ADVERTISEMENT

ಗ್ರಿಲ್‌ ಮಾಡಿ ಸವಿಯಿರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಫರೂಕ್ ಆಜೀಜ್ ಅನ್ಸಾರಿ
ಫರೂಕ್ ಆಜೀಜ್ ಅನ್ಸಾರಿ   

ಫರೂಕ್ ಆಜೀಜ್ ಅನ್ಸಾರಿ
ನಾನು ಒಂಬತ್ತು ವರ್ಷದವಳಾಗಿದ್ದಾಗ ಫುಲ್ಕಾ ಮಾಡುತ್ತಿದೆ. ಅಡುಗೆಯನ್ನು ನಿಜವಾಗಿ ಕಲಿತಿದ್ದು ಮದುವೆಯಾದ ಮೇಲೆ. ಮೊದಲು ಮಾಡಿದ್ದು ಮೊಟ್ಟೆ ಮಸಾಲ. ಅಮ್ಮ ಪ್ರತಿದಿನ ಸ್ವಾದಿಷ್ಟವಾದ ಹಲವು ಬಗೆ ಖಾದ್ಯಗಳನ್ನು ಮಾಡುತ್ತಿದ್ದರು. ಇದರಿಂದ ಅಡುಗೆ ಕಲೆ ಮೇಲೆ ಆಸಕ್ತಿ ಮೂಡಿತು.

ಫುಲ್ಕಾ, ಪರಾಟ, ದಾಲ್, ಆಲೂಗೆಡ್ಡೆ ಪಲ್ಯ ಅಷ್ಟೇ ನನ್ನಿಂದ ಮಾಡಲು ಸಾಧ್ಯ ಎಂದು ಅಂದುಕೊಂಡಿದ್ದೆ. ಹೊಸಬಗೆಯ ಖಾದ್ಯಗಳನ್ನು ಕಲಿಯಲು ನನ್ನ ಗಂಡ ಸಹಕರಿಸಿದರು. ನಾನು ಕಲಿಯುತ್ತಿದ್ದ ಹೊಸರುಚಿಗಳ ಪ್ರಯೋಗಗಳು ನಡೆದದ್ದೂ ಅವರ ಮೇಲೆಯೇ. ಅವರಿಗೆ ಹೊಸ ಬಗೆಯ ಖಾದ್ಯದ ರುಚಿ ನೋಡುವುದೆಂದರೆ ಇಷ್ಟ.

ನನಗೆ ಮೊಘಲ್‌ ಶೈಲಿಯ ಖಾದ್ಯ ಇಷ್ಟ. ಈ ಶೈಲಿಯ ಕರಿ, ಕಟ್ಲೇಟ್, ಕಬಾಬ್, ಬಿರಿಯಾನಿ ಮಾಡಲು ಆಸಕ್ತಿ. ಬಿರಿಯಾನಿಯಲ್ಲಿ ಹಲವು ಬಗೆಯ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇನೆ. ಮ್ಯಾಂಗೊ ಚಿಕನ್ ಬಿರಿಯಾನಿ, ಆಂಧ್ರ, ಬೆಂಗಾಲಿ, ಅವಧ್ ಶೈಲಿಯ ಬಿರಿಯಾನಿ ತಯಾರಿಕೆಯಲ್ಲಿ ನಾನು ಮಾಸ್ಟರ್‌ ಆಗಿದ್ದೇನೆ.

ADVERTISEMENT

ವಿನೂತನ ಖಾದ್ಯ ತಯಾರಿಕೆ ಮಾಡುವುದರ ಜೊತೆ ಛಾಯಾಗ್ರಹಣದಲ್ಲೂ ಆಸಕ್ತಿ ಇದೆ. ಹಾಗೇ ನಾನು ಫುಡ್‌ಸ್ಟೈಲಿಸ್ಟ್‌ ಕೂಡ. ನನ್ನದೇ ಆದ ಫುಡ್‌ ಬ್ಲಾಗ್‌ ಕೂಡ ಇದೆ. ಇದರಲ್ಲಿರುವ ಚಿತ್ರಗಳನ್ನು ನಾನೇ ತೆಗೆದಿರುವುದು.

ಅಫ್ಘಾನಿ ತಂಗಡಿ ಕಬಾಬ್: ನಾನು ಮಾಡುವ ‘ಅಫ್ಘಾನಿ ತಂಗಡಿ ಕಬಾಬ್’ ನನ್ನ ಮಗಳಿಗೆ ಪ್ರಾಣ. ಅವಳು ಎರಡು ವರ್ಷವಿದ್ದಾಗ ಮೊದಲು ಈ ಕಬಾಬ್ ತಿಂದಿದ್ದು, ತಿಂದ ಕೂಡಲೇ ಮುಖ ಅರಳಿಸಿ ‘ಬೆಸ್ಟ್‌ ಚಿಕನ್’ ಎಂದು ಖುಷಿಪಟ್ಟಿದ್ದಳು. 

‘ಅಫ್ಘಾನಿ ತಂಗಡಿ ಕಬಾಬ್’
ಬೇಕಾಗುವ ಸಾಮಗ್ರಿ:
ಕೋಳಿ ಕಾಲು (ತೊಡೆ ಭಾಗ ಸೇರಿ ಪೂರ್ತಿ ಕಾಲು)–4, ಎಣ್ಣೆಯಲ್ಲಿ ಹುರಿದ ಈರುಳ್ಳಿ ಅರ್ಧ ಬಟ್ಟಲು, ಮೊಸರು ಅರ್ಧ ಬಟ್ಟಲು, ಕೆನೆ ಅರ್ಧ ಬಟ್ಟಲು, ಗೋಡಂಬಿ ಪೇಸ್ಟ್‌ ಅರ್ಧ ಬಟ್ಟಲು, ಮೊಟ್ಟೆ ಬಿಳಿ ಭಾಗ–1, ಕರಿ ಮೆಣಸಿನಕಾಳು ಪುಡಿ 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ 2 ಚಮಚ, ಹಸಿರುಮೆಣಸಿನಕಾಯಿ, ನಿಂಬೆ ರಸ 1 ಚಮಚ, ಗರಂ ಮಸಾಲ ಪುಡಿ 1 ಚಮಚ, ಹುರಿದು ಪುಡಿ ಮಾಡಿದ ಕಸ್ತೂರಿ ಮೇಥಿ ಅರ್ಧ ಚಮಚ, ಉಪ್ಪು, ಎಣ್ಣೆ 2 ಚಮಚ, ತುಪ್ಪ 2 ಚಮಚ, ಬೆಣ್ಣೆ, ಕೆಂಡ.

ಮಾಡುವ ವಿಧಾನ: ಕೋಳಿ ಕಾಲುಗಳನ್ನು ಚೆನ್ನಾಗಿ ತೊಳೆದು ಮಾಂಸವನ್ನು ಸ್ವಲ್ಪ ಸೀಳಿ, ತುಪ್ಪ, ಬೆಣ್ಣೆ, ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಕೋಳಿ ಕಾಲಿಗೆ ಹಚ್ಚಿ.
* ಮಿಶ್ರಣದ ಬಟ್ಟಲಿಗೆ ಉರಿಯುವ ಕೆಂಡವನ್ನು ಮಧ್ಯ ಭಾಗದಲ್ಲಿ ಇಟ್ಟು, ಕೆಂಡಕ್ಕೆ ಒಂದು ಚಮಚ ತುಪ್ಪಹಾಕಿ ಮೇಲೊಂದು ಬಟ್ಟಲು ಮುಚ್ಚಿ. ಇದರಿಂದ ಕೋಳಿಗೆ ತುಪ್ಪದಕೆಂಡದ ಹೊಗೆಯ ಸ್ವಾದ ಇಳಿಯುತ್ತದೆ.
* ಹತ್ತು ನಿಮಿಷದ ನಂತರ ಕೆಂಡವನ್ನು ತೆಗೆಯಿರಿ. ಉಳಿದ ಮಸಾಲಾಭರಿತ ಕೋಳಿಯನ್ನು ಎರಡು ಗಂಟೆ ಫ್ರಿಡ್ಜ್‌ನಲ್ಲಿ ಇಡಿ. ಇದರಿಂದ ಮಸಾಲೆಯ ಅಂಶ ಕೋಳಿ ಮಾಂಸಕ್ಕೆ ಚೆನ್ನಾಗಿ ಇಳಿಯುತ್ತದೆ.
* ನಂತರ ತಂದೂರ್‌ ಗ್ರಿಲ್‌ನಲ್ಲಿ ಗ್ರಿಲ್‌ ಮಾಡಿ, ಇಲ್ಲದಿದ್ದರೆ ಗ್ಯಾಸ್‌ ಒಲೆಯ ಮೇಲೂ ಮಾಡಬಹುದು. ಗ್ರಿಲ್‌ ಮಾಡುವಾಗ ಹೆಚ್ಚು ಬೆಣ್ಣೆ  ಸವರಿ. ಗ್ರಿಲ್‌ ಆದ ನಂತರ ಚಾಚ್‌ ಮಸಲಾ ಪುಡಿ ಉದುರಿಸಿ, ನಾನ್‌ ಜೊತೆ ಸವಿಯಲು ಕೊಡಿ.
(ಫರೂಕ್ ಆಜೀಜ್ ಅನ್ಸಾರಿ ಅವರ ಬ್ಲಾಗ್: http://cubesnju*iennes.com) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.