ADVERTISEMENT

‘ತಬಲಾ ಗುರು’ವಿಗೆ ನಾದಪೂರ್ ವಂದನೆ

ನಾದ ಲೋಕ

ಶ್ರೀದೇವಿ ಕಳಸದ
Published 25 ಆಗಸ್ಟ್ 2016, 19:30 IST
Last Updated 25 ಆಗಸ್ಟ್ 2016, 19:30 IST
ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರ ಸಂಗೀತ ಲಹರಿ
ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರ ಸಂಗೀತ ಲಹರಿ   

ಉರಿಮೊಗದವನ ಉಪಟಳಕ್ಕೆ ಬೇಸತ್ತು ಬಂದಾಗ, ಅಕ್ಕರತೆಯಿಂದ ಬರಮಾಡಿಕೊಂಡವಳು ಸಂಜೆಯ ಸಂಗಾತಿ ‘ಪೂರಿಯಾ’. ಅಲ್ಲೆಲ್ಲೋ ಸಿಕ್ಕಿಹಾಕಿಕೊಂಡಿದ್ದ ನಮ್ಮೊಳಗಿನ ಎಳೆಗಳನ್ನು ಒಂದೊಂದಾಗಿ ಬಿಡಿಸಿ, ಒಳಮನಸಿಗೆ ಮತ್ತೆ ಜೋಡಿಸುತ್ತ ಕಕ್ಕುಲತೆ ತೋರುವ ‘ಸಂಪೂರ್ಣೆ’ಯಾದಳು ಆಕೆ.

‘ಪೂರ್ವಿ’ ಆಕೆಯ ಹತ್ತಿರ ಸಂಬಂಧಿಯೇ ಆದರೂ ಅಂತರದೆಳೆಯಷ್ಟೇ ವ್ಯತ್ಯಾಸದಿಂದ ಪ್ರತ್ಯೇಕಗೊಳ್ಳುತ್ತ ವಕ್ರಗಮನೆಯಾದಳು. ಎಲ್ಲರ ಮನಸೂರೆಗೊಂಡರೂ ಕಾರುಣ್ಯವತಿ ಪೂರಿಯಾ ಗೋಚರಿಸಿದ ಛಾಯೆ ಮಾತ್ರ ತುಸು ಖಡಕ್ಕೇ!

‘ಬೆಳೆಯುತ್ತ ಬೆಳೆ’ ಇದಕ್ಕೆ ಅನ್ವರ್ಥ, ನಾಡಿನ ಹೆಮ್ಮೆಯ ತಬಲಾ ಕಲಾವಿದ ಪಂ. ರವೀಂದ್ರ ಯಾವಗಲ್. ಇವರ ಶಿಷ್ಯಬಳಗ ಗುರುಪೂರ್ಣಿಮೆ ನಿಮಿತ್ತ ಜಯನಗರದ ಜೆಎಸ್ಎಸ್ ಸಭಾಂಗಣದಲ್ಲಿ ‘ನಾದಾರ್ಪಣ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯಾವಗಲ್ ಅವರ ಸಜ್ಜನಿಕೆಗೆ, ಕಲಾವಂತಿಕೆಗೆ ಮತ್ತು ಶಿಷ್ಯಪ್ರೇಮಕ್ಕೆ ತುಂಬಿದ ಸಭಾಂಗಣವೇ ಸಾಕ್ಷಿ. ಇದೇ ಸಂದರ್ಭದಲ್ಲಿ ಪಂಡಿತ್ ಪಂ. ವೆಂಕಟೇಶಕುಮಾರ್‌ ಅವರ ಗಾಯನವೂ ಏರ್ಪಾಡಾಗಿದ್ದು ವಿಶೇಷ ಮೆರುಗು.

ಕರಾರುವಾಕ್‌ ನಡೆ
ವೆಂಕಟೇಶಕುಮಾರ್‌ ಅವರದು ಶಿಸ್ತುಬದ್ಧ- ಘರಾಣಾ ಪ್ರಧಾನ ಗಾಯನವೇ ಆದರೂ, ಅವರ ಪ್ರಸ್ತುತಿಯಲ್ಲಿ ಪ್ರಾರ್ಥನೆಯಿದೆ, ಪ್ರಶ್ನೆಗಳೂ ಇವೆ. ಹಾಗೆಯೇ ಧನ್ಯತೆಯೂ ಇದೆ, ದೂರೂ ಇವೆ. ಏನೇ ಇದ್ದರೂ ಗುರುವಿನ ಪಾದಕಮಲಗಳಿಗೇ ಸಮರ್ಪಿತ ಎಂದು ಶರಣಾಗುವ ಇವರೊಳಗೊಬ್ಬ ಮುಗ್ಧಬಾಲಕನಿದ್ದಾನೆ.

ಆ ಮುಗ್ಧತೆ, ವಿಧೇಯತೆ, ಪರಿಶ್ರಮವೇ ಅವರನ್ನು ಇಂದು ಇಷ್ಟು ದೂರ ನಡೆಸಿಕೊಂಡು ಬಂದಿರುವುದು. ವಿಲಂಬಿತ್ ಏಕತಾಲದಲ್ಲಿ ಅವರು ಪ್ರಸ್ತುತಪಡಿಸಿದ ಪೂರಿಯಾದ ಬಂದಿಶ್ ‘ಫೂಲನ ಕೀ ಹರವಾ ಬೂಂದ ಲಾವೋ’.

ಸ್ಪಷ್ಟ ಮತ್ತು ಗಂಭೀರಗತಿಯ ಆಲಾಪ, ಅಲ್ಲಲ್ಲಿ ಸೃಷ್ಟಿಯಾಗುವ ನಿಧಾನಗತಿಯ ಚಲನೆಗಳುಂಟು ಮಾಡುವ ಭಾವಸಂವೇದಿತನ, ವಾದಿ-ಸಂವಾದಿ ಸ್ವರಗಳಾದ ಪಂಚಮ, ಷಡ್ಜಗಳನ್ನು ಆಧರಿಸಿ ಸ್ವರಾಲೋಂದನ ಮತ್ತು ಮೀಂಡ್ ಪ್ರಯೋಗಿಸುವ ಪರಿ ನಾದಸುಖಕ್ಕೆ ದಾರಿಮಾಡಿಕೊಡುತ್ತಿತ್ತು.

ಕಣ್ ಸ್ವರಗಳನ್ನು ಬಳಸಿಕೊಂಡು ಮುಖ್ಯ ಸ್ವರದ ಮೇಲೆ ವಿಶ್ರಮಿಸಿ ರಸಾನುಭವ ಸೃಷ್ಟಿಸುವ ರೀತಿಗೆ, ಮಧ್ಯಲಯದಲ್ಲಿ ಬೋಲ್ ತಾನ್, ಸಪಾಟ್ ತಾನ್, ಜೋಡು ತಾನ್, ಗಮಕ ಶೈಲಿ ತಾನುಗಳ ಭೋರ್ಗರೆತಕ್ಕೆ ಶ್ರೋತೃವೃಂದ ಮಿಂದೇ ಹೋಗಿತ್ತು. ಧೃತ್ ತೀನ್ ತಾಲದಲ್ಲಿ ‘ಗಝರೇ ಬನಕರ ಆಹೀರೆ’ಯೊಂದಿಗೆ ಪೂರಿಯಾ ಶಾಂತಳಾದಳು.
 
ನಂತರ ತೀನ್ ತಾಲದಲ್ಲಿ ಬಂಧಿಯಾಗಿದ್ದುಕೊಂಡೇ ಅವತರಿಸಿದವಳು ‘ದುರ್ಗಾ’; ‘ಮಾತಾಭವಾನಿ ಕಾಳಿ’ಯಾಗಿ. ಮಧ್ಯಮ ಮತ್ತು ಷಡ್ಜ ಪ್ರಾಣಸ್ವರಗಳೇ ಆದರೂ ಪಂಚಮ ಮತ್ತು ದೈವತದ ಆಸರೆಯಲ್ಲೇ ಈಕೆಯ ಆತ್ಮಸೌಂದರ್ಯ ಅಡಗಿರುವುದು. ಆ ಸೌಂದರರ್ಯಾನುಭವವನ್ನು ಅನುಪಮವಾಗಿ ಕಟ್ಟಿಕೊಟ್ಟರು ವೆಂಕಟೇಶಕುಮಾರ್‌.

ಹೀಗೆ ಪೂರಿಯಾ ಮತ್ತು ದುರ್ಗಾ ರಾಗಗಳನ್ನು ಗ್ವಾಲಿಯರ್‌ ಮತ್ತು ಕಿರಾಣಾ ಘರಾಣಾದ ಸಂಪ್ರದಾಯಬದ್ಧ ಗಾಯಕಿಯಲ್ಲಿ ತೆರೆದಿಟ್ಟ ರೀತಿ ಅನನ್ಯ. ನಂತರ ಭಜನ್ ‘ನಾಮ್ ಜಪನ ಕ್ಯೂ ಛೋಡದಿಯಾ’, ಬಸವಣ್ಣನವರ ವಚನ ‘ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ’, ದಾಸರಪದಗಳಾದ ‘ಎಂದು ಕಾಂಬೆನು ನಂದಗೋಪನ’, ‘ಮಂತ್ರಾಲಯನಿವಾಸ ಉತ್ತಮಹಂಸ’ ಭಕ್ತಿ ಭಾವ ಚಿಂತನೆಯ ಅರಿವು ಹರಿವಿನೊಂದಿಗೆ ಸಂಪನ್ನವಾಯಿತು.

ವೆಂಕಟೇಶಕುಮಾರ್‌ ಅವರ ಶರೀರದಲ್ಲಿ ಪ್ರವಾಸ ಬಳಲಿಕೆ ತಂದಿತ್ತು. ಸಹಜವಾಗಿಯೇ ಶಾರೀರ ತುಸು ಗಡಸುತನಕ್ಕೆ ತಿರುಗಿತ್ತು. ಹೀಗಾದಾಗ ಕಲಾವಿದರು ರಾಗಗಳ ಆಯ್ಕೆಯಲ್ಲಿ  ಬದಲಾವಣೆ ಮಾಡಿಕೊಂಡರೆ, ಸಮರ್ಪಪಕ ರೀತಿಯಲ್ಲಿ ರಸಪೋಷಣೆ ಮಾಡಬಹುದಾಗಿರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲೇ ಕರುಣಾಮಯಿ ‘ಪೂರಿಯಾ’ ತುಸು ಗಂಭೀರವಾಗಿ, ದಿಟ್ಟನಡೆಯೊಂದಿಗೆ ಸಾಗಿದಳು. ಆದರೆ, ರಸಿಕವೃಂದಕ್ಕೆ ಮಾತ್ರ ಎಂದಿನಂತೆ ಅದ್ಭುತ ಕವಳವೇ. 

ತಬಲಾ ಮೇಳ
ಕಾರ್ಯಕ್ರಮದ ಮುಖ್ಯ ಆಕರ್ಷಣೆ ‘ತಬಲಾ ಮೇಳ’; ಶಿಷ್ಯರಿಂದ ಗೌರವಸಮರ್ಪಣೆ. ಯಾವಗಲ್ ಅವರು ಸಂಯೋಜಿಸಿದ ಈ ಮೇಳದ ನೇತೃತ್ವವನ್ನು ಉದಯರಾಜ್ ಕರ್ಪೂರ ವಹಿಸಿದ್ದರು. ಪ್ರಮುಖ ಶಿಷ್ಯರೆಲ್ಲಾ ಒಡಗೂಡಿ, ಝಪ್‌ ತಾಳದಲ್ಲಿ ಹೊಮ್ಮಿಸಿದ ನಾದವೇ ಮೈಜುಮ್ಮೆನ್ನಿಸುವಂತಿತ್ತು. ಅಲ್ಲಿದ್ದ ಏಳು ತಬಲಾಗಳನ್ನು ಭೂಪರಾಗದ ಒಂದೊಂದು ಸ್ವರಗಳಿಗೆ ಸಂಯೋಜಿಸಲಾಗಿದ್ದೇ ವೈಶಿಷ್ಟ್ಯ.

ದೆಹಲಿ ಘರಾಣೆಯ ಪೇಷ್ಕಾರ್‌ ಮತ್ತು ‘ಗಂಗಾಚಲನ’ದ ಕಾಯ್ದಾಗಳನ್ನು, ಗತ್, ಮುಖಡಾ, ಚಕ್ರದಾರ್‌ಗಳು ತಂಡತಂಡಗಳಲ್ಲಿ ಪ್ರಸ್ತುತಿಗೊಂಡು, ಕೊನೆಯಲ್ಲಿ ಏಕಕಾಲಕ್ಕೆ ಸಂಪೂರ್ಣಗೊಳಿಸಿದ ರೀತಿ ದಿವ್ಯ. ನಂತರ ವೇಣುಗೋಪಾಲ ರಾಜು ಸಂಯೋಜಸಿದ ಜಾನಪದ ಮತ್ತು ಸುಗಮ ಸಂಗೀತ ಆಧಾರಿತ ‘ಜಾಯ್ ಆಫ್ ರಿದಮ್ಸ್’ನಲ್ಲಿ ಗಡಾ ಸಿಂಗಾರಿ, ತಬಲಾ, ಢೋಲಕ್, ಝಂಬೆ, ಕಹೋನ್ ವಾದ್ಯಗಳು ರಂಜನೀಯ ಅಲೆಗಳಲ್ಲಿ ತೇಲಿಸಿದವು.

ಲೆಹರಾಗೆ ರಂಜನ್ ವಯಲಿನ್ ನುಡಿಸಿದರೆ, ಪ್ರವೀಣ್‌ ಡಿ. ರಾವ್, ವಿಕಾಸ್ ನರೇಗಲ್, ದೀಪಕ್ ದೇಸಾಯಿ, ಉದಯ ಕುಲಕರ್ಣಿ, ಪ್ರದ್ಯುಮ್ನ, ಎಂ.ಎಸ್. ಕಿರಣ, ಶ್ರೀವತ್ಸ ಕೌಲಗಿ, ಅಲ್ಫಾನ್ಸೋ ರಾಜ್, ವಿದ್ಯಾರಣ್ಯ ಕುಲಕರ್ಣಿ, ಲೋಕೇಶ್,  ಎಂ.ಸಿ. ಶ್ರೀನಿವಾಸ್, ಕಿರಣ್ ಯಾವಗಲ್, ಗುರುಚರಣ ಗರುಡ್, ಮಧುಸೂದನ್, ಗುರುಮೂರ್ತಿ ವೈದ್ಯ ‘ತಬಲಾ ಮೇಳ’ದ ನಾದವೈಭವಕ್ಕೆ ಸಾಕ್ಷಿಯಾದರು.   

ಕೊಡುಗೆ ಎಂದರೆ...
ಕಲಾವಿದರು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ಏಕಕಾಲಕ್ಕೆ ಗುರುವೂ ಮತ್ತು ಪ್ರದರ್ಶನಕಾರನಾಗಿಯೂ ಹೊಮ್ಮುತ್ತಾರೆಂದರೆ ಅದು ಅವರ ವಿಶೇಷ ಸಾಮರ್ಥ್ಯ. ಇದಕ್ಕೆ ಸಾಧನೆಯೊಂದೇ ಕಾರಣವಲ್ಲ, ಅವರ ವ್ಯಕ್ತಿತ್ವ ಕೂಡ. ಅದಕ್ಕೇ ದೇಶದ ಪ್ರಮುಖ ತಬಲಾ ಕಲಾವಿದರ ಪಟ್ಟಿಯಲ್ಲಿ ಯಾವಗಲ್ ಕೂಡ ಕಾಣಿಸುತ್ತಾರೆ. 

ಅದಕ್ಕೆಲ್ಲ ಸಾಕ್ಷಿ ಈ ಸಂದರ್ಭದಲ್ಲಿ ಬಿಡುಗಡೆಯಾದ ಯಾವಗಲ್ ಅವರ ತಬಲಾವಾದನದ ‘ಗತಿ’ ಧ್ವನಿಸಾಂದ್ರಿಕೆ ಬಿಡುಗಡೆ ಮತ್ತು ಅವರ ಹೆಸರಿನ ವೆಬ್ ಸೈಟ್ ಲೋಕಾರ್ಪಣೆ. ಹೀಗೊಂದು ಆ ಕಾರ್ಯಕ್ರಮ ಸಾಧ್ಯವಾದುದರ ಹಿಂದೆ ನಿಜವಾದ ಕಾಳಜಿ ಇದೆ, ನಿಸ್ವಾರ್ಥ ಪ್ರೀತಿಯಿದೆ; ಇದೇ ಕೊಡುಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.