ADVERTISEMENT

ತಿನಿಸಿನ ಯಂತ್ರ ಆರೋಗ್ಯದ ಸೂತ್ರ

ಸತೀಶ ಬೆಳ್ಳಕ್ಕಿ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರು ತಿನಿಸುಗಳಿಗೂ ಯಂತ್ರಗಳನ್ನು ಅವಲಂಬಿಸಿರುವ ಕಾಲವಿದು. ಈ ಯಂತ್ರಪ್ರಜ್ಞೆಗೆ ಆರೋಗ್ಯದ ಕಾಳಜಿಯನ್ನೂ ಸೇರಿಸುವ ಯತ್ನ ಮಾಡುತ್ತಿದ್ದಾರೆ ಶಂಕರ್‌ ಪ್ರಸಾದ್.

ಒಂದು ವಸ್ತುವನ್ನು ಹೇಗೆಲ್ಲಾ ಮಾರ್ಕೆಂಟಿಗ್‌ ಮಾಡಬಹುದು ಎಂಬುದು ಎಂಬಿಎ ಪದವೀಧರರಿಗೆ ಚೆನ್ನಾಗಿ ಗೊತ್ತು. ಮಾಮೂಲಿ ಜನರು ಒಂದು ವಸ್ತು ಬಿಕರಿ ಮಾಡಲು ಮೂರು ಬಗೆಯಲ್ಲಿ ಆಲೋಚಿಸಿದರೆ, ಇವರು ನೂರು ಸಾಧ್ಯತೆಗಳ ಬಗ್ಗೆ ಚಿಂತಿಸುತ್ತಾರೆ. ಆನ್‌ಲೈನ್‌ ವ್ಯಾಪಾರದಲ್ಲಿ ಕ್ರಾಂತಿ ಮಾಡಿದ ಫ್ಲಿಪ್‌ಕಾರ್ಟ್‌ನ ಪ್ರತಿಭೆಗಳಂತೆ, ಸ್ನ್ಯಾಕ್‌ಸ್ಮಾರ್ಟ್‌ ಎಂಬ ಹೆಲ್ದಿಫುಡ್‌ ವೆಂಡಿಂಗ್‌ ಮಷಿನ್‌ನ ಹಿಂದೆಯೂ ಒಬ್ಬ ವಿಭಿನ್ನ ಆಲೋಚನೆಯ ಸಿಇಒ ಇದ್ದಾರೆ. ಅವರ ಹೆಸರು ಶಂಕರ್‌ ಪ್ರಸಾದ್‌. ಕಾರ್ಪೊರೇಟ್‌ ಕ್ಷೇತ್ರದಲ್ಲಿ ಇಪ್ಪತ್ತೈದು ವರ್ಷ ದುಡಿದ ಅನುಭವವನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ಸ್ಟಾರ್ಟ್‌ಅಪ್‌ ಶುರುಮಾಡಿರುವ ಇವರು, ಅಲ್ಪ ಬಂಡವಾಳದಲ್ಲಿ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಕಾರ್ಪೊರೇಟ್‌ ಉದ್ಯೋಗಿಗಳ ಆರೋಗ್ಯದ ಕಾಳಜಿಯನ್ನೂ ಇಟ್ಟುಕೊಂಡು ಭಾರತೀಯ ವೆಂಡಿಂಗ್‌ ಮಷಿನ್‌ ಪರಿಕಲ್ಪನೆಯಲ್ಲಿ ಕ್ರಾಂತಿ ಮಾಡುವ ಹುಮ್ಮಸ್ಸಿನಲ್ಲಿರುವ ಶಂಕರ್‌, ಈಗ ಅಂತಹ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದಾರೆ. 

ಜನರೆಲ್ಲ ಮಲಗಿರುವ ಸಮಯದಲ್ಲಿ ಎಷ್ಟೋ ಕಾರ್ಪೊರೇಟ್ ಉದ್ಯೋಗಿಗಳು ಕೆಲಸ ಮಾಡುತ್ತಿರುತ್ತಾರೆ. ಒತ್ತಡದಲ್ಲಿ ಸಿಕ್ಕಿದ್ದನ್ನು ತಿನ್ನವ ಇವರಿಗೆ ನಿಗದಿತವಾಗಿ ವ್ಯಾಯಾಮ ಮಾಡಲು ಸಮಯ ಇರುವುದಿಲ್ಲ. ಆದ್ದರಿಂದ ಅನೇಕರು ಜೀವನಶೈಲಿಗೆ ಸಂಬಂಧಿಸಿದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಚಿಂತಿಸಿದ ಶಂಕರ್‌, ಕಾರ್ಪೊರೇಟ್‌ ಜನರಿಗೆ ಆರೋಗ್ಯಪೂರ್ಣ ಆಹಾರ ಒದಗಿಸುವ ಉದ್ದೇಶದಿಂದ ಹೆಲ್ದಿಫುಡ್‌ ವೆಂಡಿಂಗ್‌ ಮಷಿನ್‌ ಪರಿಚಯಿಸಿದರಂತೆ. ಅಂದಹಾಗೆ, ಭಾರತದಲ್ಲೇ  ಈ ಬಗೆಯ ಪರಿಕಲ್ಪನೆ ಮೊದಲನೆಯದ್ದು ಎನ್ನುವ ಶಂಕರ್‌, ಆ ಐಡಿಯಾವನ್ನು ಜಾರಿಗೊಳಿಸಿದ ಹಿಂದಿನ ಉದ್ದೇಶ ಹಂಚಿಕೊಂಡರು.

‘ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಎಂಜಿನಿಯರಿಂಗ್‌ ಮುಗಿಸಿದ ನಂತರ ಎಂಬಿಎ ಮಾಡಿದೆ. ನಂತರ 25 ವರ್ಷ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ಆಮೇಲೆ ಸ್ಟಾರ್ಟ್‌ಅಪ್‌ ಬಗ್ಗೆ ಯೋಚಿಸಿದೆ. ಅದರ ಅನುಭವ ಪಡೆದುಕೊಳ್ಳಲು ಮತ್ತೆ ಎರಡು ವರ್ಷ ಚಿಕ್ಕ ಚಿಕ್ಕ ಕಂಪೆನಿಗಳಲ್ಲಿ ಕೆಲಸ ಮಾಡಿದೆ.  ಆಗಲೇ ನನಗೆ ಸ್ಟಾರ್ಟ್‌ಅಪ್‌ ಅಂದರೆ ಏನು ಎಂದು ಅರ್ಥವಾದದ್ದು.

ಹೆಲ್ದಿಫುಡ್‌ ವೆಂಡಿಂಗ್‌ ಮೆಷಿನ್‌ ಪ್ರಾರಂಭಿಸಬೇಕು ಎಂಬ ಆಲೋಚನೆ ನನ್ನಲ್ಲಿ ಹೊಳೆದಿದ್ದು ಆಕಸ್ಮಿಕ. ನಾನು ಕಂಪೆನಿಯಲ್ಲಿದ್ದಾಗ ಒಬ್ಬನನ್ನು ಇಂಟರ್‌ವ್ಯೂ ಮಾಡುತ್ತಿದ್ದೆ. ಆತನ ಬಗ್ಗೆ ಕೇಳಿದಾಗ, ‘ವೆಂಡಿಂಗ್‌ ಮಷಿನ್‌ ಬ್ಯುಸಿನೆಸ್‌ನಲ್ಲಿ ಇದ್ದೇನೆ’ ಅಂದ. ಆಗಲೇ ನನಗೆ ಈ ಐಡಿಯಾ ಫ್ಲಾಷ್‌ ಆಗಿದ್ದು. ವೆಂಡಿಂಗ್‌ ಮಷಿನ್‌ ಅಂದರೆ, ಬರೀ ಜಂಕ್‌ಫುಡ್‌ ಮಷಿನ್‌ ಎಂಬ ಕಲ್ಪನೆ ಇದೆ. ಅದು ಕೇವಲ ಮಷಿನ್‌. ಅದರೊಳಗೆ ನಾವು ಏನು ಇಡುತ್ತೇವೆಯೋ ಅದು ಹೊರಗೆ ಬರುತ್ತದೆ. ಅದರೊಳಗೆ ಜಂಕ್‌ಫುಡ್ಡನ್ನೇ ಯಾಕೆ ಇಡಬೇಕು? ಬೇರೆ ತಿನಿಸುಗಳನ್ನೂ ಇಡಬಹುದಲ್ಲ ಎಂದು ಅನಿಸಿತು. 

ನನ್ನ ಯೋಜನೆ ಜಾರಿಗೆ ತರುವ ಮೊದಲು ವಿವಿಧ ಕಂಪೆನಿಗಳನ್ನು ಸಂಪರ್ಕಿಸಿದೆ. ಸಿಕ್ಕ  ಉತ್ತಮ ಪ್ರತಿಕ್ರಿಯೆಯಿಂದ ನನ್ನ ಹುಮ್ಮಸ್ಸು ಇಮ್ಮಡಿಗೊಂಡಿತು. ಈಗ ಒಳ್ಳೊಳ್ಳೆ ಕಂಪೆನಿಗಳಲ್ಲಿ ವೆಂಡಿಂಗ್‌ ಮಷಿನ್‌ಗಳನ್ನು ಇರಿಸಿದ್ದೇನೆ. ಪ್ರತಿಕ್ರಿಯೆಯೂ ಚೆನ್ನಾಗಿದೆ.
ಯಾವ ಫುಡ್‌ ಚೆನ್ನಾಗಿ ಹೋಗುತ್ತಿದೆ. ಯಾವುದು ಹೋಗುತ್ತಿಲ್ಲ. ಅದಕ್ಕೆ ಏನು ಕಾರಣ ಎಂಬುದನ್ನು ಪ್ರತಿ ತಿಂಗಳೂ ವಿಶ್ಲೇಷಿಸುತ್ತೇನೆ. ಗ್ರಾಹಕರು ಇಷ್ಟ ಪಡದ ಆಹಾರ ತೆಗೆದು, ಅಲ್ಲಿ ಬೇರೆ ಏನನ್ನು ಇಡಬಹುದು ಎಂದು ಯೋಚಿಸುತ್ತೇನೆ. ಒಂದು ಕಂಪೆನಿಯಲ್ಲಿ 500 ಜನರಿದ್ದರೆ ಎಲ್ಲರೂ ನಮ್ಮ ಮಷಿನ್‌ನಿಂದ ಖರೀದಿಸುತ್ತಾರೆ ಎಂಬದೂ ಖಾತ್ರಿ ಇಲ್ಲ. ತಗೆದುಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ, ಅವರಲ್ಲಿ ಕೆಲವರಾದರೂ ಖರೀದಿಸಿದರೆ, ಅಂಥವರ ಆರೋಗ್ಯವನ್ನಾದರೂ ನೋಡಿಕೊಂಡಂತೆ ಆಗುತ್ತದೆ’ ಎನ್ನುತ್ತಾರೆ ಶಂಕರ್‌.

ಮಷಿನ್‌ನಲ್ಲಿ ಇವೆಲ್ಲಾ ಇದೆ...
ಕೆಲವರು ತಿಂಡಿ ತಿನ್ನದೇ ಆಫೀಸ್‌ಗೆ ಹೋಗುತ್ತಾರೆ. ಅಂಥವರಿಗಾಗಿ, ಕಾರ್ನ್‌ಫ್ಲೇಕ್ಸ್‌, ಓಟ್ಸ್‌, ನ್ಯೂಸ್ಲಿ ಹೀಗೆ ಹಾಲು ಬೆರೆಸಿಕೊಂಡು ತಿನ್ನುವ ಅನೇಕ ತಿನಿಸುಗಳು ಈ ಮಷಿನ್‌ನಲ್ಲಿ ಸಿಗುತ್ತವೆ. ಜೊತೆಗೆ ವೈವಿಧ್ಯಮಯ ಕುಕ್ಕೀಸ್, ಚಿಕ್ಕಿ, ಡ್ರೈಫ್ರೂಟ್ಸ್‌, ಕ್ಯಾಷೂ, ಸಾಲ್ಟೆಡ್‌ ಪೀನಟ್ಸ್‌, ಫ್ರೂಟ್‌ ಜ್ಯೂಸ್‌, ನ್ಯೂಟ್ರಿಬಾರ್‌, ಬಟರ್‌ಮಿಲ್ಕ್‌ ಹೀಗೆ 30ರಿಂದ 35 ಬಗೆಯ ತಿನಿಸುಗಳನ್ನು ಈ ಮಷಿನ್‌ನಲ್ಲಿ ಕೊಳ್ಳಬಹುದು. ‘ಈ ಮಿಷನ್‌ನಲ್ಲಿ ಆಹಾರ ಪಡೆಯಲು ನೋಟು ಅಥವಾ ಕಾಯಿನ್ಸ್‌ ಬಳಸಬಹುದು. ಇದು ಚೇಂಜ್‌ ಸಹ ನೀಡುತ್ತದೆ. ಈಗ ಬೆಂಗಳೂರಿನಾದ್ಯಂತ 25 ಹೆಲ್ದಿಫುಡ್‌ ವೆಂಡಿಂಗ್‌ ಮಷಿನ್‌ಗಳನ್ನು ಇರಿಸಿದ್ದೇನೆ. ಅವೆಲ್ಲವೂ ಚೆನ್ನಾಗಿ ನಡೆಯುತ್ತಿವೆ’ ಎನ್ನುವ ಶಂಕರ್‌ ಅವರಿಗೆ ಸದ್ಯಕ್ಕೆ ಕಂಪೆನಿಗಳೇ ಟಾರ್ಗೆಟ್‌.

ಮಷಿನ್‌ ಹೀಗೆ ಕಾರ್ಯನಿರ್ವಹಿಸುತ್ತದೆ...
‘ಒಂದು ಕಂಪೆನಿಗೆ ವೆಂಡಿಂಗ್‌ ಮಷಿನ್‌ ಇನ್‌ಸ್ಟಾಲ್‌ ಮಾಡಿದರೆ ಆ ಕಂಪೆನಿಯವರು ನನಗೆ ಬಾಡಿಗೆ ಕೊಡುತ್ತಾರೆ. ನಮ್ಮ ಹುಡುಗರು ಬೆಳಿಗ್ಗೆ 4ಕ್ಕೆ ಎದ್ದು ಒಂದೊಂದು ವೆಹಿಕಲ್ಸ್‌ನಲ್ಲಿ ತಿನಿಸುಗಳನ್ನು ಇರಿಸಿಕೊಂಡು ಮಷಿನ್‌ ಬಳಿ ಹೋಗಿ, ಅಲ್ಲಿ ಏನೇನು ಖರ್ಚಾಗಿದೆಯೋ ನೋಡಿ ತುಂಬಿಸುತ್ತಾರೆ. ಕಾಯಿನ್ಸ್‌ ಖಾಲಿಯಾಗಿದ್ದರೆ ಅವನ್ನೂ ತುಂಬಿಸುತ್ತಾರೆ. ಚೇಂಚ್‌ ಇಲ್ಲದಿದ್ದರೆ ಮಷಿನ್‌ ಕೆಲಸ ಮಾಡುವುದಿಲ್ಲ. ಒಬ್ಬ ಹುಡುಗ 15 ಮಷನ್‌ಗಳನ್ನು ನಿರ್ವಹಿಸುತ್ತಾನೆ. ಮಷಿನ್‌ನಲ್ಲಿರುವುದೆಲ್ಲಾ ಪ್ಯಾಕೇಜ್ಡ್ ಆಹಾರ. ಗುಣಮಟ್ಟ ಎಲ್ಲ ಕಂಪೆನಿಯದ್ದೇ. ಹಾಗಾಗಿ, ನಾನು ಉತ್ತಮ ಕಂಪೆನಿಯ ಪದಾರ್ಥಗಳನ್ನೇ ಕೊಂಡು ಮಷಿನ್‌ಗೆ ಹಾಕುತ್ತೇನೆ. ನನ್ನಲ್ಲಿ ₨10ರಿಂದ ₨30 ಬೆಲೆಯ ಪದಾರ್ಥಗಳಿವೆ’ ಎಂಬ ವಿವರಣೆ ನೀಡುತ್ತಾರೆ ಶಂಕರ್‌.

ಕಡಿಮೆ ಹೂಡಿಕೆ
ಶಂಕರ್‌ ಈ ಬ್ಯುಸಿನೆಸ್‌ ಶುರು ಮಾಡಲು ಮೊದಲಿಗೆ  ₨10 ಲಕ್ಷ ಬಂಡವಾಳ ಹೂಡಿದರಂತೆ. ‘ಒಂದು ಮಷಿನ್‌ಗೆ ಅಂದಾಜು ₨2 ಲಕ್ಷ ಆಗುತ್ತದೆ. ಸೆಗಾ ಎಂಬ ಅಮೆರಿಕನ್‌ ಕಂಪೆನಿಯು ಈ ವೆಂಡಿಂಗ್‌ ಮಷಿನ್‌ಗಳನ್ನು ತಯಾರಿಸುತ್ತದೆ. ಅದರ ಒಂದು ಪ್ಲಾಂಟ್‌ ಹರಿಯಾಣದಲ್ಲಿದೆ. ನಾನು ಅಲ್ಲಿಂದಲೇ ಈ ಮಷಿನ್‌ಗಳನ್ನು ಖರೀದಿಸಿಸುತ್ತೇನೆ. ಈಗ ನಗರದಾದ್ಯಂತ 25 ಮಷಿನ್‌ಗಳನ್ನು ಹಾಕಿದ್ದು, ಇನ್ನೂ 10 ಮಷಿನ್‌ಗಳಿಗೆ ಬೇಡಿಕೆ ಇಟ್ಟಿದ್ದೇನೆ. ಒಟ್ಟಾರೆಯಾಗಿ, ಈಗ ₨60ರಿಂದ 70 ಲಕ್ಷ ಹಣ ಹೂಡಿದ್ದೇನೆ’ ಎನ್ನುವುದು ಶಂಕರ್‌ ಮಾತು.

ಮುಂದಿನ ಯೋಜನೆ
‘ಮನೆಯಲ್ಲೇ ಕುಳಿತು ಯಾವ ಮಷಿನ್‌ನಲ್ಲಿ ಏನು ಖರ್ಚಾಗಿದೆ ಎಂದು ತಿಳಿಯುವ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ. 100ರಿಂದ 150 ಮಷಿನ್‌ಗಳನ್ನು ಬೆಂಗಳೂರಿನಲ್ಲಿ ಹಾಕುವವರೆಗೂ ಬೇರೆ ಏನನ್ನೂ ಯೋಚಿಸದಿರಲು ನಿರ್ಧರಿಸಿದ್ದೇನೆ. ಆಮೇಲಷ್ಟೇ, ಕಂಪೆನಿಗಳು ಜಾಸ್ತಿ ಇರುವ ಚೆನ್ನೈ, ಹೈದರಾಬಾದ್‌, ದೆಹಲಿಯಲ್ಲಿ ವೆಂಡಿಂಗ್‌ ಮಷಿನ್‌ಗಳನ್ನು ಅಳವಡಿಸುವ ಯೋಚನೆ ಇದೆ.

ಆಹಾರವಷ್ಟೇ ಅಲ್ಲದೆ ಬೇರೆ ವಸ್ತುಗಳನ್ನೂ ಯಂತ್ರದ ಮೂಲಕ ಮಾರಬಹುದು. ಹಾಗಾಗಿ, ದೇಶದಲ್ಲಿನ ಮಾರಾಟದ ಪರಿಕಲ್ಪನೆಯನ್ನೇ ಬದಲಾಯಿಸಬೇಕು ಎಂಬ ಕನಸು ನನ್ನದು. ದೇಶದಲ್ಲಿ ದೂರಸಂಪರ್ಕ ಕ್ರಾಂತಿ ಆದಾಗ ನಾನು ಆ ಕ್ಷೇತ್ರದಲ್ಲಿದ್ದೆ. ಅದೇ ರೀತಿ ವೆಂಡಿಂಗ್‌ನಲ್ಲೂ ಕ್ರಾಂತಿ ತರುವ ಯೋಜನೆ ಇದೆ. ‘ನಮ್ಮ ಕಚೇರಿಯಲ್ಲಿ ಕೆಲವರು ಸ್ಟೇಷನರಿಗಳಿಗಾಗಿ ಒದ್ದಾಡುತ್ತಾರೆ. ಅದಕ್ಕೆ ಒಂದು ಸ್ಟೋರ್‌ ಇಡಬೇಕು. ಅದರ ಬದಲು ಅದಕ್ಕೂ ಒಂದು ವೆಂಡಿಂಗ್‌ ಮಷಿನ್‌ ಹಾಕುವುದು ಸಾಧ್ಯವೇ?’ ಎಂದು ಒಂದು ಕಂಪೆನಿಯವರು ಕೇಳಿದರು. ಇನ್ನೊಬ್ಬರು, ಐಟಿ ಪರಿಕರಗಳನ್ನು ಮಾರುವ ಮಷಿನ್‌ ಇಡುವಂತೆ ಕೋರಿದರು. ಆ ಬಗ್ಗೆಯೂ ಚಿಂತಿಸುತ್ತಿದ್ದೇನೆ. ಇವೆಲ್ಲವೂ ಇನ್ನೂ ಮಾತುಕತೆ ಹಂತದಲ್ಲಿವೆ. ಹೀಗೆ ಒಬ್ಬೊಬ್ಬರ ಬಳಿ ವ್ಯವಹರಿಸುವಾಗಲೂ ಬೇರೆ ಬೇರೆ ಐಡಿಯಾಗಳು ಹುಟ್ಟಿಕೊಳ್ಳುತ್ತಿವೆ’ ಎನ್ನುವ ಶಂಕರ್‌ ತಲೆಯಲ್ಲಿ ಸಾಕಷ್ಟು ಯೋಚನೆಗಳಂತೂ ಮೂಡಿವೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.