ADVERTISEMENT

ಕೆಲಸದ ಬಗ್ಗೆ ವಿಶ್ವಾಸವಿರಲಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST

‘ಎನ್‌ಎಚ್‌10 ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಗಬಹುದು ಎಂದು ನಾವು ಮೊದಲೇ ನಿರೀಕ್ಷಿಸಿದ್ದೆವು’ ಎಂದಿದ್ದಾರೆ ಚಿತ್ರದ ನಿರ್ಮಾಪಕಿಯೂ ಆಗಿರುವ ನಟಿ ಅನುಷ್ಕಾ ಶರ್ಮಾ.

ಎನ್‌ಎಚ್‌10 ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅನುಷ್ಕಾ, ನಮ್ಮ ಕೆಲಸದ ಬಗ್ಗೆ ಮೊದಲು ನಮಗೆ ವಿಶ್ವಾಸ ಇರಬೇಕು. ನಮ್ಮ ಕೆಲಸ ನಮ್ಮ ಆತ್ಮಸಾಕ್ಷಿ ಮೆಚ್ಚುವಂತಿರಬೇಕು. ಸೋಲು–ಗೆಲುವಿನ ಪ್ರಶ್ನೆ ನಂತರದ್ದು ಎಂದಿದ್ದಾರೆ.
‘ನಮಗೆ ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಕಥಾವಸ್ತುವಿಗೆ ನ್ಯಾಯ ಒದಗಿಸುವುದು, ಕಥೆಯ ನೈಜತೆಯನ್ನು ಉಳಿಸಿಕೊಳ್ಳುವುದು ನಮಗೆ ಹೆಚ್ಚು ಮುಖ್ಯವಾಗಿತ್ತು. ಅಷ್ಟಕ್ಕೂ ಎಲ್ಲಾ ಚಿತ್ರಗಳೂ ಎಲ್ಲರಿಗೂ ಅಲ್ಲ. ಪ್ರತಿಯೊಂದು ಚಿತ್ರಕ್ಕೂ ಅದರದೇ ಆದ ವೀಕ್ಷಕ ವರ್ಗ ಇರುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪಿಕೆ ತಂದು ಕೊಟ್ಟ ಭರ್ಜರಿ ಯಶಸ್ಸಿನ ನಂತರ ಮತ್ತಷ್ಟು ಆತ್ಮವಿಶ್ವಾಸವನ್ನು ತುಂಬಿಕೊಂಡ ಅನುಷ್ಕಾ ಶರ್ಮಾ, ಎನ್‌ಎಚ್‌10 ಬಗ್ಗೆ ಅದೇ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತದೆ.

‘ನಾವು ನಟ–ನಟಿಯರು ಚಿತ್ರದ ಎಲ್ಲಾ ಯಶಸ್ಸಿಗೆ ನಾವೇ ಕಾರಣ ಎಂದು ಬೀಗಬಾರದು. ಹಾಗೆ ಕಲ್ಪಿಸಿಕೊಂಡರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಏಕೆಂದರೆ ನಾವು ಅಭಿಮಾನಿಗಳನ್ನು ಚಿತ್ರಮಂದಿರಗಳವರೆಗೂ ಕರೆದುಕೊಂಡು ಬರಬಹುದಷ್ಟೇ. ಅನಂತರ ಚಿತ್ರದ ಸೋಲು–ಗೆಲುವು ನಿರ್ಧಾರವಾಗುವುದು ಅದರ ಕಥೆ ಮತ್ತು ಚಿತ್ರಣದ ಆಧಾರದ ಮೇಲೆ’ ಎಂದು ಅವರು ಪಾಠ ಮಾಡಿದ್ದಾರೆ.

ಅದೇನೇ ಇರಲಿ, ನವದೀಪ್ ಸಿಂಗ್ ನಿರ್ದೇಶನದ ಎನ್.ಎಚ್.10 ಚಿತ್ರ ಯುವ ಜೋಡಿಯೊಂದು ಪ್ರವಾಸದ ವೇಳೆ ಪಡಬಾರದ ಪಾಡು ಪಡುವ ಕಥೆ ಹೊಂದಿದೆ. ಎನ್.ಎಚ್.10 ರಾಷ್ಟ್ರೀಯ ಹೆದ್ದಾರಿಯ ಸುಂದರ ನೋಟವಿರುವ ಸಿನಿಮಾ ಪೋಸ್ಟರ್ ಗಳು ಅಭಿಮಾನಿಗಳ ಕೌತುಕ ಹೆಚ್ಚಿಸುತ್ತಿವೆ.

26ರ ಹರೆಯದ ಅನುಷ್ಕಾ ತಾನು ನಾಯಕಿಯಾಗುವ ಜೊತೆಗೆ ಇದೇ ಮೊದಲ ಬಾರಿಗೆ ನಿರ್ಮಾಪಕಿಯ ಪಾತ್ರವನ್ನೂ ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.