ADVERTISEMENT

ಘಮ ಇಲ್ಲದ ಹಣ್ಣುಗಳ ಮೇಳ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಘಮ ಇಲ್ಲದ ಹಣ್ಣುಗಳ ಮೇಳ
ಘಮ ಇಲ್ಲದ ಹಣ್ಣುಗಳ ಮೇಳ   

ಮಾವು ಮತ್ತು ಹಲಸಿನ ಋತುವಿನಲ್ಲಿ  ಮಾರುಕಟ್ಟೆಯಲ್ಲೂ, ರಸ್ತೆ ಬದಿಯ ಕೈಗಾಡಿಯಲ್ಲೂ ಈ ಎರಡೂ ಹಣ್ಣುಗಳ ಮಾರಾಟದ್ದೇ ಮೇಲುಗೈ. ಅಷ್ಟು ಸಾಲದು ಎಂಬಂತೆ ಮಾರಾಟ ಮೇಳಗಳು ಎಲ್ಲೆಡೆ ನಡೆಯುತ್ತವೆ.

ಸಚಿವಾಲಯ ಕ್ಲಬ್‌ಗೆ 112ನೇ ವರ್ಷ ತುಂಬಿದ ಖುಷಿಗೆ ಮೂರು ದಿನಗಳ ಮಾವು–ಹಲಸು ಮೇಳವನ್ನು ಹಮ್ಮಿಕೊಂಡಿದೆ. ಆದರೆ ಸಾವಯವ ಮಾವು ಮತ್ತು ಹಲಸು ತಿಂದು ಖರೀದಿಸುವ ಉಮೇದಿನಲ್ಲಿ ಮೇಳಕ್ಕೆ ಭೇಟಿ ನೀಡಿದ ಸಾರ್ವಜನಿಕರಿಗೆ ನಿರಾಸೆಯಾಗಿತ್ತು. ಹಲಸಿನ ಹಣ್ಣಿನ ಒಂದು ಮಳಿಗೆ, ಮಾವಿನ ಎರಡು ಮಳಿಗೆಗಳು ಮಾತ್ರ ಅಲ್ಲಿದ್ದವು.

ದೊಡ್ಡಬಳ್ಳಾಪುರದ ರೈತ ನಾಗರಾಜು ಅವರು ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ ಊಟದ ವಿರಾಮದಲ್ಲಿ ಬಂದ   ಹತ್ತಾರು ಗ್ರಾಹಕರಲ್ಲಿ ಬಹುತೇಕ ಮಂದಿ  ಹಣ್ಣಿನ ರುಚಿ ನೋಡಿ ಮುಂದುವರಿಯುತ್ತಿದ್ದರು. ಆದರೆ ಹಲಸಿನ ಚಿಪ್ಸ್‌ ಮತ್ತು ಹಪ್ಪಳಕ್ಕೆ ಸ್ವಲ್ಪ ಮಟ್ಟಿಗೆ ಬೇಡಿಕೆಯಿತ್ತು. ಸಿರಿಧಾನ್ಯ, ಜೇನು  ಮತ್ತು ಸಾವಯವ ಉತ್ಪನ್ನ, ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿ, ಉಪ್ಪಿನಕಾಯಿ ಮುಂತಾದ ಉತ್ತರ ಕರ್ನಾಟಕ ಶೈಲಿಯ ಊಟೋಪಹಾರದ ಮಳಿಗೆ ಹೊಟ್ಟೆ ಹಸಿವು ನೀಗಿಕೊಳ್ಳಲು ನೆರವಾಯಿತು.

ADVERTISEMENT

ಎರಡೂ ಮಾವಿನ ಮಳಿಗೆಗಳಲ್ಲಿ ಸಿಂಧೂರ, ಬಂಗೇನಪಲ್ಲಿ, ಮಲ್ಲಿಕಾ, ಅಲ್ಫೋನ್ಸಾ, ರಸಪೂರಿ ಸಂಗ್ರಹ ಉತ್ತಮವಾಗಿದ್ದವು.

ಸಾಮಾನ್ಯವಾಗಿ ಹಲಸು ಮತ್ತು ಮಾವಿನ ಮೇಳದಲ್ಲಿ ಇರುವಂತೆ ಹತ್ತಾರು ಮಳಿಗೆಗಳು ಇರುತ್ತವೆ ಎಂಬ ಕಲ್ಪನೆಯೊಂದಿಗೆ ಭೇಟಿ ಕೊಟ್ಟ ಗ್ರಾಹಕರಿಗೆ ನಿರಾಸೆಯಾದರೂ ಮಾವಿನ ಆಯ್ಕೆ ಉತ್ತಮವಾಗಿರುವುದು ಸಮಾಧಾನ ತಂದಿತು. ಮೇ 26ರವರೆಗೂ ಮೇಳ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.