ADVERTISEMENT

ಗಾಳಿ–ಗಂಧದ ಬಂಧ...

ಹರವು ಸ್ಫೂರ್ತಿ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ದೀಪಾ, ಗಿರೀಶ್‌
ದೀಪಾ, ಗಿರೀಶ್‌   

‘ನಾನು ದೀಪಾ. ಗಿರೀಶ್‌ ಹಂದಲಗೆರೆ ಅವರ ಬಾಳಸಂಗಾತಿ. ‘ಸಮಾನವಾಗಿ ಬದುಕುತ್ತೀವಿ, ಪರಸ್ಪರ ಗೌರವಿಸುತ್ತಾ ಒಬ್ಬರ ವಿಚಾರವನ್ನು ಮತ್ತೊಬ್ಬರು ಒಪ್ಪಿಕೊಳ್ಳುತ್ತೀವಿ’  ಎಂದು ಪ್ರತಿಜ್ಞೆ ಮಾಡಿ ಶೂನ್ಯ ಮಾಸದಲ್ಲಿ ಮದುವೆಯಾದವರು ನಾವು. ‘ಸಮುದಾಯ’ ರಂಗತಂಡದಲ್ಲಿ ‘ಜನಾಧಿಕಾರ ಜನಾಂದೋಲನ ಜಾಥಾ’ ಎಂಬ ಬೀದಿ ನಾಟಕ ಮಾಡುವ ವೇಳೆ ನಮ್ಮಲ್ಲಿ ಒಲವು ಮೂಡಿತ್ತು.

‘ನಾವು ಪ್ರೀತಿಸಲು ಶುರು ಮಾಡಿದ ಆರು ವರ್ಷದ ನಂತರ ಮನೆಯವರಿಗೆ ವಿಷಯ ತಿಳಿಸಿದೆವು, ಗಿರೀಶ್‌ ಮನೆಯಲ್ಲಿ ವಿರೋಧವಿತ್ತು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ ಮದುವೆ ತಯಾರಿ ಆರಂಭಿಸಿದೆವು. ಕವಿ ಸಿದ್ದಲಿಂಗಯ್ಯ, ಎಚ್.ಎಸ್. ದೊರೆಸ್ವಾಮಿ, ನಿಡುಮಾಮಿಡಿ ಸ್ವಾಮಿ, ಕವಿ ದೊಡ್ಡರಂಗೇಗೌಡ,  ಕಡಿದಾಳು ಶಾಮಣ್ಣ ಇವರನ್ನು ಮದುವೆ ಮಾಡಿಸುವಂತೆ ಆಹ್ವಾನಿಸಿದೆವು.

‘ನಾವು ಏನೋ ಕ್ರಾಂತಿ ಮಾಡ್ತೀವಿ’ ಅಂತ ಸಂಕ್ರಾಂತಿ ದಿನ, ತಾಳಿಯನ್ನೂ ಕಟ್ಟಿಸಿಕೊಳ್ಳದೆ ಕೇವಲ ಪ್ರತಿಜ್ಞೆ ತೆಗೆದುಕೊಂಡು ಮದುವೆಯಾಗಬೇಕು ಎಂಬ ಆಸೆ ಇತ್ತು.  ನಾನು ಗಿರೀಶ್ ಮನೆಯವರನ್ನು ಮನವೊಲಿಸಲು ಹೋದೆ. ಸಂಕ್ರಾಂತಿ ಸುಗ್ಗಿ ಹಬ್ಬ ಮನೆಗೆ ದವಸ ಧಾನ್ಯ ತುಂಬಿಸಿಕೊಳ್ಳುತ್ತೀರಿ ನನ್ನನೂ ನಿಮ್ಮ ಮನೆ ಸಿರಿ ಎಂದು ಮನೆ ತುಂಬಿಸಿಕೊಳ್ಳಿ ಎಂದು ಗಿರೀಶ್‌ ತಂದೆ ಬಳಿ ಕೇಳಿಕೊಂಡು ಬಂದೆ.

‘2007 ಜನವರಿ 15ರಂದು ಬೆಳಿಗ್ಗೆ 7 ಗಂಟೆಗೆ ನಾನೂ ಗಿರೀಶ್‌ ಇಬ್ಬರು ಹೋಗಿ ಗಂಜಾಂ ಮಂಟಪದ ಕಸಗುಡಿಸಿ, ಬ್ಯಾನರ್ ಕಟ್ಟಿ ಅತಿಥಿಗಳ ನಿರೀಕ್ಷೆಯಲ್ಲಿ ಕಾದುಕುಳಿತೆವು. ಅಂದು ಕಲ್ಯಾಣ ಮಂಟಪಕ್ಕೆ ಮೊದಲು ಬಂದಿದ್ದೇ ನಮ್ಮ ಮಾವ. ಊರಿನಿಂದ ಒಂದು ಬಸ್‌ ಜನರನ್ನು ಕರೆದುಕೊಂಡು ಬಂದಿದ್ದರು.
ಹೀಗೆ ಪರಸ್ಪರ ಅಸ್ಮಿತೆಗಳನ್ನು ಗೌರವಿಸಿಕೊಂಡು, ಒಪ್ಪಿಕೊಳ್ಳುವುದು, ದಾಂಪತ್ಯ, ಇದು ಒಂಥರಾ ಸಹಿಷ್ಣುತೆ. ಕಿತ್ತಾಡುತ್ತೀವಿ, ನಮ್ಮ ಬದುಕಲ್ಲೂ ಬಿರುಗಾಳಿ ಬೀಸಿದೆ. ಆದರೂ ನಾವು  ನಮ್ಮ ಪ್ರೀತಿಯನ್ನು ಬೆಳಗುತ್ತಿದ್ದೇವೆ’.

*
ಎರಡು ನಿಮಿಷದ ಮದುವೆ
ಬದುಕು ಕಮ್ಯುನಿಟಿ ಕಾಲೇಜು ಉಪನ್ಯಾಸಕ ಮುರಳಿ ಮೋಹನ್ ಕಾಟಿ ಅವರು ಉಪನ್ಯಾಸಕಿ ಮಮತಾ ಅವರೊಂದಿಗಿನ ತಮ್ಮ ಮದುವೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ಮಮತಾಳಿಗೆ ತಾಳಿಕಟ್ಟಿದೆ, ಮನೆಗೆ ಹಿಂದಿರುಗಿದ್ವಿ. ಎರಡೇ ನಿಮಿಷದ ಮದುವೆ’ ಎಂದು ತಮ್ಮ ಸರಳ ವಿವಾಹವನ್ನು ಅವರು ನೆನಪಿಸಿಕೊಳ್ಳುತ್ತಾರೆ.

2007ರ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಲಂಕೇಶ್‌ ನೆನಪು ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಮುರಳಿ ಮತ್ತು ಮಮತಾ ನಂತರ ಹಲವು ಕವಿಗೋಷ್ಠಿ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಪ್ರೀತಿ ಬೇರೂರಿತ್ತಂತೆ.

‘ಒಂದು ಟೀ ಅಂಗಡಿಯಲ್ಲಿ ನಾನು ಪ್ರೀತಿಸುವ ವಿಚಾರವನ್ನು ಹೇಳಿಕೊಂಡೆ.  ಅವರು ಸಸ್ಯಾಹಾರಿ, ನಾನು ಮಾಂಸಾಹಾರಿ. ಆದ್ದರಿಂದ ಎಂದಿನಂತೆ ಮನೆಯವರ ವಿರೋಧವಿತ್ತು,  ಎಲ್ಲರನ್ನು ಒಪ್ಪಿಸಿದ್ವಿ. ಅಂತರಜಾತಿ ಮದುವೆಯಾಗ್ತೀವಿ ಅಂದ್ರೆ ಮೊದಲನೆಯದಾಗಿ ತಾಳ್ಮೆ ಬೇಕು. ಅಹಂ ಇದ್ದರೆ ಯಾವ ಸಂಬಂಧವೂ ಅರಳುವುದಿಲ್ಲ.

ಮದುವೆ ಗಂಡ–ಹೆಂಡತಿ ಸಂಬಂಧಕ್ಕೆ ಮುಗಿಯುವುದಿಲ್ಲ. ಸುತ್ತಲಿನ ಗೆಳೆಯರು, ಕುಟುಂಬದವರು ಹೀಗೆ ಎಲ್ಲರನ್ನೂ ಪರಸ್ಪರ ಅರ್ಥಮಾಡಿಕೊಳ್ಳುತ್ತಾ ಒಂದಾಗುತ್ತಾ ಹೋಗಬೇಕು. ಮದುವೆಯಾಗಿ ಹತ್ತು ವರ್ಷ ಕಳೆದಿದೆ, ಇಂದು ನಮ್ಮಿಬ್ಬರ ತಂದೆತಾಯಿ ನಡುವೆ ಒಳ್ಳೆಯ ಸಂಬಂಧ ಮೂಡಿದೆ. ಪ್ರೇಮ ವಿವಾಹದಿಂದ ಜಾತಿ ಧರ್ಮ ಮಿತಿಗಳನ್ನು ಮೀರಿದ್ದೀವಿ’ ಎಂದು ನಗುತ್ತಾರೆ, ದಂಪತಿ.

ADVERTISEMENT

*
ಒಪ್ಪಿಸಲು ಒಂದು ವರ್ಷ ಕಾದೆ
‘ಮನೆಯವರನ್ನು ಒಪ್ಪಿಸಿಯೇ ಮದುವೆಯಾಗಬೇಕು ಎಂಬ ಕಾರಣಕ್ಕೆ ಒಂದು ವರ್ಷ ಕಾದಿದ್ದೆವು. ಈಗ ನಗು ಬರುತ್ತದೆ. ಆದರೆ ಆಗ ಪ್ರತಿದಿನವೂ ದಿಗಿಲು ಇತ್ತು’ ಎನ್ನುತ್ತಾರೆ, ಕನ್ನಡ ಉಪನ್ಯಾಸಕರಾದ ಶ್ವೇತಾ ಮತ್ತು ದೇವು.

‘ನಾನು ಮತ್ತು ದೇವು ಇಬ್ಬರೂ ಸಹಪಾಠಿಗಳು. ಪ್ರೀತಿ ಪ್ರೇಮ ಅಂಥ ವಿಶೇಷವಾಗಿ ಏನೂ ಅಂದುಕೊಂಡಿರಲಿಲ್ಲ. ‘ಒಟ್ಟಿಗೆ ಬದುಕೋಣ’ ಅಂತ ಅವನಿಗೆ ನಾನೇ ಕೇಳಿದೆ.

ದೇವುಗೆ ಮನೆಯಲ್ಲಿ ಜವಾಬ್ದಾರಿ ಹೆಚ್ಚಿತ್ತು. ಇಬ್ಬರೂ ಓದುತ್ತಿದ್ದ ಕಾರಣ ನಮ್ಮ ಕಾಲಮೇಲೆ ನಾವು ನಿಂತು ಮದುವೆಯಾಗಬೇಕು ಅಂದುಕೊಂಡಿದ್ದೆವು. ಮನೆಯ ಕಷ್ಟ ಏನೇ ಇದ್ದರೂ ಇಬ್ಬರೂ ಸೇರಿ ನಿಭಾಯಿಸೋಣ ಎಂದು ನಾನು ಭರವಸೆ ತುಂಬಿದೆ.  ಇಬ್ಬರೂ ಕಷ್ಟಪಟ್ಟು ಸರ್ಕಾರಿ ನೌಕರಿ ಪಡೆದೆವು. ಆರ್ಥಿಕವಾಗಿ ಸಬಲರಾದ ಮೇಲೆ ಮನೆಯಲ್ಲಿ ಮಾತನಾಡಲು ನಮಗೂ ಧೈರ್ಯ ಬಂತು.

‘ನಮ್ಮ ಮನೆಯಲ್ಲಿ ಒಪ್ಪಲಿಲ್ಲ. ಹಲವು ಬಾರಿ ನ್ಯಾಯ ಪಂಚಾಯ್ತಿ ನಡೆಯಿತು. ಕೊನೆಗೆ ನಮ್ಮ ತಂದೆ ಸರಿ ನೀವು ಮದುವೆಯಾಗಬೇಕು ಎಂದರೆ ಆಗಿ ಎಂದರು. ಆದರೆ ನಾನು ಪಟ್ಟುಬಿಡಲಿಲ್ಲ. ನಾವೇ ಮದುವೆ ಮಾಡಿಕೊಂಡು ಬಿಡುವುದಿದ್ದರೆ ಯಾವತ್ತೋ ಆಗುತ್ತಿದ್ದೆವು. ನಮಗೆ ಕುಟುಂಬದ ಒಪ್ಪಿಗೆ, ಉಪಸ್ಥಿತಿ ಬೇಕು ಎಂದು ಕೇಳಿಕೊಂಡೆ.

ಒಂದು ವರ್ಷ ಕಾದೆ. ಕೊನೆಗೂ ನಮ್ಮ ತಂದೆ ಒಪ್ಪಿದರು. ಸಾಹಿತಿ ಬಂಜಗೆರೆ ಜಯಪ್ರಕಾಶ್ ಮದುವೆ ಕರೆಯೋಲೆ ಬರೆದುಕೊಟ್ಟರು, ಮದುವೆ ಅನ್ನೋದಕ್ಕಿಂತ ಇದೊಂದು ಕಾರ್ಯಕ್ರಮದಂತೆ ನಡೆಯಿತು. ಕುವೆಂಪು ಅವರ ಮಂತ್ರಮಾಂಗಲ್ಯ ಮಾದರಿಯಲ್ಲಿ ಮದುವೆ ಆಯ್ತು’ ಎಂದು ತಾವು ಮದುವೆಯಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ ಶ್ವೇತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.