ADVERTISEMENT

‘ಆ ಕಾಲವೇ ಚೆನ್ನಾಗಿತ್ತಪ್ಪಾ...’

ವಿದ್ಯಾಶ್ರೀ ಎಸ್.
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
1982ರಲ್ಲಿ ಲಾಲ್‌ಬಾಗ್‌ ಸಮೀಪ ಇದ್ದ ಟಾಂಗಾ ಸ್ಟಾಂಡ್‌ 	ಚಿತ್ರ: ಪ್ರಜಾವಾಣಿ ಆರ್ಕೈವ್ಸ್‌
1982ರಲ್ಲಿ ಲಾಲ್‌ಬಾಗ್‌ ಸಮೀಪ ಇದ್ದ ಟಾಂಗಾ ಸ್ಟಾಂಡ್‌ ಚಿತ್ರ: ಪ್ರಜಾವಾಣಿ ಆರ್ಕೈವ್ಸ್‌   

ನಾನು 1945ರಲ್ಲಿ ನಗರಕ್ಕೆ ಮೊದಲ ಬಾರಿಗೆ ಬಂದಿದ್ದು. ಆಗ ನನಗೆ  ಹದಿನೈದು ವರ್ಷ. ಆ ಸಮಯದಲ್ಲಿ ಬೆಂಗಳೂರು ತುಂಬಾ ಸುಂದರವಾಗಿತ್ತು. ಹಿಂದಿನ ನೆನಪುಗಳನ್ನು ಮೆಲುಕು ಹಾಕುವಾಗ ನಗರ ಎಷ್ಟೊಂದು ಬದಲಾಗಿದೆ ಎಂದು ಆಶ್ಚರ್ಯವಾಗುತ್ತದೆ.

ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದ ನಾನು 1953ರಲ್ಲಿ ಕೆಲಸದ ಸಲುವಾಗಿ ಮಧ್ಯಪ್ರದೇಶಕ್ಕೆ ಹೋದೆ. ಆಗ ಹೆಚ್ಚು ಎಂದರೆ ಎರಡು ಮೂರು ಅಂತಸ್ತಿನ ಮನೆಗಳು ತಲೆ ಎತ್ತುತ್ತಿದ್ದವು.

ಅಪರೂಪಕ್ಕೊಮ್ಮೆ ರಜೆಯಲ್ಲಿ ಇಲ್ಲಿಗೆ ಬರುತ್ತಿದ್ದೆ. ಬೆಂಗಳೂರು ಬದಲಾಗುತ್ತಿರುವುದನ್ನು ಕಂಡಾಗ ಬೇಸರವಾಗುತ್ತಿತ್ತು. ಸುಮಾರು 1968ರ ಹೊತ್ತಿಗೇ ಅಬ್ಬಾ ಎನ್ನುವಷ್ಟು ಬೆಂಗಳೂರು ಅಭಿವೃದ್ಧಿ ಹೊಂದಲು ಪ್ರಾರಂಭವಾಗಿದ್ದು.

ADVERTISEMENT

(ಅನಂತರಾಮು)

ನನ್ನಪ್ಪ ಲಕ್ಷ್ಮಣರಾವ್ ಹೊಯ್ಸಳ ಹೈಸ್ಕೂಲಿನಲ್ಲಿ ಉಪನ್ಯಾಸಕರಾಗಿದ್ದರು. ಮಲ್ಲೇಶ್ವರದ ಮೂರನೇ ಕ್ರಾಸ್‌ನ ಮನೆಯೊಂದರಲ್ಲಿ ನಾವು ಬಾಡಿಗೆಗೆ ಇದ್ದೆವು ಆಗೆಲ್ಲ ಇಷ್ಟೊಂದು ಜನಜಂಗುಳಿ ಇರಲಿಲ್ಲ. ನನಗೆ ನೆನಪಿರುವಂತೆ ಆಗ ನಗರದ ಜನಸಂಖ್ಯೆ 6 ಲಕ್ಷ, ಈಗ ಕೋಟಿ ಮೀರಿದೆ ಅಲ್ಲವೇ? ಇಷ್ಟೊಂದು ವಾಹನಗಳ ಓಡಾಟವು ಇರುತ್ತಿರಲಿಲ್ಲ. ಬಸ್‌ ಸೌಕರ್ಯವು ಸರಿಯಾಗಿ ಇರಲಿಲ್ಲ. ನಮ್ಮ ಸಂಚಾರಕ್ಕೆ  ನೆರವಾಗುತ್ತಿದುದ್ದು ಜಟಕಾ ಗಾಡಿಗಳು.  ನಮ್ಮ ಮನೆಯ ಬಳಿಯೇ ಜಟಕಾ ಗಾಡಿಗಳ ನಿಲ್ದಾಣವಿತ್ತು. ಈಗ ಅಲ್ಲಿ ವಾಣಿಜ್ಯ ಮಳಿಗೆಯೊಂದು  ನಿರ್ಮಾಣವಾಗಿದೆ.

ಈಗ ನಾನು ಮಾಗಡಿ ರಸ್ತೆಯ  ಬಳಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಇದ್ದೇನೆ.  ಹಿಂದೆ ನಾವು ಬಾಡಿಗೆಗೆ ಇದ್ದ ಮನೆ ಕೂಡ ಇಲ್ಲ. ಅಲ್ಲಿ ರಸ್ತೆಯಾಗಿದೆ. ನಾನು ಅಲ್ಲಿ ಇದ್ದಾಗ ನಮ್ಮ ಮನೆಗೆ ವಿದ್ಯುತ್‌ ಸೌಕರ್ಯವೂ ಇರಲಿಲ್ಲ. ಒಂದು ರೀತಿಯಲ್ಲಿ ಮಲ್ಲೇಶ್ವರ ಹಳ್ಳಿಯಂತೆ ಇತ್ತು.
ಎಲ್ಲಿ ನೋಡಿದರೂ, ಸಾಕಷ್ಟು ಮರಗಳು ಕಾಣಿಸುತ್ತಿದ್ದವು. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಎನ್ನುವಂತೆ ಸಂಪಿಗೆ ಮರಗಳು ಕಾಣಿಸುತ್ತಿತ್ತು. ಆದರೆ ಈಗ ಅವುಗಳೂ ಇಲ್ಲ.  ಹಿಂದೆ ರಸ್ತೆಗಳು ಇಷ್ಟೊಂದು ವ್ಯವಸ್ಥಿತವಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಜಲ್ಲಿಕಲ್ಲಿನ ಹಾದಿಗಳೇ ಇತ್ತು. ಮನೆಯ ಬಳಿ ತೆಂಗು, ಅಡಿಕೆ ತೋಟವಿತ್ತು, ಮಾವಿನ ತೋಪಿತ್ತು.  ಮಲ್ಲೇಶ್ವರ ರಸ್ತೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು ಎಂದರೆ ನೀವು ನಂಬುತ್ತೀರಾ? ಈಗ ಮಕ್ಕಳಿಗೆ ಅದನ್ನೆಲ್ಲಾ ಹೇಳುವಾಗ ಅವರು ಆಶ್ಚರ್ಯಪಡುತ್ತಾರೆ.

ನಮ್ಮ ಮನೆಯಿಂದ ಶಾಲೆಗೆ ಹೋಗುವಾಗ ನೀರಿನ ದೊಡ್ಡ ಪೈಪ್‌ಲೈನ್‌ ಇತ್ತು. ಅಲ್ಲಿ ತುಂಬಾ ಹಾವುಗಳಿದ್ದವು. ಹುಷಾರಾಗಿ ಹೋಗುವಂತೆ ಮನೆಯವರು ಎಚ್ಚರಿಕೆಯನ್ನು ನೀಡುತ್ತಿದ್ದರು. ಬೇಸಿಗೆಯಲ್ಲಿ ದೂಳು ಹೆಚ್ಚಿರುತ್ತಿತ್ತು. ಜೊತೆಗೆ ಹಾವಿನ ಕಾಟ ಬೇರೆ. ಮೂರು ತಿಂಗಳು ತುಂಬಾ ಕಷ್ಟವಾಗುತ್ತಿತ್ತು. ಈಗ ಅಲ್ಲಿ ಮೇಲುಸೇತುವೆಯಾಗಿದೆ.

18ನೇ ಕ್ರಾಸ್‌ನಲ್ಲಿ ಸರ್ವೇ ತೋಪು ಇತ್ತು. ಅದರ ಮಧ್ಯದಲ್ಲಿ ‘ಬ್ರೂಕ್ಸ್‌’ ಎಂದು ಕರೆಯುತ್ತಿದ್ದ ಕೆರೆ ಇತ್ತು. ನಾವೆಲ್ಲ ಸ್ನೇಹಿತರು ಹೋಗಿ ಅಲ್ಲಿ ಆಟವಾಡುತ್ತಿದ್ದೆವು. ಈಗ ಅಲ್ಲಿ ಆಸ್ಪತ್ರೆಯಾಗಿದೆ. ಈಗೆಲ್ಲ ನೀರಿನಲ್ಲಿ ಆಟವಾಡಬೇಕೆಂದರೆ ಮಕ್ಕಳು ‘ವಂಡರ್‌ ಲಾ’, ರೆಸಾರ್ಟ್‌ಗಳಿಗೆ ಹೋಗಬೇಕಾಗಿದೆ.

ಹಿಂದೆ ನೀರು ಇಷ್ಟೊಂದು ಮಲಿನವಾಗಿರಲಿಲ್ಲ. ಕುಡಿಯುವ ನೀರಿನ ತೊಂದರೆಯೂ ಇರಲಿಲ್ಲ. ಈಗ ಯಾವ ಕೆರೆ ನೋಡಿದರೂ, ಕೊಳಚೆ ನೀರಿನಂತೆ ಆಗಿರುತ್ತದೆ. ನಗರದ ಹಲವು ಕೆರೆಗಳನ್ನು ಮುಚ್ಚಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇರುವ ಕೆರೆಗಳನ್ನಾದರೂ ಉಳಿಸಿಕೊಳ್ಳುವ ಅನಿವಾರ್ಯವಿದೆ.

ವಿಶಾಲವಾಗಿದ್ದ ಪ್ರದೇಶಗಳಲೆಲ್ಲ ಕಟ್ಟಡಗಳು ತುಂಬಿಕೊಂಡಿವೆ.  ಅಭಿವೃದ್ಧಿಯ ಹೆಸರಿನಲ್ಲಿ ಹಲವು ಮರಗಳನ್ನು ಕಡಿಯಲಾಗಿದೆ.   ಆಗ ನಾವು ಎಷ್ಟೇ ದೂರದ ಸ್ಥಳಕ್ಕಾದರೂ ನಡೆದುಕೊಂಡೆ ಹೋಗುತ್ತಿದ್ದೆವು. ಒಂದು ರೀತಿಯಲ್ಲಿ ಅದೇ ಒಳ್ಳೆಯದು. ಹೊಗೆ, ದೂಳು, ಪರಿಸರ ಮಾಲಿನ್ಯದ ಸಮಸ್ಯೆಗಳು ಈಗಿನ ಕಾಲಕ್ಕೆ ಹೋಲಿಸಿದರೆ ಆಗ ತೀರಾ ಕಡಿಮೆ. ಹಾಗಾಗಿಯೇನೊ ನಾವೆಲ್ಲ ಆರೋಗ್ಯವಾಗಿ ಇದ್ದೆವು. ಹಿಂದಿದ್ದ ನಗರದ  ಚೆಲುವು  ಈಗ ಇಲ್ಲ. ಎಲ್ಲಿ ನೋಡಿದರೂ ಕಟ್ಟಡಗಳದ್ದೇ ಅಬ್ಬರ. ಕಾಂಕ್ರೀಟ್‌ ಕಾಡಾಗಿ ನಗರ ಮಾರ್ಪಟ್ಟಿದೆ.

ಈಗಂತೂ ಒಂದು ಕಡೆಯಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಹಲವು ಅನುಕೂಲಗಳಿವೆ. ಆದರೂ ನನಗೆ ಆ ಕಾಲವೇ ಚೆಂದ. ಆ ಬೆಂಗಳೂರೇ ಇಷ್ಟ.

ಆಗ ನಗರ ತುಂಬಾ ಸ್ವಚ್ಛವಾಗಿತ್ತು. ಇಲ್ಲಿಯ ಗಾಳಿ, ನೀರು ಸೇರಿದಂತೆ ಒಟ್ಟು ಪರಿಸರವೇ ಶುಭ್ರವಾಗಿತ್ತು. ಆದರೆ ಈಗ ಕೆಮ್ಮು, ಅಲರ್ಜಿ ಹೀಗೆ ದಿನಕ್ಕೊಂದು ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ.  ಸೌಕರ್ಯಗಳು ಹೆಚ್ಚಾದಂತೆ ನಗರ ಮಲೀನವಾಗುವುದರ ಜೊತೆಗೆ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿದೆ.

ಬೆಂಗಳೂರಿನೊಂದಿಗೆ ಭಾವನಾತ್ಮಕ ಸಂಬಂಧದ ಜೊತೆಗೆ ಇಲ್ಲಿಯ ಬಗ್ಗೆ ಪ್ರೀತಿಯಿದೆ. ಬದುಕು ಕಟ್ಟಿಕೊಟ್ಟ ಊರು ಇದು. ಹಾಗಾಗಿ ಬೇರೆಲ್ಲೂ ಹೋಗುವ ಮನಸ್ಸಾಗದೆ ನಿವೃತ್ತಿಯ ನಂತರ  ಇಲ್ಲಿಯೇ ನೆಲೆಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.