ADVERTISEMENT

ಕ್ರಿಮಿನಾಶಕ ಸಿಂಪಡಿಸಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಕ್ರಿಮಿನಾಶಕ ಸಿಂಪಡಿಸಿ
ಕ್ರಿಮಿನಾಶಕ ಸಿಂಪಡಿಸಿ   

ಹೊಸಕೆರೆಹಳ್ಳಿ ಕ್ರಾಸ್ ರಿಂಗ್ ರಸ್ತೆಯ ಕೆಳ ಮಾರ್ಗ ನಿರ್ಮಾಣ ನಿಮಿತ್ತ ಸಾಲು ಮರಗಳನ್ನು ಕಡಿದು ರಸ್ತೆಯ ಒಂದು ಭಾಗದಲ್ಲಿ ಕಂದಕ ತೋಡಲಾಗಿದೆ. ಇಷ್ಟು ಸಾಲದು ಎಂಬಂತೆ ಜನವರಿಯಿಂದ  ಕಾಮಗಾರಿ ಸ್ಥಗಿತಗೊಂಡಿದೆ.

ಈಗ ಬೀಳುತ್ತಿರುವ ಭಾರಿ ಮಳೆಯಿಂದ ಕಂದಕಗಳಲ್ಲಿ ನೀರು ತುಂಬಿ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಆದ್ದರಿಂದ ಮಳೆಗಾಲ ಮುಗಿಯುವವರೆಗೆ ಅಂದರೆ ನವೆಂಬರ್‌ವರೆಗೆ ಸೊಳ್ಳೆ ಹೆಚ್ಚಾಗದಂತೆ ತಡೆಯಲು ದಿನವೂ ಕ್ರಿಮಿನಾಶಕ ದ್ರಾವಣ ಸಿಂಪಡಿಸಿ ಜನರ ಆರೋಗ್ಯ ರಕ್ಷಿಸುವತ್ತ ಗಮನಹರಿಸಬೇಕಾಗಿದೆ.
-ಸತ್ಯ, ಹೊಸಕೆರೆಹಳ್ಳಿ ಬಡಾವಣೆ

ಕಂಡಕ್ಟರ್‌ಗಳ ಬಳಿ ಚಿಲ್ಲರೆ ಇಲ್ಲ!

ADVERTISEMENT

ಬಿಎಂಟಿಸಿ ಬಸ್‌ಗಳಲ್ಲಿ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಆದರೂ ಚಿಲ್ಲರೆ ಸಮಸ್ಯೆ ಇನ್ನೂ ಕೊನೆ ಕಂಡಿಲ್ಲ. ಸಾವಿರಾರು ಜನರಿಂದ ಹಣ ಪಡೆದು, ಚಿಲ್ಲರೆ ನೀಡಬೇಕಾದ ಕಂಡಕ್ಟರ್‌ಗಳು ಖಾಲಿ ಕೈಯಲ್ಲಿ ಬಸ್‌ ಹತ್ತಿದರೆ ಹೇಗೆ?

ಕಂಡಕ್ಟರ್‌ ಬಳಿ ₹10, ₹20, ₹50, ₹100, ₹500 ಯಾವುದಕ್ಕೂ ಚಿಲ್ಲರೆ ನೀಡುವುದಿಲ್ಲ. ಎಲ್ಲರೂ ಹೀಗೆ ಮಾಡಿದರೆ ಹೇಗೆ ಎಂದು ಜಗಳಕ್ಕೇ ನಿಲ್ಲುತ್ತಾರೆ. ಮೆಟ್ರೊ ಫೀಡರ್‌ ಬಸ್‌ ದರ ₹12 ಇದ್ದಾಗಲೂ ಚಿಲ್ಲರೆ ಇಲ್ಲ ₹2 ಕೊಡಿ ಎಂದು ಜಗಳ ಶುರು ಮಾಡುತ್ತಿದ್ದರು. ಈಗ ₹10 ಮಾಡಿದರೂ ಅವರ ಬಳಿ ಚಿಲ್ಲರೆ ಸಿಗುವುದಿಲ್ಲ. ಚಿಲ್ಲರೆ ಇದ್ದಾಗ ಪ್ರಯಾಣಿಕರು ತಾವಾಗಿಯೇ ನೀಡುತ್ತಾರೆ. ಅದನ್ನು ಬಿಟ್ಟು ಇಲ್ಲದಿದ್ದಾಗಲೂ ಚಿಲ್ಲರೆ ಕೊಡಲೇಬೇಕು ಎಂದರೆ ಪ್ರಯಾಣಿಕರು ಚಿಲ್ಲರೆಯನ್ನು ಎಲ್ಲಿಂದ ತರಬೇಕು? ಸಾವಿರಾರು ರೂಪಾಯಿಗಳ ಟಿಕೆಟ್‌ ನೀಡುವ ಕಂಡಕ್ಟರ್‌ಗಳು ಚಿಲ್ಲರೆ ನೀಡಲು ಸ್ವಲ್ಪವಾದರೂ ಹಣ ಇಟ್ಟುಕೊಂಡಿರಬೇಕಲ್ಲವೇ... ಇದರಿಂದ ಪ್ರಯಾಣಿಕರಿಗೂ, ಕಂಡಕ್ಟರ್‌ರಿಗೂ ಅನುಕೂಲ.
-ಸುಶೀಲಮ್ಮ, ರಾಜಾಜಿನಗರ

ಇಲ್ಲಿ ಕಸ ಎಸೆಯಬೇಡಿ...
ಬಿ.ಚನ್ನಸಂದ್ರದಲ್ಲಿ ಚೌಡೇಶ್ವರಿ ದೇವಸ್ಥಾನದ ಪಕ್ಕದ ರಸ್ತೆಯ ಎದುರು ಖಾಲಿ ಸ್ಥಳವಿದೆ. ಇಲ್ಲಿಯೇ ಕೆಲ ನಿವಾಸಿಗಳು ಕಸವನ್ನು ಹಾಕುತ್ತಿದ್ದಾರೆ.

ಮನೆಗಳ ಬಳಿ ಪ್ರತಿದಿನ ಕಸದ ಗಾಡಿ ಬರುತ್ತದೆ. ಹೀಗಿದ್ದರೂ, ಇಲ್ಲಿ ಕಸ ಹಾಕುತ್ತಿರುವುದು ಸರಿಯಲ್ಲ. ಇದರಿಂದ   ಸಮೀಪದ ಮನೆಗಳಿಗೆ ಕೆಟ್ಟ ವಾಸನೆ ಬರುತ್ತಿದೆ. ನೊಣಗಳ ಕಾಟವೂ ಹೆಚ್ಚುತ್ತಿದೆ. ಸಂಬಂಧಪಟ್ಟವರು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕಾಗಿದೆ.
-ಕಿರಣ್‌, ಬಿ.ಚನ್ನಸಂದ್ರ ನಿವಾಸಿ

ಸರಕು ವಾಹನಗಳಿಗೆ ಕಡಿವಾಣ ಹಾಕಿ
ಸಂಪಂಗಿ ರಾಮನಗರದಲ್ಲಿ ಗೂಡ್ಸ್‌ ಗಾಡಿಗಳ ಹಾವಳಿ ಹೆಚ್ಚಾಗಿದೆ.

ಈ ಬಡಾವಣೆಯ ರಸ್ತೆಗಳ ಅಕ್ಕಪಕ್ಕದಲ್ಲಿ ಕೊರಿಯರ್ ಇಲ್ಲವೆ ಇತರೆ ಲಗೇಜ್ ಗೂಡ್ಸ್‌ ಗಾಡಿಗಳನ್ನು ಸದಾ ಪಾರ್ಕಿಂಗ್ ಮಾಡಿರುತ್ತಾರೆ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಅಲ್ಲದೆ, ರಸ್ತೆಯ ಎರಡೂ ಬದಿಯ ಫುಟ್‌ಪಾತ್‌ಗಳಲ್ಲಿ ತಳ್ಳುಗಾಡಿಗಳು ಇದ್ದು, ಪಾದಚಾರಿಗಳಿಗೆ ಓಡಾಡಲು ಅಡಚಣೆ ಆಗುತ್ತಿದೆ.

ಸಂಬಂಧಪಟ್ಟವರು  ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರು ಆಗುತ್ತಿರುವ ತೊಂದರೆ ತಪ್ಪಿಸಬೇಕಾಗಿ ವಿನಂತಿ.
-ಮೇಘಾ, ಸಂಪಂಗಿರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.