ADVERTISEMENT

ಇಲ್ಲಿದೆ ನೀರೆಗೊಪ್ಪುವ ಸೀರೆ

ನಿಸರ್ಗ ಎಚ್.ಮಲ್ಲಿಗೆರೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
‘ಕಾಟನ್‌ ಹಾಗೂ ರೇಷ್ಮೆ ಉತ್ಸವ’ವನ್ನು ನಟಿ ಹರಿಪ್ರಿಯಾ ಉದ್ಘಾಟಿಸಿದರು-ಚಿತ್ರಗಳು: ಆನಂದ್ ಬಕ್ಷಿ
‘ಕಾಟನ್‌ ಹಾಗೂ ರೇಷ್ಮೆ ಉತ್ಸವ’ವನ್ನು ನಟಿ ಹರಿಪ್ರಿಯಾ ಉದ್ಘಾಟಿಸಿದರು-ಚಿತ್ರಗಳು: ಆನಂದ್ ಬಕ್ಷಿ   

ಎತ್ತ ತಿರುಗಿದರೂ ನಾನಾ ಬಣ್ಣದ ಸೀರೆಗಳು. ಕಣ್ಣು ಕೋರೈಸುವ ಅಂದದ ಕಸೂತಿ ವಿನ್ಯಾಸ! ಅಲ್ಲಿ ಕಾಲಿಟ್ಟರೆ ಸಂತೆಯ ಅನುಭವ ಆದೀತು. ಅದು ಸೀರೆಗಳ ಸಂತೆ, ಜಾತ್ರೆ ಎಂದಾದರೂ ಕರೆಯಿರಿ. ಇದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ‘ಕಾಟನ್ ಅಂಡ್ ಸಿಲ್ಕ್‌ ಫ್ಯಾಬ್‌’ನ ದೃಶ್ಯ. ಹತ್ತಿ ಮತ್ತು ರೇಷ್ಮೆ ಸೀರೆಗಳ ಮೇಳವು ಮೇ 29ರವರೆಗೆ ನಡೆಯಲಿದೆ.

18 ರಾಜ್ಯಗಳ ಕೈಮಗ್ಗ ನೇಕಾರರು ಸಿದ್ಧಪಡಿಸಿರುವ ಹತ್ತಿ ಮತ್ತು ರೇಷ್ಮೆ ಸೀರೆಗಳು ಮೇಳದಲ್ಲಿ ಕಣ್ಮನ ತಣಿಸುತ್ತವೆ. ಮೇಳದಲ್ಲಿ 130ಕ್ಕೂ ಹೆಚ್ಚು ಮಳಿಗೆಗಳಿದ್ದು, ಸಾಂಪ್ರದಾಯಿಕ ಸೀರೆಗಳೇ ಎದ್ದು ಕಾಣುತ್ತಿವೆ. ರಾಜ್ಯದ ಇಳಕಲ್ ಸೀರೆ, ಮೈಸೂರು ರೇಷ್ಮೆ, ಹತ್ತಿ ಸೀರೆಗಳಿಂದ ಹಿಡಿದು ವಿವಿಧ ರಾಜ್ಯಗಳ ಸೀರೆಗಳು ಒಂದೆಡೆ ಲಭ್ಯ.

ಆಂಧ್ರಪ್ರದೇಶದಿಂದ ಬಂದಿರುವ ಕಲಾವಿದರಾದ ಶಿವ ಅವರು ಕಲಂಕಾರಿ ಸೀರೆ ಮತ್ತು ಅದಕ್ಕೆ ಬಳಸುವ ನೈಸರ್ಗಿಕ ಬಣ್ಣಗಳ ಕುರಿತು ವಿವರಿಸುತ್ತಾರೆ. ಪಂಜಾಬ್‌ನ ಪುಲಕಾರಿ, ಮಲ್ಬರಿ ಸಿಲ್ಕ್, ಮಸ್ಲಿನ್, ರೇಷ್ಮೆ ಸೀರೆಗಳೂ ಇವೆ.

ಬಿಹಾರದ ವ್ಯಾಪಾರಿ ರಾಕೇಶ್ ಮಾತನಾಡಿ, ‘ನನ್ನ ಬಳಿ ಬಿಹಾರದ ಸಾಂಪ್ರದಾಯಿಕ ಏರಿ ಸಿಲ್ಕ್ ಇದೆ. ಕೈಚಳಕದಿಂದಲೆ ಆಕರ್ಷಕ ಕಸೂತಿ ಮಾಡಲಾಗಿದೆ. ಯಾವುದೇ ಬಣ್ಣ ಇಲ್ಲದ ಟಸರ್ ಸೀರೆಗಳಿವು’ ಎನ್ನುತ್ತಾರೆ.

ಕೋಲ್ಕತ್ತ ವರ್ತಕರು ಆ ರಾಜ್ಯದ ಸಾಂಪ್ರದಾಯಿಕ ಸೀರೆಯ ಜೊತೆಗೆ ಬಾಂಗ್ಲಾ ದೇಶದ ಜಾಮ್‍ದಾನಿ ಸೀರೆಗಳು ಮಾರಾಟಕ್ಕೆ ತಂದಿದ್ದಾರೆ. ರಾಜಸ್ತಾನ, ಜೈಪುರ, ಮಧ್ಯ ಪ್ರದೇಶದ ಸೀರೆಗಳು, ಅಸ್ಸಾಂ, ಮಣಿಪುರಿ, ಗುಜರಾತ್, ಕಾಶ್ಮೀರ, ಬನಾರಸ್‌ಗಳ ಸಾಂಪ್ರದಾಯಿಕ, ಕೈಮಗ್ಗದ ಸೀರೆಗಳ ಸಂಗ್ರಹ ಕಾಣಬಹುದು.

ಬಹುತೇಕ ಮಳಿಗೆಗಳಲ್ಲಿ ಸೀರೆಗಳ ಬೆಲೆ ₹500ರಿಂದ ಅರಂಭವಾಗುತ್ತಿತ್ತು. ಜೊತೆಗೆ ಗಾಜಿನ ಕಸೂತಿ ಇರುವ ಪಂಜಾಬ್‌ನ ದುಪಟ್ಟಾಗಳು ಅತ್ಯಾಕರ್ಷಕವಾಗಿವೆ. ‘ಸೀರೆ ಅಲ್ಲದೆ,  ಕುರ್ತಾ, ಟಾಪ್ಸ್, ಚೂಡಿದಾರ, ಮಕ್ಕಳ ಬಟ್ಟೆಗಳೂ ಇವೆ. ಇದನ್ನು ನೋಡಿದರೆ ಜಾತ್ರೆ ನೋಡಿದಷ್ಟೇ ಖುಷಿ ಆಗುತ್ತದೆ’ ಎಂದರು ಆರ್.ಟಿ. ನಗರ ನಿವಾಸಿ ಸವಿತಾ.

‘ಕಚ್, ಕಾಂತಾ ಸೀರೆಗಳು ಬಹಳ ಹಿಡಿಸಿವೆ. ಇಲ್ಲಿ ಹತ್ತಿ ಮತ್ತು ರೇಷ್ಮೆ ಸೀರೆಗಳ ದೊಡ್ಡ ಸಂಗ್ರಹವನ್ನೇ ಕಾಣಬಹುದು. ಕೈಮಗ್ಗದಲ್ಲಿ ನೇಯ್ದಿರುವ ನೈಸರ್ಗಿಕ ಬಣ್ಣಗಳ ಸೀರೆ ಸಿಗುತ್ತದೆ ಎನ್ನುವ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ’ ಎಂದು ಕೀರ್ತಿ ಪ್ರತಿಕ್ರಿಯಿಸಿದರು.

ಇನ್ನಷ್ಟು ಆಕರ್ಷಣೆ
ಸೀರೆಗಳಷ್ಟೇ ಅಲ್ಲದೆ, ಜೈಪುರದಿಂದ  ವ್ಯಾಪಾರಿಗಳು ತಂದಿರುವ ಆಕ್ಸಿಡೈಡ್ ಸಿಲ್ವರ್‌ನಿಂದ ಮಾಡಿದ ಕಿವಿಯೋಲೆ, ಕಾಲ್ಗೆಜ್ಜೆ, ಸರ-ಬಳೆಗಳು ಗಮನ ಸೆಳೆಯುತ್ತವೆ. ಸ್ಟೋನ್‌ನ ಸರಗಳು, ಜುಮುಕಿ, ಪುಟ್ಟ ಓಲೆಗಳನ್ನು ವಿಶೇಷ ವಿನ್ಯಾಸಗಳಲ್ಲಿ ಕಾಣಬಹುದು.

ಮರದಿಂದ ತಯಾರಿಸಿದ ವಾಹನಗಳ ಪ್ರತಿಕೃತಿ, ಹೂವು ಇತರ ಅಲಂಕಾರಿಕ ವಸ್ತುಗಳು, ಗಾಜಿನಿಂದ ತಯಾರಿಸಿದ ಹೂವು, ಬೊಂಬೆ, ದೀಪ, ಮಣ್ಣಿನ ಹಣತೆ, ಮ್ಯಾಜಿಕ್ ದೀಪಗಳು, ಆಟಿಕೆಗಳು, ಪಂಜಾಬ್‌ನ ವಿಶೇಷ ಕಸೂತಿ ಇರುವ ಚಪ್ಪಲಿಗಳು ಸೀರೆ ಸಂತೆಯ ಮೆರುಗು ಹೆಚ್ಚಿಸಿವೆ.

ಒಡಿಶಾ ಪಟಚಿತ್ರ
ಒಡಿಶಾದಿಂದ ಬಂದ ಪಟಚಿತ್ರಗಳು ಮೇಳದಲ್ಲಿ ತಮ್ಮ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ. ರಾಮಾಯಣ, ಮಹಾಭಾರತ ಮತ್ತು  ಇತರ ಪುರಾಣ ಕಥೆಗಳನ್ನು ಪಟಗಳ ಮೇಲೆ ಕೆತ್ತಲಾಗಿದೆ. ಚಿತ್ರಗಳೇ ಸಂಪೂರ್ಣ ಕಥೆ ವಿವರಿಸುತ್ತವೆ.

ಒಂದು ರಾಮಾಯಣ ಕಥೆ ಬಿಡಿಸಲು 3ರಿಂದ ನಾಲ್ಕು ತಿಂಗಳು ಬೇಕು. ಚಿಕ್ಕ ಪಟಗಳಾದರೆ ₹500ಕ್ಕೆ ಸಿಗುತ್ತದೆ. ರಾಮಾಯಣದ ಪಟಚಿತ್ರಕ್ಕೆ ₹9000 ತೆರಬೇಕು. ಅಸ್ಸಾಂನಿಂದ ತಂದಿರುವ ಬೆತ್ತದ ಕೈಚೀಲ ಮತ್ತು ಇತರ ಉತ್ಪನ್ನಗಳು ಯುವತಿಯರ ಮನ ಸೆಳೆದಿವೆ. ಹೊಸ ಕಾಲಕ್ಕೆ ತಕ್ಕಂತೆ ಆಧುನಿಕ ಸ್ಪರ್ಶ ಪಡೆದ ಚಂದದ ವ್ಯಾನಿಟಿ ಬ್ಯಾಗ್‌ಗಳ ದೊಡ್ಡ ಸಂಗ್ರಹವೇ ಇಲ್ಲಿದೆ.

***
ಬೆಂಗಳೂರಿನಲ್ಲಿ ಎಲ್ಲ ಭಾಷೆ ಮತ್ತು ಸಂಸ್ಕೃತಿಯ ಜನ ಇರುವುದರಿಂದ ನಾವು ತಂದ ಎಲ್ಲ ಸೀರೆಗಳು ಮಾರಾಟವಾಗುತ್ತವೆ ಎಂಬ ನಂಬಿಕೆ ಇದೆ.
ಮೊಹಮ್ಮದ್, ಪಂಜಾಬ್‌ನಿಂದ ಬಂದಿರುವ ವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.