ADVERTISEMENT

ಆಷಾಢದಲ್ಲೇ ‘ಜಿಎಸ್‌ಟಿ’ ಬಂದ್ಬಿಡ್ತು!

ರಾಮಕೃಷ್ಣ ಸಿದ್ರಪಾಲ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಆಷಾಢದಲ್ಲೇ ‘ಜಿಎಸ್‌ಟಿ’ ಬಂದ್ಬಿಡ್ತು!
ಆಷಾಢದಲ್ಲೇ ‘ಜಿಎಸ್‌ಟಿ’ ಬಂದ್ಬಿಡ್ತು!   

ಜಿಎಸ್‌ಟಿ ಬಂತೋ
ಜಿಎಸ್‌ಟಿ ಬಂದ್ಬಿಡ್ತೋ....
ಅದರರ್ಥ ಏನಂತ...
ಇಲ್ಯಾವನಿಗ್ ಗೊತ್ತೋ?!

ಕಾಸಿದ್ದೋನೆ ಕಾಸ್‌ ಮಾಡೋದು ಹೊಡಿ ಒಂಬತ್ ಕಾಸೇ ಇಲ್ದಿರವ್ನು ಏನ್‌ ಮಾಡದೋ?

'ಹೊಡಿ ಒಂಬತ್‌ ಹೊಡಿ ಒಂಬತ್‌'

ADVERTISEMENT

ಹೀಗಂತ ಚಿತ್ರ ನಿರ್ದೇಶಕ, ಕವಿ ಯೋಗರಾಜ್‌ ಭಟ್ರು  ತಮ್ಮದೇ ಆದ ಶೈಲಿಯಲ್ಲಿ  ಹಾಡು ಗೀಚಿ ಗಣೇಶ್, ವಿಜಿ ಹಾಗೂ ಹರಿಕೃಷ್ಣ ಅವರ ಕೈಲಿ ಹಾಡಿಸಿ ಯೂಟ್ಯೂಬ್ ಗೆ ಹಾಕಿ ಪ್ರಚಾರ ಮಾಡಿಬಿಟ್ರು..

ಹೌದಲ್ರೀ, ಈಗ ಎಲ್ಲಿ ನೋಡಿದರೂ ಜಿಎಸ್‌ಟಿಯದೇ ಮಾತು, ಯಾರಿಗೂ ಸರಿಯಾಗಿ  ಅರ್ಥ ಆಗವಲ್ದು. ‘ಬರಗಾಲದಲ್ಲಿ ಅಧಿಕ ಮಾಸ’ ಎಂಬಂತೆ ‘ಆಷಾಢದಲ್ಲಿ ಜಿಎಸ್‌ಟಿ ಬೇರೆ...’

ಅಂತ ಹಳಿದುಕೊಳ್ಳುವಂತಾಗೈತಲ್ಲರೀ...

ಆಷಾಢ ಮಾಸ ಆರಂಭವೆಂದರೆ ಮಳೆಗಾಲ ಆರಂಭ ಎಂದೇ ಅರ್ಥ. ಒಮ್ಮೆ ಜಡಿಮಳೆ, ಇನ್ನೊಮ್ಮೆ ಶೀತಗಾಳಿ, ಮತ್ತೊಮ್ಮೆ ಬಿಸಿಲು ಮರುಕ್ಷಣ ಕೊಡೆ ಹಾರಿ ಹೋಗುವಂಥ ಮಳೆ, ಜುಮುರು ಮಳೆ, ರಭಸದ ಮಳೆ, ನೆರೆ ತರುವಂಥ ಮಳೆ, ಪುಟ್ಟ ಹೆಜ್ಜೆ ಪುಟ್ಟ ಕೊಡೆಯಡಿ ಪುಸ್ತಕ ನೆನೆಯದಂತೆ ಶಾಲೆಗೆ ಹೊರಟ ದಿನಗಳ ನೆನಪಿಸುವ ಮಳೆ, ರಾತ್ರಿಯಿಡೀ ಸುರಿವ ಮಳೆ, ಮೂಗು ಕಟ್ಟಿ ಗಂಟಲು ಕೆರೆತ ತರುವ ಮಳೆ,  ಚಹಾ, ಕಾಫಿ, ಕಷಾಯಗಳೆಲ್ಲ ಮತ್ತೆ ಮತ್ತೆ ಗುಟುಕರಿಸುತ್ತ ಬೆಚ್ಚಗೆ ಹೊದ್ದು ಕುಳ್ಳಿರಿಸುವ ಮಳೆ, ಧೋ ಎಂದು ಸುರಿವ ಮಳೆಯ ರಾತ್ರಿಗಳು, ಮಬ್ಬಾದ ಮುಂಜಾವಿನ ಮಳೆ...

ಅರೆರೇ ನೆನಪಿನ ಕಣಜದೊಳಗೆ ಹೊಕ್ಕರೆ ಒಂದಿಷ್ಟಾದರೂ ಜಡಿಮಳೆಯಲ್ಲಿ ಮನಸ್ಸನ್ನು ತೋಯಿಸದೇ ಬಿಡಲಾರದು. ಹೀಗಾಗಿ ಆಷಾಢ ವೆಂದರೆ ನೆನಪಿನ ಕೋಶದಿಂದ ಒಂದೊಂದೇ ವಿಷಯವನ್ನು ಹೆಕ್ಕಿ ತೆಗೆದು ಮಾತನಾಡಲಿಕ್ಕೆ ಪೀಠಿಕೆ ಹಾಕಿದೆವು ಅಂತಲೇ ಅರ್ಥ...

ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆ, ಮುಂಜಿ, ಗೃಹಪ್ರವೇಶ, ವಾಹನ ಹಾಗೂ ಜಮೀನು ಖರೀದಿ, ಹೊಸ ವ್ಯಾಪಾರ ವಹಿವಾಟು ಮುಂತಾದ ಶುಭ ಕಾರ್ಯಗಳನ್ನು  ಮಾಡಲು ಸಾಮಾನ್ಯವಾಗಿ ಜನರು ಹಿಂದೇಟು ಹಾಕುತ್ತಾರೆ.

ಆಷಾಢವೆಂದರೆ ಅಮಂಗಳ ಎನ್ನುವುದು ಈಗಲೂ ನಮ್ಮ ನಡುವಿನ  ಆಸ್ತಿಕರಿಗೆ ನಂಬಿಕೆ, ನಾಸ್ತಿಕರಿಗೆ ಮೂಢನಂಬಿಕೆ.ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೊರಟರೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುವುದು ಎನ್ನಬಹುದೇನೋ. ನಿರಂತರ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ. ಹೊರಗಿನ ಕೆಲಸಗಳು ಕಷ್ಟಸಾಧ್ಯ. ಕೃಷಿಕರಿಗೆ  ಕೃಷಿ ಕೆಲಸ ಮಾಡುವ ಸಮಯ. ಹೊಲ, ಗದ್ದೆಗಳಲ್ಲಿ  ಕೆಲಸ ಕಾರ್ಯಗಳು ಹೆಚ್ಚು, ಬಿಡುವೆಲ್ಲಿ? ಹೀಗಾಗಿ ಆಷಾಢವೆಂದರೆ ಶುಭ ಕಾರ್ಯಗಳು ಕಡಿಮೆ.

ಈಗಲೂ ಇದೇ ಪದ್ಧತಿ ಮುಂದುವರಿದಿದೆ. ಈ ವರ್ಷ ಆಷಾಢಕ್ಕೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಬೇರೆ ಸೇರಿಕೊಂಡು ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಕೊಂಚ ಹೆಚ್ಚೇ ತಲೆ ಬಿಸಿ ಮಾಡಿದ್ದು ಮಾತ್ರ ಸುಳ್ಳಲ್ಲ...

ಯಾವುದನ್ನು ತಗೊಂಡ್ರೆ ತೆರಿಗೆ ಬೀಳುತ್ತೋ, ಜಿಎಸ್‌ಟಿ ಮುಂಚಿನ ಸ್ಟಾಕ್‌ ಕ್ಲಿಯರ್‌ ಮಾಡುವುದೋ ಹೊಸ ವಸ್ತುಗಳಿಗೆ ಎಷ್ಟು ಟ್ಯಾಕ್ಸ್‌ ಹಾಕಿ ಮಾರುವುದೋ ಅಂತ   ಅಂಗಡಿಯವ್ರೂ ತಲೆಬಿಸಿಯಲ್ಲಿದ್ದಾರೀ.. ಹೆಂಗಸರಂತೂ ಆಷಾಢದ ಭಾರಿ ಡಿಸ್ಕೌಂಟ್‌ನಲ್ಲಿ ಸೀರೆ ಖರೀದಿಗೆ ಹೋಗವ್ರು ಕೂಡ ಜಿಎಸ್‌ಟಿ ಹೆಸರು ಕೇಳಿ ಪರ್ಸ್‌ ಮುಟ್ಟಿ ಮುಟ್ಟಿ ನೋಡಿಕೊಳ್ಳಲು ಶುರು ಮಾಡಿದ್ದಾರ್ರೀ...

ಆಷಾಢದ ಮಹತ್ವ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ನಾಲ್ಕನೇ ಮಾಸವೇ 'ಆಷಾಢ'. ದಕ್ಷಿಣಾಯಣದ ಪರ್ವ ಕಾಲದಲ್ಲಿ ಜ್ಯೇಷ್ಠ ಮಾಸದ ಅಮಾವಾಸ್ಯೆಯ ಮರುದಿನ ಅಂದರೆ ಪಾಡ್ಯ ತಿಥಿಯಿಂದ ಆಷಾಢ ಮಾಸ ಆರಂಭವಾಗುತ್ತದೆ.

ಈ ಮಾಸದಲ್ಲಿ ಯಾರೂ ಶುಭ ಕೆಲಸಕ್ಕೆ ಮಾಡಲು ಮುಂದಾಗುವುದಿಲ್ಲ. ಆಷಾಢದ ಬಗ್ಗೆ ಹಲವು ಬಗೆಯ ಮಾತುಗಳು ಚಾಲ್ತಿಯಲ್ಲಿವೆ. ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆ ಭೂಮಿಗೆ ಉತ್ತರಾಭಿಮುಖ ವಾಗಿ ಹರಿದುಬಂದಿದ್ದು, ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವವ್ರತ ಮಾಡಿದ್ದು, ಅಮರನಾಥದ ಹಿಮಲಿಂಗ ದರ್ಶನ ಆರಂಭವಾಗುವುದು, ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು, ಶುಕ್ರವಾರಗಳಲ್ಲಿ ಲಕ್ಷ್ಮೀಪೂಜೆಯನ್ನು ವಿಶೇಷವಾಗಿ ಆಚರಿಸುವುದು ಆಷಾಢಮಾಸದಲ್ಲಿ. ಇದಲ್ಲದೆ ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು, ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆ ಸಂಜೆ ಭೀಮೇಶ್ವರ ವ್ರತ ಆಚರಿಸುವುದು. ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆ (ಇದೇ ಭಾನುವಾರ 9) ಆಚರಿಸುವುದೆಲ್ಲ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಈ ಮಾಸದಲ್ಲಿ ಗಂಡ ಹೆಂಡತಿಯರು ಜೊತೆಗಿರಬಾರದು, ಅತ್ತೆ ಸೊಸೆ ಜೊತೆಗಿದ್ದರೆ ಕುಟುಂಬಕ್ಕೆ ಕೆಡುಕು, ಆಷಾಢದಲ್ಲಿ ಪತಿಪತ್ನಿ ಜೊತೆಗಿರಬಾರದು ಎಂಬೆಲ್ಲ ಪದ್ಧತಿಗಳು ಹಲವೆಡೆ ಇನ್ನೂ ಕೂಡ ಚಾಲ್ತಿಯಲ್ಲಿವೆ. ಪ್ರಾಚೀನ ಕಾಲದಿಂದಲೂ ಆಷಾಢ ಅಮಂಗಳ ಎನ್ನುವ ನಂಬಿಕೆಯಿದೆ.

ಈ ಮಾಸದಲ್ಲಿ ದೇವತೆಗಳು ಯೋಗ ನಿದ್ರೆಯಲ್ಲಿರುತ್ತಾರೆ. ಹೀಗಾಗಿ ಈ ಮಾಸದಲ್ಲಿ ಮಾಡುವ  ಮಂಗಳಕಾರ್ಯ ಉತ್ತಮ ಫಲ ನೀಡಲಾರದು ಎನ್ನುವ ನಂಬಿಕೆಗಳು ಈ ಜಮಾನಾದಲ್ಲಿಯೂ ಇವೆ. ಆಷಾಢ ಅಮಾವಾಸ್ಯೆ (ಆಟಿ ಅಮಾವಾಸ್ಯೆ) ದಿನ ತೊಗಟೆ ಕಷಾಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು (ಕರಾವಳಿ ಭಾಗದಲ್ಲಿ ಇದು ವಿಶೇಷ) ಎನ್ನುವುದು ಆರೋಗ್ಯ ದೃಷ್ಟಿಯಿಂದ ಈಗಲೂ ಚಾಲ್ತಿಯಲ್ಲಿದೆ.

ಆಷಾಢ ಏಕಾದಶಿ

ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ, ದೇವಶಯನಿ ಏಕಾದಶಿ, ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಹಿಂದೂ ತಿಂಗಳು ಆಷಾಢ ಶುಕ್ಲ ಪಕ್ಷದ ಹನ್ನೊಂದನೇ ದಿನ(ಏಕಾದಶಿ). ಇದನ್ನು ಆಷಾಢ ಏಕಾದಶಿ ಅಥವಾ ಆಷಾಢಿ ಎಂದೂ ಕರೆಯಲಾಗುತ್ತದೆ. ಈ ಪವಿತ್ರ ದಿನವು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದು.  

ಇದು ಯಾವುದಾದರೂ ಆಹಾರ ಪದಾರ್ಥವನ್ನು ಬಿಡುವ ಬಗ್ಗೆ ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇದೆ. ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಈ ದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ‘ದೇವಶಯನಿ ಏಕಾದಶಿ’ ಅಥವಾ ‘ಹರಿ-ಶಯನಿ’ ಎಂದು ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ‘ಚಾತುರ್ಮಾಸ’ ಎನ್ನುತ್ತಾರೆ.

‘ಚಾತುರ್ಮಾಸ’ದ ವ್ರತಾಚರಣೆ ಆಷಾಢ ಮಾಸ ಚಾತುರ್ಮಾಸದ ಮೊದಲನೇ ತಿಂಗಳಿನಲ್ಲಿ ಆಷಾಢ ಮಾಸ.

ಶುಕ್ಲಪಕ್ಷದ ದ್ವಾದಶಿಯಿಂದ ಶ್ರಾವಣ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಶಾಕವ್ರತ. ಶಾಕವೆಂದರೆ ಎಲ್ಲಾ ವಿಧವಾದ ತರಕಾರಿ, ಕಾಯಿಪಲ್ಲೆ, ಸೊಪ್ಪು (ಆದರೆ ಅಗಸೆ ಸೊಪ್ಪು, ಹೊನ್ನಂಗಣಿ ಸೊಪ್ಪು, ಒಂದೆಲಗ ಸೊಪ್ಪು (ಬ್ರಾಹ್ಮೀ) ತುಳಸಿ ಸ್ವೀಕರಿಸಬಹುದು, ಹಣ್ಣುಗಳಲ್ಲಿ  ಮಾವಿನ ಹಣ್ಣು ನಿಷಿದ್ಧವಲ್ಲ. ಬೇಳೆ ಕಾಳುಗಳಲ್ಲಿ  ಉದ್ದು, ಹೆಸರುಕಾಳು, ಹೆಸರು ಬೇಳೆ ನಿಷಿದ್ಧವಲ್ಲ, ಚಕ್ಕೆ, ಬೇರು, ಗೆಡ್ಡೆಗೆಣಸು ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಆಷಾಢದಲ್ಲಿ ಬಳಕೆ ಮಾಡಬಾರದು.

ಶ್ರಾವಣ ಮಾಸ

ಶುಕ್ಲ ಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ‘ದಧಿ ವ್ರತ’. ದಧಿವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ಸ್ವೀಕರಿಸುವಂತಿಲ್ಲ.

ಭಾದ್ರಪದ ಮಾಸ

ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ ವ್ರತ. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಬಳಸುವಂತಿಲ್ಲ.

ಅಶ್ವಯುಜ ಮಾಸ

ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತೀಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ‘ದ್ವಿದಳ ವ್ರತ’. ದ್ವಿದಳ ವ್ರತದಲ್ಲಿ, ದ್ವಿದಳ ಧಾನ್ಯಗಳು, ಬಹುಬೀಜಗಳು, ಬಹುಬೀಜವುಳ್ಳ ತರಕಾರಿ, ಹಣ್ಣುಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಬಳಸುವಂತಿಲ್ಲ.

ಚಾತುರ್ಮಾಸ ವ್ರತವು ಕೇವಲ ಸನ್ಯಾಸಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ. ‘ಶಾಕವ್ರತ’ದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು ಅಗಸೆ, ತುಲಸಿ, ನೆಲ್ಲಿ, ಮಾವು. ಉಡುಪಿಯ ಶ್ರೀಕೃಷ್ಣಮಠ ಹಾಗೂ ಇತರ ಅಷ್ಠಮಠಗಳಲ್ಲಿ , ವಿವಿಧ ಸಂಪ್ರದಾಯಗಳ ಧರ್ಮ, ಮಠ ಮಂದಿರಗಳಲ್ಲಿ  ಇವೆಲ್ಲವನ್ನೂ ಬಹಳ ಕಟ್ಟುನಿಟ್ಟಿನಿಂದ ಆಚರಿಸುತ್ತಾರೆ. ಆಯಾ ಮಾಸದಲ್ಲಿ ಅಂಥಹುದೇ ಆಹಾರ ಪದಾರ್ಥ ಬಳಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.