ADVERTISEMENT

ಕಲಿತು ಕಲಿಸುವ ಉತ್ಸವ ‘ಕಥಾವನ’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ಕಲಿತು ಕಲಿಸುವ  ಉತ್ಸವ ‘ಕಥಾವನ’
ಕಲಿತು ಕಲಿಸುವ ಉತ್ಸವ ‘ಕಥಾವನ’   

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ಆಯೋಜಿಸುತ್ತಿರುವ ‘ಕಥಾವನ 2016’–ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಲೋಕವೇ ಸೃಷ್ಟಿಯಾಗಲಿದೆ. ಸುಮಾರು 40 ಶಾಲೆಗಳ  ಮಕ್ಕಳು ಹಾಗೂ ಶಿಕ್ಷಕರನ್ನು ಜತೆಯಾಗಿಸಿ ಸಾಹಿತ್ಯ ಪ್ರಜ್ಞೆ ಇಮ್ಮಡಿಗೊಳಿಸುವ ಪ್ರಯತ್ನವನ್ನು 5 ವರ್ಷಗಳಿಂದ ನಡೆಸಲಾಗುತ್ತಿದೆ.

ಕಣ್ಣರಳಿಸಿ ಕಥೆಗಳನ್ನು ಕೇಳುತ್ತಾ, ಪಾತ್ರಗಳನ್ನು ಸ್ವತಃ ಚಿತ್ರಿಸುತ್ತಾ, ತಮ್ಮದೇ ಆದ ಲೋಕವನ್ನು ಕಟ್ಟುತ್ತಾ ಕ್ರಿಯಾಶೀಲ ಕಥೆಗಾರರಂತೆ ಕಂಗೊಳಿಸುವುದು ಇಲ್ಲಿನ ಚಟುವಟಿಕೆಗಳಿಂದ ಸಾಧ್ಯವಾಗಲಿದೆ. ಮಕ್ಕಳ ಉತ್ಸಾಹಕ್ಕಂತೂ ಬ್ರೇಕ್‌ ಇರುವುದಿಲ್ಲ.

ಮಕ್ಕಳ ಸಾಹಿತ್ಯೋತ್ಸವಕ್ಕೂ ಮುನ್ನ ಶಿಕ್ಷಕರಿಗಾಗಿ ಪ್ರತ್ಯೇಕ ಕಾರ್ಯಾಗಾರ ಆಯೋಜಿಸಲಾಗಿದೆ. ಸಾಹಿತ್ಯದ ಓದಿಗೆ ಪೂರಕ ವಾತಾವರಣ ಸೃಷ್ಟಿಸುವ ಕುರಿತು ಮಾಹಿತಿ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಭಾಗಿಯಾಗಲು ಅವಕಾಶವಿದೆ.

ಕಾಲ ಬದಲಾಯಿತೆ...
ಕಾಲಕ್ಕೆ ತಕ್ಕಂತೆ ಹವ್ಯಾಸಗಳೂ ಬದಲಾಗುತ್ತಿವೆ. ಈಗ ಕಾರ್ಟೂನ್ ಅಥವಾ ಮೊಬೈಲ್, ಕಂಪ್ಯೂಟರ್ ಗೇಮ್‌ಗಳಷ್ಟೇ ಮಕ್ಕಳ ಚಟುವಟಿಕೆಗಳು ಎಂಬಂತೆ ತೋರುತ್ತಿವೆ. ಪಠ್ಯವನ್ನು ಬಿಟ್ಟು ಇತರೆ ಪುಸ್ತಕಗಳ ಕಡೆಗೆ ಮುಖ ಮಾಡಲು ಮಕ್ಕಳಿಗೆ ಸಮಯವೇ ಸಾಲುತ್ತಿಲ್ಲ.

ಪಠ್ಯದ ಕಲಿಕೆಯಲ್ಲಿಯೂ ಕಥೆಗಳ ಮಹತ್ವ ಹೆಚ್ಚು ಎನ್ನುವ ಅಂಶವನ್ನು ಅರಗಿಸಿಕೊಂಡು ‘ಕಥಾವನ’ ರೂಪಿಸಲಾಗಿದೆ. ಪಠ್ಯ ಬದಲಾಗಿದ್ದರೂ ತರಗತಿ ಹಾಗೂ ಗ್ರಂಥಾಲಯಗಳಲ್ಲಿ ಮಕ್ಕಳ ಸಾಹಿತ್ಯ ಹೆಚ್ಚಿನ ಆದ್ಯತೆ ಪಡೆದುಕೊಂಡಿಲ್ಲ. ಕಾರ್ಯಾಗಾರದಲ್ಲಿ ಚರ್ಚೆಯಾಗುವ ಪ್ರಮುಖ ವಿಷಯ ಇದು.

ಪಾಠ ಮಾಡುವಾಗ ಕಥೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು? ಸಾಹಿತ್ಯ ಚಟುವಟಿಕೆಗಳ ಮೂಲಕ ಮಕ್ಕಳ ಮನಸ್ಸನ್ನು ಉಲ್ಲಾಸದಲ್ಲಿ ಇರುವಂತೆ ಮಾಡುವ ಪ್ರಾಯೋಗಿಕ ವಿಧಾನವನ್ನೂ ಶಿಕ್ಷಕರು ಅಳವಡಿಸಿಕೊಳ್ಳಲು ಸಾಧ್ಯವಿದೆ.

ಮಾದರಿ ಶಾಲೆಗಳು
ಗ್ರಾಮೀಣ ಶಾಲೆಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ನಗರ ಸುತ್ತಮುತ್ತಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ.
ಮಾಹಿತಿಗೆ azimpremjiuniversity.edu.in ವೆಬ್‌ಸೈಟ್ ನೋಡಿ.

***
ಮಕ್ಕಳ ಸಾಹಿತ್ಯೋತ್ಸವ 2016

‘ಕಥಾವನ’ ಮಕ್ಕಳ ಸಾಹಿತ್ಯೋತ್ಸವದಲ್ಲಿ 2,000 ಮಕ್ಕಳು ಮತ್ತು 200ಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗುವ ನಿರೀಕ್ಷೆ ಇದೆ. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

**
ಹೀಗಿದೆ ಕಾರ್ಯಕ್ರಮ

* ಅ.8– ಗ್ರಂಥಾಲಯ ಮತ್ತು ಸಾಹಿತ್ಯ ಕುರಿತ ಕಾರ್ಯಾಗಾರ
ಸ್ಥಳ: ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ.

* ನ.14: ಮಕ್ಕಳ ಸಾಹಿತ್ಯೋತ್ಸವ
ಸ್ಥಳ: ಬಾಲಕರ ಮಾದರಿ ಸರ್ಕಾರಿ ಶಾಲೆ, ಅತ್ತಿಬೆಲೆ

* ನವೆಂಬರ್‌ 15: ಗ್ರಂಥಾಲಯ ಮತ್ತು ಸಾಹಿತ್ಯ ಕುರಿತ ಕಾರ್ಯಾಗಾರ
ಸ್ಥಳ: ಶಿಕ್ಷಕರ ಕಲಿಕಾ ಕೇಂದ್ರ, ಸರ್ಜಾಪುರ

**
ಸಾಹಿತ್ಯಾಸಕ್ತಿ, ಪುಸ್ತಕ ಪ್ರೀತಿ ಬೆಳೆಯಬೇಕು ಹಾಗೂ ಪೂರಕ ಓದಿನ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ ಮತ್ತು ಸಾಹಿತ್ಯೋತ್ಸವದ ಮೂಲಕ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಐದು ವರ್ಷಗಳಿಂದ ಆಯೋಜಿಸಲಾಗುತ್ತಿದೆ.
–ಎಸ್‌.ವಿ.ಮಂಜುನಾಥ್‌, ಮುಖ್ಯಸ್ಥರು (ರಾಜ್ಯ), ಅಜೀಂ ಪ್ರೇಮ್‌ಜೀ ಫೌಂಡೇಷನ್‌

**
–ಹೇಮಂತ್‌ ಕುಮಾರ್‌ ಎಸ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.