ADVERTISEMENT

ಅತ್ತ ಧರ್ಮವೀರ, ಇತ್ತ ಕಾಲೇಜ್‌ ಮಾಫಿಯಾ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ಅತ್ತ ಧರ್ಮವೀರ, ಇತ್ತ ಕಾಲೇಜ್‌ ಮಾಫಿಯಾ
ಅತ್ತ ಧರ್ಮವೀರ, ಇತ್ತ ಕಾಲೇಜ್‌ ಮಾಫಿಯಾ   

ಅಲ್ಲಿದ್ದದ್ದು ಒಂದೇ ತಂಡ, ಒಬ್ಬರೇ ನಿರ್ದೇಶಕರು. ಆದರೆ ಬಿಡುಗಡೆಯಾದ ಸಿ.ಡಿ. ಮಾತ್ರ ಎರಡು ಚಿತ್ರಗಳದ್ದು!

ಎಂ.ರಂಗನಾಥ್‌ ಅವರು ಕಥೆ, ಚಿತ್ರಕಥೆ, ಮತ್ತು ನಿರ್ದೇಶನ ಮಾಡಿರುವ ಎರಡು ಸಿನಿಮಾಗಳ ಧ್ವನಿಸುರಳಿಯನ್ನು ಒಂದೇ ಕಾರ್ಯಕ್ರಮದಲ್ಲಿ ಮಾಡಲಾಯಿತು. ಆ ಸಿನಿಮಾಗಳ ಹೆಸರು ‘ಕಾಲೇಜ್‌ ಮಾಫಿಯಾ’ ಮತ್ತು ‘ಧರ್ಮವೀರ’.

‘ಕಾಲೇಜು ವಿದ್ಯಾರ್ಥಿಗಳಿಗೆ ಅಂತಲೇ ಮಾಡಿದ ಸಿನಿಮಾ ಕಾಲೇಜ್  ಮಾಫಿಯಾ. ಕಾಲೇಜುಗಳಲ್ಲಿ ಡ್ರಗ್ಸ್‌ ಮಾಫಿಯಾ ಹೇಗಿರುತ್ತದೆ, ಇಂದಿನ ಯುವ ಜನತೆಯನ್ನು ಅದು ಹೇಗೆ ಬಲಿ ತೆಗೆದುಕೊಳ್ಳುತ್ತಿದೆ ಎಂಬುದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಜತೆಗೆ ಯುವ ಪೀಳಿಗೆಯೇ ಎಚ್ಚೆತ್ತುಕೊಂಡರೆ ಆ ಮಾಫಿಯಾವನ್ನು ಹೇಗೆ ಮಟ್ಟಹಾಕಬಹುದು ಎಂಬುದನ್ನೂ ತೋರಿಸಿದ್ದೇವೆ’ ಎಂದರು ರಂಗನಾಥ್‌.

ADVERTISEMENT

ಈ ಚಿತ್ರಕ್ಕೆ ಹಣ ಹೂಡಿರುವ ಶಶಿಧರ ಪಾಟೀಲ ಮಾತನಾಡಿ‘ಇದು ಉತ್ತರಪ್ರದೇಶದ ಕಾಲೇಜೊಂದರಲ್ಲಿ ನಡೆದ ನಿಜಘಟನೆಯನ್ನು ಆಧರಿಸಿ ಮಾಡಿದ ಸಿನಿಮಾ. ಧಾರವಾಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ’ ಎಂದು ವಿವರಣೆ ನೀಡಿದರು.

ಈ ಚಿತ್ರಕ್ಕೆ ನಿರ್ಮಾಪಕರ ಮಗ ನಿತೇಶ್‌ ನಾಯಕನಾದರೆ ನಿರ್ದೇಶಕರ ಮಗಳು ಸುಷ್ಮಿತಾ ನಾಯಕಿ. ಸಚಿನ್‌ ಎಂಬ ಹುಡುಗ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೊಂದು ಚಿತ್ರ ‘ಧರ್ಮವೀರ’ಕ್ಕೆ ಹಣ ಹೂಡಿರುವ ಡಿ. ಕಲ್ಮೇಶ್‌ ಹಾವೇರಿಪೇಟ್‌ ಅವರೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ನಿರ್ದೇಶಕರ ಒತ್ತಾಯದ ಮೇರೆಗೆ ಅಭಿನಯವನ್ನು ಕಲಿತುಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ಈಗಾಗಲೇ ತೊಂಬತ್ತರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ನಾಲ್ಕು ದಿನದ ಚಿತ್ರೀಕರಣ ಬಾಕಿ ಇದೆ’ ಎಂದು ಅವರು ವಿವರಣೆ ನೀಡಿದರು.

‘ಇದು ಕೌಟುಂಬಿಕ ಚಿತ್ರಕಥೆ ಇರುವ ಸಿನಿಮಾ. ಊರಲ್ಲಿ ಎಲ್ಲರಿಗೂ ಸಹಾಯ ಮಾಡುವುದರ ಮೂಲಕ ಹೆಸರು ಗಳಿಸಿದ ವ್ಯಕ್ತಿಯೊಬ್ಬ ಮನೆಯಲ್ಲಿ ಹೇಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ಇದರ ಕಥಾವಸ್ತು. ನನಗೆ ತುಂಬ ಸಹಜವಾಗಿ ನಟಿಸುವ ಕಲಾವಿದರು ಬೇಕಿತ್ತು. ಈ ಪಾತ್ರಕ್ಕೆ ಕಲ್ಮೇಶ್‌ ಅವರು ತುಂಬ ಹೊಂದುತ್ತಿದ್ದರು. ಆದ್ದರಿಂದ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ’ ಎಂಬುದು ನಿರ್ದೇಶಕ ರಂಗನಾಥ್‌ ವಿವರಣೆ.

ಸಿಂಧು ರಾವ್‌ ಮತ್ತು ರಂಜಿತಾ ರಾವ್‌ ನಾಯಕಿಯರಾಗಿ ನಟಿಸಿದ್ದಾರೆ. ‘ನಾನು ಈ ಚಿತ್ರದಲ್ಲಿ ಡಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದೇನೆ. ನನ್ನೊಳಗಿನ ಪ್ರತಿಭೆಯನ್ನು ನಿರ್ದೇಶಕರು ಹೊರಹಾಕಿದ್ದಾರೆ’ ಎಂದರು ಸಿಂಧು.

ಎರಡೂ ಚಿತ್ರಗಳಿಗೆ ವಿನು ಸಂಗೀತ ಸಂಯೋಜನೆ ಮಾಡಿದ್ದಾರೆ. ಜಗ್ಗು ಶಿರಸಿ ಹಾಡುಗಳನ್ನು ಬರೆದಿದ್ದಾರೆ. ಗುರುದತ್‌ ಮುಸುರಿ ಛಾಯಾಗ್ರಹಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.