ADVERTISEMENT

ನನಗೆ ನಾನೇ ಆಧಾರ, ನನಗೆ ನಾನೆ ಎಲ್ಲ...

ಕಲಾವತಿ ಬೈಚಬಾಳ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ನನಗೆ ನಾನೇ ಆಧಾರ, ನನಗೆ ನಾನೆ ಎಲ್ಲ...
ನನಗೆ ನಾನೇ ಆಧಾರ, ನನಗೆ ನಾನೆ ಎಲ್ಲ...   

ನನ್ನ ಹೆಸರು ಕುಮುದಾ. ನನಗೀಗ 45 ವರ್ಷ ಇರಬಹುದು. ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. 25 ವರ್ಷಗಳ ಹಿಂದೆ ನಮ್ಮದು ಶ್ರೀಮಂತ ಬದುಕು. ತಂದೆ–ತಾಯಿಗೆ ಒಟ್ಟು 10 ಜನ ಮಕ್ಕಳು. 6 ಗಂಡು 4 ಹೆಣ್ಣು. ನಾನು ಏಳನೇಯವಳು. 5ನೇ ಕ್ಲಾಸ್‌ವರೆಗೂ ಓದಿದಿನಿ.

ನಮ್ಮವು ಸ್ವಂತ ಮನೆಗಳಿದ್ದವು, ಬಾಡಿಗೆಯೂ ಬರುತ್ತಿತ್ತು. ಅಪ್ಪ ಮಿಲಿಟರಿಯಲ್ಲಿದ್ದರು. ಒಂದಿಷ್ಟು ವರ್ಷವಾದ ಮೇಲೆ ಬೆಂಗಳೂರಿಗೆ ಬಂದು ಕೆಎಸ್‌ಆರ್‌ಟಿಸಿ ಚಾಲಕರಾಗಿ ಕೆಲಸ ಆರಂಭಿಸಿದರು. ಅವರ ಸಂಬಳದಲ್ಲಿ 20 ಜನರ ಜೀವನ ನಡೆಯಬೇಕಿತ್ತು. ಮನೆ ತುಂಬ ಮಕ್ಕಳು. ನಗು ತುಂಬಿದ ಕುಟುಂಬದಲ್ಲಿ ಕಷ್ಟ ಅನ್ನೋದೆ ಗೊತ್ತಿರಲಿಲ್ಲ.

ನನಗೆ 13 ವರ್ಷ ತುಂಬುವ ಹೊತ್ತಿಗೆ ಅಪ್ಪ ತೀರಿಕೊಂಡರು. ನನ್ನ 25ನೇ ವರ್ಷದಲ್ಲಿ ಚೆನ್ನೈನಲ್ಲಿದ್ದ ಸಂಬಂಧಿಕರೊಬ್ಬರ ಮಗನ ಜೊತೆಗೆ ಮದುವೆ ಆಯಿತು. ಎಂತೆಂಥದ್ದೋ ವ್ಯಾಪಾರ ಮಾಡ್ತಿದ್ರು.

ADVERTISEMENT

ಸುಖವಾಗಿದ್ದ ನಮ್ಮ ಸಂಸಾರಕ್ಕೆ ಕೆಲವೇ ದಿನಗಳಲ್ಲಿ ಬಿರುಗಾಳಿ ಬೀಸಿತು. ಹುಷಾರಿಲ್ಲ ಎನ್ನುವ ಚಿಕ್ಕ ಕಾರಣಕ್ಕಾಗಿ ನಮ್ಮ ದೊಡ್ಡಣ್ಣ ತೀರಿಹೋದ್ರು, ಎರಡನೆಯವರು ಮಹಾ ಕುಡುಕ. ಊರ ತುಂಬ ಸಾಲ ಮಾಡಿದ್ದ. ಕುಡಿದು ಕುಡಿದು ಮಣ್ಣಾದ. ಅವನ ನಂತರ ಇನ್ನೊಬ್ಬ, ಮತ್ತೊಬ್ಬ, ನಮ್ಮ ಅಕ್ಕ ಹೀಗೆ ಒಬ್ಬರಾದ ಮೇಲೊಬ್ಬರು ಮೇಲಕ್ಕೆ ಹೋದ್ರು. ಮನೆಯವರಿಗೆ ದಿಕ್ಕೆ ತೋಚದಂತಾಯ್ತು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಕೇವಲ 60 ಸಾವಿರ ರೂಪಾಯಿಗೆ ಮಾರಿಕೊಂಡೆವು.

ನನ್ನ ಮದುವೆ ಆಗಿ ಒಂದು ವರ್ಷ ತುಂಬುವುದರೊಳಗೆ ಮಗಳು ಹುಟ್ಟಿದಳು. ಒಡಹುಟ್ಟಿದೊರನ್ನಾ ಕಳಕೊಂಡ ನೋವು ಮರೆತು, ಮಗುವಿನ ಮುಖ ನೋಡಿಕೊಂಡು ಸಂತೋಷಪಡುವ ಹೊತ್ತಿಗೆ ಗಂಡನೂ ಬಿಟ್ಟುಹೋದ. ಚೆನ್ನೈನಲ್ಲಿ ಸಂಬಂಧಿಕರೂ ಇರಲಿಲ್ಲ. ಹಾಗಾಗಿ ನನ್ನ ತವರು ಬೆಂಗಳೂರಿಗೆ ಬಂದೆ. ತುಂಬಾ ದಿನ ತವರಲ್ಲಿರೊದು ಒಳ್ಳೇದಲ್ಲ ಅಂತ ಚಿಕ್ಕಮಗುವಿನ ಜೊತೆ ಮನೆಯಿಂದ ಆಚೆ ಬಂದು, ಹೊಸೂರಿನಲ್ಲಿ ಬಾಡಿಗೆಮನೆ ಮಾಡಿದೆ. ನನ್ನ ಗಂಡ ಚೆನ್ನೈನಲ್ಲೆ ಬೇರೆ ಮದ್ವೆ ಮಾಡ್ಕೊಂಡಿದ್ದಾರೆ ಅಂತಾ ಆಮೇಲೆ ಗೊತ್ತಾಯ್ತು.

ತವರಲ್ಲಿದ್ದಾಗ ಯಾವತ್ತೂ ಕೆಲಸ ಮಾಡಿರಲಿಲ್ಲ. ಕಷ್ಟ ಅಂದ್ರೆ ಏನು ಅಂತ್ಲೂ ಗೊತ್ತಿರಲಿಲ್ಲ. ಆರಾಮಾಗಿ ಬೆಳೆದಿದ್ದೆ. ಮೆಜೆಸ್ಟಿಕ್‌ ಹತ್ತಿರ ಇರೋ ಓಕಳಿಪುರದಲ್ಲಿ ಜೀನ್ಸ್ ಫ್ಯಾಕ್ಟರಿ ಇತ್ತು. ಅಲ್ಲಿ 1,500 ರೂಪಾಯಿ ಸಂಬಳಕ್ಕೆ ಕಸಗುಡಿಸಿ, ನೆಲ ಒರೆಸೋ ಕೆಲಸಕ್ಕೆ ಸೇರಿಕೊಂಡೆ.

ನನ್ನ ಕಷ್ಟಕ್ಕೆ ನೆರವಾಗ್ತಿದ್ದ ನನ್ನ ತಂಗಿಯರೂ ಕಾಯಿಲೆಯಿಂದ ತೀರಿಕೊಂಡ್ರು. ಮಗುನಾ ಜತೆಗಿಟ್ಟುಕೊಂಡೇ ಫ್ಯಾಕ್ಟರಿ ಕೆಲಸ ಮಾಡ್ತಿದ್ದೆ. ಕಷ್ಟನೊ ಸುಖಾನೊ ಏನೂ ತಿಳಿಯದಾಗಿತ್ತು. ಕಷ್ಟ ಅಂತ ಕೂತುಕೊಂಡ್ರೆ ಮಗುವಿನ ಹೊಟ್ಟೆಗೆ ಅನ್ನ ಹಾಕೋದು ಹೇಗೆ? ಬಾಡಿಗೆ ಕಟ್ಟೋದು ಹೇಗೆ?

ಮಗಳು ಬೆಳಿತಾ ಬಂದಂಗೆ ಫ್ಯಾಕ್ಟರಿ ಸಂಬಳ ಸಾಕಾಗಲಿಲ್ಲ. ನಾಲ್ಕಾರು ಮನೆ ಕಸಮುಸುರೆ ಮಾಡಿ ಅವಳನ್ನ ಬೆಳಿಸಿದೆ. ತಕ್ಕಮಟ್ಟಿಗೆ ಓದಿಸಿದೆ. ‌ಉಳಿತಾಯ ಮಾಡಿದ ಹಣದಲ್ಲೆ ಅವಳ ಮದುವೆಗೆ ಚೂರುಪಾರು ಒಡವೆ ಮಾಡಿಸಿದೆ. ನಾನು ಮನೆಗೆಲಸ ಮಾಡೋ ಯಜಮಾನರ ಹತ್ತಿರ ಬಡ್ಡಿ ಮೇಲೆ ಸಾಲ ತಗೊಂಡು, 21 ವರ್ಷಕ್ಕೆ ಜೋರಾಗಿ ಮಗಳ ಮದುವೆ ಮಾಡಿದೆ. ಸದ್ಯ ಅವಳು ಬ್ಯೂಟಿಷಿಯನ್‌ ಆಗಿ ಕೆಲಸ ಮಾಡ್ತಿದ್ದಾಳೆ. ಅಳಿಯ ಪೇಂಟರ್‌ ಕೆಲಸ ಮಾಡಿಕೊಂಡಿದ್ದಾನೆ.

ಮಗಳು, ಅಳಿಯ ಬೈಯಪ್ಪನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದಾರೆ. ನಾನು ಬೇರೆ ಮನೆಯಲ್ಲಿ ಬಾಡಿಗೆ ಇದ್ದು, ಒಂಟಿ ಜೀವನ ನಡೆಸ್ತಾ ಇದ್ದೀನಿ. 10 ವರ್ಷದಿಂದ ಮನೆಗೆಲಸ ಮಾಡ್ತಾ ಇದ್ದೀನಿ. ಸದ್ಯ ಎರಡು ಪಿ.ಜಿ., ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡ್ತಿದ್ದೀನಿ. ಬೆಳಿಗ್ಗೆ 12 ಗಂಟೆಗೆ ಹೋಗಿ ಸಂಜೆ 6 ಗಂಟೆಗೆ ಬರ್ತೀನಿ. ಅವರು ಕೊಡೊ ಊಟ, ಬಟ್ಟೆ ಬರೆಯಲ್ಲೇ ನನ್ನ ಬದುಕು ಸಾಗುತ್ತೆ. 7 ಸಾವಿರ ರೂಪಾಯಿ ಸಂಬಳ ಬಂದ್ರೂ, ಮನೆ ಬಾಡಿಗೆಗೇ ಮೂರು ಸಾವಿರ ಹೋಗುತ್ತೆ.

ನನಗೂ ವಯಸ್ಸಾಗ್ತಾ ಬಂತು. ಮಂಡಿ, ಬೆನ್ನು, ಕೈಕಾಲು ನೋವು ಬರತ್ತೆ. ಹಾಗಂತ ಮನೆಯಲ್ಲಿ ಕೂರಕ್ಕಾಗತ್ತಾ? ಕೂತ್ರೆ ಹೊಟ್ಟೆ ಪಾಡು ನಡಿ ಬೇಕಲ್ಲಮ್ಮ...? ಹುಷಾರಿಲ್ಲ ಅಂದ್ರೆ ಯಜಮಾನರ ಹತ್ತಿರ ಹಣ ಕೇಳ್ತೀನಿ. ಅವರು ನನ್ನ ಮೇಲೆ ದಯೆ ತೋರಿ ಕೇಳಿದಾಗಲೆಲ್ಲ ಆಸ್ಪತ್ರೆಗೆ ಹೋಗೋಕೆ ಹಣ ಕೊಡ್ತಾರೆ. ಆಧಾರ್ ಕಾರ್ಡು, ರೆಷನ್ ಕಾರ್ಡ್‌ ಯಾವುದೂ ನನ್ನ ಹತ್ತಿರ ಇಲ್ಲ. ನನ್ನ ಮನೆಗೆ ಗ್ಯಾಸ್ ಕನೆಕ್ಷನ್ನೂ ಇಲ್ಲ. ನನಗೆ ನಾನೇ ಆಧಾರ... ನನಗೆ ನಾನೇ ಎಲ್ಲ...

ಮನೆಗೆಲಸ ಮಾಡೋರಿಗೆ ಸರ್ಕಾರದಿಂದ ಇಂತಿಷ್ಟು ಅಂತಾ ಸಂಬಳ ನಿಗದಿ ಮಾಡಿ ಕಾಯ್ದೆ ಜಾರಿಗೆ ತಂದ್ರೆ, ನಮ್ಮಂಥ ಬಡ ಜನರ ಜೀವನೋಪಾಯ ಚೆನ್ನಾಗಿ ನಡಿತದೆ.

ದುಡ್ಡಿದ್ದಾಗ ಎಲ್ಲರೂ ನನ್ನನ್ನು ಆದರದಿಂದ ಕಾಣೋರು. ಈಗ ಯಾರೂ ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ನನ್ನ ಹಾಗೇ ಬದುಕೋ ಒಂಟಿ ಹೆಣ್ಣುಮಕ್ಕಳಿಗೆ ಧೈರ್ಯದಿಂದ ಬಾಳುವ ಛಲ ಬೇಕು. ಬಂದಿದ್ದು ಬರಲಿ ಎದುರಿಸ್ತೀನಿ ಅನ್ನೋ ಎದೆಗಾರಿಕೆ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.