ADVERTISEMENT

ಅವರ ಕೈಯಲ್ಲಿ ನಮ್ಮ ದೀಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಹಲವು ದೇಶಗಳ ವಿದ್ಯಾರ್ಥಿಗಳು ಒಂದೆಡೆ ಕಲಿಯುತ್ತಿರುವ ಸ್ಟೋನ್‌ಹಿಲ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಅಂದು ಬೆಳಕಿನ ಹಬ್ಬದ ಸಂಭ್ರಮ ಗರಿಗೆದರಿತ್ತು. ವಿದೇಶಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭಾರತೀಯ ಸಾಂಪ್ರದಾಯಿಕ ಉಡುಪುಗಳಾದ ಸೀರೆ, ಕುರ್ತಾ, ಲೆಹೆಂಗಾಗಳಲ್ಲಿ ಕಂಗೊಳಿಸುತ್ತಿದ್ದರು.

ದೇಶ–ದೇಶಗಳ ನಡುವಣ ಸಾಂಸ್ಕೃತಿಕ ಸೇತುವೆಯಂತಿದ್ದ ‘ದೀಪಾವಳಿ ಮೇಳ’ ಅರ್ಥಪೂರ್ಣವಾಗಿ ನಡೆಯಿತು. ವಿದೇಶಿ ವಿದ್ಯಾರ್ಥಿಗಳಿಗೆ ನಮ್ಮ ನೆಲದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಬೇಕು ಎಂಬ ಉದ್ದೇಶದಿಂದ ಆಯೋಜಿಸಿಲಾಗಿದ್ದ ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಭರತನಾಟ್ಯ, ಗರ್ಭಾ ನೃತ್ಯ, ಸ್ಟ್ರೀಟ್‌ ಡಾನ್ಸ್‌ ಪ್ರಮುಖ ಆಕರ್ಷಣೆಯಾಗಿದ್ದವು.  ಸ್ಟೋನ್‌ಹಿಲ್‌ ಶಾಲೆಯಲ್ಲಿ 300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಲ್ಲಿ ಶೇ 98ರಷ್ಟು ವಿದ್ಯಾರ್ಥಿಗಳು ವಿದೇಶಿಗರು.

ಇವರೆಲ್ಲಾ ಒಪ್ಪಂದದ ಆಧಾರದ ಮೇಲೆ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಐಟಿ ಉದ್ಯೋಗಿಗಳ ಮಕ್ಕಳು. ಅಂತರರಾಷ್ಟ್ರೀಯ ಪಠ್ಯಕ್ರಮವಿರುವ ಈ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಮೂರು ಅಥವಾ ನಾಲ್ಕು ವರ್ಷ ಮಾತ್ರ ಓದುತ್ತಾರೆ. ಆನಂತರವೂ ಇಲ್ಲೇ ಕೆಲಸ ಮಾಡುವ ಅವಕಾಶ ಸಿಕ್ಕ ಪೋಷಕರ ಮಕ್ಕಳು ಮಾತ್ರ ತಮ್ಮ ವಿದ್ಯಾಭ್ಯಾಸವನ್ನು ಇಲ್ಲಿ ಮುಂದುವರಿಸುತ್ತಾರೆ. ಓದಿನ ಜೊತೆಜೊತೆಗೆ ಸ್ಥಳೀಯ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂಬುದು ಈ ಶಾಲೆಯ ಉದ್ದೇಶ. ಹಾಗಾಗಿ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನೂ ಆಗಾಗ್ಗೆ ಒಟ್ಟಿಗೆ ಸೇರಿಸಿ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ಹಬ್ಬಕ್ಕೂ ಮುನ್ನ ಆಯೋಜಿಸಿದ್ದ ‘ದೀಪಾವಳಿ ಮೇಳ’ದಲ್ಲಿ ಅನೇಕ ವಿಶೇಷತೆಗಳಿದ್ದವು. 34 ಎಕರೆಯಷ್ಟು ವಿಶಾಲವಾಗಿರುವ ಶಾಲೆಯ ಆವರಣ ಉತ್ಸವದ ಸಲುವಾಗಿ ತಳಿರು ತೋರಣ, ಆಕಾಶದೀಪಗಳ ಶೃಂಗಾರದಿಂದ ಕಂಗೊಳಿಸುತ್ತಿತ್ತು. ಹಸಿರು ಹಾಸಿನ ನಡುವೆ ಅಲ್ಲಲ್ಲಿ ನಿಲ್ಲಿಸಿದ್ದ ಎತ್ತಿನಗಾಡಿಗಳು, ಕೀಲು ಕುದುರೆ ಕುಣಿತ ಈ ಕಾರ್ಯಕ್ರಮಕ್ಕೆ ದೇಸಿ ಸೊಗಡು ತುಂಬಿದ್ದವು. ಲಂಗ–ದಾವಣಿ, ಸೀರೆ ಧರಿಸಿದ್ದ ಪುಟ್ಟ ವಿದ್ಯಾರ್ಥಿನಿಯರು ಕೈಯಲ್ಲಿ ಐಸ್‌ಗೋಲಾ ಚೀಪುತ್ತಾ ಅತ್ತಿಂದಿತ್ತ ಹರಿಣಿಗಳಂತೆ ಓಡಾಡುತ್ತಿದ್ದರು. ಫ್ಲೀ ಮಾರ್ಕೆಟ್‌ನಲ್ಲಿ ಕಣ್ಣಿಗೆ ಕಂಡ ದೇಸಿ ವಸ್ತುಗಳನ್ನು ಖರೀದಿಸಿ ಖುಷಿ ಪಡುತ್ತಿದ್ದರು.

ಸಾಂಸ್ಕೃತಿಕ ಸೇತು
ಸ್ಟೋನ್‌ಹಿಲ್‌ ಶಾಲೆಯ ವಿದ್ಯಾರ್ಥಿಗಳು ದೀಪಾವಳಿ ಮೇಳದಲ್ಲಿ ಭಾಗವಹಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಭರತನಾಟ್ಯದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರೀಮಿಕ್ಸ್‌ ಗೀತೆಗಳು, ಗರ್ಭಾ ಮತ್ತು ದಾಂಡಿಯಾ ನೃತ್ಯ ಹಾಗೂ ಬಾಲಿವುಡ್‌ ಗೀತೆಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು. ರಾವಣನನ್ನು ಗೆದ್ದ  ಶ್ರೀರಾಮಚಂದ್ರ, ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ಕೆಲವರು ದೀಪಾವಳಿ ಆಚರಿಸುತ್ತಾರೆ.

ಈ ಕತೆಯನ್ನು ಬಿಂಬಿಸುವ ನಾಟಕವನ್ನು ಹದಿನೈದು ಪುಟಾಣಿ ಮಕ್ಕಳು ಸೇರಿಕೊಂಡು ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿದೇಶಿ ಮಕ್ಕಳು ಕಟ್ಟಿಕೊಟ್ಟ ಈ ಇಂಗ್ಲಿಷ್‌ ರಾಮಾಯಣ ಮಜಬೂತಾಗಿತ್ತು. ಶಾಲೆಯಲ್ಲಿ ಡ್ರೈವರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಶಂಕರ್‌ನಾಗ್‌ ಅಭಿನಯದ ‘ಸಂತೋಷಕ್ಕೆ ಹಾಡೂ ಸಂತೋಷಕ್ಕೆ’ ಗೀತೆ ಹಾಡಿದಾಗ ವಿದೇಶಿಗರು ಕೇಕೆ ಹಾಕುತ್ತಾ ಕುಣಿದರು. ಹಾಡಿನ ಭಾವ ಅರ್ಥವಾಗದಿದ್ದರೂ, ಹಾಡಿನ ಧಾಟಿ ಅವರನ್ನು ಸಿಕ್ಕಾಪಟ್ಟೆ ರಂಜಿಸಿತು.

ಮಕ್ಕಳಷ್ಟೇ ಅಲ್ಲದೇ ಅವರ ಪೋಷಕರು ಈ ಉತ್ಸವದಲ್ಲಿ ಭಾಗವಹಿಸಿದ್ದು ಮತ್ತೊಂದು ವಿಶೇಷ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ವಿದೇಶಿ ಶಿಕ್ಷಕಿಯರು ಪ್ರದರ್ಶಿಸಿದ ಗರ್ಭಾ ನೃತ್ಯ, ಕೊರಿಯಾ ಮತ್ತು ಜಪಾನಿ ಅಮ್ಮಂದಿರು ಪ್ರದರ್ಶಿಸಿದ ಬಾಲಿವುಡ್‌ ನೃತ್ಯ ಮೋಹಕವಾಗಿತ್ತು. ಒಟ್ಟಾರೆಯಾಗಿ, ನಮ್ಮ ದೇಶದ ಸಂಸ್ಕೃತಿಯನ್ನು ಅರಿಯಲು ನೆರವಾಗುವಂತಿದ್ದ ಈ ಕಾರ್ಯಕ್ರಮದಲ್ಲಿ ವಿದೇಶಿ ಮಕ್ಕಳು ಮತ್ತು ಅವರ ಪೋಷಕರು ಖುಷಿಯ ಬುತ್ತಿಯ ಸವಿಯುಂಡು ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.