ADVERTISEMENT

ತೆರೆಮೇಲೆ ಮಿಂಚದ ಜೋಡಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 19:30 IST
Last Updated 30 ಜುಲೈ 2014, 19:30 IST

ಪತಿದೇವರ ಜೊತೆ ನಟಿಸದೇ ಇರುವುದು ಕರೀನಾ ಕಪೂರ್‌ಗೆ ಖುಷಿಯ ಸಂಗತಿ. ಸೈಫ್‌ ಹಾಗೂ ಅವರ ಜೋಡಿಯ ಮೂರೂ ಹಿಂದಿ ಚಿತ್ರಗಳು ಸೋತ ಹಿನ್ನೆಲೆಯಲ್ಲಿ ಎದುರಾದ ಪ್ರಶ್ನೆಗೆ ಕರೀನಾ ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಆಸಕ್ತಿಕರವಾಗಿದೆ.

‘ನಾವು ನಿಜ ಬದುಕಿನಲ್ಲಿ ಜೋಡಿ. ಹಾಗೆಂದು ಅಭಿನಯಿಸಿದ ಸಿನಿಮಾಗಳು ಯಶಸ್ವಿಯಾಗಬೇಕು ಎಂದೇನೂ ಇಲ್ಲ. ಸಿನಿಮಾಗಳು ಸೋತಿದ್ದರೆ ಅದಕ್ಕೆ ನಾವಷ್ಟೇ ಕಾರಣರಲ್ಲ. ಮುಖ್ಯವಾಗಿ ಚಿತ್ರಕಥೆಯನ್ನು ದೂರಬೇಕು. ಅದು ದುರ್ಬಲವಾಗಿದೆ ಎಂದಮೇಲೆ ಕಥೆಯಲ್ಲೂ ಹೇಳಿಕೊಳ್ಳುವಂಥದ್ದು ಪ್ರೇಕ್ಷಕರಿಗೆ ಸಿಕ್ಕಿರುವುದಿಲ್ಲ ಎಂದೇ ಅರ್ಥ’ ಎಂದು ಕರೀನಾ ಪ್ರತಿಕ್ರಿಯೆ ನೀಡಿದ್ದಾರೆ.

ಕರೀನಾ ಆದ್ಯತೆಗಳ ಪಟ್ಟಿಯಲ್ಲಿ ಪತಿಯ ಜೊತೆ ನಟಿಸುವ ಸಂಗತಿ ಇಲ್ಲವೇ ಇಲ್ಲ. ‘ತಶನ್‌’ ಸಿನಿಮಾ ಚಿತ್ರೀಕರಣದ ವೇಳೆ ಪ್ರೇಮಾಂಕುರವಾಗಿ, ‘ಕುರ್ಬಾನ್‌’ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಅವರಿಬ್ಬರ ನಡುವಿನ ಸಂಬಂಧಕ್ಕೆ ರೆಕ್ಕೆಪುಕ್ಕ ಮೂಡಿತ್ತು. ದೀರ್ಘಾವಧಿ ಚಿತ್ರೀಕರಣ ನಡೆಸಿದ ‘ಏಜೆಂಟ್‌ ವಿನೋದ್‌’ ಸಿನಿಮಾದಲ್ಲೂ ಸೈಫ್‌, ಕರೀನಾ ಜೋಡಿಯಾಗಿ ನಟಿಸಿದ್ದರು. ಈ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಅದಕ್ಕೆ ದುರ್ಬಲ ಸ್ಕ್ರಿಪ್ಟ್‌ಗಳೇ ಕಾರಣ ಎನ್ನುವ ಕರೀನಾ ವೃತ್ತಿ ಬದುಕಿನ ಆದ್ಯತೆಗಳು ಬೇರೆಯೇ ಆಗಿವೆ.

‘ಗಂಡನ ಸಿನಿಮಾಗಳಲ್ಲಿ ನಟಿಸದೇ ಇರುವುದು ನನಗೆ ಸಂತಸದ ವಿಷಯ’ ಎನ್ನುವ ಅವರ ಮಾತನ್ನು ಕೇಳಿ ಹುಬ್ಬು ಹಾರಿಸಿದವರೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.