ADVERTISEMENT

ಇರುವುದೊಂದೇ ಕೋಣೆ, ಕುರ್ಚಿ...

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಇರುವುದೊಂದೇ ಕೋಣೆ, ಕುರ್ಚಿ...
ಇರುವುದೊಂದೇ ಕೋಣೆ, ಕುರ್ಚಿ...   
ಸಂಜೆ ವಾಕ್‌ಗೆ ಹೊರಡುವ ಸಮಯ
‘ಅಪ್ಪಾ ನಿನ್ನ ಫ್ರೆಂಡ್ ಬರ್ತಿದ್ದಾರೆ, ಯಾಕೋ ಸಪ್ಪಗಿದ್ರು ವಿಚಾರಿಸಿಕೋ’
ಪುಟ್ಟಿ ಪುಕ್ಕಟೆ ಸಲಹೆ ಕೊಟ್ಟು ವಾಕ್ ಇನ್ ಆದ್ಳು.
'ಯಾರಿಗೆ ಏನು ಗ್ರಹಚಾರ ವಕ್ಕರಿಸಿತೋ?’ ನನ್ನವಳ ಕಾಮೆಂಟು.
ಅಂದ್ರೆ ಇವಳಿಗೂ ವಿಷಯದ ಸುಳಿವಿದೆ? ಇರಲಿ ನೋಡುವಾ ಎಂದುಕೊಂಡು ‘ಬಾರಯ್ಯ’ ಎಂದೆ.
ಅವನಾಗಲೇ ಕುಳಿತಾಗಿತ್ತು ಸೋಮಾರಿ ಬ್ಯಾಗ್ ಮೇಲೆ.
‘ಇರುವುದೊಂದೇ ಲೇಜಿ ಬ್ಯಾಗ್ ಪುಟ್ಟಿ ಕಂಡ್ರೆ ಹಾರಾಡ್ತಾಳೆ’ ಗೊಣಗಿದೆ.
‘ಪರ್ವಾಗಿಲ್ಲ ಕೂತ್ಕೊಳ್ಳಿ ಏಳಬೇಕಾದ್ರೆ ಹುಷಾರು ಅದರೊಳಗಿನ ಬೆಂಡು ಮೆತ್ತಗಾಗಿ ಪುಸ್ಕಿ ಆಗಿದೆ. ಕೂತ್ರೆ ನಿಮ್ಮದೇ ರಿಸ್ಕು’.
ಪುಟ್ಟಿ ಪರವಾನಗಿ ಕೊಟ್ಟಳು .
‘ಸರಿ ಈಗ ಹೇಳು, ನಿನ್ನ ಪೆಚ್ಚು ಮುಖ ನೋಡಲಾರೆ’ ಕೇಳಿಯೇ ಬಿಟ್ಟೆ.
‘ಅದನ್ನು ಏನಂತ ಹೇಳಲಿ. ಇರುವುದೊಂದು ಕೋಣೆ ಬರೋವ್ರು ಇಬ್ರು ಅತಿಥಿಗಳು’.
‘ಒಹ್ ಅದಾ ಸಮಸ್ಯೆ? ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಅನ್ನು’
‘ಅಯ್ಯೋ, ಬರ್ತಿರೋದು ನನ್ನ ಕಿರಿಯತ್ತೆ. ಮತ್ತೆ ನನ್ನ ಚಿಕ್ಕಪ್ಪ’
‘ಕಿರಿಯತ್ತೆ ಅಂದ್ರೆ’
‘ನನ್ನತ್ತೆಯ ಕಿರಿ ತಂಗಿ’
‘ಒಂದು ಕಾಲದಲ್ಲಿ ಅವರಿಬ್ಬರೂ ದೋಸ್ತ್‌ಗಳಲ್ಲವೇ?’
‘ಅದು ಅಂದಿನ ಕಾಲ. ಈಗ ಇಬ್ಬರೂ ಬದಲಾಗಿದ್ದಾರೆ. ಚಿಕ್ಕಪ್ಪ ಹೇರ್ ಡೈ ಮಾಡಿಕೊಂಡು ಮೂವತ್ತರ ಆಸುಪಾಸಿನವರಂತೆ ಕಾಣುತ್ತಾರೆ. ಕಿರಿಯತ್ತೆ ಏಕಾಏಕಿ ಎಪ್ಪತ್ತು ತೂಗ್ತಿದ್ದಾರೆ. ಈಗ ಎಣ್ಣೆ ಸೀಗೆ. ಒಬ್ಬೊಬ್ಬರೇ ಬಂದರೆ ಸತ್ಕರಿಸಬಹುದು. ಇಬ್ಬರೂ ಒಟ್ಟಿಗೆ ಬಂದರೆ ನಮ್ಮ ಪಾಡು ಹೇಗೆ?’
‘ಅದೂ ಅಲ್ದೇ ಈಗ ಹಳೇ ಟಿ.ವಿ ಗೆಸ್ಟ್ ರೂಮ್‌ನಲ್ಲೇ ಇದೆ. ಇಬ್ಬರೂ ಒಂದೇ ಸಲಕ್ಕೆ ಟೀವಿ ನೋಡಬೆಕು ಅಂತಾರೆ. ನಾನು ಹೇಗೆ ಅಲಾಟ್ ಮಾಡ್ಲಿ? ಚಿಕ್ಕಪ್ಪನಿಗೆ ನ್ಯೂಸ್– ಕ್ರಿಕೆಟ್ ಬೇಕು. ಕಿರಿಯತ್ತೆಗೆ ಧಾರಾವಾಹಿ– ಅಡುಗೆ ಚಾನೆಲ್‌ಗಳು ಇಷ್ಟ. ಇರುವುದೊಂದೇ ಕೋಣೆ ಯಾರಿಗಂತ ಕೊಡಲಿ? ಯಾರ ಪರ ವಹಿಸಿದರೂ ಬಲಿಪಶು ನಾನೇ '
‘ಛೇ ಹೀಗಾಗಬಾರದಿತ್ತು’ ನಾನು ಸಂತೈಸಿದೆ.
‘ಇರುವುದೊಂದೇ ಕುರ್ಚಿ ಯಾರಿಗೆ ಅಂತ ಕೊಡಲಿ’ ನನ್ನವಳ ಏರು ದನಿ.
‘ಏನಾಯ್ತು?’
‘ನಾಳೆ ಮೀಟಿಂಗ್‌ಗೆ ಪ್ರೆಸಿಡೆಂಟ್ ಗೈರು. ಆ ಕುರ್ಚಿ ನಾಳೆ ಮಟ್ಟಿಗೆ ಯಾರಿಗೆ ಅನ್ನುವುದೇ ಗೊಂದಲ. ನಮ್ಮ ಸಂಘಕ್ಕೆ ಇಬ್ಬರು ವೈಸ್‌ ಪ್ರೆಸಿಡೆಂಟ್‌ಗಳು ಇದ್ದಾರಲ್ಲಾ...?’
ಇದು ನನ್ನವಳನ್ನು ಕಾಡುತ್ತಿದ್ದ ಕನ್‌ಫ್ಯೂಷನ್.
‘ಅಂದ್ರೆ ನಾಳೆ ಮೀಟಿಂಗಲ್ಲಿ ಕುಸ್ತಿ ಮಸ್ತಿ. ಸೆಕ್ರೆಟರಿಯಾಗಿ ನಿನ್ನ ಹೊಣೆಗಾರಿಕೆ ಅಲ್ವೇ?’ ಕಿಚಾಯಿಸಿದೆ
‘ಹೂಂ ಅದೇ ಯೋಚ್ನೆ ಆಗಿದೆ’ ಅಂದ್ಳು. ಪಾಪ ಅನ್ನಿಸಿತು.
‘ನನ್ನದೊಂದು ಸಲಹೆ’ ಎಂದೆ. ಏನು ಎಂಬಂತೆ ನೋಡಿದಳು.
‘ಆವರಿಬ್ಬರಲ್ಲಿ ಯಾರು ವಯಸ್ಸಿನಲ್ಲಿ ಹಿರಿಯರೋ ಅವರೇ ತಾತ್ಕಾಲಿಕವಾಗಿ ಅಧ್ಯಕ್ಷ ಪೀಠ ಅಲಂಕರಿಸಲಿ’.
ನನ್ನವಳ ಮುಖ ಅರಳಿತು
‘ಅರೆ ನಿಮಗೂ ತಲೆ ಇದೆ’ ಎಂದು ತನ್ನ ರೂಮಿಗೆ ಹೋದವಳೇ ಕಿಟಾರನೆ ಕಿರುಚಿದಳು.
‘ಏನಾಯ್ತಮ್ಮ?’ ಪುಟ್ಟಿಯ ದನಿ.
‘ಡೈರಿ ಕಾಣ್ತಿಲ್ಲ?’
ಅದರಲ್ಲೇನೂ ಅಂತಹ ಮಹತ್ವದ ಮಾಹಿತಿ ಇರಲಿಕ್ಕಿಲ್ಲ ಅಂದ್ಕೊಂಡೆ. ‘ಹೋಗ್ಲಿ ಬಿಡಮ್ಮಾ ಇನ್ನೊಂದು ಬರಿ’ ಪುಟ್ಟಿಯ ಸಮಾಧಾನ.
‘ಅದರಲ್ಲೇ ನಮ್ಮ ಎಲ್ಲ ಸದಸ್ಯರ ಬರ್ತ್ ಡೇಟ್ ವಿತ್ ಇಯರ್ ಡೇಟಾ ಇದ್ದದ್ದು. ತುಂಬಾ ಹ್ಯಾಂಡಿ ಆಗ್ತಿತ್ತು’.
ಮೊನ್ನೆ ಹಳೇಪೇಪರ್ ಜೊತೆ ಐನೂರು ಗ್ರಾಂ ಕಮ್ಮಿಯಾದಾಗ ಒಂದಷ್ಟು ಹಳೇ ಡೈರಿಗಳೂ  ತೂಗಿದ್ದ  ನೆನಪು ಅದರೊಂದಿಗೇನಾದರೂ? ಇದು ನನ್ನ ಮನಸಿನಲ್ಲಿ ಬಂದು ಹೋದ ಮಾತು. ನಾನೇಕೆ ತುಟಿ ಬಿಚ್ಚಿ ರಣ ಕಹಳೆ ಊದಲಿ.
‘ವಾಕಿಂಗ್ ಹೋಗೋಣ ನಿನ್ನ ಅತಿಥಿ ಸತ್ಕಾರಕ್ಕೆ ಏನಾದರೂ ದಾರಿ ಕಾಣುತ್ತೋ ವಿಚಾರ ಮಾಡುವ’ ಎನ್ನುತ್ತ ಪಾರ್ಕ್ ದಿಕ್ಕಿಗೆ ಕಂಠಿಯನ್ನು ಹೊರಡಿಸಿದೆ. 
ಕೆ.ವಿ.ರಾಜಲಕ್ಷ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.