ADVERTISEMENT

ನಂಬಬಹುದೇ ಈ ಸಿಹಿಯನ್ನು?

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ದೀಪಾವಳಿ ಸಂಭ್ರಮದ ಈ ಹೊತ್ತಲ್ಲಿ ಸಿಹಿಯ ಮಾತೇ ಮನೆ ತುಂಬಿದೆ. ಅದಾಗಲೇ ಮನೆಗಳಲ್ಲೆಲ್ಲ ಕಡಬು, ಕಜ್ಜಾಯ, ಹೋಳಿಗೆ, ಒಬ್ಬಟ್ಟು, ಹಲ್ವ, ಬರ್ಫಿ, ರಸಗುಲ್ಲಾ ವಿಧ–ವಿಧದ ಸಿಹಿ ತಿಂಡಿಗಳ ಘಮ ಹರಡಿ ನಿಂತಿದೆ.

ಸಿಹಿ ತಿಂಡಿ ಪ್ರಿಯರ ಪಾಲಿಗೆ ಇದು ಪರ್ವ ಕಾಲ. ಆದರೆ ಮಧುಮೇಹಿಗಳಿಗೆ ಈ ಸಮಯ ‘ಆನಂದಮಯ’ವಂತೂ ಅಲ್ಲ ಈಚೆಗೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಶುಗರ್ ಫ್ರೀ ಸಿದ್ಧ ತಿಂಡಿಗಳು ಬಂದಿವೆಯಾದರೂ ನಂಬುವುದೋ ಬಿಡುವುದೋ ಗೊತ್ತಿಲ್ಲ.

ನಂಬಬೇಡಿ ಈ ಸಿಹಿ
‘ಈ ಸಿಹಿ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚುವುದಿಲ್ಲ’ ಎನ್ನುವ ಜಾಹೀರಾತು ನೋಡಿ ಮರುಳಾಗುವವರು  ಮಧುಮೇಹಿಗಳು. ಸಕ್ಕರೆ ಅಂಶವಿಲ್ಲದ ಅಥವಾ ಶುಗರ್ ಫ್ರೀ ಸಿಹಿ ತಿಂಡಿ ಎನ್ನುವ ಮುಖವಾಡ ಧರಿಸಿ ಮಾರುಕಟ್ಟೆಗೆ ಬರುವ ಉತ್ಪನ್ನಗಳನ್ನು ನಂಬಬೇಡಿ ಎನ್ನುವುದು ಅನೇಕ ಪಥ್ಯಾಹಾರ ತಜ್ಞರ ಸಲಹೆ.

ಸಕ್ಕರೆ ಬಳಸಿ ತಯಾರಿಸಿದ ಸಿಹಿಯ ಬದಲು ನೈಸರ್ಗಿಕ ಸಿಹಿಕಾರಕ ಅಂಶವಿರುವ ಆಹಾರಕ್ಕೆ ಆದ್ಯತೆ ನೀಡುವುದು ಉತ್ತಮ ಆಯ್ಕೆ. ಅಂದರೆ ಖರ್ಜೂರ ಅಥವಾ ಅಂಜೀರದಂತಹ ನೈಸರ್ಗಿಕ ಸಿಹಿಕಾರಿ (ಸ್ವೀಟ್ನರ್)ಗಳಿಂದ ತಯಾರಿಸಲಾದ ಸಿಹಿತಿಂಡಿಗಳನ್ನು ಸೇವಿಸಬಹುದು. ಅಂಜೀರ ಮತ್ತು ಖರ್ಜೂರದಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಸಾಂಪ್ರದಾಯಿಕ ತಿಂಡಿಗಳಂತೆ ಇವು ರಕ್ತದ ಸಕ್ಕರೆ ಪ್ರಮಾಣದಲ್ಲಿ ಏರಿಳಿತವನ್ನು ಉಂಟುಮಾಡುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಇನ್ನು ಮಾರುಕಟ್ಟೆಯಲ್ಲಿ ದೊರೆಯುವ ಇಂತಹ ಶುಗರ್ ಫ್ರೀ ಉತ್ಪನ್ನವನ್ನು ನಂಬಿ ಕೆಟ್ಟವರೂ ಇದ್ದಾರೆ. ಅವುಗಳ ಸಹವಾಸವೇ ಬೇಡ ಎಂದು ತಿನ್ನುವ ಆಸೆಗೆ ಕಡಿವಾಣ ಹಾಕಿ ಗೆದ್ದವರೂ ಇದ್ದಾರೆ. ಅಲ್ಲದೇ, ಹಬ್ಬಕ್ಕೂ ಮುಂಚೆಯೇ ವ್ಯಾಯಾಮದ ಪ್ರಮಾಣವನ್ನು ತುಸು ಹೆಚ್ಚಿಸಿಕೊಂಡು ಸಿಹಿಯೂಟಕ್ಕೆ ಸನ್ನದ್ಧರಾಗುವವರೂ ಇದ್ದಾರೆ.

‘ಕಳೆದ ಇಪ್ಪತ್ತು ವರ್ಷಗಳಿಂದ ಮಧುಮೇಹದೊಂದಿಗೇ ಬದುಕುತ್ತಿದ್ದೇನೆ. ಇಷ್ಟು ದಿನ ಇಲ್ಲದ ಗೊಡವೆ ಈಗೇಕೆ? ಯಾವ ಶುಗರ್ ಫ್ರೀ ಉತ್ಪನ್ನಗಳನ್ನೂ ನಾನು ನಂಬುವುದಿಲ್ಲ. ಈ ಬಗ್ಗೆ ವೈದ್ಯರ ತಲೆ ತಿನ್ನಲೂ ಹೋಗುವುದಿಲ್ಲ’ ಎನ್ನುತ್ತಾರೆ ಮಾಜಿ ನಗರ ಸಭಾ ಸದಸ್ಯ
ಎಂ. ಶ್ರೀನಿವಾಸ್.

‘ಈಚೆಗೆ ಪತ್ನಿಯೂ ಮಧುಮೇಹ ಸ್ನೇಹಿಯಾಗಿದ್ದಾಳೆ. ಹೀಗಾಗಿ ಮನೆಯಲ್ಲಿ ಸಿಹಿ ಪದಾರ್ಥ ಮಾಡುವುದೇ ಕಡಿಮೆ. ತೀರಾ ಆಸೆಯಾದರೆ ಮಧುಮೇಹ ಹೆಚ್ಚದ ರೀತಿಯಲ್ಲಿ ಕಡಿಮೆ ಸಕ್ಕರೆ ಬಳಸಿ ಏನೊ ಒಂದು ಸಿಹಿ ತಿಂಡಿ ಮಾಡುತ್ತಾಳೆ. ಅಲ್ಲಿಗೇ ಸಿಹಿ ತಿಂದಂತೆಯೂ ಆಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣವೇನೂ ಹೆಚ್ಚುವುದಿಲ್ಲ’ ಎನ್ನುತ್ತಾರೆ ಅವರು.

‘ಹಬ್ಬಕ್ಕೂ ಮುಂಚೆ ಚೆನ್ನಾಗಿ ವ್ಯಾಯಾಮ, ವಾಕಿಂಗ್ ಮಾಡಿ ಸಕ್ಕರೆ ಮಟ್ಟ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ. ಹಬ್ಬವನ್ನು ಸಿಹಿಯೊಂದಿಗೆ ಸವಿಯುತ್ತೇನೆ. ನಂತರ ಶುಗರ್ ಟೆಸ್ಟ್ ಮಾಡಿಸಿಕೊಂಡು ವ್ಯತ್ಯಾಸವನ್ನು ಸರಿ ಮಾಡಿಕೊಳ್ಳುತ್ತೇನೆ. ಮಕ್ಕಳೂ ಅಷ್ಟೇ. ಅದು ತಿನ್ನಬೇಡ, ಇದು ತಿನ್ನಬೇಡ ಅಂತ ನನ್ನನ್ನು ಕಟ್ಟಿ ಹಾಕುವುದಿಲ್ಲ’ ಎನ್ನುತ್ತಾರೆ ಭಾರತಿ.

‘ಕಳೆದ ಬಾರಿ ಹಬ್ಬದಲ್ಲಿ ಶುಗರ್ ಫ್ರೀ ತಿಂಡಿ ಕೊಂಡು ತಂದು ತಿಂದು ನೋಡಿದೆ. ಬಾಯಿಗೇನೊ ರುಚಿಸಿತ್ತು. ಆದರೆ ಸಂಜೆಯ ಹೊತ್ತಿಗೆ ಗಂಟಲು ಹಿಡಿದುಕೊಂಡಿತ್ತು. ಅಂಗಡಿಯವನಲ್ಲಿಗೆ ಹೋಗಿ ಕೇಳಿದರೆ ಇದು ತಮ್ಮ ತಿಂಡಿಯಿಂದ ಆದದ್ದಲ್ಲ, ಕೋಲ್ಡ್‌ ಆಗಿರಬೇಕು ಅಂದರು. ಈ ಬಾರಿ ಯಾವ ಶುಗರ್‌ ಫ್ರೀ ಗೊಡವೆಯೂ ಬೇಡ ಅಂತ ಸುಮ್ಮನಿಮ್ಮದ್ದೇನೆ’ ಎನ್ನುವುದು ಭಾಸ್ಕರ್ ಅವರ ಅನುಭವದ ಮಾತು.

ಶುಗರ್ ಫ್ರೀ, ಕಾಯಿಲೆಯೂ ಫ್ರೀ
ಮಾರುಕಟ್ಟೆಯಲ್ಲಿ ಸಿಗುವ ಯಾವ ಆಹಾರವನ್ನೂ ನಾನು ಸಲಹೆ ಮಾಡುವುದಿಲ್ಲ. ಅವುಗಳೆಲ್ಲ ಶುಗರ್ ಫ್ರಿ ಇರುತ್ತವೊ ಗೊತ್ತಿಲ್ಲ. ಆದರೆ ಕಳಪೆ ಎಣ್ಣೆ ಹಾಗೂ ಅಧಿಕ ಕೊಬ್ಬನಂಶವಂತೂ ಫ್ರೀ ಆಗಿ ಸಿಕ್ಕೇ ಸಿಗುತ್ತದೆ. ಆದ್ದರಿಂದ ಯಾವುದೇ ಆಮಿಷಕ್ಕೆ ಒಳಗಾಗಿ ತಿಂಡಿಯ ಜೊತೆ ರೋಗದ ಉಲ್ಬಣವನ್ನು ಪುಕ್ಕಟೆಯಾಗಿ ಪಡೆಯದೇ ಮನೆಯಲ್ಲಿ ತಯಾರಿಸಿದ ಸಾಮಾನ್ಯ ಆಹಾರವನ್ನೇ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಎಂದಿಗಿಂತ ನಾಲ್ಕು ಹೆಜ್ಜೆ ಹೆಚ್ಚು ನಡೆಯಿರಿ.

ADVERTISEMENT

ಎಣ್ಣೆಯಲ್ಲಿ ಡೀಪ್ ಫ್ರೈ ಮಾಡುವ ಬದಲು, ಆಹಾರವನ್ನು ಬೇಯಿಸಿ ಸೇವಿಸಬಹುದು.
ದೀಪಾವಳಿಗೆ ಮುನ್ನ ಮತ್ತು ನಂತರ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ಆಗ ಒಂದು ವೇಳೆ ಹೆಚ್ಚುವರಿ ಆಗಿದ್ದರೂ  ಕೂಡಲೇ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಅಲ್ಲದೇ ಹಬ್ಬದ ದಿನವೆಂದು ವ್ಯಾಯಾಮಕ್ಕೇನೂ ರಜೆ ನೀಡಬೇಡಿ.
–ತಾರಾ ಮುರುಳಿ
ಮುಖ್ಯ ಡಯಟಿಶಿಯನ್, ಡಯಾಬೆಟಿಕ್ ಕೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.