ADVERTISEMENT

ಅಮೃತಸರದಿಂದ ನ್ಯೂಯಾರ್ಕ್ ತನಕ...

ಮಂಜುಶ್ರೀ ಎಂ.ಕಡಕೋಳ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ವಿಕಾಸ್ ಖನ್ನಾ, ಚಿತ್ರಗಳು: ಚಂದ್ರಹಾಸ ಕೋಟೆಕಾರ್
ವಿಕಾಸ್ ಖನ್ನಾ, ಚಿತ್ರಗಳು: ಚಂದ್ರಹಾಸ ಕೋಟೆಕಾರ್   

ಅವರು ಬರುವುದಕ್ಕೆ ಮುನ್ನವೇ ಅಭಿಮಾನಿಗಳ ಗುಂಪು ಅಲ್ಲಿ ನೆರೆದಿತ್ತು. ಹೆಂಗಳೆಯರೇ ಹೆಚ್ಚಾಗಿದ್ದ ಆ ಗುಂಪಿನಲ್ಲಿ ಕ್ಷಣಕ್ಷಣಕ್ಕೂ ಕಾತರ ಹೆಚ್ಚುತ್ತಿತ್ತು. ‘ನಿತ್ಯವೂ ಟಿ.ವಿ.ಯಲ್ಲಿ ನೋಡುತ್ತಿದ್ದ ವ್ಯಕ್ತಿ ಎದುರಿಗೇ ಸಿಕ್ಕಿದ್ದಾರೆ. ಕನಿಷ್ಠ ಅವರೊಂದಿಗೆ ಒಂದು ಸೆಲ್ಫೀಯನ್ನಾದರೂ ತೆಗೆದುಕೊಳ್ಳಬೇಕು’ ಎಂಬ ಭಾವವೇ ಹೆಚ್ಚಿನವರಲ್ಲಿತ್ತು. ನಿರೂಪಕರು ‘ಮಾಸ್ಟರ್ ಶೆಫ್ ವಿಕಾಸ್ ಖನ್ನಾ ಅವರಿಗೆ ಸ್ವಾಗತ’ ಎಂದ ಮಾತು ಕಿವಿಗೆ ಬಿತ್ತೋ–ಇಲ್ಲವೋ, ಶಿಳ್ಳೆ–ಚಪ್ಪಾಳೆಗಳ ಸುರಿಮಳೆ.

ಗಾಢ ನೀಲಿಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಟೀಶರ್ಟ್ ಧರಿಸಿದ್ದ ವಿಕಾಸ್ ತುಸು ನಾಚುತ್ತಲೇ ವೇದಿಕೆ ಮೇಲೆ ಬಂದರು. ತುಂಬು ಪ್ರೀತಿಯಿಂದ ಅಭಿಮಾನಿಗಳತ್ತ ಕೈಬೀಸಿದರು. ಅನೌಪಚಾರಿಕವಾಗಿ ಮಾತುಗಳನ್ನು ಆರಂಭಿಸಿದ ಅವರು, ತಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕಿನ ಪುಟಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದು ಹೀಗೆ...

‘ನಾನು ಅಮೃತಸರದಂಥ ಸಣ್ಣ ಪಟ್ಟಣದಲ್ಲಿ ಬೆಳೆದವನು. ಬಡತನ ಕಲಿಸಿದ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಿಲ್ಲ. ಅಮ್ಮನ ಪ್ರೀತಿಯ ಮಗನಾಗಿ ಬೆಳೆದ ನಾನು ನಿಮ್ಮಂತೆ ಒಂದು ವರ್ಷಕ್ಕೆ ಅಂಬೆಗಾಲಿಡಲಿಲ್ಲ. ಹುಟ್ಟಿ 13 ವರ್ಷವಾದರೂ ನನ್ನ ಒಂದು ಕಾಲು ಭೂಮ್ತಾಯಿಯ ಸ್ಪರ್ಶವನ್ನು ಸರಾಗವಾಗಿ ಮಾಡುತ್ತಿರಲಿಲ್ಲ. ಶಾಲೆಗೆ ಹೋಗದೇ ಅಜ್ಜಿ ಜತೆಗೆ ಮನೆಯಲ್ಲಿಯೇ ಉಳಿದೆ. ಅಜ್ಜಿ ಮಾಡುತ್ತಿದ್ದ ಅಡುಗೆಯಲ್ಲಿ ಪ್ರೀತಿಯ ಸ್ಪರ್ಶ ಇರುತ್ತಿತ್ತು. ನನಗೆ ಅಡುಗೆಯಲ್ಲಿ ಅಭಿರುಚಿ ಬೆಳೆದಿದ್ದೇ ಹಾಗೆ. ಖಾದ್ಯವೊಂದು ತಯಾರಾಗುವ ಬಗೆ, ಅವುಗಳಿಗೆ ಬಳಸುವ ಸಾಮಗ್ರಿಗಳ ವಿಶೇಷ ಗುಣ ನನ್ನನ್ನು ಆಕರ್ಷಿಸಿತು. 19ರ ಹರೆಯದಲ್ಲೇ ಸ್ವಂತ ಹೋಟೆಲ್ ಆರಂಭಿಸಿದೆ. ನಿಶ್ಚಿತಾರ್ಥ, ಮದುವೆ, ನಾಮಕರಣ ಕಾರ್ಯಗಳಿಗೆ ಕೇಟರಿಂಗ್ ಮಾಡುತ್ತಿದ್ದೆ.

ADVERTISEMENT

‘ಇದೇ ವೃತ್ತಿಯಲ್ಲಿ ಬೆಳೆಯಬೇಕು ಎಂಬ ಹಂಬಲ ಹೊತ್ತು ಕರ್ನಾಟಕದ ಮಣಿಪಾಲಕ್ಕೆ ಬಂದು ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಸೇರಿಕೊಂಡೆ. ಉಡುಪಿ ನನಗೆ ತುಂಬಾ ಇಷ್ಟವಾದ ಊರು. ಅಲ್ಲಿನ ನಿಸರ್ಗ ನನ್ನ ಮನದಲ್ಲಿ ಇಂದಿಗೂ ಹಸಿರು. ನನ್ನ ಪ್ರಿನ್ಸಿಪಾಲರು, ‘ನಿನಗೆ ಉಡುಪಿಯಲ್ಲೇ ಕಾಲೇಜು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಬಿಡು’ ಎಂದು ಸದಾ ತಮಾಷೆ ಮಾಡುತ್ತಿದ್ದರು.

ಇಂಗ್ಲಿಷ್ ಇರಲಿ, ನನಗೆ ಹಿಂದಿಯೂ ಸರಿಯಾಗಿ ಬರುತ್ತಿರಲಿಲ್ಲ. ಉಡುಪಿ ಕೃಷ್ಣನ ಮುಂದೆ ಹಾಡಲು ಕರ್ನಾಟಕ ಸಂಗೀತ ಕಲಿತೆ. ದೇಶದ ಅನೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡಿದೆ. 29ನೇ ವಯಸ್ಸಿನಲ್ಲಿ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ವಲಸೆ ಹೋದೆ. ಏಳುಬೀಳುಗಳನ್ನು ಕಂಡು ನನ್ನದೇ ಆದ ಹೋಟೆಲ್ ತೆರೆದೆ.

‘ನನ್ನಲ್ಲಿರುವ ಹಳೆಯ ಮಾದರಿಯ ಪಾತ್ರೆಗಳನ್ನು ಒಪ್ಪವಾಗಿ ಜೋಡಿಸಿ ಪ್ರದರ್ಶಿಸುವ ವಸ್ತುಸಂಗ್ರಹಾಲಯವನ್ನು ಮಣಿಪಾಲದಲ್ಲಿ ಸ್ಥಾಪಿಸಬೇಕು ಎಂದುಕೊಂಡಿದ್ದೇನೆ. 2018ರ ಏಪ್ರಿಲ್ ವೇಳಗೆ ಈ ಕನಸು ನನಸಾಗಲಿದೆ. ವಿಶ್ವದಲ್ಲಿ ಇಂಥ ಮ್ಯೂಸಿಯಂ ಸ್ಥಾಪನೆಯಾಗುತ್ತಿರುವುದು ಬಹುಶಃ ಇದೇ ಮೊದಲು.

‘ನ್ಯೂಯಾರ್ಕ್‌ನಲ್ಲಿ ನನ್ನ ಬದುಕು ಕಟ್ಟಿಕೊಂಡಿದ್ದು, ಹಲವು ಕಂಪೆನಿಗಳ ಜತೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಇದನ್ನೆಲ್ಲ ನಾನು ಹಣಕ್ಕಾಗಿ, ಪ್ರಸಿದ್ಧಿಗಾಗಿ ಮಾಡಲಿಲ್ಲ. ನನ್ನ ಮನಸಿನ ಸಂತೋಷಕ್ಕಾಗಿ ಮಾಡಿದೆ ಅಷ್ಟೇ. ಅಪ್ಪನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಬರೆದೆ...’

ಇಷ್ಟು ಹೇಳಿ ಭಾವುಕರಾದ ವಿಕಾಸ್‌ ಅಭಿಮಾನಿಗಳ ಪ್ರೀತಿಗೆ ಮಣಿದು ಸೆಲ್ಫೀಗೆ ಫೋಸ್ ಕೊಡುತ್ತಲೇ ತಮ್ಮ ಪುಸ್ತಕ ‘ಎ ಟ್ರೀ ನೇಮ್ಡ್‌ ಗಂಗಾ’ಕ್ಕೆ ಹಸ್ತಾಕ್ಷರ ಹಾಕಿಕೊಟ್ಟರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಕೆಲವರು, ’ನೀವೇಕೆ ಇನ್ನೂ ಮದುವೆಯಾಗಿಲ್ಲ?’ ಎಂದು ಪ್ರಶ್ನಿಸಿದಾಗ ‘ಶೆಫ್ ವೃತ್ತಿಗೆ ಬಹಳ ಇಷ್ಟಪಟ್ಟು ಬಂದೆ. ನನ್ನ ಮೊದಲ ಪ್ರೀತಿ ಅಡುಗೆ. ಅದರ ಸ್ಥಾನವನ್ನು ಯಾರೂ ತುಂಬಲಾಗದು. ನಾನು ಮದುವೆಯಾದರೆ ನನ್ನ ಶೆಫ್ ವೃತ್ತಿಗೆ ಬದ್ಧನಾಗಿರಲು ಸಾಧ್ಯವಿಲ್ಲ ಅನಿಸ್ತು ಅದಕ್ಕೆ ಮದುವೆಯಾಗಲಿಲ್ಲ’ ಎಂದು ವಿಕಾಸ್ ಹೇಳಿದಾಗ ಅಭಿಮಾನಿಗಳು ಜೋರಾಗಿ ನಕ್ಕರು.

ಫಿಟ್‌ನೆಸ್ ಗುಟ್ಟು
ನಿತ್ಯವೂ ಯೋಗ ಮಾಡುವ ವಿಕಾಸ್‌. ಮನಸನ್ನು ತಾಜಾ ಆಗಿಟ್ಟುಕೊಳ್ಳಲು ಸಂಗೀತದ ಮೊರೆ ಹೋಗುತ್ತಾರೆ. ಮದ್ಯಪಾನ, ಸಿಗರೇಟು, ಡ್ರಗ್ಸ್‌ಗಳಿಂದ ಸದಾ ದೂರ. ಬೆಳಿಗ್ಗೆ ಮೊಟ್ಟೆಯ ಬಿಳಿಯ ಭಾಗ, ಮುಸ್ಲಿ ಸೇವಿಸುವ ಅವರು ರಾತ್ರಿಯೂಟದಲ್ಲಿ ಅನ್ನ ಮತ್ತು ದಾಲ್‌ ತಿನ್ನುತ್ತಾರಂತೆ. ರಾತ್ರಿಯೂಟ ಬೇಗನೇ ಮುಗಿಸುತ್ತಾರೆ.

‘...ಗಂಗಾ’ ಎಂಬ ಮರದ ಕಥೆ
ಒಂದು ಸಣ್ಣ ಬೀಜವಿರುತ್ತದೆ. ಅದನ್ನು ಪಾರಿವಾಳವೊಂದು ಪರ್ವತಶ್ರೇಣಿಯೊಂದರಲ್ಲಿ ಉದುರಿಸುತ್ತದೆ. ಅದುವರೆಗೆ ಹಣ್ಣಿನೊಳಗೆ ಸುರಕ್ಷಿತವಾಗಿದ್ದ ಬೀಜಕ್ಕೆ ಅನಾಥಪ್ರಜ್ಞೆ ಕಾಡುತ್ತದೆ.

‘ಅಯ್ಯೋ ನಾನು ಒಂಟಿಯಾಗಿಬಿಟ್ಟೆನಲ್ಲಾ’ ಎಂದು ನೊಂದುಕೊಳ್ಳುತ್ತಿರುವಾಗ, ಜದ ಬಳಿ ಇರುವೆ, ಎರೆಹುಳುಗಳು ಬರುತ್ತವೆ. ‘ನಾವು ನಿನ್ನೊಂದಿಗೆ ಇರುತ್ತೇವೆ’ ಹೆದರದಿರು ಎಂದು ಧೈರ್ಯ ತುಂಬುತ್ತವೆ. ಮಳೆಯಲ್ಲಿ ನೆನೆಯುವ ಬೀಜದಿಂದ ಹಸಿರಿನ ಎಲೆಯೊಂದು ಚಿಗೊರೊಡೆಯುತ್ತದೆ. ಹಾಗೆ ಚಿಗುರೊಡೆದ ಬೀಜ ಮೊಳಕೆಯಾಗಿ, ದೊಡ್ಡ ಹೆಮ್ಮರವಾಗಿ ಬೆಳೆಯುತ್ತದೆ. ಆ ಮರದ ಅಡಿಯಲ್ಲಿ ಪುಟ್ಟ ಮಕ್ಕಳು ಸಂತೋಷದಿಂದ ಆಟವಾಡುತ್ತಾರೆ. ದಣಿದು ಬಂದವರು ಅದರ ತಂಪಾದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸಮೃದ್ಧ ಹಸಿರು, ಫಲಗಳಿಂದ ತೂಗುವ ಆ ಮರಕ್ಕೆ ಜನರು ‘ಗಂಗಾ‘ ಎಂದೇ ಕರೆಯುತ್ತಾರೆ.

ಅದೊಂದು ದಿನ ಗಂಗಾಳಿಗೆ ಅಹಂ ಬಂದುಬಿಡುತ್ತೆ. ‘ನನ್ನ ನೆರಳು ನನಗಿರಲಿ, ನನ್ನ ಫಲ ನನಗಿರಲಿ’ ಎನ್ನುತ್ತಾಳೆ ಗಂಗಾ. ಮುಂದೇನಾಗುತ್ತೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ‘ಎ ಟ್ರೀ ನೇಮ್ಡ್‌ ಗಂಗಾ’ ಓದಿಕೊಳ್ಳಿ. amazon.inನಲ್ಲಿ ಬೆಲೆ ₹225 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.