ADVERTISEMENT

ಏಳು ಸುತ್ತಿನ ಕೋಟೆ ದಾಟಿ...

ಸುತ್ತಾಣ

ಜಯಸಿಂಹ ಆರ್.
Published 22 ಆಗಸ್ಟ್ 2014, 19:30 IST
Last Updated 22 ಆಗಸ್ಟ್ 2014, 19:30 IST

‘ಎಲ್ಲಾ ಕೋಟೆಗಳ ಬಾಗಿಲುಗಳೂ ನಿಮ್ಮ ಎಡಭಾಗಕ್ಕೇ ಬರುತ್ತವೆ. ಬಾಗಿಲು ಕಾಣದಿದ್ದರೆ ಎಡಭಾಗದಲ್ಲೇ ಹುಡುಕಬೇಕು’ ಎಂದರು ಹುತ್ರಿ ಬೆಟ್ಟದ ಗಂಗಣ್ಣ.

ಮಣ ಭಾರವಿದ್ದ ಬ್ಯಾಗುಗಳನ್ನು ಹೊತ್ತುಕೊಂಡು ಎದುರಿಗೆ ಕಾಣುತ್ತಿದ್ದ ಕೋಟೆಯೆಡೆಗೆ ದಾಪುಗಾಲಿಟ್ಟೆವು. ಮೊದಲ ಸುತ್ತಿನ ಕೋಟೆ ‘ಯಃಕಶ್ಚಿತ್’ ಎಂಬಂತೆ ಭಾಸವಾಯಿತು. ಕೇವಲ ಎಂಟು ಅಡಿ ಎತ್ತರವಿರುವ, ಬಾಗಿಲು ದೂರಕ್ಕೇ ಕಾಣುವ ಈ ಕೋಟೆಯನ್ನು ಸುಲಭವಾಗಿ ದಾಟಿದೆವು. ಕೋಟೆ ದಾಟಿದ್ದೇ ತಡ ಹುತ್ರಿದುರ್ಗ ತನ್ನ ನಿಜಸ್ವರೂಪವನ್ನು ಅನಾವರಣಗೊಳಿಸಿತ್ತು. ದುರ್ಗದ ಪ್ರತಿ ಕೋಟೆಯೂ ಕಣ್ಣಿಗೆ ಕಾಣುತ್ತಿತ್ತು. ಅದರೊಂದಿಗೆ ಪ್ರತಿ ಕೋಟೆಯನ್ನು ಮುಟ್ಟಲು ನಾವು ಏರಬೇಕಿದ್ದ ಆನೆಯ ಬೆನ್ನಿನಂತಹ ಇಳಿಜಾರಿನಿಂದ ಕೂಡಿದ ಬಂಡೆಗಳೂ ಕೈಬೀಸಿ ಸವಾಲೊಡ್ಡುತ್ತಿದ್ದವು. ಬಂಡೆಯನ್ನು ಏರಲು ಅನುಕೂಲವಾಗುವಂತೆ ಕಡೆದಿದ್ದ ಮೆಟ್ಟಲುಗಳು ನಮಗೆ ಆಸರೆಯಾದವು.

ಮುಂದಿನ ಐದು ನಿಮಿಷದಲ್ಲಿ ಎರಡನೇ ಸುತ್ತಿನ ಕೋಟೆಯ ಬಳಿ ಇದ್ದೆವು. ಹಿಂದೊಮ್ಮೆ ಒಬ್ಬನೇ ಕೋಟೆಯನ್ನು ಭೇದಿಸುವ ಸಲುವಾಗಿ ಎರಡನೇ ಸುತ್ತಿನ ಬಳಿ ಗಂಟೆಗಳ ಕಾಲ ಹುಡುಕಿಯೂ ಬಾಗಿಲು ಸಿಗದೆ ಹಿಂತಿರುಗಿದ್ದೆ. ಈ ಬಾರಿ ಬಾಗಿಲು ತಿಳಿದಿತ್ತು. ಎರಡನೇ ಸುತ್ತನ್ನು ದಾಟಿ ಮುನ್ನಡೆದೆವು. ಮೂರನೇ ಸುತ್ತನ್ನು ಮುಟ್ಟುವುದು ಕಷ್ಟವೇನು ಆಗಲಿಲ್ಲ. ಕೇವಲ ಮೂರು ನಿಮಿಷದಲ್ಲಿ ಅದನ್ನೂ ದಾಟಿಯಾಗಿತ್ತು. ಕಡಿದಾದ ಮೆಟ್ಟಲು, ಕಣಿವೆಗಳನ್ನು ದಾಟಿ ಏಳು ಸುತ್ತಿನ ಕೋಟೆಗಳನ್ನೂ ಭೇದಿಸಿದ್ದಾಯಿತು, ಒಂದೇ ಗಂಟೆಯಲ್ಲಿ.

ಬೋಳು ಬಂಡೆಯ ಮೇಲೆ ಶಂಕರಲಿಂಗೇಶ್ವರನ ಗುಡಿ. ಅದಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಿನ ಮಂಟಪದ ಅಡುಗೆ ಕೋಣೆ. ಶಂಕರಲಿಂಗೇಶ್ವರನ ಪೂಜಾ ಕಾರ್ಯಗಳಿಗೆ ಬಳಸುವ ಒಂದು ದೊಣೆ (ನೀರಿನ ಹೊಂಡ). ಮೇಲೆ ಪಾಚಿ ಕಟ್ಟಿದಂತಿದ್ದರೂ ಪಾಚಿ ಸರಿಸಿದೊಡನೆ ತಿಳಿಯಾದ ನೀರು. ಅದರ ಸನಿಹದಲ್ಲೇ ಅರ್ಧ ಉರುಳಿದ ಮದ್ದಿನ ಮನೆ. ಕೋಟೆ ಎಂದಮೇಲೆ ಇವೆಲ್ಲಾ ಇರದಿದ್ದರೆ ಹೇಗೆ? ಅಲ್ಲಿಯೇ ಕುಳಿತು ತಂದಿದ್ದ ಬುತ್ತಿ ಮುಗಿಸಿದೆವು.


ದೇವಾಲಯವಿದ್ದ ಪ್ರದೇಶದ ಬಂಡೆಯನ್ನು ಇಳಿದು ಮತ್ತೂ ಮೇಲಕ್ಕೆ ಏರಿದಾಗ ಹುತ್ರಿದುರ್ಗದ ಕೋಟೆಯೊಳಗಿನ ಅರಸೊತ್ತಿಗೆಯ ವೈಭವ ಕಣ್ಣಮುಂದೆ ಇತ್ತು. ಮರೆತಿದ್ದೆ, ಇದು ಮಾಗಡಿ ಕೆಂಪೇಗೌಡ ನಿರ್ಮಿಸಿ, ಆಳಿದ ಕೋಟೆ. ಪಾಳು ಬಿದ್ದ ಹತ್ತಾರು ಕಲ್ಲಿನ ಕಟ್ಟಡಗಳು, ಮತ್ತಷ್ಟು ಮದ್ದಿನ ಮನೆಗಳು, ದೇವಾಲಯ, ಧ್ವಜಸ್ತಂಭಗಳು, ಕೆಂಪೇಗೌಡನ ಕಲ್ಲಿನ ಸಿಂಹಾಸನ, ಪಾಳೇಗಾರಿಕೆಯ ವೈಭವಕ್ಕೆ ಸಾಕ್ಷಿಯಾಗಿದ್ದವು. ಅಲ್ಲೇ ಸಮೀಪದಲ್ಲಿರುವ ಅಕ್ಕ-ತಂಗಿಯರ ಸೊಣ/ದೊಣೆ/ಹೊಂಡಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಕಥೆ ಮತ್ತೂ ರೋಚಕವಾಗಿತ್ತು.

ಕೆಂಪೇಗೌಡನ ಕಾಲದಲ್ಲಿ ಈ ಕೋಟೆಯಲ್ಲಿ ಇಬ್ಬರು ಅಕ್ಕ-ತಂಗಿ ವಾಸವಾಗಿದ್ದರಂತೆ. ಅವರ ಬಳಿ ಅಪಾರ ಧನ-ಕನಕಗಳಿದ್ದವಂತೆ. ಹುತ್ರಿದುರ್ಗದ ಆವರಣದಲ್ಲಿಯೇ ಇರುವ ಬಸವದುರ್ಗದಲ್ಲಿ ಒಬ್ಬ ಬಸವನಾಯಕ ಎಂಬುವನಿದ್ದನಂತೆ. ಅವನಿಗೋ ಅಕ್ಕ-ತಂಗಿಯರ ಮೇಲೂ ಕಣ್ಣು, ಅವರ ಬಳಿಯಿದ್ದ ಸಂಪತ್ತಿನ ಮೇಲೂ ಕಣ್ಣು. ಸೂಕ್ತ ರಕ್ಷಣೆಯಿಲ್ಲದ ಸಂದರ್ಭ ನೋಡಿ ಆತ ಅಕ್ಕ-ತಂಗಿಯರ ಮೇಲೆ ದಾಳಿ ಮಾಡಿಯೇ ಬಿಟ್ಟ.

ದಾರಿ ಕಾಣದ ಸೋದರಿಯರು, ಒಡವೆಗಳಿದ್ದ ದೊಡ್ಡ ಗಂಟನ್ನು ದೊಣೆಗೆ ಎಸೆದು, ತಾವಿಬ್ಬರೂ ಒಂದೊಂದು ದೊಣೆಗೆ ಹಾರಿದರಂತೆ. ಬಸವನಾಯಕನಿಗೆ ಏನೂ ಸಿಗಲಿಲ್ಲವಂತೆ.

ADVERTISEMENT


ಕೆಂಪೇಗೌಡನ ಹುತ್ರಿದುರ್ಗದ ಪಾಳು ಬಿದ್ದ ಅವಶೇಷಗಳ ನಡುವೆ ಕುಳಿತು ಗಂಗಣ್ಣ ಹೇಳಿದ ಕಥೆ ಕೇಳಿ ಮನದಲ್ಲಿ ಮೂಡಿದ ರಮ್ಯ ಕಲ್ಪನೆಗಳನ್ನು ಆನಂದಿಸಿದೆವು.

ಆದರೆ, ಪಾಳೇಗಾರಿಕೆಯ ವೈಭವವನ್ನು ನೋಡಿದ್ದ ತಲೆಮಾರಿನಿಂದ ಈ ಕಥೆ ಕೇಳುತ್ತಲೇ ಬಂದವರಿದ್ದಾರಲ್ಲ. ಕಥೆಯನ್ನು ಆನಂದಿಸಿದೆ. ದೊಣೆಯಲ್ಲಿ ಮುಳುಗಿದ್ದ, ಮಣ್ಣಿನಲ್ಲಿ ಮುಚ್ಚಿಟ್ಟ ಸಂಪತ್ತಿನ ಶೋಧಕ್ಕೆ ಇಳಿದೇ ಬಿಟ್ಟರು. ‘ಇಂತಹ ನಿಧಿಗಳ್ಳರ ಹಾವಳಿಗೆ ತುತ್ತಾಗಿ ದೇವಾಲಯ, ಧ್ವಜಸ್ತಂಭ, ನಂದಿ ವಿಗ್ರಹ, ಸಿಂಹಾಸನ ಎಲ್ಲವೂ ಭಗ್ನವಾಗಿವೆ. ಇಂದಿಗೂ ನಿಧಿಗಳ್ಳರ ಹಾವಳಿ ತಪ್ಪಿಲ್ಲ’ ಎನ್ನುತ್ತಾರೆ ಗಂಗಣ್ಣ.

ರಾತ್ರಿ ಕರಡಿ, ದೊಡ್ಡನಾಯಿಗಳು ಈಚೆ ಬರುತ್ತವೆ ಎಂದು ಎಚ್ಚರಿಸಿ ಗಂಗಣ್ಣ ಕೋಟೆ ಇಳಿಯತೊಡಗಿದರು. ರಾತ್ರಿ ಕೋಟೆಯಲ್ಲೇ ಉಳಿಯುವ ಯೋಜನೆ ನಮ್ಮದಾಗಿತ್ತು, ಟೆಂಟು ಹೊಡೆಯಲು ಮುಂದಾದೆವು. ಅಂದೇ ಮನೆ ಮುಟ್ಟಬೇಕಿದ್ದರೆ ಸಂಜೆಯ ಹೊತ್ತಿಗೆ ನೀವೂ ಬೆಟ್ಟದಿಂದಿಳಿದು ನಿಮ್ಮೂರು ಸೇರಬಹುದು.

ಅಂದಹಾಗೆ ಗಂಗಣ್ಣ ಹೇಳಿದಂತೆ ಎಲ್ಲಾ ಕೋಟೆಗಳ ಬಾಗಿಲುಗಳೂ ಎಡಭಾಗದಲ್ಲೇ ಇದ್ದವು. ಅಜ್ಞಾತವಾಗಿಯೇ ಉಳಿಯುವ ಎರಡು, ನಾಲ್ಕು ಮತ್ತು ಐದನೇ ಸುತ್ತಿನ ಕೋಟೆಯ ಬಾಗಿಲುಗಳನ್ನು ತಾಳ್ಮೆಯಿಂದ ಹುಡುಕಿದರಾಯಿತು.

ಪ್ರತಿ ಕೋಟೆಯ ಆವರಣದಲ್ಲಿಯೂ ನೀರಿನ ಒರತೆ ಮತ್ತು ತಿಳಿ ನೀರಿನ ದೊಣೆಗಳಿವೆ. ನಾವಂತೂ ಎಲ್ಲಾ ದೊಣೆಯ ನೀರಿನ ರುಚಿ ನೋಡಿದೆವು, ತಣ್ಣಗೆ ಕೊರೆಯುವಂತಿದ್ದ ನೀರನ್ನು ರಾತ್ರಿ ಅಡುಗೆಗೂ ಬಳಸಿದೆವು.

ಹುತ್ರಿ ದುರ್ಗ ಒಂದು ಊರೂ ಹೌದು, ನಾಲ್ಕಾರು ಬೆಟ್ಟಗಳನ್ನು ಒಂದರ ಮೇಲೆ ಒಂದರೆಂತೆ ಪೇರಿಸಿಟ್ಟಂತ ಬೆಟ್ಟಗಳ ಸಮೂಹವೂ ಹೌದು. ಇವೆಲ್ಲವನ್ನೂ ಸುತ್ತುವರೆದಿರುವ ಒಂದು ಕೋಟೆ. ಆ ಕೋಟೆಯೊಳಗೆ ಏಳು ಸುತ್ತಿನ ಕೋಟೆ. ಈ ಕೋಟೆಯಿಂದಾಚೆಗೆ ಇರುವ ನಾಲ್ಕಾರು ಸುತ್ತಿನ ಕೋಟೆಯ ಬಸವದುರ್ಗ. ಇಷ್ಟನ್ನೂ ಸೇರಿ ಹುತ್ರಿ ದುರ್ಗ ಎಂದು ಕರೆಯುತ್ತಾರೆ.

ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ಸುಮಾರು 68ರಿಂದ 70 ಕಿ.ಮೀ ದೂರವಿರುವ ಹುತ್ರಿದುರ್ಗ ಒಂದು ದಿನದ ಚಾರಣಕ್ಕೆ, ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣ. ನಗರದಿಂದ ಮಾಗಡಿ ತಲುಪಿ. ಅಲ್ಲಿಂದ ಹುಲಿಯೂರುದುರ್ಗ ರಸ್ತೆಯಲ್ಲಿ 7 ಕಿ.ಮೀ ಸಂಚರಿಸದರಾಯಿತು. ಹ್ಯಾಂಡ್‌ಪೋಸ್ಟ್ ಎಂಬ ಜಂಕ್ಷನ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಮತ್ತೆ 6 ಕಿ.ಮೀ ಹೋದರೆ ಸಂತೆಪೇಟೆ ಎಂಬ ಸಂತೆಯಲ್ಲಿರುತ್ತೀರಿ. ಅಲ್ಲಿ ಬಲಕ್ಕೆ ತಿರುವು ಪಡೆದು, 200 ಮೀ. ನಂತರ ಮತ್ತೆ ಬಲಕ್ಕೆ ತಿರುಗಿದರೆ ಆ ರಸ್ತೆ ನಿಮ್ಮನ್ನು ಹುತ್ರಿದುರ್ಗದ ಮೊದಲ ಸುತ್ತಿನ ಕೋಟೆಯನ್ನು ದಾಟಿಸಿ ಹುತ್ರಿಬೆಟ್ಟದ ಊರಿಗೆ ಕೊಂಡೊಯ್ಯುತ್ತದೆ. ಅಲ್ಲಿಯವರೆಗೂ ಡಾಂಬರು ರಸ್ತೆ ಚೆನ್ನಾಗೇ ಇದೆ.

ಹುತ್ರಿಬೆಟ್ಟದ ಮಂದಿಗೆ ಕೋಟೆಯ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ. ನಿಧಿಗಳ್ಳರ ಹಾವಳಿ ಇರುವುದರಿಂದ ನಿಮ್ಮ ಮೇಲೆ ಅನುಮಾನ ಬಂದಲ್ಲಿ ನಿಮ್ಮ ಪೂರ್ಣ ಮಾಹಿತಿ ಪಡೆಯುತ್ತಾರೆ. ನೀವೂ ಸಹಕರಿಸಿದರೆ ಬೆಟ್ಟ ಹತ್ತಿಳಿದು ಬರಬಹುದು. ಒರಟಾಟಿಕೆ ತೋರಿದರೆ, ಮುಂದೆಹೋಗದಂತೆ ತಡೆಯುತ್ತಾರೆ.

ಸಾಕಷ್ಟು ಆಹಾರ, ತಿಂಡಿ ತಿನಿಸು, ನೀರು ಕೊಂಡೊಯ್ಯುವುದು ಒಳಿತು. ಬೆಟ್ಟ ಹತ್ತಿಳಿದು ಬರುವವರೆಗೂ ನವಿಲುಗಳು ಕೇಕೆ ಹಾಕುತ್ತಲೇ ಇರುತ್ತವೆ. ಆನಂದಿಸುವವರು ಆನಂದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.