ADVERTISEMENT

ಕಾಡು, ಪ್ರಾಣಿಗಳ ಸಂಗಾತಿ

ಸುಶೀಲಾ ಡೋಣೂರ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಕಾಡು, ಪ್ರಾಣಿಗಳ ಸಂಗಾತಿ
ಕಾಡು, ಪ್ರಾಣಿಗಳ ಸಂಗಾತಿ   

‘ಸುಮಾರು ಎರಡು ದಶಕಗಳ ಹಿಂದಿನ ಮಾತದು. ನಾನು ಹೈಸ್ಕೂಲಿನಲ್ಲಿ ಫೇಲ್‌ ಆಗಿದ್ದೆ. ನಿಮಗೆ ಗೊತ್ತಲ್ಲ, ‘ಫೇಲ್‌’ ಅಂದ್ರೆ ಮುಗೀತು. ನಮ್ಮಲ್ಲಿ ಅದು ಜೀವನದ ಅಂತ್ಯ ‘ದಿ ಎಂಡ್‌’. ಆದ್ರೆ ಅಪ್ಪ ಹೇಳಿದ್ರು, ‘ಇದು ಜೀವನದ ಅಂತ್ಯವಲ್ಲ, ಆರಂಭ. ಬದುಕಿಗೆ ಹಲವು ದಾರಿಗಳಿವೆ. ಯಾವುದು ಬೇಕೋ ಅದನ್ನು ಆರಿಸಿಕೊ’. ಅವರ ಮಾತನ್ನು ಗಂಭೀರವಾಗಿ ತಗೊಂಡೆ. ಅಲ್ಲಿಂದಲೇ ನಾನು ಹೊಸ ಬದುಕನ್ನು ಆರಂಭಿಸಬೇಕಿತ್ತು.

ಆದರೆ ಏನು ಮಾಡಬೇಕು? ಎಲ್ಲಿ ಹೆಜ್ಜೆಯೂರಬೇಕು? ಯಾವ ದಾರಿ ನನ್ನನ್ನು ಸೋಲಿಸಬಹುದು? ಯಾವ ದಾರಿಯಲ್ಲಿ ಗೆಲ್ಲಬಹುದು? ನನಗೆ ಏನೇನೂ ಗೊತ್ತಿರಲಿಲ್ಲ. ಆದರೂ ಅಮ್ಮ–ಅಪ್ಪನ ಮಮತೆಯ ಮಡಿಲು, ಆಡಿ ಬೆಳೆದ ಪ್ರೀತಿಯ ಊರು ಎಲ್ಲವನ್ನೂ ಬಿಟ್ಟು, ಮನದ ತುಂಬಾ ಬೇಸರ ತುಂಬಿಕೊಂಡು ಬೆಂಗಳೂರಿನಿಂದ ಅಮೆರಿಕಕ್ಕೆ ಹೊರಟೆ.

ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಲು ನಿರ್ಧರಿಸಿದ್ದೆ. ಆದರೆ ಮೊದಲೇ ಮನದಲ್ಲಿ ನೆಲೆಯೂರಿದ್ದ ಕಾಡಿನ ಪ್ರೀತಿ ನನ್ನನ್ನು ಅಲ್ಲಿಗೂ ಅಟ್ಟಿಸಿಕೊಂಡು ಬಂದಿತ್ತು. ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಅಮೆರಿಕದಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರಕಿತು. ನಾನು ಕಾಡಿಗೆ ಹತ್ತಿರವಾಗುತ್ತಾ ಹೋದೆ.

ADVERTISEMENT

ನನಗೆ ಯಾವಾಗಿನಿಂದ ಈ ಪ್ರೀತಿ ಬೆಳೀತು ಅಂತ ಹೇಳೋದು ಕಷ್ಟವೇ. ಅಪ್ಪ ಜಿಕೆವಿಕೆಯಲ್ಲಿ ಫ್ರೊಫೆಸರ್‌ ಆಗಿದ್ರು. ಫೋಟೊಗ್ರಫಿ ಅವರ ಹವ್ಯಾಸ. ನನ್ನ ಚಿಕ್ಕಪ್ಪ ಪ್ರಕಾಶ್‌ ಕಡೂರ್‌ ಅಂತ, ಅವರಿಗಂತೂ ವೈಲ್ಡ್‌ಲೈಫ್‌ ಬಗ್ಗೆ ಬಹಳ ಆಸಕ್ತಿ. ಅವರೊಂದಿಗೆ ಚಿಕ್ಕಂದಿನಿಂದಲೂ ಕಾಡಿಗೆಲ್ಲ ಅಲೆಯುತ್ತಿದ್ದುದುಂಟು. ಅಪ್ಪನ ಬಳಿ ಒಂದು ಹಳೆಯ ಕ್ಯಾಮೆರಾ ಇತ್ತು. ಅದನ್ನು ಬಳಸುವ ಸಂಪೂರ್ಣ ಸ್ವಾತಂತ್ರ್ಯವೂ ನನಗಿತ್ತು.

‘ಸಹ್ಯಾದ್ರಿ: ಮೌಂಟೇನ್‌ ಆಫ್‌ ದಿ ಮಾನ್ಸೂನ್‌’ (Sahyadris: Mountains of the mansoon) ನನಗೆ ಒದಗಿಬಂದ ಮೊದಲ ಅವಕಾಶ. ಒಂದು ತಿಂಗಳಲ್ಲಿ ಮುಗಿಯಬೇಕಿದ್ದ ಸಾಕ್ಷ್ಯಚಿತ್ರ ಸಂಪೂರ್ಣಗೊಳ್ಳಲು ಮೂರು ವರ್ಷ ತೆಗೆದುಕೊಂಡಿತ್ತು. ಕ್ಯಾಮೆರಾ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ.

90ರ ದಶಕದಲ್ಲಿ ಇಂಟರ್‌ನೆಟ್‌- ಫೋಟೊಗ್ರಫಿ ಸಹ ಇಷ್ಟೊಂದು ಮುಂದುವರಿದಿರಲಿಲ್ಲ, ಈ ಬಗೆಗೆ ನನಗಿದ್ದ ಪ್ರೀತಿಯನ್ನು ಹೇಗೆ ಪೋಷಿಸಬೇಕೆಂದು ಸರಿಯಾಗಿ ಗೊತ್ತಿರಲಿಲ್ಲ. ಕಾಲೇಜು ಓದುತ್ತ, ಜೊತೆಗೇ ಫೋಟೊಗ್ರಫಿ ಕೋರ್ಸ್‌ ಮಾಡುತ್ತ, ತಿಳಿದುಕೊಳ್ಳುತ್ತ  ಸಾಕ್ಷ್ಯಚಿತ್ರ ತಯಾರಿಸಿದೆ.

ಆಗುಂಬೆಯ ಕಾಳಿಂಗಸರ್ಪಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದೇವೆ. ಪಶ್ಚಿಮ ಘಟ್ಟದ ಬಂಡಿಪುರ, ನಾಗರಹೊಳೆ ಸೇರಿದಂತೆ ದೇಶ–ವಿದೇಶಗಳ ಸಾಕಷ್ಟು ಕಾಡುಗಳನ್ನು ಸುತ್ತಿದ್ದೇನೆ. ನನಗಂತೂ ಕಾಡು ಎಂದರೆ ಸಾಕು ಮೈಯೊಳಗಿನ ಚೈತನ್ಯ ಇಮ್ಮಡಿಗೊಳ್ಳುತ್ತದೆ.

ಬಿಬಿಸಿ ಜೊತೆಗೂಡಿ ಪ್ಲಾನೆಟ್‌ ಅರ್ತ್‌–2 ಯೋಜನೆಯಡಿ ಕೆಲಸ ಮಾಡಿದ್ದು ಜೀವನದ ಅವಿಸ್ಮರಣೀಯ ಘಟನೆ. 40 ದೇಶಗಳನ್ನು ಸುತ್ತಿ ಮಾಡಿದ ಈ ಯೋಜನೆ ನನ್ನ ವೃತ್ತಿ ಬದುಕಿನ ಮಹತ್ವದ ಮೈಲುಗಲ್ಲು.

ವನ್ಯಜೀವಿ ಛಾಯಾಗ್ರಹಣ ಹಾಗೂ ಸಾಕ್ಷ್ಯಚಿತ್ರಗಳ ವಲಯದಲ್ಲಿ ಸಂದೇಶ್ ಕಡೂರ್‌ ಅವರ ಹೆಸರು ಚಿರಪರಿಚಿತ.  ತಮ್ಮ ಜೀವನದ ಬಹುತೇಕ ಸಮಯವನ್ನು ಕಾಡಿನಲ್ಲಿ, ಕಾಡುಪ್ರಾಣಿಗಳೊಂದಿಗೆ ಕಳೆಯುತ್ತ, ಅದರಲ್ಲಿಯೇ ಸಾರ್ಥಕ್ಯ ಕಂಡವರು.

ಕಿಂಗ್‌ ಕೋಬ್ರಾದಿಂದ (ಕಾಳಿಂಗಸರ್ಪ) ಹಿಡಿದು ಚಿರತೆ, ಹುಲಿ, ಸಿಂಹ, ಆನೆ, ಅಳಿಲುಗಳವರೆಗಿನ ವಿಷಯಗಳೊಂದಿಗಿನ ಅವರ ಸಾಕ್ಷ್ಯಚಿತ್ರಗಳು ಬಿಬಿಸಿ, ಡಿಸ್ಕವರಿ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್  ಚಾನೆಲ್‌ನಲ್ಲಿ ವಿಶ್ವಾದ್ಯಂತ ಪ್ರಸಾರಗೊಂಡಿವೆ. ಅವರು ಪಡೆದ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಎರಡು ಬಾರಿ ಅವರ ಹೆಸರು ಗ್ರೀನ್‌ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

*


ನಮ್ಮ ಶ್ರೀಮಂತ ಕಾಡುಗಳು ಬಡವಾಗುತ್ತಿವೆ, ವನ್ಯಜೀವಿಗಳು ಅಳಿವಿನಂಚಿಗೆ ಸರಿಯುತ್ತಿವೆ. ಇದನ್ನು ಉಳಿಸಿ, ಬೆಳೆಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ.
–ಸಂದೇಶ್‌ ಕಡೂರ್ ವನ್ಯಜೀವಿ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.