ADVERTISEMENT

ಕೊನೆಯ ದಿನದ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಪೂನಂ ವೋರಾ ಅವರ ವಿನ್ಯಾಸದ ‘ಉತ್ಸವ್‌’ ಸಂಗ್ರಹಗಳ ಪ್ರದರ್ಶನದೊಂದಿಗೆ ಆರಂಭಗೊಂಡ ಷೋ, ರಾಕಿ ಎಸ್‌. ವಿನ್ಯಾಸದ ‘ರಾಕಿ ಸ್ಟಾರ್‌–ರೆಸಾರ್ಟ್‌’ ದಿರಿಸುಗಳ ಅನಾವರಣದೊಂದಿಗೆ ತೆರೆಬಿದ್ದಿತು.

ಕಿಂಗ್‌ಫಿಷರ್‌ ಅಲ್ಟ್ರಾ ಸ್ಟೈಲ್‌ವೀಕ್‌ನ ಅಂತಿಮ ದಿನ ಗ್ಲಾಮರ್‌, ಸೊಬಗು ಮತ್ತು ವೈಭವದಿಂದ ಕೂಡಿತ್ತು. ದಕ್ಷಿಣ ಭಾರತದ ಖ್ಯಾತ ನಟಿ ಪಾರ್ವತಿ ಒಮ್ಮನ್‌ಕುಟ್ಟನ್‌, ತನ್ವಿ ವ್ಯಾಸ್‌, ಮಾಜಿ ಮಿಸಸ್‌ ಇಂಡಿಯಾ ರೀತ್‌ ಸಾಹು, ಸಿಮ್ರನ್‌ ಕೌರ್‌ ಮತ್ತು ಎವ್ಲಿನ್‌ ಶರ್ಮಾ ಕೊನೆ ದಿನದ ಸ್ಟಾರ್‌ ಷೋ ಸ್ಟಾಪರ್‌ಗಳು.

ವೇಳಾಪಟ್ಟಿಯಂತೆ ಸಂಜೆ ಏಳಕ್ಕೆ ಆರಂಭಗೊಳ್ಳಬೇಕಿದ್ದ ಷೋ ಶುರುವಾಗಿದ್ದು ರಾತ್ರಿ 9.10ಕ್ಕೆ. ಪೂನಂ ವೋರಾ ಅವರ ‘ಉತ್ಸವ್‌’ ಸಂಗ್ರಹದೊಂದಿಗೆ ಷೋಗೆ ಚಾಲನೆ ಸಿಕ್ಕಿತು. ಕಣ್ಣುಕುಕ್ಕುವ ಬಣ್ಣದ ವಸ್ತ್ರಗಳಿಗೆ ಆಕರ್ಷಕ ಕಸೂತಿ ಇದ್ದ ಪೂನಂ ವಿನ್ಯಾಸದ ಚೂಡಿ, ಘಾಗ್ರಾ, ಲೆಹೆಂಗಾಗಳು ರ್‌್ಯಾಂಪ್‌ ಮೇಲೆ ಅಷ್ಟೇನೂ ಮಿಂಚು ಹರಿಸಲಿಲ್ಲ. ರೂಪದರ್ಶಿಗಳ ಕಳಾಹೀನ ಮುಖ ಮತ್ತು ನಿರ್ಭಾವುಕ ನಡಿಗೆ ಇದಕ್ಕೆ ಕಾರಣವಾಗಿತ್ತು. ಪೂನಂ ಸಂಗ್ರಹಕ್ಕೆ ಕಳೆ ತುಂಬಿದ್ದು ತಮಿಳು ನಟಿ ತನ್ವಿ ವ್ಯಾಸ್‌. ತಿಳಿ ಗುಲಾಬಿ ಮತ್ತು ಚಿನ್ನದ ಬಣ್ಣವಿದ್ದ ಲೆಹೆಂಗಾ ಧರಿಸಿದ್ದ ತನ್ವಿ ರ್‌್ಯಾಂಪ್‌ ಮೇಲೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ಮಿಂಚು ಹರಿಸಿದರು. ವೈನ್‌, ಬಿಯರ್‌ ಹೀರಿ ತುಸು ನಶೆ ಏರಿಸಿಕೊಂಡಿದ್ದ ಫ್ಯಾಷನ್‌ಪ್ರಿಯರು ತನ್ವಿ ಕ್ಯಾಟ್‌ವಾಕ್‌ ನೋಡಿ ಕೊಂಚ ಹಸನ್ಮುಖಿಯಾದರು.

ಪೂನಂ ನಂತರ ಕೋಲ್ಕತ್ತ ಮೂಲದ ವಿನ್ಯಾಸಗಾರ್ತಿ ಅಗ್ನಿ ಮಿತ್ರ ಪಾಲ್‌ ಸರದಿ. ಈಕೆ ವಿನ್ಯಾಸ ಮಾಡಿದ್ದ ‘ವಿಮೆನ್‌ ಆಫ್‌ ಸಬ್ಸ್‌ಟೆನ್ಸ್‌’ ಸಂಗ್ರಹ ವೀಕ್ಷಕರ ಉಲ್ಲಾಸಕ್ಕೆ ಕಾರಣವಾಯಿತು. ತುಂಡುಡುಗೆಗಿಂತಲೂ ಭಾರತೀಯ ಹೆಣ್ಣುಮಕ್ಕಳು ಸೀರೆಯಲ್ಲಿ ಸೆಕ್ಸಿಯಾಗಿ ಕಾಣುತ್ತಾರೆ ಎನ್ನುವುದು ಇವರ ವಿನ್ಯಾಸದಲ್ಲಿ ಮತ್ತೊಮ್ಮೆ ರುಜುವಾತಾಯಿತು. ಕಣ್ಮನ ತಣಿಸುವ ಬಣ್ಣಗಳ ಆಯ್ಕೆ, ಅದಕ್ಕೆ ಹೊಂದಿಕೊಂಡಂತಿದ್ದ ಸೂಕ್ಷ್ಮ ಕಸೂತಿ ಸೊಬಗು ಈ ಸಂಗ್ರಹದ ವಿಶೇಷ. ಇಂದಿನ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ್ದ ಈ ಸಂಗ್ರಹ ಎಲ್ಲರ ಮೆಚ್ಚುಗೆ ಪಡೆಯಿತು.

ಮೊದಲ ಷೋನಲ್ಲಿ ನಿರ್ಭಾವುಕ ಮುಖದ ರೂಪದರ್ಶಿಗಳ ನಡಿಗೆ ನೋಡಿ ಮುಖ ಕಿವುಚಿದ್ದ ಫ್ಯಾಷನ್‌ಪ್ರಿಯರು ಎರಡನೇ ಷೋನಲ್ಲಿ ಭಾವಪ್ರಚೋದನೆಗೆ ಒಳಗಾದರು. ಬಳ್ಳಿಯಂತೆ ಬಳುಕುವ ರೂಪದರ್ಶಿಗಳು ತಮ್ಮ ತಲೆಗೂದಲನ್ನು ತುರುಬು ಕಟ್ಟಿ ಅದಕ್ಕೆ ದುಂಡು ಮಲ್ಲಿಗೆ ಹೂ ಸುತ್ತಿಕೊಂಡಿದ್ದರು. ಬಣ್ಣ ಬಣ್ಣದ ಸೀರೆಯನ್ನು ಸೆಕ್ಸಿಯಾಗಿ ಉಟ್ಟುಕೊಂಡಿದ್ದರು. ಕತ್ತಿನ ಕೆಳಭಾಗದ ಚೆಲುವು ಆಕರ್ಷಕವಾಗಿ ಕಾಣಿಸುವಂತೆ ಹೊದ್ದುಕೊಂಡಿದ್ದ ಸೆರಗು ಕೆಲವರ ಕಣ್ಣು ಕೀಲಿಸದಂತೆ ಮಾಡಿತ್ತು. ಇವರೆಲ್ಲರೂ ಸಾಂಪ್ರದಾಯಿಕ ಕ್ಯಾಟ್‌ವಾಕ್‌ ಅನ್ನು ಬದಿಗೊತ್ತಿ ಬಂಗಾಳಿ ನೃತ್ಯ ಮಾಡುತ್ತಾ ಭಿನ್ನ ರೀತಿಯಲ್ಲಿ ಕ್ಯಾಟ್‌ವಾಕ್‌ ಮಾಡಿದರು. ಉಚ್ಚಸ್ಥಾಯಿಯಲ್ಲಿ ತೇಲಿಬರುತ್ತಿದ್ದ ಬಂಗಾಳಿ ಗೀತೆಗೆ ರೂಪದರ್ಶಿಗಳು ಕುಣಿಯುತ್ತಾ ರ್‌್ಯಾಂಪ್‌ವಾಕ್‌ ಮಾಡಿದಾಗ ಅನೇಕರು ವಿಷಲ್‌, ಚಪ್ಪಾಳೆ ಮತ್ತು ಕೇಕೆ ಹಾಕಿ ಖುಷಿಪಟ್ಟರು.

ಅಗ್ನಿ ಮಿತ್ರ ಅವರ ವಿನ್ಯಾಸಕ್ಕೆ ಖ್ಯಾತ ನಟಿ ಪಾರ್ವತಿ ಒಮ್ಮನ್‌ಕುಟ್ಟನ್‌ ಮತ್ತು ಮಾಜಿ ಮಿಸಸ್‌ ಇಂಡಿಯಾ ಸ್ಪರ್ಧೆಯ ಮೊದಲ ರನ್ನರ್‌ಅಪ್‌ ರೀತು ಸಾಹು ಷೋಗೆ ಹೆಜ್ಜೆ ಹಾಕಿ ಇನ್ನಷ್ಟು ಕಳೆಕಟ್ಟಿದರು. ಮೊದಲ ಷೋನ ಕೊನೆಯಲ್ಲಿ ನಟಿ ತನ್ವಿ ವ್ಯಾಸ್‌ ಹಚ್ಚಿದ ಗ್ಲಾಮರ್‌ ಕಿಡಿ ಪಾರ್ವತಿ ಮತ್ತು ರೀತ್‌ ಸಾಹು ಆಗಮನದೊಂದಿಗೆ ಪ್ರಜ್ವಲಿಸಿತು.

ನಂತರ ಜತಿನ್‌ ಕೊಚ್ಚಾರ್‌ ವಿನ್ಯಾಸದ ‘ಬ್ಲೀಡಿಂಗ್‌ ಲಸ್ಟ್‌’ ಸಂಗ್ರಹ ಫ್ಯಾಷನ್‌ ಪ್ರಿಯರ ಮನಗೆದ್ದಿತು. ನಟಿ, ಗ್ಲ್ಯಾಮ್‌ ದಿವಾ ಸಿಮ್ರನ್‌ ಕೌರ್‌ ಈ ಸಂಗ್ರಹದ ಷೋ ಸ್ಟಾಪರ್‌ ಆಗಿ ಹೆಜ್ಜೆ ಹಾಕಿದರು.

ಮೊದಲ ಮೂರು ಪ್ರದರ್ಶನದ್ದೂ ಒಂದು ತೂಕವಾದರೆ, ಕೊನೆಯ ಷೋನ ಖದರ್ರೇ ಬೇರೆ ಇತ್ತು. ರಾಕಿ ಎಸ್‌. ವಿನ್ಯಾಸದ ‘ರಾಕಿ ಸ್ಟಾರ್‌ ರೆಸಾರ್ಟ್‌್’ ಸಂಗ್ರಹ ಲೇಸ್‌, ಟ್ಯೂಲ್ಲೆ, ಲೆದರ್‌ ಹಾಗೂ ವೆಲ್ವೆಟ್‌ಗಳ ಮಿಶ್ರಣವಾಗಿತ್ತು. ಬಾಲಿವುಡ್‌ ನಟಿ ಎವ್ಲಿನ್‌ ಶರ್ಮಾ ಅವರು ರಾಕಿ ವಿನ್ಯಾಸಕ್ಕೆ ಮೈಯೊಡ್ಡಿದ್ದರು. ಕೊನೆ ದಿನದ ಕೊನೆ ಷೋನಲ್ಲಿ ಬಾಲಿವುಡ್‌ ನಟಿ ಎವ್ಲಿನ್‌ ಶರ್ಮಾ ಷೋ ಸ್ಟಾಪರ್‌ ಆಗಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರ ಫ್ಯಾಷನ್‌ ನಶೆಯನ್ನು ಹೆಚ್ಚಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT