ADVERTISEMENT

ಟ್ರಿಣ್‌ ಟ್ರಿಣ್‌... ಆರೋಗ್ಯ ಹುಷಾರು...

ಸಂತೋಷ ಜಿಗಳಿಕೊಪ್ಪ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಪೊಲೀಸ್ ಸೈಕಲ್ ಜಾಥಾ
ಪೊಲೀಸ್ ಸೈಕಲ್ ಜಾಥಾ   

ಬೆಳಿಗ್ಗೆ ಎದ್ದೊಡನೇ ಮೈದಾನದಲ್ಲಿ ‘ರೋಲ್‌ಕಾಲ್‌’ಗೆ ಹಾಜರ್. ಅಲ್ಲೇ ವ್ಯಾಯಾಮ, ಕಸರತ್ತು. ಕೆಲ ಗಂಟೆಗಳ ವಿಶ್ರಾಂತಿ ಬಳಿಕ ನಿಗದಿತ ಸ್ಥಳದಲ್ಲಿ ಡ್ಯೂಟಿಗೆ ಹಾಜರು. ಮರುದಿನ ಮತ್ತದೇ ಕಾಯಕ. ಇವರಿಗೆ ಬಿಡುವು ಎನ್ನುವುದು ಗಗನಕುಸುಮ. ಆ ಕಾಯಕಜೀವಿಗಳೇ ನಮ್ಮ ‘ಆರಕ್ಷಕರು’ ಅರ್ಥಾತ್ ‘ಪೊಲೀಸರು’.

ಅಂಥವರು ಸೈಕಲ್‌ ಏರಿ, ಇಡೀ ರಾಜ್ಯ ಸುತ್ತಿದರೆ ಹೇಗಿರುತ್ತದೆ? ಅಂಥ ಪ್ರಯೋಗಕ್ಕೆ ಇಳಿದಿದ್ದ ಪೊಲೀಸರು ಈಗ ಯಶಸ್ವಿಯಾಗಿದ್ದಾರೆ. ಸೈಕಲ್‌ ಸವಾರಿಯ ಮಹತ್ವದ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವ ಬಗೆಯನ್ನು ಅವರು ರಾಜ್ಯದೆಲ್ಲೆಡೆ ಈ ಮೂಲಕ ತಿಳಿಸಿಕೊಟ್ಟಿದ್ದಾರೆ.

ಹೌದು. ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ), ಭಾರತೀಯ ಸಶಸ್ತ್ರ ಮೀಸಲು ಪಡೆ (ಐಆರ್‌ಬಿ) ಹಾಗೂ ಪೊಲೀಸ್‌ ತರಬೇತಿ ಶಾಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ  ಸೈಕಲ್‌ ಜಾಥಾ ಮೂಲಕ ರಾಜ್ಯವನ್ನು ಸುತ್ತಿ ಬಂದಿದ್ದಾರೆ.

ADVERTISEMENT

ಆ ಮೂಲಕ ಸಾರ್ವಜನಿಕರಲ್ಲಿ ಐಕ್ಯತೆ, ಕ್ರೀಡಾ ಮನೋಭಾವ, ಅಖಂಡತೆ ಹಾಗೂ ಯಾಂತ್ರಿಕೇತರ ಸಾರಿಗೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಜತೆಗೆ ದಾರಿಯುದ್ದಕ್ಕೂ ಹಲವೆಡೆ ಸಸಿಗಳನ್ನು ನೆಟ್ಟು ಆರೋಗ್ಯಕರ ಪರಿಸರದ ಬಗ್ಗೆಯೂ ಅರಿವು ಮೂಡಿಸಿದ್ದಾರೆ.

ಪೊಲೀಸರು ಹಾಗೂ ಸಾರ್ವಜನಿಕರ ಸಂಬಂಧ, ರಾಜ್ಯ ಸರ್ಕಾರದ ಯೋಜನೆ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಪೊಲೀಸರು ಹಮ್ಮಿಕೊಂಡಿದ್ದ ಈ ಜಾಥಾವು ಪ್ರತಿಯೊಬ್ಬ ಸಿಬ್ಬಂದಿಯಲ್ಲೂ ಉತ್ಸಾಹ ಹಾಗೂ ಹುಮ್ಮಸ್ಸು ತುಂಬಿದೆ.

ಬೆಂಗಳೂರಿಗೆ ನಾಳೆ ಬರಲಿದೆ ಈ ಜಾಥಾ: ಜುಲೈ 12ರಂದು ಬೀದರ್‌ನಿಂದ ಆರಂಭಗೊಂಡಿದ್ದ ಜಾಥಾವು ಜುಲೈ 25ರಂದು ಮಧ್ಯಾಹ್ನ ಬೆಂಗಳೂರು ತಲುಪಲಿದೆ. ಅಂದು ಜಾಥಾವನ್ನು ಭವ್ಯವಾಗಿ ಸ್ವಾಗತಿಸಲು ಇಡೀ ಪೊಲೀಸ್‌ ಇಲಾಖೆಯೇ ಸಜ್ಜಾಗಿದೆ. ಬೆಂಗಳೂರಿಗೆ ಬರುವ ‘ಸೈಕಲ್ ಜಾಥಾ’ ತಂಡವನ್ನು ಉನ್ನತ ಮಟ್ಟದಲ್ಲಿ ಸ್ವಾಗತಿಸುವ ಸಲುವಾಗಿ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂದೆ ಜುಲೈ 25ರಂದು ಸಂಜೆ 4 ಗಂಟೆಗೆ ಮುಕ್ತಾಯ ಸಮಾರಂಭವನ್ನೂ ಆಯೋಜಿಸಲಾಗಿದೆ. 

ಮೈಸೂರು ರಸ್ತೆ ಮೂಲಕ ಜಾಥಾವು ವಿಧಾನಸೌಧಕ್ಕೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಜಾಥಾವನ್ನು ಸ್ವಾಗತಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನೂ ಅವರೇ ವಹಿಸಲಿದ್ದಾರೆ.

14 ದಿನ, 1,750 ಕಿ.ಮೀ: ಆ ಜಾಥಾದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಬರೋಬ್ಬರಿ 14 ದಿನಗಳ 1,750 ಕಿ.ಮೀ. ದೂರವನ್ನು ಪೊಲೀಸರು ಸೈಕಲ್ ತುಳಿಯುತ್ತಲೇ ಕ್ರಮಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ತಾಲ್ಲೂಕು ಹಾಗೂ ಹಳ್ಳಿಗಳ ರಸ್ತೆಯಲ್ಲೂ ಸೈಕಲ್‌ ಜಾಥಾ ಸುತ್ತಿದೆ.

ಸರ್ಕಾರದ ಯೋಜನೆಗಳ ವ್ಯಾಪಕ ಪ್ರಚಾರವನ್ನೂ ಮಾಡಿದೆ. ಜಾಥಾ ಸಾಗಿದ ಮಾರ್ಗದುದ್ದಕ್ಕೂ ಪೊಲೀಸರು, ಕ್ರೀಡಾಪಟುಗಳು, ಸೈಕಲ್ ಪ್ರೇಮಿಗಳು, ಸೈಕಲ್ ಪಟುಗಳನ್ನು ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಜಾಥಾ ತಲುಪುತ್ತಿದ್ದಂತೆ ಪ್ರತಿ ಜಿಲ್ಲೆ, ನಗರ, ಹಳ್ಳಿಯಲ್ಲೂ ಶಾಲಾ ವಿದ್ಯಾರ್ಥಿಗಳು, ತಮಗೆ ಸರ್ಕಾರ ನೀಡಿದ್ದ ಸೈಕಲ್‌ ಏರಿ ಜಾಥಾಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

‘ಸೈಕಲ್ ಉಪಯೋಗಿಸುವುದರಿಂದ ದೈಹಿಕವಾಗಿ ಸದೃಢವಾಗಬಹುದು. ಈ ಬಗ್ಗೆ ಅರಿವು ಮೂಡಿಸಲು ಈ ಜಾಥಾ ಹಮ್ಮಿಕೊಂಡಿದ್ದೆವು’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್‌ ಹೇಳುತ್ತಾರೆ.

‘ಜಾಥಾದ ಮಾರ್ಗದುದ್ದಕ್ಕೂ  ಪ್ರವಾಸಿ ಸ್ಥಳಗಳಿಗೆ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದೆವು. ಆ ಮೂಲಕ ರಾಜ್ಯದ ಸಂಸ್ಕೃತಿ, ನಾಡು ನುಡಿ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರಯತ್ನಿಸಿದೆವು’ ಎನ್ನುತ್ತಾರೆ ಅವರು.

**

ಜಾಥಾ ರೂವಾರಿ ಎಡಿಜಿಪಿ ಭಾಸ್ಕರ್‌ರಾವ್‌

ಪೊಲೀಸರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿರುವ ಎಡಿಜಿಪಿ ಭಾಸ್ಕರ್‌ರಾವ್‌, ಸೈಕಲ್‌ ಜಾಥಾವೆಂಬ ಹೊಸದೊಂದು ಪ್ರಯೋಗವನ್ನು ಹುಟ್ಟುಹಾಕಿ ಉನ್ನತ ಅಧಿಕಾರಿಗಳ ಮುಂದಿಟ್ಟಿದ್ದರು. ಇದಕ್ಕೆ ಉನ್ನತ ಅಧಿಕಾರಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ, ಪೊಲೀಸ್‌ ಸಿಬ್ಬಂದಿ ಜತೆ ಸೈಕಲ್‌ ಏರಿಯೇ ಬಿಟ್ಟರು.

ಈ ಜಾಥಾದ ಮುಂಚೂಣಿಯಲ್ಲಿ ಭಾಸ್ಕರ್‌ರಾವ್‌ ಅವರ ಸೈಕಲೇ ಇತ್ತು. ಅವರು ಸಾಗುತ್ತಿದ್ದ ದಾರಿಯಲ್ಲೆಲ್ಲ, ಪೊಲೀಸ್‌ ಸಿಬ್ಬಂದಿ ಸೆಲ್ಯೂಟ್‌ ಹೊಡೆದು ಸ್ವಾಗತಿಸಿದರು.

‘ಯಾರಪ್ಪಾ. ಇದು. ಸೈಕಲ್‌ ತುಳಿಯುತ್ತಿದ್ದವನಿಗೆ ಪೊಲೀಸರು ಸೆಲ್ಯೂಟ್‌ ಹೊಡೆಯುತ್ತಿದ್ದಾರೆ’ ಎಂದು ಜನ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದರು. ಸೈಕಲ್‌ನಿಂದ ಕೆಳಗೆ ಇಳಿದ ಬಳಿಕವೇ ಅವರು ಎಡಿಜಿಪಿ ಅನ್ನೋದು ಜನರಿಗೆ ಗೊತ್ತಾಗಿದ್ದು.

**

ಸಮವಸ್ತ್ರದಲ್ಲೂ ಶಿಸ್ತು: ಜಾಥಾದಲ್ಲಿ ಪಾಲ್ಗೊಂಡ ಸಿಬ್ಬಂದಿಯ ಸಮವಸ್ತ್ರದಲ್ಲೂ ಶಿಸ್ತು ಕಾಣುತ್ತಿತ್ತು. ಹೆಲ್ಮೆಟ್‌ ಸಹ ಕಡ್ಡಾಯವಾಗಿತ್ತು. ಕಪ್ಪು, ನೀಲಿ, ಕೆಂಪು ಬಣ್ಣ ಮಿಶ್ರಿತ ಉಡುಪನ್ನು ಪ್ರತಿಯೊಬ್ಬರು ತೊಟ್ಟಿದ್ದರು. ಇದು ಜಾಥಾದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.