ADVERTISEMENT

‘ನಮಗೆ ಧರ್ಮ ಅನ್ನೋದು ಸಮಸ್ಯೆಯೇ ಅಲ್ಲ’

ಬಾಲಿವುಡ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
‘ನಮಗೆ ಧರ್ಮ ಅನ್ನೋದು ಸಮಸ್ಯೆಯೇ ಅಲ್ಲ’
‘ನಮಗೆ ಧರ್ಮ ಅನ್ನೋದು ಸಮಸ್ಯೆಯೇ ಅಲ್ಲ’   
‘ಬಾಲಿವುಡ್ ಎಂಬ ವಿಶಾಲ ವೃಕ್ಷದಡಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಸೇರಿದಂತೆ ಎಲ್ಲ ಧರ್ಮದ ಕಲಾವಿದರು– ತಂತ್ರಜ್ಞರು ಆಶ್ರಯ ಪಡೆದಿದ್ದಾರೆ. ನಮಗೆ ಎಲ್ಲ ಧರ್ಮವೂ ಒಂದೇ. ನಾವು ಎಲ್ಲ ಹಬ್ಬವನ್ನೂ ಆಚರಿಸುತ್ತೇವೆ...’ 
 
– ಧರ್ಮದ ಬಗ್ಗೆ ಇಷ್ಟು ಖಡಕ್ ಆಗಿ ತನ್ನ ನಿರ್ಧಾರ ತಿಳಿಸಿದ ಕಲಾವಿದನ ಹೆಸರು ಅಜಯ್‌ ದೇವಗನ್. ಅಜಯ್‌ ದೇವಗನ್ ನಾಯಕ ನಟನಾಗಿ ನಟಿಸಿ, ನಿರ್ದೇಶಿಸಿರುವ ‘ಶಿವಾಯ್’ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
 
ಅ. 28ರಂದು ಚಿತ್ರ ಬಿಡುಗಡೆಯಾಗಲಿದೆ. ಸಾಯಿಶಾ ಸೈಗಲ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಹಾಲಿವುಡ್‌ ಚಿತ್ರಗಳಲ್ಲಿ ಅಭಿನಯಿಸಿರುವ ಬಾಲ ಕಲಾವಿದೆ ಅಬಿಗಾಲಿ ಈಮ್ಸ್‌ ಮುಖ್ಯ ಭೂಮಿಕೆಯಲ್ಲಿದ್ದಾಳೆ.
 
ಇದೇ ದಿನ (ಅ.28) ಕರಣ್‌ ಜೋಹರ್ ನಿರ್ದೇಶನದ ‘ಎ ದಿಲ್ ಹೈ ಮುಷ್ಕೀಲ್’ ಸಹ ಬಿಡುಗಡೆಯಾಗಲಿದೆ.  ಅನೇಕ ವರ್ಷಗಳ ನಂತರ ಐಶ್ವರ್ಯಾ ರೈ ಸೆಕ್ಸಿಯಾಗಿ, ಚೆಲ್ಲಾಟದ ಹುಡುಗಿಯಾಗಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ.
 
‘ಶಿವಾಯ್’ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅಜಯ್‌ ದೇವಗನ್, ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ‘ನಮಗೆ ಧರ್ಮ ಅನ್ನೋದು ಸಮಸ್ಯೆಯೇ ಅಲ್ಲ. ಆದರೆ ರಾಜಕೀಯ ಅಂದ್ರೆ ಖಂಡಿತಾ ಸಮಸ್ಯೆ. ಒಬ್ಬ ನಟನಾಗಿ ನಾನೆಂದಿಗೂ ಧರ್ಮಕ್ಕೆ ಹೆದರುವುದಿಲ್ಲ. ಆದರೆ ಕೊಳಕು ರಾಜಕೀಯಕ್ಕೆ ಖಂಡಿತಾ ಹೆದರುವೆ’ ಎಂದಿದ್ದಾರೆ.
 
‘ಯಾವುದೇ ಪಕ್ಷ ಅಥವಾ ಗುಂಪಿನ ವಿರುದ್ಧ ಮಾತನಾಡಿದರೆ ನಮ್ಮ ಚಿತ್ರಗಳನ್ನೇ ಬ್ಯಾನ್ ಮಾಡಬಹುದು’ ಎಂದು ಆತಂಕವನ್ನೂ ತೋಡಿಕೊಂಡಿದ್ದಾರೆ.
 
‘ಈ ಹಿಂದೆ ನಾನು ಅನೇಕ ಪಾಕಿಸ್ತಾನಿ ಕಲಾವಿದರೊಡನೆ ಕೆಲಸ ಮಾಡಿದ್ದೇನೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅವರೂ ಈಗ ನಮ್ಮ ಚಿತ್ರಗಳನ್ನು ನಿಷೇಧಿಸಿದ್ದಾರೆ. ಒಬ್ಬ ಭಾರತೀಯನಾಗಿ ನಾನು ಸದಾ ನನ್ನ ದೇಶದೊಂದಿಗೆ ಇರುತ್ತೇನೆ. ಸಂಬಂಧ ಸುಧಾರಿಸುವವರೆಗೆ ಆ ದೇಶದ ಕಲಾವಿದರೊಂದಿಗೆ ಕೆಲಸ ಮಾಡಲಾರೆ’ ಎಂದು ತಮ್ಮ ಮನದ ಇಂಗಿತ ತೋಡಿಕೊಂಡಿದ್ದಾರೆ.
 
‘ನಾನು ಈವರೆಗೆ ಕೇಳಿರುವ ಅತ್ಯುತ್ತಮ ಸಿನಿಮಾ ಸಂಗೀತ ‘ಕಚ್ಛೇ ಢಾಗೆ’ ಚಿತ್ರದ್ದು. ನಸ್ರತ್ ಫತೇ ಅಲಿಖಾನ್ ಅವರ ಸಂಗೀತ ಎಂಥವರನ್ನೂ ಮೋಡಿ ಮಾಡುತ್ತದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದುವರೆಗೂ 24 ಲಕ್ಷ ಜನ ಟ್ರೇಲರ್‌ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.