ADVERTISEMENT

ದೀಪಾವಳಿಗೆ ‘ಅಭ್ಯಂಗ ಸ್ನಾನ’ದ ಮೆರುಗು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ದೀಪಾವಳಿಗೆ ‘ಅಭ್ಯಂಗ ಸ್ನಾನ’ದ ಮೆರುಗು
ದೀಪಾವಳಿಗೆ ‘ಅಭ್ಯಂಗ ಸ್ನಾನ’ದ ಮೆರುಗು   

ದೀಪ, ಪಟಾಕಿ, ಸಿಹಿತಿಂಡಿಗಳೊಂದಿಗೆ ದೀಪಾವಳಿ ವಿಶೇಷ ಎನಿಸುವುದು ಅಭ್ಯಂಗ ಸ್ನಾನದಿಂದ. ಚುಮುಚುಮು ಚಳಿಯಲ್ಲೂ ಮಕ್ಕಳಾದಿಯಾಗಿ ಎಲ್ಲರೂ ಬೇಗ ಏಳಬೇಕು. ಬೆಚ್ಚಗಾದ ಎಣ್ಣೆಯನ್ನು ಮೈಕೈಗೆ ನೀವಿಕೊಳ್ಳಬೇಕು. ಕಿವಿಗೆ ಬೀಳುವ ಹನಿ ಎಣ್ಣೆ ನೀಡುವ ಆಹ್ಲಾದಕ್ಕೆ ತೆರೆದುಕೊಳ್ಳಬೇಕು. ಎಣ್ಣೆ ಹೀರಿಕೊಂಡ ಮೈಗೆ ಬಿಸಿಬಿಸಿ ನೀರು ಬೀಳಬೇಕು.

ಹಳ್ಳಿ ಪ್ರದೇಶಗಳಲ್ಲಿ ದೀಪಾವಳಿಯಲ್ಲಿ ಈ ಎಲ್ಲಾ ರೂಢಿ ಮಾಮೂಲಿ. ದೀಪಾವಳಿಯಂದು ಪಾಲಿಸುವ ಈ ನಿಯಮಗಳಿಗೆ ‍ಪುರಾಣಗಳಲ್ಲಿ ಕಥೆಗಳೂ ಇವೆ. ಅದರ ಜೊತೆಗೆ ಆರೋಗ್ಯ ವೃದ್ಧಿಯ ವಿಷಯದಲ್ಲಿ ಅಭ್ಯಂಗ ಸ್ನಾನಕ್ಕೆ ಮಹತ್ವದ ಸ್ಥಾನವಿದೆ.

ಇಂದಿನ ವೇಗದ ಬದುಕಿನ ಓಟಕ್ಕೆ ಸಿಕ್ಕ ಅನೇಕರು ಮಾನಸಿಕ ಒತ್ತಡ, ದೇಹಾಯಾಸಗಳನ್ನು ಕಡಿಮೆ ಮಾಡಿಕೊಳ್ಳಲು ಮಸಾಜ್‌ ಪಾರ್ಲರ್‌ಗಳ ಮೊರೆ ಹೋಗುತ್ತಿರುವುದು ಸಾಮಾನ್ಯ. ಅಲ್ಲದೆ ಕಳೆದ ಆರೇಳು ವರ್ಷಗಳಿಂದ ಜೀರಿಯಾಟ್ರಿಕ್ಸ್‌ ಎನ್ನುವ ಪರಿಕಲ್ಪನೆಯೂ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಆಯುರ್ವೇದದ ಅಷ್ಟಾಂಗದಲ್ಲಿ ಜರಾ ಕೂಡ ಒಂದು.  ಜೀವಕೋಶಗಳು ಬೇಗ ಮುಪ್ಪಾಗುವುದನ್ನು ತಡೆಯಲು ನಡೆಸಲಾಗುವ ಚಿಕಿತ್ಸೆ ಇದು. ಎರಡು ದಶಕಗಳ ಹಿಂದೆ ಆ್ಯಂಟಿ ಆಕ್ಸಿಡೆಂಡ್‌ಗೆ ಸಂಬಂಧಿಸಿದಂತೆ ಜಪಾನ್‌ನಲ್ಲಿ ನಡೆಸಲಾದ ಸಂಶೋಧನೆಯಲ್ಲೂ ಬೇಗನೆ ಮುಪ್ಪಾಗುವಿಕೆಯನ್ನು ತಡೆಯಲು ಎಳ್ಳೆಣ್ಣೆ ಬಳಕೆ ಅತ್ಯುತ್ತಮ ಎಂದು ಕಂಡುಕೊಂಡರು.

ADVERTISEMENT

ಆಯುರ್ವೇದದ ಪ್ರಕಾರ ನಿತ್ಯ ಅಭ್ಯಂಗ ಸ್ನಾನ ಮಾಡಬೇಕು. ದೀಪಾವಳಿಯ ಅಭ್ಯಂಗ ಸ್ನಾನವು ಆ ಪರಿಪಾಠಕ್ಕೆ ಇರುವ ಪ್ರಾಧಾನ್ಯತೆಯನ್ನು ಸೂಚಿಸುತ್ತದೆ. ಅಭ್ಯಂಗ ಸ್ನಾನ ವಾತಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಲು, ಮುಪ್ಪು ಮುಂದೂಡಲು, ಸುಸ್ತು ಕಡಿಮೆ ಮಾಡಲು, ಕಣ್ಣಿನ ಶಕ್ತಿ ಹೆಚ್ಚಲು ಸಹಕಾರಿ. ಅಭ್ಯಂಗವು ಚೆನ್ನಾಗಿ ನಿದ್ದೆ ಬರುವಂತೆ ಮಾಡುತ್ತದೆ. ತ್ವಚೆಯ ಸೌಂದರ್ಯವನ್ನೂ ಕಾಪಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.

ಅಭ್ಯಂಗ ಸ್ನಾನಕ್ಕೆ ಇಂಥದ್ದೇ ಎಣ್ಣೆ ಆಗಬೇಕು ಎನ್ನುವ ನಿಯಮವಿಲ್ಲ. ಎಲ್ಲ ಎಣ್ಣೆಯೂ ಒಳ್ಳೆಯದೇ. ಆದರೆ ಎಳ್ಳೆಣ್ಣೆ ಹೆಚ್ಚು ಶ್ರೇಷ್ಠ. ಅವರವರ ದೇಹಾರೋಗ್ಯಕ್ಕೆ ಅನುಗುಣವಾಗಿ ಬೇರೆಬೇರೆ ಎಣ್ಣೆಗಳನ್ನು ಬಳಸುವುದು ಉತ್ತಮ. ಕಫ ಪ್ರಕೃತಿ ಇರುವವರ ಕ್ಷೀರಫಲ ತೈಲ, ಪಿತ್ತ ಪ್ರಕೃತಿ ಇರುವವರು ಧನ್ವಂತರಿ ತೈಲ, ವಾತ ಪೃಕೃತಿಯವರಿಗೆ ಅಶ್ವಗಂಧಾದಿ ತೈಲ ಬಳಸಿದರೆ ಒಳ್ಳೆಯದು. ಆಯುರ್ವೇದದ ಶೇ 90ರಷ್ಟು ಔಷಧಗಳಲ್ಲಿ ಎಳ್ಳೆಣ್ಣೆ ಬಳಕೆ ಮಾಡಲಾಗುತ್ತದೆ.

ತೈಲವನ್ನು ಸರ್ವಾಂಗಕ್ಕೆ ನಿತ್ಯ ಹಚ್ಚುವುದು ಒಳ್ಳೆಯದು. ಅದು ಸಾಧ್ಯವಿಲ್ಲ ಎಂದಾದರೆ ಕನಿಷ್ಠ ತಲೆ, ಪಾದ, ಕಿವಿಗೆ ಹಚ್ಚಬೇಕು. ಇದು ಮಧ್ಯ ವಯಸ್ಸಿನಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಬರುವ ವಾತ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ಎಣ್ಣೆಯನ್ನು ತೀರಾ ಬಿಸಿ ಮಾಡಿ ಹಚ್ಚುವುದು ಸರಿಯಲ್ಲ. ಬಿಸಿ ಮಾಡಿದಷ್ಟೂ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಉಗುರು ಬೆಚ್ಚಗೆ ಮಾಡಿ ಹಚ್ಚಿಕೊಳ್ಳಬೇಕು. ಆಯುರ್ವೇದದ ಪ್ರಕಾರ ಎಣ್ಣೆಯನ್ನು ನೇರವಾಗಿ ಬಿಸಿ ಮಾಡುವಂತಿಲ್ಲ. ನೀರನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಇಟ್ಟು ಬೆಚ್ಚಗೆ ಮಾಡಬೇಕು. ಅದು ಒಳ್ಳೆಯದು. ಹಚ್ಚಿದ ಆರು ನಿಮಿಷದಲ್ಲಿ ದೇಹ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಗಂಟೆಗಟ್ಟಲೆ ಕಾದು ಸ್ನಾನ ಮಾಡುವ ಅಗತ್ಯವಿಲ್ಲ. ಎಣ್ಣೆ ಹಚ್ಚಿ ಹತ್ತು ನಿಮಿಷ ಬಿಟ್ಟು ಸ್ನಾನ ಮಾಡುವುದು ಒಳ್ಳೆಯದು.

ಪ್ರತಿಯೊಂದು ಅಂಗಕ್ಕೂ ಎಣ್ಣೆಯನ್ನು ಹಚ್ಚುವ ವಿಧಾನವನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಎದೆ, ಹೊಟ್ಟೆ ಹಾಗೂ ಮಂಡಿ ಭಾಗಕ್ಕೆ ವೃತ್ತಾಕಾರದಲ್ಲಿ ಮಸಾಜ್‌ ಮಾಡಬೇಕು. ದೇಹದ ಉಳಿದ ಭಾಗಗಳಲ್ಲಿ ರೋಮ ಯಾವ ಮುಖವಾಗಿದೆಯೋ ಹಾಗೆಯೇ ಮಸಾಜ್‌ ಮಾಡಬೇಕು. ಅಂದರೆ ಮೇಲಿನಿಂದ ಕೆಳಮುಖವಾಗಿ ಮಸಾಜ್‌ ಮಾಡತಕ್ಕದ್ದು. ನಿತ್ಯ ಮಸಾಜ್‌ ಮಾಡುತ್ತಿದ್ದರೆ ಒಂದು ತಿಂಗಳಲ್ಲಿ ಕೊನೆಯ ಜೀವಕೋಶಕ್ಕೂ ಅದರ ಲಾಭ ತಲುಪುತ್ತದೆ. ಮಸಾಜ್‌ ಮಾಡುವುದರಿಂದ ಜೀವಕೋಶಗಳಿಗೆ ಶಕ್ತಿ ಹರಿದು, ಚರ್ಮವು ಕಾಂತಿಯುತವಾಗುತ್ತದೆ.

(ಮಾಹಿತಿ: ಡಾ.ಗಿರಿಧರ ಕಜೆ, ಪ್ರಶಾಂತಿ ಆಯುರ್ವೇದ ಕೇಂದ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.