ADVERTISEMENT

‘ದಾಸಗೀತಾಮೃತ’ಕ್ಕೆ ರಾಜನ್ ಸಂಗೀತ

​ಪ್ರಜಾವಾಣಿ ವಾರ್ತೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಗಾಯಕ ಚಂದ್ರಶೇಖರ್ ಅವರೊಂದಿಗೆ ರಾಜನ್‌
ಗಾಯಕ ಚಂದ್ರಶೇಖರ್ ಅವರೊಂದಿಗೆ ರಾಜನ್‌   

ಸುಮಾರು 30 ವರ್ಷಗಳ ಕಾಲ ಚಿತ್ರ ಸಂಗೀತದಲ್ಲಿ ಮಿಂಚಿದ್ದು ರಾಜನ್‌–ನಾಗೇಂದ್ರ ಜೋಡಿ. 17 ವರ್ಷಗಳ ಹಿಂದೆ ಕಿರಿಯರಾದ ನಾಗೇಂದ್ರ ಅನಾರೋಗ್ಯದಿಂದ ತೀರಿಕೊಂಡರು. ನಂತರದ ದಿನಗಳಲ್ಲಿ ಸಪ್ತಸ್ವರಾಂಜಲಿ ಇನ್‌ಸ್ಟಿಟ್ಯೂಟ್ ಮೂಲಕ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ರಾಜನ್ ಹಲವು ಪ್ರತಿಭೆಗಳಿಗೆ ತಮ್ಮ ವಿದ್ಯೆ ಧಾರೆ ಎರೆದರು.

‘ಸಂಗೀತ ಸಮಾಜಮುಖಿ ಯಾಗಬೇಕು’ ಎಂಬ ರಾಜನ್‌ ಅವರ ಆಶಯದ ಭಾಗವಾಗಿ ‘ರಾಜನ್–ನಾಗೇಂದ್ರ ಟ್ರಸ್ಟ್’ ಸ್ಥಾಪನೆಯಾಯಿತು. ಈ ಟ್ರಸ್ಟ್‌ನ ಮೊದಲನೆಯ ಯೋಜನೆ ‘ದಾಸಗೀತಾಮೃತ’ ಡಿವಿಡಿ.

ಪುರಂದರದಾಸರ ಕೃತಿಗಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಸಮೀಕರಿಸಿರುವುದು ಈ ಡಿವಿಡಿಯ ವಿಶೇಷ.

ADVERTISEMENT

‘ಪುರಂದರದಾಸರ ಕೃತಿಗಳು ಕಟ್ಟಿಕೊಡುವ ಜೀವನದ ಮೌಲ್ಯಗಳ ಬಗ್ಗೆ ಬಹುಕಾಲದಿಂದ ಯೋಚಿಸುತ್ತಿದ್ದೆ. ಭಗವದ್ಗೀತೆಯನ್ನು ಯಾಕೆ ಸಮೀಕರಿಸಬಾರದು ಎನಿಸಿತು. ಪುರಂದರದಾಸರ 12 ಕೃತಿಗಳನ್ನು ಆರಿಸಿಕೊಂಡೆ ಅಭ್ಯಾಸ ಮಾಡಿದೆ. ಅವುಗಳಿಗೆ ಅರ್ಥ ಬರುವ ಭಗವದ್ಗೀತೆಯ ಶ್ಲೋಕವನ್ನು ಜೋಡಿಸಿ, ರಾಗ ಸಂಯೋಜನೆ ಮಾಡಿದೆ’ ಎಂದು ‘ದಾಸಗೀತಾಮೃತ’ ಹುಟ್ಟಿದ ಹಿನ್ನೆಲೆಯನ್ನು ರಾಜನ್ ವಿವರಿಸುತ್ತಾರೆ.

ಭಗವದ್ಗೀತೆಯಲ್ಲಿ ಪಾಂಡಿತ್ಯ ಗಳಿಸಿರುವ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಇಸ್ಕಾನ್‌ನ ವರದಕೃಷ್ಣ ದಾಸಪ್ರಭು, ಹೋಲಿಸ್ಟಿಕ್ ಸ್ಪಿರಿಚುಯಲ್ ಹೀಲರ್ ರಾಮಚಂದ್ರ ಗುರೂಜಿ  ಅವರು ಶ್ಲೋಕಗಳ ಅರ್ಥ ವಿವರಿಸಿದ್ದಾರೆ.

ಸಂಗೀತಾ ಕಟ್ಟಿ ಕುಲಕರ್ಣಿ, ರಾಜೇಶ್ ಕೃಷ್ಣನ್, ಅಜಯ್ ವಾರಿಯರ್, ಅನುರಾಧಾ ಭಟ್, ಸ್ಮಿತಾ ಕಾರ್ತಿಕ್, ಶ್ರೀನಿವಾಸ್ ಪ್ರಸನ್ನ, ಡಾ.ಚಂದ್ರಶೇಖರ್ ಅವರು ಹಾಡಿದ್ದಾರೆ.

**

‘ದಾಸಗೀತಾಮೃತ’ ಡಿವಿಡಿ ಬಿಡುಗಡೆ:
ಅತಿಥಿ– ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ವಿದುಷಿ ಶ್ಯಾಮಲಾ ಜಿ.ಭಾವೆ, ಸಂಗೀತ ನಿರ್ದೇಶಕ– ರಾಜನ್,
ಸಂಗೀತ ಕಾರ್ಯಕ್ರಮ: ಗಾಯನ– ಸಂಗೀತಾ ಕಟ್ಟಿ, ರಾಜೇಶ್ ಕೃಷ್ಣನ್, ಸ್ಮಿತಾ ಕಾರ್ತಿಕ್. ಸ್ಥಳ– ತರಳಬಾಳು ಕೇಂದ್ರ, ಆರ್‌.ಟಿ.ನಗರ, ಸಂಜೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.