ADVERTISEMENT

ಈ ಪ್ರೀತಿಗೆ ಪ್ರೇಕ್ಷಕನೇ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಅಂಜನಾ ದೇಶಪಾಂಡೆ, ನಕುಲ್
ಅಂಜನಾ ದೇಶಪಾಂಡೆ, ನಕುಲ್   

ಸಿನಿಮಾ ಪ್ರದರ್ಶನಗೊಳ್ಳುವ ಮಲ್ಟಿಪ್ಲೆಕ್ಸ್ ತೆರೆಯ ಎದುರು ಅಂದು ಸಂಗೀತ ಸಂಜೆ ಅನಾವರಣಗೊಂಡಿತ್ತು. ‘ಪ್ರೀತಿಯ ರಾಯಭಾರಿ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರಾಗ ಸಂಯೋಜಕ ಅರ್ಜುನ್ ಜನ್ಯ ಸಂಗೀತ ಸುಧೆ ಹರಿಸಿದರು. ನಟ ಸುದೀಪ್ ಕೂಡ ಈ ಗೀತಸಂಭ್ರಮಕ್ಕೆ ಸಾಕ್ಷಿಯಾದರು. ಸುದೀಪ್‌ಗಾಗಿ ‘...ರಾಯಭಾರಿ’ ಚಿತ್ರದ ಜೊತೆಗೆ ‘ಹೆಬ್ಬುಲಿ’ ಚಿತ್ರದ ಹಾಡನ್ನೂ ಜನ್ಯ ಪ್ರಸ್ತುತಪಡಿಸಿದರು.

ನಗರದಲ್ಲಿ ಕೃಷಿ ಪದವಿ ಪೂರೈಸಿ, ಹಳ್ಳಿಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಬರುವ ಹುಡುಗ ಪ್ರೀತಿಗೆ ಶರಣಾಗುವ ಕಥೆಯೇ ‘ಪ್ರೀತಿಯ ರಾಯಭಾರಿ’. ನಾಲ್ಕು ವರ್ಷಗಳ ಹಿಂದೆ ನಂದಿಬೆಟ್ಟದಲ್ಲಿ ನಡೆದ ಒಂದು ಘಟನೆಯನ್ನು ಪ್ರೇರಣೆಯಾಗಿಸಿಕೊಂಡು ಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ ಎಂ.ಎಂ. ಮುತ್ತು.

ನಿರ್ದೇಶಕರಿಗೆ ಇದು ಮೊದಲ ಅನುಭವ. ‘ಚಿತ್ರದ ಪಾತ್ರಗಳು ರಾಯಭಾರಿಗಳಲ್ಲ, ಪ್ರೇಕ್ಷಕರೇ ರಾಯಭಾರಿಗಳು’ ಎಂದು ಅವರು ಹೇಳಿದರು. ಮೂಲ ಸೌಕರ್ಯಗಳಿಂದ ವಂಚಿತವಾದ ಹಳ್ಳಿಗೆ ನಾಯಕ ಬರುವ ಸನ್ನಿವೇಶ ಚಿತ್ರೀಕರಣಕ್ಕೆ ಹಿರಿಯೂರಿನ ಹತ್ತಿರದ ಹಳ್ಳಿಯೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

‘ನೀನಾಸಮ್’ನಲ್ಲಿ ಹಾಗೂ ಚೆನ್ನೈನ ತರಬೇತಿ ಸಂಸ್ಥೆಯೊಂದರಲ್ಲಿ ನಟನಾ ತರಬೇತಿಪಡೆದ ನಕುಲ್ ಚಿತ್ರದ ನಾಯಕ. ವೇದಿಕೆಗೆ ಬುಲ್ಲೆಟ್ ಬೈಕ್‌ನಲ್ಲಿ ಬಂದ ಅವರು ಕುಣಿದು ಕುಪ್ಪಳಿಸಿದರು. ಅಂಜನಾ ದೇಶಪಾಂಡೆ ನಾಯಕಿ.

ಎಸ್.ಆರ್. ವೆಂಕಟೇಶ್ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ. ಜಯಂತ ಕಾಯ್ಕಿಣಿ, ಅಲೆಮಾರಿ ಸಂತು, ಚೇತನ್, ಚಂದನ್ ಶೆಟ್ಟಿ ರಚಿಸಿದ ಹಾಡುಗಳಿಗೆ ಪುನೀತ್ ರಾಜಕುಮಾರ್, ವಿಜಯ್ ಪ್ರಕಾಶ್, ಸಾಧುಕೋಕಿಲ, ಚಂದನ್ ಶೆಟ್ಟಿ ಹಾಡಿದ್ದಾರೆ. ಆನಂದ್ ಆಡಿಯೊ ಸಂಸ್ಥೆ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ಸುದೀಪ್ ಮತ್ತು ‘ಸಿಂಪಲ್’ ಸುನಿ ಚಿತ್ರತಂಡವನ್ನು ಹಾರೈಸಿದರು. ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.