ADVERTISEMENT

ಕಲೆಯ ವಿಭಿನ್ನ ಕವಲು...

ವಿದ್ಯಾಶ್ರೀ ಎಸ್.
Published 28 ಡಿಸೆಂಬರ್ 2016, 19:30 IST
Last Updated 28 ಡಿಸೆಂಬರ್ 2016, 19:30 IST
ಕಲೆಯ ವಿಭಿನ್ನ ಕವಲು...
ಕಲೆಯ ವಿಭಿನ್ನ ಕವಲು...   

ಕಣ್ಣಿಗೆ ಕಾಣಿಸಿದ ಕಲಾತ್ಮಕ ವಸ್ತುಗಳನ್ನು ತಾವೂ ಮರು ರೂಪಿಸಲು ಯತ್ನಿಸುತ್ತಿದ್ದವರು ಪುಷ್ಪಾ ದೇವಿ. ಇವರ ಹವ್ಯಾಸಕ್ಕೆ ಹಲವು ಚಹರೆಗಳಿವೆ. ಮನಸ್ಸಿಗೆ ಖುಷಿ ನೀಡುವ ಕೆಲಸವನ್ನು ಹವ್ಯಾಸವಾಗಿ ರೂಢಿಸಿಕೊಂಡವರು ಇವರು.

ಚಂದದ ಕಿವಿಯೋಲೆ, ಬಣ್ಣಬಣ್ಣದ ಮಣಿಗಳ ಸುಂದರ ಹಾರ, ಅಡಿಕೆಯಲ್ಲಿ ಗಣಪತಿ, ಕುಂಚದ ಸರಾಗ ನಡಿಗೆಯಲ್ಲಿ ಒಡಮೂಡಿದ ಬಗೆಬಗೆ ಕಲಾಕೃತಿಗಳು, ಹೀಗೆ ಇವರ ಸೃಜನಶೀಲತೆ ಹಲವು ಕವಲುಗಳಲ್ಲಿ ಚಿಗುರೊಡೆದಿವೆ.

ಶಿಕ್ಷಕಿಯಾಗಿದ್ದ ಇವರು ಈಗ ನಿವೃತ್ತರಾಗಿದ್ದಾರೆ. ಉದ್ಯೋಗದಲ್ಲಿದ್ದಾಗಲೂ ತಮ್ಮ  ಹವ್ಯಾಸಕ್ಕೆಂದು ಇವರು ಸಮಯವನ್ನು ಮೀಸಲಿಡುತ್ತಿದ್ದರು. ಜೊತೆಗೆ ತಾವು ಪರಿಣಿತಿ ಪಡೆದ ಈ ಕಲೆಯನ್ನು ಮಕ್ಕಳಿಗೂ ಹೇಳಿಕೊಡುತ್ತಿದ್ದರು. ‘ಓದಿನ ಜೊತೆಗೆ ಮಕ್ಕಳಿಗೆ ಸೃಜನಾತ್ಮಕ ಕಲೆಯ ಬಗ್ಗೆ ಅರಿವು ಬೆಳೆಸಿದಾಗ ಅವರ ಕೌಶಲ ಹೆಚ್ಚುತ್ತದೆ’ ಎಂಬುದು ಇವರ ಅನಿಸಿಕೆ.

‘ಉದ್ಯೋಗದಲ್ಲಿದ್ದಾಗ ಮನೆಯ ಜವಾಬ್ದಾರಿಯ ಜೊತೆಗೆ ಈ ಕಲೆಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ಈಗ ಸಾಕಷ್ಟು ಸಮಯ ದೊರಕುತ್ತದೆ. ದಿನದ ಬಹುಪಾಲು ಈ ಹವ್ಯಾಸಕ್ಕೆಂದೆ ಮೀಸಲಿಟ್ಟಿದ್ದೇನೆ. ಸಮಯ ಕಳೆಯುವುದೇ ತಿಳಿಯುವುದಿಲ್ಲ’ ಎನ್ನುತ್ತಾರೆ ಇವರು. ಮಾರ್ಬಲ್‌ ರಂಗೋಲಿ, ಸುಂದರ ವಾದ ಹೂಕುಂಡಗಳನ್ನು ಮತ್ತಷ್ಟು ಚೆಂದವಾಗಿಸಿರುವ ಕುಂದನ್‌ ಕುಸುರಿಗಳು ಇವರ ಪ್ರತಿಭೆಗೆ ಸಾಕ್ಷಿ.

‘ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ಈ ಸಮಯದಲ್ಲಿ ಹೂಗಳ ಬೆಲೆ ಮೂರು ಪಟ್ಟು ಹೆಚ್ಚಾಗುತ್ತದೆ. ಹೂಗಳು ಒಂದೆರಡು ದಿನದಲ್ಲಿ ಬಾಡಿ ಹೋಗುತ್ತವೆ. ಹಾಗಾಗಿ ನಾವು ತಯಾರಿಸುವ ಬಾಡದ ಹೂವಿನ ಮಾಲೆ ನಿಮ್ಮ ಹಣವನ್ನು ಉಳಿಸುತ್ತದೆ’ ಎನ್ನುತ್ತಾರೆ ಇವರು.
ಇವರ ಮನೆಯೊಳಗೆ ಕಾಲಿಟ್ಟರೆ ನಿಮ್ಮನ್ನು ಸ್ವಾಗತಿಸುವುದು ಕಸದಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಹತ್ತಿ, ತಾಂಬೂಲ ಚೀಲ, ಉಳಿದ ಉಲ್ಲನ್ ದಾರಗಳಿಂದ  ತಯಾರಾದ ಹೂವುಗಳು, ತೋರಣಗಳು, ಹಾರಗಳು, ಆರತಿ ತಟ್ಟೆ ಮತ್ತು ಬೆಂಡಿನ ಮಂಟಪ ಇತ್ಯಾದಿ.

ಹೆಚ್ಚೇನೂ ಕಷ್ಟಕೊಡದೆ ಸುಲಭದಲ್ಲಿ ತಯಾರಾಗುವ ಈ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗೆಯನ್ನು  ಸುಲಭವಾಗಿ ವಿವರಿಸುತ್ತಾರೆ ಪುಷ್ಪಾ.
‘ಚಮಕಿ, ಕುಂದನ್‌ಗಳಿಂದ ಮನೆಯ ಅಲಂಕಾರಿಕ ಸಾಮಗ್ರಿಗಳನ್ನು ಮತ್ತಷ್ಟು ಚೆಂದವಾಗಿಸಬಹುದು. ಸಾಮಾನ್ಯವಾಗಿ ಹಣತೆಗಳನ್ನು ನೆಲದ ಮೇಲೆ ಇರಿಸಲಾಗುತ್ತದೆ. ನಾವು ಅದನ್ನು ಇಡುವ ಸಲುವಾಗಿಯೇ ಸ್ಟ್ಯಾಂಡ್‌ಗಳನ್ನು ವಿನ್ಯಾಸ ಮಾಡಿದ್ದೇವೆ. ಸ್ಟ್ಯಾಂಡ್‌ಗಳು ದೀಪಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ’ ಎನ್ನುತ್ತಾರೆ ಪುಷ್ಪಾ.

‘ಮದುವೆ, ನಾಮಕರಣ, ಪೂಜೆ... ಹೀಗೆ ಬಹುತೇಕ ಕಾರ್ಯಕ್ರಮಗಳಿಗೆ ಹೊಂದಿಕೆಯಾಗುವ ಉಡುಗೊರೆಗಳನ್ನು ನಾನೇ ಸಿದ್ಧಪಡಿಸಿಕೊಡುತ್ತೇನೆ. ಕಡಿಮೆ ಖರ್ಚಿನಲ್ಲಿ ಮನೆಗೆ ಉಪಯೋಗವಾಗುವ ವಸ್ತುಗಳು ಸಿಕ್ಕಂತೆ ಆಗುತ್ತದೆ’ ಎನ್ನುತ್ತಾರೆ ಪುಷ್ಪಾ.

ಕಲಾಕೃತಿ ನಿರ್ಮಾಣ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ಯಾರಿಂದಲೂ ಕಲಿತಿಲ್ಲ. ಟಿ.ವಿ ಕಾರ್ಯಕ್ರಮಗಳನ್ನು ಗಮನಿಸುತ್ತಾ ತಾವೂ ಪ್ರಯೋಗ ಆರಂಭಿಸಿದರು. ಸಂಬಂಧಿಕರ ಮನೆಗಳಲ್ಲಿ ಕಾಣಿಸಿದ ಕಲಾತ್ಮಕ ವಸ್ತುಗಳನ್ನು ಕೇಳಿ ಪಡೆದು ಮನೆಗೆ ತರುತ್ತಿದ್ದರು. ಅದರಂತೆಯೇ ತಾವೂ ಕಲಾಕೃತಿಗಳನ್ನು ರೂಪಿಸಲು ಯತ್ನಿಸುತ್ತಿದ್ದರು. ಪ್ರಯತ್ನವಿಂದಲೇ ಕಲೆಯನ್ನು ಒಲಿಸಿಕೊಂಡರು.

ಇವರ ಹವ್ಯಾಸಕ್ಕೆ ಈಗ ಮಗಳೂ ಸಹ ಜೊತೆಯಾಗಿದ್ದಾರೆ. ಇಬ್ಬರೂ ಸೇರಿ ರೇಷ್ಮೆ ದಾರಗಳಲ್ಲಿ ಬಳೆ, ಜುಮುಕಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಸಿಲ್ಕ್‌ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂದೆ ಇವುಗಳಿಂದ ಸರಗಳನ್ನು ಮಾಡುವ ಯೋಜನೆಯಿದೆ ಎನ್ನುತ್ತಾರೆ ಪುಷ್ಪಾ.  (ಸಂಪರ್ಕ ಸಂಖ್ಯೆ– 9611224411). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.