ADVERTISEMENT

ಅಹೋರಾತ್ರಿ ಸಂಗೀತ ಸಂಭ್ರಮ

ಉಮಾ ಅನಂತ್
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಶ್ಯಾಮಲಾ ಜಿ. ಭಾವೆ
ಶ್ಯಾಮಲಾ ಜಿ. ಭಾವೆ   

ಹಿರಿಯ ಸಂಗೀತ ವಿದ್ವಾಂಸರು ನಾಡಿಗೆ ನೀಡಿದ ಸಂಗೀತ ಕೊಡುಗೆ ಅಪಾರ. ಇಂಥ ದಿಗ್ಗಜರು ಹಾಕಿಕೊಟ್ಟ ಸಂಗೀತ ಬುನಾದಿಯೇ ಇಂದಿನ ಕಲಾವಿದರಿಗೆ ಪ್ರೇರಣೆ. ಧಾರವಾಡದ ಪಂ. ಅರ್ಜುನಸಾ ನಾಕೋಡ ಅವರು ಹಿಂದೂಸ್ತಾನಿ ಸಂಗೀತಕ್ಕೆ ನೀಡಿದ ಕೊಡುಗೆ ಬೆಲೆ ಕಟ್ಟಲಾಗದಷ್ಟು. ಅನೇಕ ಶಿಷ್ಯವೃಂದಗಳಿಗೆ ಸಂಗೀತವನ್ನು ಧಾರೆಯೆರೆದ ಈ ಅಪ್ರತಿಮ ಕಲಾವಿದ ಸಂಗೀತ ಕ್ಷೇತ್ರಕ್ಕೆ ಬಿಟ್ಟು ಹೋದ ಆಸ್ತಿಯೂ ಅಮೂಲ್ಯವಾದದ್ದೆ. ಇದನ್ನು ಜತನವಾಗಿ ಕಾಪಾಡಿಕೊಂಡು ಬಂದದ್ದು ಸದ್ಯ ತಬಲಾವಾದನದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹೆಸರಾದ ಪಂ. ವಿಶ್ವನಾಥ ನಾಕೋಡ ಅವರು.

ಹಾಗೆ ನೋಡಿದರೆ ದಿ.ಪಂ. ಅರ್ಜುನಸಾ ನಾಕೋಡ ಅವರು ಸಂಗೀತ ಮಾತ್ರವಲ್ಲ, ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾದವರು. ಪೈಲ್ವಾನರಾಗಿ, ನಾಟಕ ಕಂಪನಿಯ ಮಾಲೀಕರಾಗಿ, ಸಂಗೀತ ಶಾಲೆಯ ಪ್ರಾಂಶುಪಾಲರಾಗಿ ಬಹುಶ್ರುತ ವಿದ್ಯೆಯಲ್ಲಿ ಪಳಗಿದವರು. ತಮ್ಮ ಕುಟುಂಬ ವರ್ಗವನ್ನೂ ಇದೇ ರೀತಿ ಸಂಗೀತದಲ್ಲಿ ಪಳಗಿಸಿ ಎಲ್ಲರನ್ನೂ ಇದೇ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿದ ಇವರ ಸಾಧನೆ ಮಾತ್ರ ದಾಖಲೆಯಾಗಿ ಸಂಗೀತ ಕ್ಷೇತ್ರದಲ್ಲಿ ಉಳಿದಿದೆ.

‘ಸ್ಮೃತಿ ಅಹೋರಾತ್ರಿ ಸಂಗೀತೋತ್ಸವ’ ದ ಮೂಲಕ ಅಕ್ಷರಶಃ ಪಂ. ವಿಶ್ವನಾಥ ನಾಕೋಡ ಸ್ವರ ನಮನ ಸಲ್ಲಿಸುತ್ತಾರೆ. 1997ರಲ್ಲಿ ಬೆಂಗಳೂರಿನಲ್ಲಿ ‘ರೇಣುಕಾ ಸಂಗೀತ ಸಭಾ’ ಸ್ಥಾಪಿಸಿ ಆ ಮೂಲಕ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಸಂಗೀತದಲ್ಲಿ ತಂದೆಯ ಹಾದಿಯನ್ನೇ ಹಿಡಿದು ಅಚ್ಚುಕಟ್ಟಾಗಿ ಸಂಗೀತ ಸಮಾರಾಧನೆ ನೀಡುತ್ತಾ ಬಂದಿದ್ದಾರೆ.

‘ಕಳೆದ 14 ವರ್ಷಗಳಿಂದ ಪ್ರತಿವರ್ಷವೂ ಅಹೋರಾತ್ರಿ ಸಂಗೀತ ನಡೆಸಿ ನಾಡಿನ, ಹೊರನಾಡಿನ ಹಿರಿಯ ಕಿರಿಯ ಕಲಾವಿದರಿಗೆ ಅವಕಾಶ ಮಾಡಿಕೊಡುತ್ತೇವೆ. ಈ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ ಗಾಯನ, ವಾದನದ ಜತೆಗೆ ಕರ್ನಾಟಕ ಸಂಗೀತವನ್ನೂ ಸವಿಯುವ ಅವಕಾಶ ಸಹೃದಯರಿಗೆ ಕಲ್ಪಿಸುತ್ತೇವೆ. ಒಂದೇ ವೇದಿಕೆಯಲ್ಲಿ ಹೆಚ್ಚಿನ ಎಲ್ಲ ರಾಗಗಳನ್ನೂ ಕೇಳಬಹುದು. ತಡರಾತ್ರಿಯ ರಾಗಗಳನ್ನೂ ಆಸ್ವಾದಿಸಬಹುದು. ಇದರಿಂದ ಶಾಸ್ತ್ರೀಯ ಸಂಗೀತದ ಎಲ್ಲ ಪ್ರಕಾರದ ರಾಗಗಳಿಗೂ ಅವಕಾಶ ಸಿಕ್ಕಿದಂತಾಗುತ್ತದೆ’ ಎಂದು ವಿವರ ನೀಡುತ್ತಾರೆ ರೇಣುಕಾ ಸಂಗೀತ ಸಭಾದ ಅಧ್ಯಕ್ಷ ಪಂ. ವಿಶ್ವನಾಥ ನಾಕೋಡ್.

ಈ ಬಾರಿಯ ಸಂಗೀತೋತ್ಸವದಲ್ಲಿ..
ಪ್ರತಿ ವರ್ಷದಂತೆ ಈ ವರ್ಷವೂ ರೇಣುಕಾ ಸಂಗೀತ ಸಭಾ ‘ಸ್ಮೃತಿ’ ಅಹೋರಾತ್ರಿ ಸಂಗೀತೋತ್ಸವವನ್ನು ಶನಿವಾರ (ಫೆಬ್ರುವರಿ 13) ರಾತ್ರಿ 9 ಗಂಟೆಗೆ ಏರ್ಪಡಿಸಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೊರ ರಾಜ್ಯದ ಅಂತರರಾಷ್ಟ್ರೀಯ ಕಲಾವಿದರ ಜೊತೆಗೆ ನಮ್ಮ ರಾಜ್ಯದ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗೂ ಅವಕಾಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪಂ.ಅರ್ಜುನಸಾ ನಾಕೋಡ ಗೌರವ ಪುರಸ್ಕಾರ್ ಸಮ್ಮಾನವನ್ನು ಉಭಯಗಾನ ವಿದುಷಿ ಶ್ಯಾಮಲಾ ಜಿ. ಭಾವೆ ಅವರಿಗೆ ನೀಡಲಾಗುವುದು.

ಸಂಗೀತೋತ್ಸವದಲ್ಲಿ ಪುಣೆಯ ಉಸ್ತಾದ್ ಶಾಹಿದ್ ಪರ್ವೇಜ್ ಸಿತಾರ್ ನುಡಿಸುವರು. ಕೋಲ್ಕತ್ತದ ಪಂ. ಶುಭಂಕರ್ ಬ್ಯಾನರ್ಜಿ ಅವರ ತಬಲಾ ಮತ್ತು ಚೆನ್ನೈನ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಅವರ ಮೃದಂಗ ಜುಗಲ್‌ಬಂದಿ ಕಾರ್ಯಕ್ರಮವಿದೆ. ಕೋಲ್ಕತ್ತದ ವಿದುಷಿ ಮಂದಿರಾ ಲಹಿರಿ ಅವರ ಹಿಂದೂಸ್ತಾನಿ ಗಾನಸುಧೆ, ಮುಂಬೈನ ಪಂ. ರಾಕೇಶ್ ಚೌರಾಸಿಯಾ ಅವರ ಬಾನ್ಸುರಿ ವಾದನ, ಮುಂಬೈನ ಪ್ರೀತಂ ಭಟ್ಟಾಚಾರ್ಯ ಅವರಿಂದಲೂ ಹಿಂದೂಸ್ತಾನಿ ಗಾಯನ, ಧಾರವಾಡದ ವಿದುಷಿ ರೇಣುಕಾ ನಾಕೋಡ ಅವರ ಗಾಯನ... ಇವಿಷ್ಟು ರಾತ್ರಿಯಿಡೀ ಮುದ ನೀಡಲಿವೆ.

ಇವರಿಗೆ ಸಾಥಿಯಾಗಿ ಪಂ.ರಘುನಾಥ್ ನಾಕೋಡ, ವಿಶ್ವನಾಥ್ ನಾಕೋಡ, ರಾಜೇಂದ್ರ ನಾಕೋಡ, ಡಾ.ರವಿಕಿರಣ್ ನಾಕೋಡ ತಬಲಾದಲ್ಲಿ ಸಹಕರಿಸುವರು. ಡಾ. ರವೀಂದ್ರ ಕಾಟೋಟಿ ಮತ್ತು ಸತೀಶ್ ಕೊಳ್ಳಿ ಅವರು ಹಾರ್ಮೋನಿಯಂ ನುಡಿಸುವರು. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.

ಮಾಹಿತಿಗೆ: 9845054543 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.