ತಯಾರಿಸುವ ಅಡುಗೆ ಯಾವುದು ಎಂಬುದು ಆಕೆಗೆ ತಿಳಿದಿರಬಾರದು.  ನಾವು ಒಬ್ಬರಿಗೊಬ್ಬರು ಈ ಬಗ್ಗೆ ಚರ್ಚೆ ಮಾಡಬಾರದು. ಹೀಗೆ ಷರತ್ತುಗಳಿದ್ದವು. ಕೊನೆಗೆ ಅಡುಗೆ ಪೂರ್ಣಗೊಳಿಸಿದ ಬಳಿಕ ಆ ಅಡುಗೆ ರುಚಿಕರವಾಗಿತ್ತು. ನಾವೇ ‘ಫ್ಲೇವರ್‌ ಅಜಂ ರೌಂಡ್‌’ ವಿನ್ನರ್‌ ಆಗಿದ್ದೆವು. ಈ ಟಾಸ್ಕ್‌ ನಮ್ಮ ಅಡುಗೆ ಜಾಣ್ಮೆಗೆ ಸವಾಲಾಗಿತ್ತು.

*  ಹೊಸ ಪ್ರಯೋಗಗಳಿಗೆ ಹೇಗೆ ಸಿದ್ಧವಾಗ್ತೀರಾ?
ಬೇರೆ ಬೇರೆ ತರಕಾರಿಗಳನ್ನು ಮಿಶ್ರಣ ಮಾಡಿಕೊಂಡು ಹೊಸ ರೆಸಿಪಿಗಳನ್ನು ಸಿದ್ಧಪಡಿಸುತ್ತೇನೆ. ಅಡುಗೆ ಮನೆಯಲ್ಲಿ  ಹೊಸ ಪ್ರಯೋಗಕ್ಕೆ ನಾನು ಸದಾ ಸಿದ್ಧ. ನಾನು ಆಧುನಿಕ ಶೈಲಿಯ ಅಡುಗೆಗಳನ್ನು ಇಷ್ಟಪಡುತ್ತೇನೆ. ಸಾಂಪ್ರದಾಯಿಕ ಅಡುಗೆಗಳ ಬಗ್ಗೆ ಕಲಿತು, ಅದಕ್ಕೆ ಹೊಸ ರೂಪ ನೀಡುತ್ತೇನೆ. ಪೂರ್ತಿ ರೆಸಿಪಿಯೇ ಹೊಸತಾಗಿರುತ್ತದೆ.

*ನೀವು ಗಮನಿಸಿದಂತೆ ಆಹಾರ ಉದ್ಯಮದಲ್ಲಾಗಿರುವ ಬದಲಾವಣೆಗಳೇನು?
ಈಗ ಜನರು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಹೊಸ ಹೊಸ ರುಚಿ ತಿನ್ನಲು ಬಯಸುತ್ತಾರೆ. ಬೆಂಗಳೂರಿನ ಜನರು ಹೊಸ ರುಚಿಯ ಹೋಟೆಲ್‌ಗಳನ್ನೇ  ಹುಡುಕಿಕೊಂಡು ಹೋಗುತ್ತಾರೆ. ಇನ್ನು ಮನೆಯಲ್ಲಿ ಕೂಡ ಜನರು ಹೊಸ ಹೊಸ ಅಡುಗೆ ಪ್ರಯೋಗ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ.

*ಆಹಾರ ತಯಾರಿ ಹಾಗೂ ಸಿದ್ಧತೆಯಲ್ಲಿ ನೀವು ಹೇಗೆ ಭಾಗಿಯಾಗುತ್ತೀರಿ?
ನಾನು ಕಾರ್ಯಾಗಾರಗಳಿಗಾಗಿ  ಹೊಸ ಮೆನು ಸಿದ್ಧಪಡಿಸುತ್ತಲೇ ಇರುತ್ತೇನೆ. ಆ ಮೆನು ಆದಷ್ಟು ಸುಲಭ ಹಾಗೂ ಸರಳವಾಗಿರುವಂತೆ ನೋಡಿಕೊಳ್ಳುತ್ತೇನೆ. ಇದಕ್ಕೆ ಸುಲಭವಾಗಿ ಲಭ್ಯವಿರುವ ಸಾಮಗ್ರಿಗಳನ್ನೇ ಬಳಸಲಾಗುತ್ತದೆ.  ಅಡುಗೆ  ಹೆಚ್ಚು ಜನರಿಗೆ ಇಷ್ಟವಾಗುವಂತೆ ನೋಡಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.