ADVERTISEMENT

ನಾನೆಂಬ ಕನ್ನಡಿ ಪ್ರವಾಸಿ ಎಂಬ ಬಿಂಬ

ರೋಹಿಣಿ ಮುಂಡಾಜೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ನಾನೆಂಬ ಕನ್ನಡಿ  ಪ್ರವಾಸಿ ಎಂಬ ಬಿಂಬ
ನಾನೆಂಬ ಕನ್ನಡಿ ಪ್ರವಾಸಿ ಎಂಬ ಬಿಂಬ   

‘ಇನ್ನೂ ನಿದ್ದೆ ಮಾಡ್ತಿದ್ದೀರೇನ್ರೀ... ಮೈಸೂರಿಗೆ ಹೋಗ್ತೀರೇನು ಎದ್ದೇಳ್ರಪ್ಪಾ...’ ಸಿಟಿ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದವರ ಸಕ್ಕರೆ ನಿದ್ದೆ ಹಾರಿ ಹೋಗುವಂತೆ ಆ ಯುವಕ ಕೂಗಿದ. ಇದು ಅವನ ನಿತ್ಯದ ವರಸೆ. ಎಲ್ಲರೂ ಲಗುಬಗೆಯಿಂದ ಎದ್ದು ಲಗೇಜ್‌ನೊಂದಿಗೆ ಹೊರಬಂದರು. ಬೆಂಗಳೂರೆಂಬೋ ಮಹಾಸಾಗರಕ್ಕೆ ಗುಳೆ ಬಂದ ರಾಜಸ್ತಾನದ ಆ ಕುಟುಂಬಕ್ಕೆ ಕೈಚೆಲ್ಲಿದ ರಾಗಿ ಕಾಳುಗಳಂತೆ ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿದ್ದ ಜನಸಾಗರವನ್ನು ಕಂಡು ಕಕ್ಕಾಬಿಕ್ಕಿಯಾಯ್ತು.

ಯಾರನ್ನಾದರೂ ಸಹಾಯ ಕೇಳೋಣವೇ ಎಂಬ ಪ್ರಶ್ನೆ ಎತ್ತಲೂ ಧೈರ್ಯ ಸಾಲದೆ ಸುಮ್ಮನಾದಂತಿತ್ತು. ಕಳೆದ ರಾತ್ರಿಯಿಂದಲೂ ಶೌಚಾಲಯಕ್ಕೆ ಹೋಗಲಾಗದೆ ಒದ್ದಾಡುತ್ತಿದ್ದ ಅಜ್ಜಿಗೆ ಒಂದು ಹೆಜ್ಜೆ ಎತ್ತಿಡಲೂ ಆಗದಂತಹ ಸಂಕಟ. ಅಲ್ಲೇ ಹುಯ್ದುಹೋಗುವಷ್ಟು ಒತ್ತಡ. ಅಜ್ಜಿಯಿಂದ ಐದಾರು ಬಾರಿ ತಿವಿಸಿಕೊಂಡ ತಾತ, ನಾನೂ ಹೋಗ್ಬೇಕು ಕಣೇ ಒಂದ್‌ ಸ್ವಲ್ಪ ತಡ್ಕೋ ಅಂತ ಗದರಿದರು.

ಹೇಳಿಕೇಳಿ ರೈಲು ನಿಲ್ದಾಣ. ಯಾರ ಗೋಜು ಯಾರಿಗೂ ಬೇಡ. ಬೆಂಗಳೂರು ಬಲ್ಲ ಯಾವ ಭಾಷೆಯೂ ಅವರಿಗೆ ಬಾರದು. ವಿಶಾಲವಾದ ಮುಂಡಾಸು ಕಟ್ಟಿಕೊಂಡಿದ್ದ ಪೊದೆ ಮೀಸೆಯ ತಾತ ನನ್ನ ಬಳಿಯೇ ಬಂದು ಶೌಚಾಲಯ ಎಲ್ಲಿದೆ ಅಂತ ಕೇಳಿದ್ರು. ‘ಸುಲಭ ಶೌಚಾಲಯ’ದ ದಾರಿ ತೋರಿಸಿದೆ. ಪಕ್ಕದಲ್ಲೇ ‘ಯಾತ್ರಿ ನಿವಾಸ್‌’ ಇದೆ. ಗಂಟೆ ಲೆಕ್ಕದಲ್ಲಿ ಉಳ್ಕೊಂಡು ನಿಮ್ಮ ಲಗೇಜನ್ನೂ ಸುರಕ್ಷಿತವಾಗಿ ಇಟ್ಕೊಂಡು ಸ್ನಾನ–ಪಾನಾ–ಪೀನಾ ಒದಗಿಸೋ ಕಡಿಮೆ ದರದ ಹೋಟೆಲ್‌ಗಳು ಬೇಕಿದ್ರೆ ಬಸ್‌ ನಿಲ್ದಾಣದ ಮುಂದಿನ ರಸ್ತೆ ದಾಟಿ ಹೋಗಬೇಕು ಅಂದೆ.

ತಾತ ತನ್ನ ಬಳಗದೊಂದಿಗೆ ಸುಲಭ ಶೌಚಾಲಯದತ್ತ ಹೋದ್ರು. ನಾನು ಅಲ್ಲೇ ಎಷ್ಟು ಹೊತ್ತು ನಿಂತಿದ್ದೆನೋ ಗೊತ್ತಿಲ್ಲ. ತಾತ ಬಳಗದೊಂದಿಗೆ ಮತ್ತೆ ಬಂದ್ರು. ಬಸ್‌ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದರು. ಎಲ್ಲಿಗೆ ಹೋಗಬೇಕು ಎಂದರೆ ‘ಬನಸವಡಿ’ ಅಂದ್ರು. ಅಯ್ಯೋ ಮಾರಾಯ್ರೆ ಅದು ಬಾಣಸವಾಡಿ. ಬಾ..ಣ...ಸ..ವಾಡಿ.. ಗೊತ್ತಾಯ್ತಾ? ಬನಸವಡಿ ಅಂದ್ರೆ ಬಸವನಗುಡಿ ಬಸ್‌ ಹತ್ತಿಸ್ತಾರೆ ಹುಷಾರು ಅಂದೆ. ನನಗೆ ರೈಲು ನಿಲ್ದಾಣದಲ್ಲಿ ಏನೂ ಕೆಲಸ ಇರಲಿಲ್ಲವಾಗಿ, ‘ಬನ್ನಿ ದಾರಿ ತೋರಿಸ್ತೀನಿ’ ಎಂದು ಉದಾರಿಯಾದೆ.
***
ಹೀಗೆ ರಾಜಸ್ತಾನಿ ಕುಟುಂಬದೊಂದಿಗೆ ನಾನೂ ಬಿಎಂಟಿಸಿ ಬಸ್‌ ನಿಲ್ದಾಣ ತಲುಪಿಕೊಂಡೆ. ತಾತ ಹೇಳಿದ ‘ಬನಸವಡಿ’ ಮಾರ್ಗದ ಬಸ್‌ಗಳು ನಿಂತಿದ್ದ ಪ್ಲಾಟ್‌ಫಾರಂಗೆ ಅವರನ್ನು ಕರೆತಂದೆ. ಅಲ್ಲಿ ಮತ್ತೆ ನಿರ್ವಾಹಕರನ್ನು ತಮ್ಮದೇ ಶೈಲಿಯಲ್ಲಿ ವಿಚಾರಿಸಿದ್ರು. ‘ಏನಯ್ಯಾ ನಿಂದು... ಗಂಟುಮೂಟೆ ಕಟ್ಕೊಂಡು ಬಂದ್‌ಬಿಡ್ತಾರೆ. ಕನ್ನಡ ಕಲಿಯಯ್ಯಾ ಫಸ್ಟು. ನಿನ್ನ ಮೂಟೆ ಇಲ್ಲೇ ಇಟ್ರೆ ಬರೋರು ಹೋಗೋರು ಹೆಂಗೋಗ್ಬೇಕು, ಹೋಗ್‌ ಹಿಂದೆ’ ಅಂತ ಅಬ್ಬರಿಸಿದ.

ಮೂಟೆಯನ್ನೊಮ್ಮೆ, ನಿರ್ವಾಹಕನನ್ನೊಮ್ಮೆ ನೋಡಿದ್ರು ತಾತ. ಅವರ ಪಾಡು ನೋಡಿ ನಾನೇ ಅರೆಬರೆ ಹಿಂದಿಯಲ್ಲಿ ವಿವರಿಸಿದೆ. ಬೆಂಗಳೂರಿಗೆ ಈಗಷ್ಟೇ ಕಾಲಿಡುತ್ತಿರುವ ಮಂದಿಯ ಉಸಿರಿಗೆ ಗಾಳಿಯೇ ಕನ್ನಡವನ್ನು ತುಂಬಿಬಿಡ್ತದಾ? ಇಲ್ಲ ತಾನೆ? ತಾತ ಮತ್ತು ಅವರ ಬಳಗ ‘ಬನಸವಡಿ’ಗೆ ಟಿಕೆಟ್‌ ತಗೊಂಡ್ರು. ನಾನು ಪ್ಲಾಟ್‌ಫಾರಂನಲ್ಲೇ ನಿಂತೆ. ದಾರಿ ಆವುದು?

ತಾತನ ಹಾಗೆ ತವರಿನ ಭಾಷೆಯೊಂದನ್ನೇ ಬಲ್ಲ ಅದೆಷ್ಟು ಮಂದಿ ಈ ನಗರಕ್ಕೆ ಬರುತ್ತಾರೋ. ಅವರಿಗೆ ದಾರಿ ತೋರಿಸುವವರು ಯಾರು? ಪ್ರವಾಸಕ್ಕೋ ಪಿಕ್‌ನಿಕ್ಕಿಗೋ ಬಂದ್ರೆ ದಾರಿ ತೋರಿಸುವ ಗೈಡ್‌ಗಳು ಸಿಕ್ಕಾರು, ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ‘ಮ್ಯಾಪು ಮ್ಯಾಪು...’ ಎಂದು ರಾಗವಾಗಿ ಕೂಗುವ  ನಕ್ಷೆವಾಲಾರಿಂದ ನಕ್ಷೆಯನ್ನಾದರೂ ಖರೀದಿಸಬಹುದು, ಅದ್ಯಾವುದೂ ಬೇಡ ಎಂದಾದರೆ ಜಿಪಿಎಸ್‌ ಇರುವ ಮೊಬೈಲ್‌ನಲ್ಲಿ ಗೂಗಲಿಸಿದರೆ ಆಟೊವಾಲಾನೂ ಯಾಮಾರಿಸಲು ಆಗದಂತೆ ತಮಗೆ ತಾವೇ ಮಾರ್ಗದರ್ಶಕರಾಗಬಹುದು ಎಂದಿಟ್ಟುಕೊಳ್ಳಿ. ಇಲ್ಲದಿದ್ದರೆ ಸುಲಿಗೆಕೋರರ ಕೈಗೊಂಬೆಯಾದಂತೆಯೇ.

ಮೊನ್ನೆ ಏನಾಯ್ತು ಗೊತ್ತಾ? ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ನಮ್ಮ ಆಂಟಿ ಬಂದಿಳಿದಿದ್ದರು. ಬೆಂಗಳೂರು ಬಲ್ಲ ಅವರು ಆಟೊ ನಿಲ್ದಾಣದತ್ತ ದೃಷ್ಟಿ ಹಾಯಿಸುವುದಕ್ಕೂ ಮೊದಲೇ ನಾಲ್ಕಾರು ಮಂದಿ ಆಟೊ ಚಾಲಕರು ತಮ್ಮ ತಮ್ಮ ಶೈಲಿಯಲ್ಲಿ ವಿಚಾರಿಸಿದ್ದಾರೆ.

ಬೆಳಗಿನ ಜಾವವಾದ್ದರಿಂದ ಪ್ರೀ ಫಿಕ್ಸ್‌ ಆಟೊ ಸೆಂಟರ್‌ ನಿರ್ಜನವಾಗಿತ್ತು. ‘ಓಕಳಿಪುರ’ ಅಂದಿದ್ದೇ 350 ರೂಪಾಯಿ ಅಂದ್ರಂತೆ. ನಡ್ಕೊಂಡು ಹೋದ್ರೂ 35 ನಿಮಿಷ ಬೇಡ 350 ಯಾಕಪ್ಪಾ ಎಂದು ಮರು ಪ್ರಶ್ನೆ ಮಾಡಿದ್ದಕ್ಕೆ ಅಷ್ಟೂ ಜನ ‘350 ಕೊಡಿ ಇಲ್ಲಾ ನಡ್ಕೊಂಡೇ ಹೋಗಿ’ ಮುಷ್ಕರ ಹೂಡಿದ್ರಂತೆ. ನಡ್ಕೊಂಡೇ ಹೊರಟ ಅವರು ದಾರೀಲಿ ಸಿಕ್ಕಿದ ಆಟೊ ಹತ್ತಿ ಮನೆಗೆ ಬಂದಿದ್ರು.

ಗುಜರಾತ್‌ ಬಳಗದ ಹಾಗೆ ಮೊದಲ ಬಾರಿಗೆ ಬೆಂಗಳೂರಿಗೆ ಬರುವವರಿಗೆ ರೈಲು ನಿಲ್ದಾಣ, ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಮಾರ್ಗದರ್ಶಕರ ಕೊರತೆ ಇದೆ ಎಂದು ಎಷ್ಟೋ ಬಾರಿ ಅನಿಸಿದ್ದಿದೆ.

ಹಾಪ್‌ ಆನ್‌ ಹಾಪ್‌ ಆಫ್‌ ಬಸ್‌
ಒಂದು ದಿನದ ಪಿಕ್‌ನಿಕ್‌ಗೆ ಬಂದವರಿಗೆ ಬಿಎಂಟಿಸಿ, ‘ಹೊಹೊ’ ಎಂದು ಕರೆಯುವ ಹಾಪ್‌ ಆನ್‌ ಹಾಪ್‌ ಆಫ್‌ ಬಸ್‌ ‘ಬೆಂಗಳೂರು ದರ್ಶನ’ ಮಾಡಿಸುತ್ತದೆ.  ಹವಾನಿಯಂತ್ರಿತ ಬಸ್‌ನಲ್ಲಿ ಸುಖಕರ ಮತ್ತು ವಾಯುಮಾಲಿನ್ಯ ಮುಕ್ತವಾಗಿ ಪ್ರಯಾಣಿಸಬಹುದು.

ಈ ಬಸ್ಸು ಕೆಂಪೇಗೌಡ ಬಸ್‌ ನಿಲ್ದಾಣದಿಂದ ಸ್ಯಾಂಕಿ ಕೆರೆ, ಒರಾಯನ್‌ ಮಾಲ್‌, ಇಸ್ಕಾನ್‌ ದೇವಾಲಯ, ಸ್ನೋ ಸಿಟಿ, ಕಮರ್ಷಿಯಲ್‌ ಸ್ಟ್ರೀಟ್, ಹಲಸೂರು ಕೆರೆ, ಮಹಾತ್ಮ ಗಾಂಧಿ ರಸ್ತೆ, ಕಬ್ಬನ್‌ಪಾರ್ಕ್‌, ವಿಧಾನಸೌಧ, ಯುಬಿ ಸಿಟಿ, ಜವಾಹರಲಾಲ್‌ ನೆಹರೂ ತಾರಾಲಯ, ಫ್ರೀಡಂ ಪಾರ್ಕ್‌, ಬಸವನಗುಡಿ ಸೇರಿದಂತೆ ಪ್ರಮುಖ ಸ್ಥಳಗಳನ್ನು ನೋಡಿಕೊಂಡು ನಿಮಗೆ ಬೇಕಾದಲ್ಲೇ ಇಳಿಸುವ ಕಾರಣ ಒಳ್ಳೆಯ ಆಯ್ಕೆ ಎಂದು ಮೊನ್ನೆ ನಮ್ಮ ಸ್ನೇಹಿತರಿಗೆ ಐಡಿಯಾ ಕೊಟ್ಟೆ.

ಎಲ್ಲಾ ಊರು, ದೇಶದ ಜನರನ್ನೂ ತನ್ನ ಮಡಿಲಲ್ಲಿಟ್ಟುಕೊಂಡಿದೆ ಈ ಬೆಂಗಳೂರು. ಆದರೆ ಪ್ರವಾಸದ ಶಿಸ್ತು ಅರಿಯದವರಿಗೂ, ಬದುಕು ಕಟ್ಟಿಕೊಳ್ಳಲು ಬಂದಿಳಿದವರಿಗೂ ಬೆಂಗಳೂರು ಕಬ್ಬಿಣದ ಕಡಲೆ. ಅದನ್ನು ಸರಳ, ಸುಲಭಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.