ADVERTISEMENT

ಅಸಮಾನತೆ ವಿರುದ್ಧ ನಾಸೀರ್‌ ಧ್ವನಿ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 30 ಮೇ 2016, 19:30 IST
Last Updated 30 ಮೇ 2016, 19:30 IST
ಅಸಮಾನತೆ ವಿರುದ್ಧ ನಾಸೀರ್‌ ಧ್ವನಿ
ಅಸಮಾನತೆ ವಿರುದ್ಧ ನಾಸೀರ್‌ ಧ್ವನಿ   

ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ನಟಿಯರಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಜನರು ಮಾತನಾಡುತ್ತಾರೆ. ಆದರೆ, ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಷಾ ಈ ಮಾತು ಒಪ್ಪುವುದಿಲ್ಲ.

‘ಬಾಲಿವುಡ್‌ನಲ್ಲಿ ಲಿಂಗ ಸಮಾನತೆ  ಎಂಬುದು ಇಲ್ಲ. ಅಲ್ಲಿ ಹೀರೋಗಳದ್ದೇ ಕಾರುಬಾರು. ಅವರದ್ದೇ ಮೇಲುಗೈ’ ಎಂದು ನಾಸಿರುದ್ದೀನ್‌ ಷಾ ಹೇಳಿರುವ ಮಾತು ಇದೀಗ ಬಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ.

ಖಾಸಗಿ ಟೀವಿ ಚಾನೆಲ್‌ಗೆ ‘ವೇಟಿಂಗ್‌’ ಚಿತ್ರದ ಸಹನಟಿ ಕಲ್ಕಿ ಕೊಚ್ಲಿನ್ ಜೊತೆಗೆ ಸಂದರ್ಶನ ನೀಡಿದ್ದ ಷಾ, ‘ಮೇಲೆ ಕಾಣಿಸುವುದೇ ಒಂದು, ಆಂತರ್ಯ ಮತ್ತೊಂದು’ ಎಂದು ವಾಸ್ತವ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

ಬಾಲಿವುಡ್‌ ರಹಸ್ಯಗಳ ಕುರಿತಾಗಿ ಶೀಘ್ರವೇ ಒಂದು ಪುಸ್ತಕ ಬರೆಯುವುದಾಗಿ ಘೋಷಿಸಿ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟು ಹಾಕಿದ್ದಾರೆ.

‘ವೇಟಿಂಗ್‌’ ಚಿತ್ರದ ಸಹ ನಟಿ ಕಲ್ಕಿ ಕೊಚ್ಲಿನ್‌ ಬಗ್ಗೆಯೂ ಷಾ ಭರವಸೆಯ ಮಾತುಗಳನ್ನಾಡಿದ್ದಾರೆ. ‘ಅವಳ ಅಭಿನಯ ನನಗೆ ಹೊಟ್ಟೆಕಿಚ್ಚು ತಂದಿದೆ’  ಎಂದು ಮೆಚ್ಚುಗೆ ಸೂಚಿಸಿದ್ದಾರೆ.

70ರ ದಶಕದಲ್ಲಿ ಓಂಪುರಿ, ಫಾರೂಕ್‌ ಶೇಕ್‌, ಸ್ಮಿತಾ ಪಾಟೀಲ್‌, ಶಬಾನಾ ಅಜ್ಮಿ ಮತ್ತು ನನಗೆ ಇಂಥ ಅವಕಾಶಗಳಿರಲಿಲ್ಲ. ಆದರೆ, ಈಗಿನ ಯುವ ನಟರು ಹಳೆಯ ಮಾದರಿಗಳನ್ನೆಲ್ಲ ಮುರಿದಿದ್ದಾರೆ. ಇಂಥ ಹಾದಿಗೆ ನಾವು ತಳಹದಿ ಹಾಕಿಕೊಟ್ಟೆವು ಎಂಬ ಹೆಮ್ಮೆ ನನಗಿದೆ ಎಂದು ಹೇಳಿಕೊಂಡಿದ್ದಾರೆ.

ಕಲ್ಕಿಯ ಐಟಂ ನಂಬರ್‌...
ಷಾ ಜತೆ ಅಭಿನಯಿಸಿ ಸೈ ಅನಿಸಿಕೊಂಡಿರುವ ಕಲ್ಕಿಗೆ ಐಟಂ ನಂಬರ್ ಮಾಡುವ ಆಸೆ ಆಗಿದೆಯಂತೆ. ಒಂದು ಐಟಂ ನಂಬರ್ ಸದ್ಯ ನನ್ನ ಮುಂದೆ ಇದೆ ಎಂದು ಹೇಳಿ ಕಲ್ಕಿ ಅಚ್ಚರಿ ಮೂಡಿಸಿದ್ದಾಳೆ.

‘ವೇಟಿಂಗ್‌’ ಚಿತ್ರಕ್ಕೆ ಬರುತ್ತಿರುವ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ನಾಸಿರುದ್ದೀನ್ ಷಾ ಮತ್ತು ಕಲ್ಕಿ  ಇಬ್ಬರೂ ಹೆದರಿದ್ದರಂತೆ. ಏಕೆಂದರೆ ಪ್ರೇಕ್ಷಕರಿಗೆ ಇಷ್ಟವಾಗುವಂಥ ಚಿತ್ರಗಳು ಹೆಚ್ಚು ಕಾಲ ಓಡುವುದಿಲ್ಲ ಎಂಬ ನಂಬಿಕೆ ಅವರದಾಗಿದ್ದು.

ವಿಮರ್ಶಕರು ಮತ್ತು ಪ್ರೇಕ್ಷಕರು ಹೀಗೆ ಎರಡೂ ವರ್ಗದ ಮೆಚ್ಚುಗೆಗೆ ಪಾತ್ರವಾಗಿರುವ ‘ವೇಟಿಂಗ್’ ಷಾ ಮತ್ತು ಕಲ್ಕಿಯಲ್ಲಿ ಹೊಸ ಭರವಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.