ADVERTISEMENT

ನಾಟಕ–ನೆನಪು ನಂಟಿನ ಸ್ಥಳಗಳು

ನಾ ಕಂಡ ಬೆಂಗಳೂರು

ಪ್ರಜಾವಾಣಿ ವಿಶೇಷ
Published 13 ಡಿಸೆಂಬರ್ 2015, 19:50 IST
Last Updated 13 ಡಿಸೆಂಬರ್ 2015, 19:50 IST

ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಕೆಲಸ ಮಾಡಿದ್ದು ಎಲ್ಲವೂ ಬಸವನಗುಡಿಯಲ್ಲಿಯೇ. ನಾನು ಹುಟ್ಟಿದ್ದು ಪುಟ್ಟಣ್ಣ ರಸ್ತೆಯಲ್ಲಿರುವ ನಮ್ಮ ತಾತ ಕಟ್ಟಿಸಿದ್ದ ಮನೆಯಲ್ಲಿ. ಓದಿದ್ದು ಆಚಾರ್ಯ ಪಾಠಶಾಲೆಯಲ್ಲಿ.  ಆಗ ಅಲ್ಲೆಲ್ಲಾ ತುಂಬ ಬಿಡುವಾದ ಖಾಲಿ ಖಾಲಿ ಜಾಗಗಳಿರುತ್ತಿದ್ದವು. ಅಲ್ಲಿ  ಪಕ್ಕದಲ್ಲೇನೆ ಬಸವಣ್ಣನ ದೇವಸ್ಥಾನ, ಮಲ್ಲಿಕಾರ್ಜುನನ ದೇವಸ್ಥಾನ. ಆಚಾರ್ಯ ಪಾಠಶಾಲೆ ಎದುರಿಗೆ ಒಂದು ದೊಡ್ಡದಾದ ಮೈದಾನವಿತ್ತು. ಆಗ ಅಲ್ಲಿ ಯಾವುದೋ ಸ್ವಾಮೀಜಿನೋ ಗುರುಗಳೋ ಒಂದು ಯಾಗ ಮಾಡಿದ್ದು  ಕೂಡ ನನಗೆ ನೆನಪಿದೆ.

ಆ ಮೈದಾನದಲ್ಲಿ ಗಂಡುಹುಡುಗ್ರು ಆಟ ಆಡೋರು. ಅಲ್ಲಿಗೆ ಆಡಲು ಹೋಗಲು ನಮಗೆ ಭಯವಾಗುತ್ತಿತ್ತು.  ಅದಕ್ಕೆ ಅವಕಾಶವೂ ಇರ್ತಿರಲಿಲ್ಲ. ಆಗತಾನೆ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಕಟ್ಟಡವನ್ನೂ ಕಟ್ಟಿದ್ದರು. ಹುಡುಗಿಯರ ಶಾಲೆಯ ಆವರಣದಲ್ಲಿ ನಾವೆಲ್ಲಾ ಆಡಿಕೊಳ್ಳುತ್ತಿದ್ವಿ. ಅಲ್ಲಿ ಬಿಟ್ಟರೆ ಸಮೀಪದ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ವಿಶಾಲವಾದ ಜಾಗದಲ್ಲಿ ಆಡಿಕೊಳ್ಳುತ್ತಿದ್ವಿ.

ಅಂದಿನ ನಮ್ಮ ದಿನದ ಬಹುಪಾಲು ಒಂದೋ ಆಚಾರ್ಯ ಪಾಠಶಾಲೆಯ ಮುಂದೆ, ಇಲ್ಲಾ ಬ್ಯೂಗಲ್‌ ರಾಕ್‌ನಲ್ಲಿ ಕಳೆಯುತ್ತಿತ್ತು. ಬ್ಯೂಗಲ್‌ ರಾಕ್‌ನಲ್ಲಿ ಆರ್‌ಎಸ್‌ಎಸ್‌ನವರು ಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಕಡೆ ಹೆಣ್ಣುಮಕ್ಕಳಿಗಾಗಿ ಆರ್‌ಎಸ್‌ಡಿ (ರಾಷ್ಟ್ರೀಯ ಸೇವಾ ದಳ)ದ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅಲ್ಲಿ ಪದ್ಮನಾಭ ರಾವ್‌, ಶ್ರೀಕಂಠಯ್ಯ, ಮೂರ್ತಿ ಅವರೆಲ್ಲ ನಮಗೆ ಡ್ರಿಲ್‌, ಕೋಲಾಟಗಳನ್ನೆಲ್ಲ ಹೇಳಿಕೊಡೋರು. ನಾವು ಸ್ಕೂಲ್‌ ಬಿಟ್ಟ ತಕ್ಷಣ ಅಲ್ಲಿಗೇ ಓಡುತಿದ್ವಿ. ಅಲ್ಲೆಲ್ಲ ಬಂಡೆಗಳ ಮಧ್ಯ ಒಂದಿಷ್ಟು ಜಾಗ ಮಾಡಿಕೊಂಡು ನಾವು ಸಂಜೆ ಆಟ ಆಡುತ್ತಿದ್ದೆವು. ಅದೇ ಜಾಗದಲ್ಲಿ ಬೆಳಿಗ್ಗೆ ಒಂದು ನೆಟ್‌ ಕಟ್ಟಿಕೊಂಡು ಒಂದಷ್ಟು ಹುಡುಗ್ರು ಬ್ಯಾಡ್ಮಿಂಟನ್‌ ಆಡುತ್ತಿದ್ದರು.

ಶಾಲಾ ದಿನಗಳನ್ನು ದಾಟಿ ಕಾಲೇಜು ಸೇರಿದ ಮೇಲೆ ನಾನು, ನಮ್ಮ ಉಪಾಸನೆ ಸೀತಾರಾಮ ಅವರೆಲ್ಲ ಅಲ್ಲಿಗೆ ಹೋಗಿ ಬ್ಯಾಡ್ಮಿಂಟನ್‌ ಆಡುತ್ತಿದ್ವಿ. ಇದಕ್ಕೂ ಮೊದಲಿನ ಸ್ಕೂಲಿನ ದಿನಗಳ ಬಗ್ಗೆ ಇನ್ನೂ ಹೇಳಬೇಕು ನಾನು. ಆಗಿನ ಕಾಲದಲ್ಲಿ ನಮ್ಮ ಶಾಲೆಗೆ ಓಹೋ ಅನ್ನುವಷ್ಟು ಹೆಸರು ಇತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ನಮಗಂತೂ ತುಂಬ ಚೆನ್ನಾಗಿತ್ತು. ಅಲ್ಲಿ ಓದೋದಕ್ಕಷ್ಟೇ ಅಲ್ಲ, ಬೇರೆ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಪ್ರಾಶಸ್ತ್ಯ ಕೊಡುತ್ತಿದ್ದರು.

ಹೈಸ್ಕೂಲಲ್ಲಿ ವಿಮಲಾ ಶಂಕರ್‌ ಅವರು ಮುಖ್ಯ ಉಪಾಧ್ಯಾಯರಾಗಿ ಬಂದ್ರು. ಅವರು ಆಟಕ್ಕೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತುಂಬ ಪ್ರೋತ್ಸಾಹ ಕೊಡುತ್ತಿದ್ದರು. ಪ್ರತಿ ಶನಿವಾರ ಶಾಲೆ ಮುಂದೆ ಕಾರಿಡಾರ್‌ನಲ್ಲಿ ಏನಾದರೊಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸುತ್ತಿದ್ದರು. ಅದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಲೇ ಬೇಕಿತ್ತು. ನನಗೆ ವೇದಿಕೆ ಎಂದರೆ ತುಂಬಾ ಭಯ. ಅವರ ಪ್ರೋತ್ಸಾಹದಿಂದಲೇ ನಾನು ವೇದಿಕೆಯ ಮೇಲೆ ಬಂದು ಮಾತನಾಡುವುದಾಗಲಿ, ನಾಟಕಗಳನ್ನು ಮಾಡುವುದಾಗಲಿ ಶುರುಮಾಡಿದ್ದು. 

ಮತ್ತೆ ನಾನು ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಲು ಕಾರಣವಾಗಿದ್ದು ಇತ್ತೀಚೆಗೆ ನಮ್ಮನ್ನು ಅಗಲಿದ ಎಚ್‌.ಎಸ್‌. ಪಾರ್ವತಿ. ಅವರು ನಮಗಿಂತ ಮೂರು ವರ್ಷ ಸೀನಿಯರ್‌. ಆಗಸ್ಟ್‌ 15ರಂದು ಅವರೊಂದು ನಾಟಕ ಮಾಡುತ್ತೇನೆ ಎಂದು ಹೇಳಿದ್ದರಂತೆ. ಆದರೆ ಅವತ್ತು ನನ್ನ ಗೆಳತಿ ಯಶೋದಾ ಬಳಿ ಬಂದು, ‘ಈವತ್ತು ನಾವು ನಾಟಕ ಮಾಡಲು ಆಗ್ತಾ ಇಲ್ಲ... ನೀವೇ ಏನಾದ್ರೂ ಮಾಡಿ’ ಎಂದು ಕೇಳಿಕೊಂಡರು. ಯಶೋದಾ ನನ್ನ ಬಳಿ ಬಂದು ಹೇಳಿದಳು. ನಾನು ‘ನಾಟಕ ಮಾಡೋಣ ಕಣೇ’ ಎಂದೆ. ಯಶೋದಾ ಗಾಬರಿಯಿಂದ ‘ಇನ್ನು ನಾಲ್ಕೈದು ಗಂಟೆ ಅಷ್ಟೇ ಇದೆ. ಅಷ್ಟರಲ್ಲಿ ಪ್ರಾಕ್ಟೀಸ್‌ ಮಾಡ್ಕೊಂಡು ನಾಟಕ ಮಾಡಕ್ಕಾಗತ್ತಾ?’ ಎಂದು ಕೇಳಿದಳು.

ನನಗೆ ಯಾಕೋ ಚಿಕ್ಕಂದಿನಿಂದ ನಾಟಕಗಳ ಮೇಲೆ ಒಲವು. ಕೈಲಾಸಂ ನಮ್ಮ ತಂದೆಗೆ ತುಂಬ ಸ್ನೇಹಿತರಾಗಿದ್ದರಂತೆ. ಅವರು ಹಸ್ತಾಕ್ಷರ ಹಾಕಿಕೊಟ್ಟ ನಾಟಕಗಳ ಪುಸ್ತಕಗಳೆಲ್ಲ ನಮ್ಮ ಮನೆಯಲ್ಲಿ ಇದ್ವು. ಕ್ಷೀರಸಾಗರ ಅವರ ಒಂದು ನಾಟಕವೂ ಇತ್ತು ನಮ್ಮ ಮನೆಯಲ್ಲಿ. ಅದು ನನಗೆ ತುಂಬ ಇಷ್ಟವಾಗಿ ಅದರ ಸಂಭಾಷಣೆಯನ್ನೆಲ್ಲ ಬಾಯಿಪಾಠ ಮಾಡಿ ಇಟ್ಟುಕೊಂಡಿದ್ದೆ. ಅಲ್ಲಿ ಕಾಂತರಾಯ ಅಂತ ಬರ್ತಾನೆ. ಅವನೇ ನಾಯಕ. ನಾಟಕದ ಬಹುಪಾಲು ಸಂಭಾಷಣೆಯನ್ನು ನಾಯಕನೇ ಆಡುತ್ತಾನೆ. ಉಳಿದ ಸ್ವಲ್ಪ ಸಂಭಾಷಣೆ ಇನ್ನೊಂದು ಪಾತ್ರ ಆಡಬೇಕಾಗಿತ್ತು.

ಆಗಿನ್ನೂ ನಾವು ಹದಿನಾಲ್ಕರ ಹುಡುಗಿಯರು. ಅದೊಂದು ರೀತಿಯ ಹುಚ್ಚು ಧೈರ್ಯದಿಂದ ಸಂಜೆಯವರೆಗೆ ತಾಲೀಮು ಮಾಡಿ ನಾಟಕ ಮಾಡಿಯೇ ಬಿಟ್ವಿ. ತುಂಬ ಜನ ನಾಟಕವನ್ನು ಮೆಚ್ಚಿಕೊಂಡರು. ಅದೇ ನಾನು ರಂಗಭೂಮಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಕಾರಣವಾಯ್ತು. ಅಲ್ಲಿಯೇ ಸಮೀಪ ಹರ್ಷ ಸ್ಟೋರ್ಸ್‌ ಅಂತ ಇತ್ತು. ಅದರ ಪಕ್ಕ ಒಂದು ಬ್ರೆಡ್‌ ಶಾಪ್‌ ಇತ್ತು. ಅದರಲ್ಲಿ ಕಾಂಗ್ರೆಸ್‌ ಕಡಲೇಕಾಯಿ ಬೀಜ ತುಂಬ ಫೇಮಸ್‌. ಬ್ಯೂಗಲ್‌ ರಾಕ್‌ನಲ್ಲಿ ಆಟ ಆಡಿಕೊಂಡು ಅಲ್ಲಿ ಹೋಗಿ ಕಾಂಗ್ರೆಸ್‌ ಕಡಲೇಕಾಯಿ ತಿನ್ನೋದು ನಮ್ಮೆಲ್ಲರಿಗೂ ತುಂಬ ಪ್ರಿಯವಾದ ಸಂಗತಿ.

ಆಗ ನಾನು ಆನೂರು ಸೂರ್ಯನಾರಾಯಣ ಅವರ ಬಳಿ ಸಂಗೀತ ಕಲಿಯಲು ಹೋಗುತ್ತಿದ್ದೆ. ‘ಸಾಯಂಕಾಲ ಇವಳು ಅಲ್ಲಿ ಬ್ಯೂಗಲ್‌ ರಾಕ್‌ನಲ್ಲಿ ಬಂಡೆಯಿಂದ ಬಂಡೆಗೆ ಹಾರುತ್ತಿರುತ್ತಾಳೆ’ ಎಂದು ಅವರು ತಮಾಷೆ ಮಾಡೋರು. ಪಿಯೂಸಿಗೆ ವಿಜಯಾ ಕಾಲೇಜಿಗೆ ಹೋದಾಗ ನಾಟಕ ಆಡಲು ಶುರುಮಾಡಿದೆವು. ಅಲ್ಲಿ ಮೇಕಪ್‌ ಮಾಡೋಕೆ ಒಬ್ಬ ಕಲಾವಿದರನ್ನು ಕರೆಸುತ್ತಿದ್ದರು. ಆಗ ನಮಗೆ ಮೇಕಪ್‌ ಮಾಡೋಕೆ ಬಂದವರು ನಾಣಿ. ಮುಂದೆ ಅವರೊಟ್ಟಿಗೇ ನನ್ನ ಮದುವೆಯಾಯಿತು. ನಂತರ ನ್ಯಾಷನಲ್‌ ಕಾಲೇಜಲ್ಲಿ ನಿರಂತರವಾಗಿ ನಾಟಕ ಮಾಡಲು ಶುರುಮಾಡಿದ್ವಿ.

ರಮೇಶ ಭಟ್ರ ಬ್ರೆಡ್ಡಿನಂಗಡಿ
ನ್ಯಾಷನಲ್‌ ಕಾಲೇಜು ಹಿಂದುಗಡೆ ರಸ್ತೆಯ ಕಾರ್ನರ್‌ನಲ್ಲಿ ನಟ ರಮೇಶ ಭಟ್‌  ಅವರ ಬ್ರೆಡ್ಡಿನ ಅಂಗಡಿಯಿತ್ತು. ನಾಟಕ ತಾಲೀಮು ಮಾಡ್ತಾ ಹಸಿವಾಗೋದಲ್ಲ, ಆಗೆಲ್ಲಾ ಅವರ ಅಂಗಡಿಗೆ ಹೋಗುವುದು ಮಾಮೂಲಾಗಿತ್ತು. ಅಲ್ಲಿ ಅವರು ಬನ್ನು ಕತ್ತರಿಸಿ ಜಾಮ್‌ ಹಾಕಿಕೊಡ್ತಿದ್ರು. ಆಮೇಲೆ ಬದಾಮಿ ಹಾಲು ಕೊಡ್ತಿದ್ರು. ಆಗ ರಮೇಶ ಡಿಪ್ಲೊಮಾ ಓದ್ತಾ ಇದ್ದ. ಅಲ್ಲಿ ಅವನ ಕಾಲೇಜಿನ ನಾಟಕ ಸ್ಪರ್ಧೆಗಾಗಿ ನಾಣಿ ಒಂದು ನಾಟಕವನ್ನು ನಿರ್ದೇಶಿಸಿದ್ದರು. ಅದರಲ್ಲಿ ರಮೇಶ ಒಂದು ಮುಖ್ಯ ಪಾತ್ರ ಮಾಡಿದ್ದ.

ಆ ನಾಟಕದಲ್ಲಿನ ಪಾತ್ರ ಅವರಿಗೆ ಎಷ್ಟು ಒಗ್ಗಿಹೋಗಿತ್ತಂದ್ರೆ ಆಮೇಲೆ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ನಾಟಕ ಮಾಡಿದಾಗಲೂ ಆ ಪಾತ್ರದ ಛಾಯೆ ಕಾಣುತ್ತಿತ್ತು. ಆಮೇಲೆ ನಾಟಕದಿಂದ ಸಿನಿಮಾಕ್ಕೆ ಬಂದು, ಕಿರುತೆರೆ–ಸಿನಿಮಾದಲ್ಲಿ ಒಳ್ಳೆ ಹೆಸರು ಬಂತು. ಅಂದಿನ ಕಾಲದ ನಾಟಕದವರಿಗೆಲ್ಲ ರಮೇಶ ಭಟ್ರು ಆ ಅಂಗಡಿಯಿಂದಾನೇ ಪರಿಚಯ. ಆಗಿನ ಕಾಲದಲ್ಲಿ ಕವಿಗಳು, ದೊಡ್ಡ ದೊಡ್ಡ ಸಾಹಿತಿಗಳು ವಿದ್ಯಾರ್ಥಿಭವನಕ್ಕೆ ಹೇಗೆ ಹೋಗ್ತಿದ್ರೋ ಹಾಗೆಯೇ ರಮೇಶ ಭಟ್ರ ಅಂಗಡಿಗೆ ಹೋಗದ ನಾಟಕದವರೇ ಇರಲಿಲ್ಲ ಎನ್ನಬಹುದು. 

ಇವೆಲ್ಲವೂ ನಡೆದಿದ್ದು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬಸವನಗುಡಿ ದೇವಸ್ಥಾನ, ಬ್ಯೂಗಲ್‌ ರಾಕ್‌, ನ್ಯಾಷನಲ್‌ ಕಾಲೇಜಿನ ಸುತ್ತಮುತ್ತಲಿನ ಜಾಗದಲ್ಲಿಯೇ. ನಾವು ಮನೆಕಟ್ಟಿಕೊಂಡು ಜಯನಗರಕ್ಕೆ ಬರುವವರೆಗೂ ನಮ್ಮ ಓಡಾಟವೆಲ್ಲ ಈ ಪರಿಸರದಲ್ಲಿಯೇ ನಡೆಯಿತು. ನಿಜವಾಗಲೂ ಆಗಿನ ಬಸವನಗುಡಿ ನಮಗೆ ದೇವಲೋಕ ಇದ್ದಹಾಗೆ. ಈಗ ಅದೆಲ್ಲ ಒಂದು ಸುಂದರ ಕನಸಷ್ಟೇ. ಆ ಬಸವನಗುಡಿ ಎಲ್ಲೋ ಹೋಯ್ತು.

ಮೂರು ತಲೆಮಾರಿನ ಆಪ್ತ ಸಂಬಂಧ
ಮಲ್ಲಿಕಾರ್ಜುನ ದೇವಸ್ಥಾನದೊಟ್ಟಿಗೆ ವಿಶೇಷ ಆಪ್ತತೆ ಬೆಳೆಯಲು ಇನ್ನೊಂದು ಕಾರಣವಿದೆ. ನಮ್ಮ ತಂದೆ ನಾನು ಐದೂವರೆ ವರ್ಷದವಳಿದ್ದಾಗಲೇ ತೀರಿಕೊಂಡರು.  ನನ್ನ ಅಣ್ಣನಿಗೆ ಆಗ ಏಳು ವರ್ಷ. ನಮ್ಮೊಟ್ಟಿಗೆ ಅಮ್ಮ ಅಷ್ಟೇ ಇದ್ದರು. ನಮ್ಮನೆಯಲ್ಲಿ ಆಗ ಸಾಲಿಗ್ರಾಮ, ಶ್ರೀಚಕ್ರ ಎಲ್ಲ ಇತ್ತು.  ಮಡಿಯಲ್ಲಿ ಪೂಜೆ ಮಾಡಲು ಯಾರೂ ಇರಲಿಲ್ಲ. ಆದ್ದರಿಂದ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ, ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕೊಡಿ ಎಂದು ಪುರೋಹಿತರು ಹೇಳಿದರು. ಆ ದೇವಸ್ಥಾನಕ್ಕೆ ಕೊಟ್ಟುಬಿಟ್ವಿ.  ಆದ್ದರಿಂದ ಅದು ನಮ್ಮದು ಅಂತ ಭಾವನೆ ಬೆಳೆದುಬಿಟ್ಟಿದೆ. ಈವಾಗ್ಲೂ ಆಗಾಗ ಹೋಗ್ತಾ ಇರ್ತೀನಿ. ಈಗ ಚೌಲ್ಟ್ರಿ ಥರ ಎರಡು ಮೂರು ಕಟ್ಟಡಗಳ ಕಟ್ಟಿದ್ದಾರೆ. 

ನಮ್ಮ ಮಗಳು ಅಲ್ಲಿಯೇ ಸಂಗೀತ ತರಗತಿಗೆ ಹೋಗುತ್ತಾಳೆ. ನಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮಗಳೆಲ್ಲ ಅಲ್ಲಿಯೇ ನಡೆಯುತ್ತವೆ. ಒಂಥರ ಹಳೆಯ ಕಾಲದ ವಾತಾವರಣವಿದೆ. ಆ ದೇವಸ್ಥಾನದ ಪ್ರಾಂಗಣದಲ್ಲಿ ಕೂತಿದ್ರೆ ಮನಸ್ಸಿಗೆ ಏನೋ ಒಂಥರ ನೆಮ್ಮದಿ. ಅದು ನಮ್ಮ ಭಾವನೆ ಇರಬಹುದು ಅಥವಾ ಸ್ಥಳದ ಮಹಿಮೆ ಇರಬಹುದು. ನನ್ನ ಎಪ್ಪತೈದನೇ ಹುಟ್ಟುಹಬ್ಬ ನಡೆದಿದ್ದು, ನನ್ನ ಮರಿಮೊಮ್ಮಗ ಮಿಹಿರನ ಜುಟ್ಟು ತೆಗೆಸಿದ್ದೂ ಅಲ್ಲಿಯೇ. ಹೀಗೆ ಮುತ್ತಜ್ಜಿಯಿಂದ ಮರಿಮೊಮ್ಮಗನವರೆಗೂ ಆ ದೇವಸ್ಥಾನದೊಟ್ಟಿಗೆ ಸಂಬಂಧ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT