ADVERTISEMENT

ಚಿಟ್ಟೆಯಲ್ಲ... ಇದು ಕಫ್ತಾನ್‌

ಫ್ಯಾಷನ್‌

ರೋಹಿಣಿ ಮುಂಡಾಜೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಚಿಟ್ಟೆಯಲ್ಲ... ಇದು  ಕಫ್ತಾನ್‌
ಚಿಟ್ಟೆಯಲ್ಲ... ಇದು ಕಫ್ತಾನ್‌   
ಯಾವ ಟ್ರೆಂಡ್‌ ಬಂದರೂ, ಫ್ಯಾಷನ್‌ ಲೋಕ ಎಷ್ಟೇ ಬಾರಿ ಮಗ್ಗಲು ಬದಲಾಯಿಸಿದರೂ, ಅದೆಷ್ಟೇ ಅತ್ಯಾಧುನಿಕ, ವಿಲಾಸಿ ದರ್ಜೆಗೆ ಮುಂಬಡ್ತಿ ಪಡೆದರೂ ಮೂಲ ಜಾಯಮಾನದಲ್ಲೇ ಸದಾ ಕಾಲ ಬೇಡಿಕೆ ಉಳಿಸಿಕೊಳ್ಳುವ ಕೆಲವೇ ಉಡುಗೆಗಳ ಸಾಲಿಗೆ ‘ಕಫ್ತಾನ್‌’ ಸೇರುತ್ತದೆ.
 
ಬೃಹದಾಕಾರದ ಚಿಟ್ಟೆಯ ರೆಕ್ಕೆಗಳನ್ನು ಹೊದ್ದುಕೊಂಡಂತೆ ಭಾಸವಾಗುವ ಉಡುಗೆಯಿದು. ಉದ್ದನೆಯ, ಸ್ವಲ್ಪ ಹೆಚ್ಚೇ ಎನಿಸುವಷ್ಟು ಸಡಿಲವಾದ ಸುತ್ತಳತೆ ಮತ್ತು ತೋಳುಗಳನ್ನು ಹೊಂದಿರುವ ಚಿತ್ತಾಕರ್ಷಕ ಉಡುಗೆ ಇದು. ಈಗಿನ  ಟ್ರೆಂಡ್‌ಗೆ ತಕ್ಕಂತೆ ಉದ್ದಳತೆಯಲ್ಲಿ ಏರಿಳಿತ ಕಂಡಿದ್ದರೂ ವಿನ್ಯಾಸದಲ್ಲಿ, ಅಂದರೆ ರೆಕ್ಕೆಯಂಥ ವಿನ್ಯಾಸದಲ್ಲಿ ಕಿಂಚಿತ್ತೂ ಬದಲಾವಣೆಯಾಗದಿರುವುದು ಅದರ ಸಾರ್ವಕಾಲಿಕ ಯಶಸ್ಸಿನ ದ್ಯೋತಕ.
 
ಟ್ಯುನಿಕ್‌  ಮತ್ತು ರೋಬ್‌ನ ಮಧ್ಯೆ ನಿಲ್ಲುತ್ತದೆ ಕಫ್ತಾನ್‌. ಫಾರ್ಮಲ್‌ ಕಫ್ತಾನ್‌ಗಳಿಗೆ ಹೆಚ್ಚಾಗಿ ಸಿಲ್ಕ್‌, ಕಾಟನ್‌ ಮತ್ತು ಲಿನನ್ ಫಾಬ್ರಿಕ್‌ ಬಳಸಲಾಗುತ್ತದೆ. ಲೇಸ್‌ಗಳು, ಬಣ್ಣ ಬಣ್ದ ಹರಳು ಅಥವಾ ಕಲ್ಲುಗಳಿಂದ ತೋಳು, ಎದೆಭಾಗ, ಭುಜ, ಸೊಂಟದ ಭಾಗಕ್ಕೆ ಹಾಗೂ ಅಂಚುಗಳಿಗೆ ವಿನ್ಯಾಸ ಮಾಡುವುದೂ ಇದೆ. ಇದು ಒಟ್ಟು ಉಡುಗೆಗೆ ವಿಭಿನ್ನ ಮತ್ತು ಅಷ್ಟೇ ಶ್ರೀಮಂತ ನೋಟವನ್ನು ಕಟ್ಟಿಕೊಡುತ್ತದೆ.  
 
ವೆಸ್ಟರ್ನ್‌ ಕಫ್ತಾನ್‌
ವೆಸ್ಟರ್ನ್‌ ಕಫ್ತಾನ್‌ಗಳು ಪಶ್ಚಿಮ ಆಫ್ರಿಕಾದ ಮಹಿಳೆಯರು ಮತ್ತು ಪುರುಷರು ಅದೇ ಬಣ್ಣದ ಪ್ಯಾಂಟ್‌ ಜತೆ  ಸಾಮಾನ್ಯವಾಗಿ ಧರಿಸುತ್ತಾರೆ. ರಷ್ಯಾದಲ್ಲಿ ಧರಿಸುವ ಕಫ್ತಾನ್‌ಗಳು ಉದ್ದನೆಯ ನಿಲುವಂಗಿಯಂತೆ ಇರುತ್ತವೆ. ತೋಳುಗಳು ಬಿಗಿಯಾಗಿದ್ದು ರೆಕ್ಕೆಯಂತಹ ವಿನ್ಯಾಸವನ್ನು ತೋಳಿನಿಂದ ಮಂಡಿಯವರೆಗೂ ಜೋತು ಬೀಳುವಂತೆ  ಹೊಲಿಯಲಾಗಿರುತ್ತದೆ.
 
ಭಾರತವೂ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ವಿಭಿನ್ನ ಕಟ್‌ ಮತ್ತು ಅಳತೆಗಳಲ್ಲಿನ ಕಫ್ತಾನ್‌ಗಳು ಜನಪ್ರಿಯವಾಗಿವೆ. ತೋಳುಗಳು ಗಂಟೆಯಾಕಾರದಲ್ಲಿಯೂ (ಬೆಲ್‌ ಶೇಪ್‌)  ಗಾಢ ಬಣ್ಣಗಳಲ್ಲಿಯೂ ಸಿಗುತ್ತವೆ. ಗಾಢ ಬಣ್ಣಗಳಿಂದಾಗಿ ಯಾವುದೇ ಸಮಾರಂಭ ಮತ್ತು ಋತುಮಾನಕ್ಕೂ ಒಪ್ಪುತ್ತವೆ. ಕಸೂತಿಯ ವಿನ್ಯಾಸಗಳಿಂದ ದೇಸಿ ನೋಟವನ್ನೂ ಕಟ್ಟಿಕೊಡುತ್ತವೆ. 
 
ಬೆಂಗಳೂರಿನಲ್ಲಿ...
ಎಲ್ಲಾ ಟ್ರೆಂಡ್‌ಗಳನ್ನು, ನವನವೀನ ಫ್ಯಾಷನ್‌ಗಳನ್ನು ತಿಂಗಳೊಳಗೆ ಶೋಕೇಸ್‌ ಮಾಡುವ ಫುಟ್‌ಪಾತ್‌ ಅಂಗಡಿಗಳು ಕಫ್ತಾನ್‌ಗಳನ್ನೂ ಬಿಟ್ಟಿಲ್ಲ. ಮಲ್ಲೇಶ್ವರ, ಗಾಂಧಿ ಬಜಾರ್‌, ಜಯನಗರ, ಕಮರ್ಷಿಯಲ್‌ ಸ್ಟ್ರೀಟ್‌, ಹಲಸೂರು, ಇಂದಿರಾನಗರದ ಆಯ್ದ ಮಳಿಗೆಗಳಲ್ಲಿ ಕಫ್ತಾನ್‌ಗೆ ಬೇಡಿಕೆ ಇದೆ.  ನಗರದ ಯಾವುದೇ ಮಾಲ್‌ಗಳ ವಾರ್ಡ್‌ರೋಬ್‌ಗಳಲ್ಲಿಯೂ ಇವು ಲಭ್ಯ. 
 
ಜಯನಗರದ ಬಿಬಿಎಂಪಿ ಮಾರ್ಕೆಟ್‌ ಕಟ್ಟಡದಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಅಗ್ಗದ ಬೆಲೆಯ ಕಫ್ತಾನ್‌ ಕುರ್ತಾಗಳು ಲಭ್ಯ. ₹500ರಿಂದ ₹1,500ರೊಳಗೆ ಸಿಗುತ್ತದೆ.
 
ಆನ್‌ಲೈನ್‌ ಖರೀದಿ ಮೆಚ್ಚಿಕೊಂಡವರಿಗೆ ಮಿಂತ್ರಾ, ಜೈಪೊರ್‌,  ಆಲಿಬಾಬಾ, ಫ್ಲಿಪ್‌ಕಾರ್ಟ್‌, ಜಬೊಂಗ್‌, ಇಂಡಿಯಾ ಮಾರ್ಟ್‌ನಂತಹ ವ್ಯಾಪಾರ ಜಾಲತಾಣಗಳಲ್ಲಿ ಹತ್ತಾರು ಬಗೆಯ ಕಫ್ತಾನ್‌ಗಳು ಇವೆ. ಜೈಪೊರ್‌ ಜಾಲತಾಣದಲ್ಲಿ ಇಂಡಿಗೊ ಡೈ ಫ್ಯಾಬ್ರಿಕ್‌ನ ಕಫ್ತಾನ್‌ಗಳು ಚಿತ್ತಾಕರ್ಷಕವಾಗಿವೆ. ಇಂಡಿಗೊ ಡೈ ಎನ್ನುವುದು ನೈಸರ್ಗಿಕ ಬಣ್ಣಗಳ ಸಂಯೋಜನೆಯಾಗಿರುವ ಕಾರಣ ಬೆಲೆ ಸ್ವಲ್ಪ ದುಬಾರಿ ಎನಿಸಬಹುದು. ಆದರೆ ಗುಣಮಟ್ಟದ ಖಾತರಿ ಇರುವ ಕಾರಣ ₹2,750ರಿಂದ ₹5,000 ಕೊಟ್ಟರೂ ದುಬಾರಿ ಎನಿಸದು.
 
ಕಫ್ತಾನ್‌ನಲ್ಲಿ ತೋಳು, ರೆಕ್ಕೆಯಷ್ಟೇ ಕತ್ತಿನ ವಿನ್ಯಾಸವೂ ಉಡುಗೆಯ ಒಟ್ಟಾರೆ ನೋಟವನ್ನು ಸಮೃದ್ಧಗೊಳಿಸುತ್ತದೆ. ವೃತ್ತ, ದೋಣಿ, ಬಕೆಟ್‌, ಯೂ, ಕೋನಾಕಾರಗಳು ಕಫ್ತಾನ್‌ಗೆ ಹೆಚ್ಚು ಸಲ್ಲುತ್ತವೆ.
 
**
ಸಾವಿರಾರು ವರ್ಷಗಳ ಇತಿಹಾಸ
ಅಚ್ಚರಿಯ ಸಂಗತಿ ಎಂದರೆ,  ಪುರಾತನ ಮೆಸಪಟೋನಿಯನ್‌ ಸಂಸ್ಕೃತಿಯ ಕಾಲದಿಂದಲೂ ಕಫ್ತಾನ್‌  ಅಸ್ತಿತ್ವ ಕಂಡುಬರುತ್ತದೆ. ಮಧ್ಯಪ್ರಾಚ್ಯ ದೇಶಗಳಲ್ಲಿ 14ನೇ ಶತಮಾನದಿಂದಲೂ ಬಳಕೆಯಲ್ಲಿದೆ. 
 
ಒಟೊಮನ್‌ ಚಕ್ರವರ್ತಿಗಳು ಮತ್ತು ಸುಲ್ತಾನರ ಕಾಲದಲ್ಲಿ ಗಣ್ಯರ ಪ್ರತಿಷ್ಠೆ, ಸ್ಥಾನಮಾನಕ್ಕೆ ತಕ್ಕಂತೆ ಕಫ್ತಾನ್‌ಗಳನ್ನು ವಿನ್ಯಾಸ ಮಾಡಿ ಉಡುಗೊರೆ ಕೊಡಲಾಗುತ್ತಿತ್ತಂತೆ. ವಿನ್ಯಾಸ ಅಂದರೆ ಬಣ್ಣ, ರಿಬ್ಬನ್‌, ಗುಂಡಿ, ರೆಕ್ಕೆಗಳ ಉದ್ದಳತೆ  ಅವರವರ ಸ್ಥಾನಮಾನವನ್ನು ಬಿಂಬಿಸುತ್ತಿದ್ದವಂತೆ.
 
ಮೊರಾಕ್ಕೊದಲ್ಲಿ ‘ತಕ್ಷಿಟ’ ಎಂದು ಕರೆಯಲಾಗುವ ಕಫ್ತಾನ್‌ಗಳು ಮದುವೆಯಂತಹ ವಿಶೇಷ ಸಮಾರಂಭಗಳಿಗೆ ಸೀಮಿತವಾಗಿವೆ. ಅಲ್ಲಿ  ಇದು ಟು ಪೀಸ್‌ ಉಡುಗೆ. ಸಾಧಾರಣ ವಿನ್ಯಾಸದ ಒಂದು ಉಡುಪು, ಅದರ ಮೇಲೆ ಬಗೆ ಬಗೆ ಫ್ಯಾಬ್ರಿಕ್‌ನ ವಿಲಾಸಿ ವಿನ್ಯಾಸದ ಮೇಲುಡುಗೆ.
 
ಪಶ್ಚಿಮ ಆಫ್ರಿಕಾದಲ್ಲಿ ‘ಪುಲ್‌ಓವರ್‌ ರೋಬ್‌’ ಎಂದು ಕರೆಸಿಕೊಳ್ಳುವ ಕಫ್ತಾನ್‌, ಪುರುಷರು ಮತ್ತು ಮಹಿಳೆಯರ ಮೆಚ್ಚಿನ ಉಡುಗೆ. ಆದರೆ ಮಹಿಳೆಯರ ರೋಬ್‌ನ್ನು ಕಫ್ತಾನ್‌ ಅಂತಲೂ, ಪುರುಷರು ‘ಸೆನೆಗಲೀಸ್‌ ಕಫ್ತಾನ್‌’ ಅಂತಲೂ ಕರೆಯುತ್ತಾರೆ.
 
ಪೂರ್ವ ಮತ್ತು ಪಶ್ಚಿಮದ ದೇಶಗಳಲ್ಲೂ ಯುವಜನರು ಮತ್ತು  ಹಿರಿಯರವರೆಗೂ ಅಚ್ಚುಮೆಚ್ಚಿನ ಉಡುಗೆಯಾಗಿರುವ ಕಫ್ತಾನ್, ವಿದೇಶಗಳಿಗೆ ಹೋದವರ ಮೂಲಕ ಭಾರತಕ್ಕೆ ಬಂದು, ಬರಬರುತ್ತಾ ಇಲ್ಲಿಗೆ ಆಮದೂ ಶುರುವಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.