ADVERTISEMENT

ಗವಾಯಿಗಳ ನೆನಪಿನಲ್ಲಿ ಸಂಗೀತೋತ್ಸವ

ಉಮಾ ಅನಂತ್
Published 26 ಮೇ 2017, 19:30 IST
Last Updated 26 ಮೇ 2017, 19:30 IST
ದಿ. ಶೇಷಾದ್ರಿ ಗವಾಯಿ
ದಿ. ಶೇಷಾದ್ರಿ ಗವಾಯಿ   

ಪಂ.ಆರ್‌.ವಿ.ಶೇಷಾದ್ರಿ ಗವಾಯಿ ಪುಣ್ಯಸ್ಮೃತಿ ಸಮಿತಿ ಹಾಗೂ ನಾದವಾಹಿನಿ ಶ್ರೀ ದತ್ತ ಸಂಗೀತ ವಿದ್ಯಾನಿಕೇತನದ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ಸಂಗೀತೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಇದೇ ಮೇ 27ರ ಶನಿವಾರ ಜರುಗಲಿದೆ.

ಸಂಗೀತೋತ್ಸವದ ನೇತೃತ್ವವನ್ನು ಹಿರಿಯ ಸಂಗೀತ ವಿದ್ವಾಂಸ ಪಂ.ವಿ.ಎಂ. ನಾಗರಾಜ್‌ ವಹಿಸುವರು.  ಹುಬ್ಬಳ್ಳಿಯ ಸಂಗೀತ ವಿದ್ವಾಂಸ ಕೃಷ್ಣರಾವ್‌ ಬುವಾ ಇನಾಂದಾರ್‌ ಹಾಗೂ ಬಾಗಲಕೋಟೆಯ ಪಂ.ಆರ್‌.ಎಚ್‌. ಮೋರೆ ಅವರಿಗೆ ‘ಸಂಗೀತ ಶಿರೋಮಣಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ನಾದವಾಹಿನಿ ಶ್ರೀ ದತ್ತ ಸಂಗೀತ ವಿದ್ಯಾನಿಕೇತನದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ವಿದ್ಯಾನಿಕೇತನ ಪ್ರಾಂಶುಪಾಲರಾದ ಪಂ.ವಿ.ಎಂ. ನಾಗರಾಜ್‌, ಸಂಗೀತ ಕಲಾವಿದರಾದ ನಾಗಭೂಷಣ ಶರ್ಮಾ ಮುಂತಾದವರು ಸಂಗೀತೋತ್ಸವದಲ್ಲಿ ಭಾಗವಹಿಸುವರು.

ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ. ಸಿ. ರಸ್ತೆ. ಮಧ್ಯಾಹ್ನ 3. (ಕಾರ್ಯಕ್ರಮದ ಬಗ್ಗೆ ಮಾಹಿತಿಗೆ: 98453 50495).

ADVERTISEMENT

ಆರ್‌.ವಿ. ಶೇಷಾದ್ರಿ ಗವಾಯಿ ಕುರಿತು: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಂಡಿತ್‌ ಆರ್‌.ವಿ. ಶೇಷಾದ್ರಿ ಗವಾಯಿಗಳದ್ದು ಬಹುದೊಡ್ಡ ಹೆಸರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ದಿ. ಗವಾಯಿಗಳು ಸುಮಾರು ಆರು ದಶಕ ಸಂಗೀತ ತಪಸ್ಸು ಮಾಡಿದ್ದವರು. ಸಾವಿರಾರು ಆಸಕ್ತರಿಗೆ ಗಾಯನ ಮತ್ತು ವಾದ್ಯ ಸಂಗೀತವನ್ನು ಹೇಳಿಕೊಡುತ್ತಿದ್ದ ಈ ಮಹಾನ್‌ ಕಲಾವಿದ ‘ಶ್ರೀ ಅರವಿಂದ ಸಂಗೀತ ವಿದ್ಯಾಲಯ’ ನಡೆಸುತ್ತಿದ್ದರು.

‘ಗಾಯನ ಗಂಗಾ’ ಎಂಬ ಸಂಗೀತದ ನಿಯತಕಾಲಿಕೆಯನ್ನು 48 ವರ್ಷಗಳ ಕಾಲ ಹೊರತಂದಿದ್ದರು. ಹಾರ್ಮೋನಿಯಂ ವಾದನದಲ್ಲಿ ಅಸಾಧಾರಣ ಚಾಕಚಕ್ಯತೆ ಹೊಂದಿದ್ದ ಗವಾಯಿಗಳು, ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ, ಬಸವರಾಜ ರಾಜಗುರು, ಜಸರಾಜ್‌, ಬೇಗಂ ಪರ್ವೀನ್‌ ಸುಲ್ತಾನಾ  ಮುಂತಾದ ದಿಗ್ಗಜರಿಗೆ ಸಾಥಿ ನುಡಿಸುತ್ತಿದ್ದರು.

ವಿ.ಎಂ. ನಾಗರಾಜ್‌: ಹಿಂದೂಸ್ತಾನಿ ಸಂಗೀತದ ಗ್ವಾಲಿಯರ್‌ ಘರಾಣೆ ಶೈಲಿ ಹಾಡುವ ಪಂಡಿತ್‌ ವಿ.ಎಂ. ನಾಗರಾಜ್‌ ಸಂಗೀತ ಪರಂಪರೆಯಲ್ಲಿ ಹಿರಿಯ ಅನುಭವಿ ಗಾಯಕ, ಬೋಧಕ, ಸಂಗೀತ ಕೃತಿ ನಿರ್ಮಾತೃ, ತಾಳ ರಚನಾಕಾರ, ಸಂಗೀತ ಬರಹಗಾರ, ಸಂಗೀತ ಪರೀಕ್ಷಾ ನಿರ್ವಾಹಕ,  ಹೀಗೆ ಹತ್ತು ಹಲವು ವಿಶೇಷಣಗಳನ್ನು ಒಡಲಲ್ಲಿ ಇಟ್ಟುಕೊಂಡು ನಿರಂತರ ಸಂಗೀತದೊಂದಿಗೆ ಬದುಕನ್ನೇ ತೊಡಗಿಸಿಕೊಂಡ ತಪಸ್ವಿ ವಿ.ಎಂ. ನಾಗರಾಜ್‌ ಅವರು. ಸಾವಿರಾರು ಶಿಷ್ಯ ವರ್ಗವನ್ನು ಹೊಂದಿರುವ ಪಂ. ನಾಗರಾಜ್‌ ಸಂಗೀತದೊಂದಿಗೆ ಬದುಕನ್ನು ಬೆಸೆದಿದ್ದಾರೆ.

ಪಂ. ಶೇಷಾದ್ರಿ ಗವಾಯಿಗಳು ‘ಗಾಯನ ಗಂಗಾ’ ಎಂಬ ಸಂಗೀತ ನಿಯತಕಾಲಿಕೆ ಹೊರತರುತ್ತಿದ್ದರು. ಸುಮಾರು 50 ವರ್ಷಗಳ ಕಾಲ ಅಚ್ಚುಕಟ್ಟಾಗಿ ಹೊರಬಂದ ಈ ನಿಯತಕಾಲಿಕೆಗೆ ಸುಮಾರು 25 ವರ್ಷಗಳ ಕಾಲ ನಿರಂತರವಾಗಿ ಸಂಗೀತ ಲೇಖನಗಳನ್ನು ಪಂ. ವಿ.ಎಂ. ನಾಗರಾಜ್‌ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.