ADVERTISEMENT

ಗೆಜ್ಜೆ ಅಲ್ಲ ಕಾಲಂದುಗೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಗೆಜ್ಜೆ ಅಲ್ಲ ಕಾಲಂದುಗೆ
ಗೆಜ್ಜೆ ಅಲ್ಲ ಕಾಲಂದುಗೆ   

– ಶ್ವೇತಾ ಕೃಷ್ಣಾಪುರ

ಹೆಣ್ಮಕ್ಕಳ ಸಿಂಗಾರದಲ್ಲಿ ಗೆಜ್ಜೆಗಳಿಗೆ ಆದ್ಯತೆಯ ಸ್ಥಾನ ಇದ್ದೇ ಇರುತ್ತದೆ. ಗೆಜ್ಜೆ ಎಂದಾಕ್ಷಣ ನೆನಪಾಗುವುದು ಘಲ್‌ ಘಲ್ ಸದ್ದು. ಚಿಕ್ಕ ಮಕ್ಕಳಂತೂ ಗೆಜ್ಜೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿದ್ದರೆ ನೋಡಲು ಹಾಗೂ ಆ ಗೆಜ್ಜೆಯ ಧ್ವನಿ ಕೇಳಲು ಆನಂದವಾಗುತ್ತದೆ.

ಹಬ್ಬ ಅಥವಾ ವಿಶೇಷ ಸಮಾರಂಭಗಳಲ್ಲಿ ಗೆಜ್ಜೆಯನ್ನು ಹಾಕಿ ಓಡಾಡುವುದು ಹೆಣ್ಣು ಮಕ್ಕಳಿಗೆ ಒಂದು ಸಂಭ್ರಮ ವಿಚಾರ. ಆದರೆ ಈಗ ಹಿಂದಿನ ಕಾಲದ ಬೆಳ್ಳಿ ಗೆಜ್ಜೆಯ ಸಪ್ಪಳ ಮಾಯವಾಗುತ್ತಿದೆ. ಸಾಂಪ್ರದಾಯಿಕ ಗೆಜ್ಜೆಯು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ದಿನ ಕಳೆದಂತೆ ಫ್ಯಾಷನ್‌ನಲ್ಲೂ ಬದಲಾವಣೆ ಆಗುವುದರಿಂದ ಜನರು ಇನ್ನೊಬ್ಬರಿಗಿಂತ ತಾನು ವಿಭಿನ್ನವಾಗಿ ಕಾಣಬೇಕೆಂದು ಬಯಸುತ್ತಾರೆ. ಈ ಕಾರಣದಿಂದಾಗಿ ಗೆಜ್ಜೆಗಳು ತಮ್ಮ ರೂಪವನ್ನು ಬದಲಾಯಿಸಿಕೊಂಡಿವೆ. ಚಿನ್ನ, ಬೆಳ್ಳಿಯ ಗೆಜ್ಜೆಗಳ ಬದಲು ಈಗ ಕೃತಕ ಕಾಲಂದುಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಬೆಳ್ಳಿಗೆಜ್ಜೆಯ ವಿನ್ಯಾಸವನ್ನು ಬದಿಗಿಟ್ಟು ಕೃತಕ ಕಾಲಂದುಗೆಗಳು ಮುಂದೆ ಸಾಗುತ್ತಿವೆ. ದುಬಾರಿಯಾದ ಬೆಳ್ಳಿ ಬಂಗಾರದ ಗೆಜ್ಜೆಗಳನ್ನು ಬಿಟ್ಟು ಈಗ ಕಡಿಮೆ ಬೆಲೆಗೆ ಸಿಗುವ ಅತ್ಯಾಕರ್ಷಕ ಕೃತಕ ಆಭರಣಗಳಿಗೆ ಹೆಣ್ಮಕ್ಕಳು ಹೆಚ್ಚು ಮನಸೋಲುತ್ತಿದ್ದಾರೆ.

ಮೊದಲಿನ ಗೆಜ್ಜೆಯ ಬದಲು ಈಗ ನಾನಾ ಬಗೆಯ ಫ್ಯಾಷನ್ ಗೆಜ್ಜೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಮಕ್ಕಳು ಮಹಿಳೆಯರು ತಮ್ಮ ಉಡುಗೆ ತೊಡುಗೆಗಳಿಗೆ ಅನುಗುಣವಾಗಿ ಕಾಲಿನ ಗೆಜ್ಜೆಯನ್ನು ಹಾಕಿಕೊಳ್ಳುತ್ತಾರೆ. ಹಿಂದೆ ಎರಡೂ ಕಾಲಿಗೂ ಅಲಂಕಾರಕ್ಕಾಗಿ ಹಾಕುತ್ತಿದ್ದ ಗೆಜ್ಜೆ ಈಗ ಫ್ಯಾಷನ್ ಹೆಸರಿನಲ್ಲಿ ಒಂದು ಕಾಲಿಗೆ ಮಾತ್ರ ಹಾಕುವವರೂ ಇದ್ದಾರೆ! ಕೆಲವೊಂದು ಬಣ್ಣದ ದಾರಗಳು ಅದಕ್ಕೆ ಬೇಕಾದ ವಿವಿಧ ವಿನ್ಯಾಸದ ಹಾಗೂ ಹಲವು ಬಣ್ಣದ ಮಣಿಗಳನ್ನು ಸೇರಿಸಿ ಒಂದು ಕಾಲಿಗೆ ಮಾತ್ರ ಗೆಜ್ಜೆಯನ್ನು ಹಾಕಿಕೊಳ್ಳುತ್ತಾರೆ.



ಫ್ಯಾಷನ್ ಇಷ್ಟಪಡುವ ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು ಹೆಚ್ಚಾಗಿ ಈ ರೀತಿಯ ಕೃತಕ ಕಾಲ್ಗೆಜ್ಜೆಯನ್ನು ಬಳಸುತ್ತಾರೆ. ಕೃತಕ ಕಾಲ್ಗೆಜ್ಜೆಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡು ಹಾಕುವವರು ಅನೇಕರಿದ್ದಾರೆ. ಕೆಂಪು, ಕಪ್ಪು, ನೀಲಿ, ಹಸಿರು ಹೀಗೆ ಹಲವಾರು ಬಣ್ಣದ ಮಣಿಗಳಿಗೆ ಅದಕ್ಕೆ ತಕ್ಕುದಾದ ದಾರಗಳನ್ನು ಬಳಸಿ ಕಾಲಂದುಗೆ ತಯಾರಿಸುತ್ತಾರೆ.

ಹೆಚ್ಚು ಭಾರವಿಲ್ಲದ, ಲೈಟ್‌ ವೈಟ್‌ ಎಂಬ ಹಗುರವಾದ ಇಂತಹ ಕಾಲಂದುಗೆಗಳಲ್ಲಿ ಹಲವಾರು ವಿಧಗಳಿವೆ. ಸಿಂಪಲ್ ಆದ ಚೈನ್ ಗೆಜ್ಜೆ, ಮಣಿಗಳ ಗೆಜ್ಜೆ, ಕಾಲುಂಗುರ ಜೊತೆಗಿರುವ ಕಾಲ್ಗೆಜ್ಜೆ ಹೀಗೆ ಹಲವಾರು ವಿಧಗಳಿವೆ. ಚಪ್ಪಲಿಯ ಆಕಾರಕ್ಕೆ ಸರಿ ಹೊಂದುವಂತೆ ಕಾಲಿನ ಆಭರಣಗಳನ್ನು ತಯಾರಿಸಿ ಹಾಕಿಕೊಳ್ಳುವುದೇ ಈಗಿನ ಫ್ಯಾಷನ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಯಾವ ಕಲೆಯೂ ಅಸಾಧ್ಯವಲ್ಲ. ಮನಸ್ಸಿದ್ದರೆ ದಾರಿ ನೂರು. ಇಂತಹ ಕಲಿಕೆಗೆ ಗುರುವಿನ ರೀತಿಯಲ್ಲಿ ಅಂತರ್ಜಾಲ, ಯೂಟ್ಯೂಬ್‌ಗಳು ಇವೆ. ಯಾವುದೇ ರೀತಿಯ ವಿನ್ಯಾಸಗಳನ್ನು ಮಾಡಬೇಕಿದ್ದರೂ ಯೂಟ್ಯೂಬ್‌ಗಳು ಸಹಾಯಕವಾಗಿ ನಿಲ್ಲುತ್ತದೆ. ಆದರೆ ಕಲಿಯುವ ಆಸಕ್ತಿ ಹಾಗೂ ತಾಳ್ಮೆ ಇರಬೇಕಲ್ವ.

ಗೆಜ್ಜೆ ಬರೀ ಅಲಂಕಾರಕ್ಕೆ ಬಳಸುವ ವಸ್ತು ಮಾತ್ರ ಅಲ್ಲ. ಗೆಜ್ಜೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಚಿನ್ನ, ಬೆಳ್ಳಿಯ ಗೆಜ್ಜೆಯು ಕಾಲಲ್ಲಿದ್ದರೆ ಮೂಳೆಗಳ ಸದೃಢತೆಗೂ ಸಹಕಾರಿಯಂತೆ. ಹುಟ್ಟಿದ ಮಗು ಗಂಡಿರಲಿ, ಹೆಣ್ಣಿರಲಿ ಆ ಮಗುವಿನ ಕಾಲಿಗೆ ಗೆಜ್ಜೆಯನ್ನು ಹಾಕುತ್ತಾರೆ. ಮಗುವಿನ ಕಾಲಿನ ಚಲನೆ ಹಾಗೂ ಮೂಳೆಗಳು ಸದೃಢವಾಗಿ ಬೆಳವಣಿಗೆ ಹೊಂದಲು ಗೆಜ್ಜೆ ಸಹಾಯಕವಾಗುತ್ತದೆ ಎಂಬುದು ನಂಬಿಕೆ. ಗೆಜ್ಜೆಯ ಸದ್ದಿಗೆ ಮಕ್ಕಳು ಹೆಚ್ಚಾಗಿ ಕಾಲಿನ ಚಲನೆ ಮಾಡುತ್ತಾರೆ ಎಂಬುದಕ್ಕಾಗಿ ಹುಟ್ಟಿದ ಮಗುವಿಗೆ ಗೆಜ್ಜೆಯನ್ನು ಹಾಕುತ್ತಾರೆ. ಗೆಜ್ಜೆ ಸದ್ದಿನಿಂದ ನಕಾರಾತ್ಮಕ ಅಂಶಗಳು ದೂರವಾಗುತ್ತವೆ ಎಂಬ ಮತ್ತೊಂದು ನಂಬಿಕೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT