ADVERTISEMENT

ಇನ್ಫೊಸಿಸ್ ಗಣೇಶ ಬಂದ

ಅನಿತಾ ಈ.
Published 28 ಆಗಸ್ಟ್ 2014, 19:30 IST
Last Updated 28 ಆಗಸ್ಟ್ 2014, 19:30 IST

ಟಿಪ್‌ ಟಾಪಾಗಿ ಡ್ರೆಸ್‌ ಮಾಡಿಕೊಂಡು ಸದಾ ಕಂಪ್ಯೂಟರ್ ಮುಂದೆ ಕುಳಿತು ಬಿಡುವಿಲ್ಲದಂತೆ ಕೀಬೋರ್ಡ್‌ ಮೇಲೆ ಕೈಯಾಡಿಸುತ್ತಿದ್ದ ಐಟಿ ಮಂದಿ ಬುಧವಾರ ಕಂಪ್ಯೂಟರ್‌ ಬಿಟ್ಟು ಕೈತುಂಬ ಮಣ್ಣು ಮೆತ್ತಿಕೊಂಡು, ಜೇಡಿಮಣ್ಣನ್ನು ಹದ ಮಾಡುವಲ್ಲಿ ಫುಲ್‌ ಬ್ಯುಸಿಯಾಗಿದ್ದರು.

ಇದೇನಪ್ಪಾ ಇನ್ಫೊಸಿಸ್‌ ಸಂಸ್ಥೆಯ ಸಿಬ್ಬಂದಿ ಕಚೇರಿ ಆವರಣದಲ್ಲೇ ಕೈಗೆಲ್ಲ ಮಣ್ಣು ಮೆತ್ತಿಕೊಂಡು, ಖುಷಿ ಖುಷಿಯಾಗಿ ಓಡಾಡುತ್ತಾ ಏನು ಮಾಡುತ್ತಿದ್ದಾರೆ ಎಂದು ಒಂದು ಕ್ಷಣ ಅರ್ಥವೇ ಆಗಲಿಲ್ಲ. ಕುತೂಹಲ ತಡೆಯಲಾಗದೆ ‘ಏನ್‌ ಸರ್‌ ಇವತ್ತು ಕೋಡಿಂಗ್‌– ಡಿಕೋಡಿಂಗ್‌ ಮಾಡೋದನ್ನ ಬಿಟ್ಟು ಮಣ್ಣಿನಲ್ಲಿ ಆಟವಾಡ್ತಿದ್ದೀರಾ’ ಅಂದ್ರೆ, ‘ನಾವು ಆಟ ಆಡುತ್ತಾ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಮಾಡ್ತಾ ಇದ್ದೀವಿ’ ಅಂತ ಹೇಳಿದರು.

ಗಣೇಶ ಚತುರ್ಥಿ ಬಂತೆಂದರೆ ಎಲ್ಲೆಡೆ ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಲಾದ ಗಣಪನ ಮೂರ್ತಿಗಳದ್ದೇ ಕಾರುಬಾರು. ಇಂತಹ ಮೂರ್ತಿಗಳನ್ನು ಖರೀದಿಸುವ ಜನರು ಹಬ್ಬ ಮುಗಿದ ನಂತರ ಗಣಪನನ್ನು ಕೆರೆಕಟ್ಟೆಗಳಲ್ಲಿ ವಿಸರ್ಜಿಸುತ್ತಾರೆ. ಇದರಿಂದ ನೀರಿನ ಮೂಲಗಳು ಕಲುಷಿತಗೊಳ್ಳುವುದರ ಜತೆಗೆ ಅದರಲ್ಲಿರುವ ಜಲಚರಗಳು ಹಾಗೂ ಜಲ ಸಸ್ಯಗಳು ನಾಶವಾಗುತ್ತವೆ.

ಪರಿಸರ ಹಾಗೂ ಜಲಚರಗಳ ಮೇಲಾಗುವ ದುಷ್ಪರಿಣಾಮವನ್ನು ತಪ್ಪಿಸುವ ಸಲುವಾಗಿ ಇನ್ಫೊಸಿಸ್‌ ಸಂಸ್ಥೆಯು ಈ ಬಾರಿ ಸಂಸ್ಥೆಯ ಸಿಬ್ಬಂದಿಗಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ತಯಾರಿಸುವುದನ್ನು ಕಲಿಸಲು ಕಾರ್ಯಾಗಾರವನ್ನು ಆಯೋಜಿಸಿತ್ತು. 
‘ನೀರಿನಲ್ಲಿ ಅಷ್ಟು ಸುಲಭವಾಗಿ ಕರಗದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌, ಸೀಸ, ಪಾದರಸದಂತಹ ರಾಸಾಯನಿಕಗಳಿಂದ ತಯಾರಿಸುವ ಗಣೇಶನ ಮೂರ್ತಿಗಳಿಂದ ಆಗುವ ದುಷ್ಪರಿಣಾಮವನ್ನು ತಪ್ಪಿಸುವ ಸಲುವಾಗಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ’ ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ ಸುಜಾ ವಾರಿಯರ್‌.

ಈ ಕಾರ್ಯಾಗಾರದಲ್ಲಿ ಸಂಸ್ಥೆಯ 680 ಸಿಬ್ಬಂದಿ ಭಾಗವಹಿಸಿದ್ದು, ಜೇಡಿಮಣ್ಣನ್ನು ಬಳಸಿ ಗಣಪನ ಮೂರ್ತಿಗಳನ್ನು ಹೇಗೆ ತಯಾರಿಸುವುದು ಹಾಗೂ ಅವುಗಳಿಗೆ ಪರಿಸರಸ್ನೇಹಿ ಬಣ್ಣಗಳನ್ನು ಯಾವ ರೀತಿ ಬಳಸುವುದು ಎನ್ನುವುದನ್ನು ಅರಿತು, ನಂತರ ಅಲ್ಲೇ ಜೇಡಿಮಣ್ಣನ್ನು ಬಳಸಿ ಮೂರ್ತಿಗಳನ್ನು ತಯಾರಿಸಿದರು.

‘ಈ ಬಾರಿ ನಾವೇ ತಯಾರಿಸಿದ ಗಣಪನ ಮೂರ್ತಿಗಳಿಂದ ಮನೆಯಲ್ಲಿ ಹಬ್ಬವನ್ನು ಆಚರಿಸುವ ಅವಕಾಶ ಸಿಕ್ಕಿದೆ. ಹಬ್ಬಕ್ಕಿಂತ ಮುಂಚೆ ಮೂರ್ತಿಗಳನ್ನು ತಯಾರಿಸುವ ತರಬೇತಿ ಸಿಕ್ಕಿದ್ದು ನಮ್ಮ ಅದೃಷ್ಟ. ಅದರಲ್ಲೂ ಪರಿಸರಕ್ಕೆ ಹಾನಿ ಮಾಡದಂತೆ ಗಣಪನನ್ನು ಪೂಜಿಸಲು ತುಂಬಾ ಖುಷಿಯಾಗುತ್ತಿದೆ’ ಎನ್ನುತ್ತಾರೆ ಎಂಜಿನಿಯರ್‌ ಪೂರ್ಣಿಮಾ ಮೆನನ್‌.

ಎರಡು ಗಂಟೆಗಳ ಕಾರ್ಯಾಗಾರದಲ್ಲಿ ಸಿಬ್ಬಂದಿ ತಯಾರಿಸಿದ ಮೂರ್ತಿಗಳನ್ನು ಯಾವ ರೀತಿ ವಿಸರ್ಜನೆ ಮಾಡಬೇಕು, ವಿಸರ್ಜನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.

ನಿತ್ಯ ಮನೆಗೆ ತೆರಳುವಾಗ ಸುಸ್ತಾಗಿ ಬಾಡಿದ ಹೂಗಳಂತೆ ಹೋಗುತ್ತಿದ್ದ ಸಿಬ್ಬಂದಿ ಅಂದು ನಗು ಮುಖದಿಂದ ತಾವು ಮಾಡಿದ ಗಣಪನ ಮೂರ್ತಿಗಳೊಂದಿಗೆ ಮನೆಗಳಿಗೆ ಹಿಂತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.