ADVERTISEMENT

‘ನಿಂತು ಪಿಟೀಲು ನುಡಿಸುವುದು ಸುಲಭದ ಮಾತಲ್ಲ’

ನಾದಲೋಕ

ಬಳಕೂರು ವಿ.ಎಸ್.ನಾಯಕ
Published 27 ಡಿಸೆಂಬರ್ 2016, 19:30 IST
Last Updated 27 ಡಿಸೆಂಬರ್ 2016, 19:30 IST
‘ನಿಂತು ಪಿಟೀಲು ನುಡಿಸುವುದು ಸುಲಭದ ಮಾತಲ್ಲ’
‘ನಿಂತು ಪಿಟೀಲು ನುಡಿಸುವುದು ಸುಲಭದ ಮಾತಲ್ಲ’   
ಬೆಂಗಳೂರಿನಲ್ಲಿಯೇ ವೈದ್ಯಕೀಯ ಶಿಕ್ಷಣ ಪಡೆದು, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಜ್ಯೋತ್ಸ್ನಾ ಶ್ರೀಕಾಂತ್‌ ಪ್ರಸ್ತುತ ಲಂಡನ್ ನಗರದ ನಿವಾಸಿ. ಅವರು ಬೆಂಗಳೂರಿನಲ್ಲಿ ಇದ್ದಾಗಲೂ ಸಂಗೀತ ಕಛೇರಿಗಳಲ್ಲಿ ಪಿಟೀಲು ನುಡಿಸುತ್ತಿದ್ದರು. ‘ವೃತ್ತಿಯಷ್ಟೇ ಪ್ರವೃತ್ತಿಗೂ ಆದ್ಯತೆ ನೀಡಬೇಕು’ ಎನ್ನುವುದು ಅವರ ಮನದ ಮಾತು.
 
ತಮ್ಮ ಸಂಗೀತ ಸಾಧನೆಗಾಗಿ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್‌ಸಿಐ) ನೀಡುವ ‘ಚಾಣಕ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.
 
‘ಅರ್ಜಿ ಸಲ್ಲಿಸಿ, ಪ್ರೊಫೈಲ್‌ ಕಳುಹಿಸಿ, ನಮ್ಮನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡು ಚಾಣಕ್ಯ ಪ್ರಶಸ್ತಿ ಪಡೆಯಲು ಸಾಧ್ಯವಿಲ್ಲ. ನಾನು ಆಯ್ಕೆಯಾದ ಮೇಲಷ್ಟೇ ಪ್ರಶಸ್ತಿ ಬಂದಿರುವ ಮಾಹಿತಿ ನನಗೆ ಸಿಕ್ಕಿತು’ ಎಂದಾಗ ಅವರ ಮಾತಿನಲ್ಲಿ ಹೆಮ್ಮೆ ಇಣುಕುತ್ತಿತ್ತು.
 
ಲಂಡನ್‌ನ ರಾಯಲ್‌ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ 1994ರಲ್ಲಿ ಪದವಿ ಗಳಿಸಿದ ಡಾ.ಜ್ಯೋತ್ಸ್ನಾ, ವರ್ಲ್ಡ್ ಫ್ಯೂಷನ್‌ ಮ್ಯೂಸಿಕ್‌ ಮೂಲಕ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪಿಟೀಲು ನುಡಿಸುವ ಕಲಾವಿದರು ಕುಳಿತು ಕಛೇರಿ ನೀಡುವುದು ಸಾಮಾನ್ಯ ಸಂಗತಿ. ಆದರೆ ಡಾ.ಜ್ಯೋತ್ಸ್ನಾ ಅವರು ನಿಂತು ಪಿಟೀಲು ನುಡಿಸುತ್ತಾರೆ. ಇದು ಅವರ ಹೆಗ್ಗಳಿಕೆ.
 
‘ಭಾರತದಲ್ಲಿ, ನಿಂತು ಪಿಟೀಲು ನುಡಿಸುವವರು ಕಡಿಮೆ. ಯೂರೋಪ್‌, ಅಮೆರಿಕಗಳಲ್ಲಿ ಇದು ಸಾಮಾನ್ಯ ಸಂಗತಿ. ಕಲಾವಿದರು ನಿಂತು ಪಿಟೀಲು ನುಡಿಸುವುದು, ಹಾಡುವುದು ಸಾಮಾನ್ಯ. ನಾನು ನಿಂತು ಪಿಟೀಲು ನುಡಿಸುವುದನ್ನು ಕರಗತ ಮಾಡಿಕೊಂಡಿದ್ದೇನೆ. ಅದಕ್ಕೆ ಶ್ರೋತೃಗಳ ಪ್ರತಿಕ್ರಿಯೆಯೂ ಅದ್ಭುತವಾಗಿರುತ್ತದೆ’ ಎನ್ನುತ್ತಾರೆ ಅವರು.
 
ಸಂಗೀತ ಕ್ಷೇತ್ರದಲ್ಲಿ ಇದೀಗ ಚರ್ಚೆಯಾಗುತ್ತಿರುವ ‘ಫ್ಯೂಷನ್‌’ ಮತ್ತು ‘ವರ್ಲ್ಡ್ ಫ್ಯೂಷನ್‌’ ಪರಿಕಲ್ಪನೆಗಳಿಗೆ ಜ್ಯೋತ್ಸ್ನಾ ಮುಖಾಮುಖಿಯಾಗುವುದು ಹೀಗೆ.
 
‘ನಾನು ‘ವಾತಾಪಿ ಗಣಪತಿಂ ಭಜೆ’ಯನ್ನು ಭಾರತೀಯ ಮತ್ತು ನಾನಾ ಪಾಶ್ಚಾತ್ಯ ಶೈಲಿಯಲ್ಲಿ ನುಡಿಸುತ್ತೇನೆ. ಇದನ್ನು ನಾನು ‘ವರ್ಲ್ಡ್ ಫ್ಯೂಷನ್‌ ಮ್ಯೂಸಿಕ್‌’ ಎನ್ನುತ್ತೇನೆ. ‘ವಾತಾಪಿ’ಯನ್ನು ಜೀನ್ಸ್‌ ಪ್ಯಾಂಟ್‌, ಟೀಶರ್ಟ್‌ ಧರಿಸಿ ಹಾಡುವುದೇ ಫ್ಯೂಷನ್‌ ಎನ್ನುವವರಿಗೆ ಏನನ್ನೋಣ? ಐರಿಶ್‌ ಜನಪದ ನೃತ್ಯವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಕರ್ಣರಂಜಿನಿ ರಾಗದಲ್ಲಿ ಪ್ರಸ್ತುತಪಡಿಸಿದರೆ ಅದು ಫ್ಯೂಷನ್ ಎನಿಸಿಕೊಳ್ಳುತ್ತದೆ’ ಎನ್ನುವುದು ಅವರ ಖಚಿತ ಅಭಿಪ್ರಾಯ.
 
ಲಂಡನ್‌ನಲ್ಲಿ ಜ್ಯೋತ್ಸ್ನಾ ಅವರು ನಡೆಸುತ್ತಿರುವ ವಯೊಲಿನ್‌ ತರಬೇತಿ ಶಾಲೆಯಲ್ಲಿ ಒಟ್ಟು 70 ಮಂದಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 55 ಮಂದಿ ಶ್ರೀಲಂಕಾ ಮೂಲದವರು ಎನ್ನುವುದು ವಿಶೇಷ.
 
‘ಲಂಡನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ತಮ್ಮ ತವರಿನ ಸಂಗೀತ, ಲಲಿತ ಕಲೆಗಳೆಂದರೆ ಅಸಡ್ಡೆ. ಬ್ರಿಟನ್‌ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕಛೇರಿ ನೀಡುವಾಗ ಸಭಿಕರು  ಫ್ಯೂಷನ್‌ಗಿಂತಲೂ ಭಾರತೀಯ ರಾಗಗಳನ್ನು ಕೇಳಲು ಇಷ್ಟಪಡುತ್ತಾರೆ. ಆದರೆ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೇ ಹೆಚ್ಚು ಬೇಡಿಕೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
 
ಜ್ಯೋತ್ಸ್ನಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಕಲಾವಿದ ಡಾ.ಬಾಲಮುರಳಿಕೃಷ್ಣ ಅವರಿಗೂ ವಯೊಲಿನ್ ಸಾಥ್ ನೀಡಿದ್ದರು. ‘ನನ್ನ ಮನವಿಗೆ ಸ್ಪಂದಿಸಿ ಬಾಲು ಸರ್ ಎರಡು ರಿಹರ್ಸಲ್‌ಗೆ ಬಂದಿದ್ದರು. ಇದು ಅವರ ವಿನಯ, ವಿಶಾಲ ಹೃದಯ ಮತ್ತು ಸಹ ಕಲಾವಿದರಿಗೆ ಅವರು ಕೊಡುವ ಮರ್ಯಾದೆಗೆ ಸಾಕ್ಷಿ’ ಎಂದು ಜ್ಯೋತ್ಸ್ಯಾ ನೆನಪಿಸಿಕೊಳ್ಳುತ್ತಾರೆ.
 
ಪೆಥಾಲಜಿಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿ ಲಂಡನ್‌ನಲ್ಲಿ ವೃತ್ತಿ ಮಾಡುತ್ತಿದ್ದ ಜ್ಯೋತ್ಸ್ನಾ ಸಂಗೀತದ ಸೆಳೆತಕ್ಕೆ ಸೋತು ಪೂರ್ಣಾವಧಿ ಅದರಲ್ಲೇ ತೊಡಗಿಸಿಕೊಂಡಿದ್ದಾರೆ. ಅವರು ಲಂಡನ್ ಇಂಟರ್‌ನ್ಯಾಶನಲ್ ಆರ್ಟ್ಸ್ ಫೆಸ್ಟಿವಲ್ ಹಾಗೂ ಬ್ರಿಟನ್‌ನ ಧ್ರುವ ಆರ್ಟ್ಸ್‌ನ ಕಲಾ ನಿರ್ದೇಶಕಿಯೂ ಹೌದು. 
ಮಾಹಿತಿಗೆ www.indianviolin.eu ನೋಡಿ.
 
**
ಏಕಿಂಥಾ ಧೋರಣೆ
ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನನಗೊಂದು ಕಹಿ ಅನುಭವವಾಯ್ತು. ಬೃಹತ್‌ ಸಂಗೀತೋತ್ಸವದಲ್ಲಿ ನನ್ನ ಕಛೇರಿ ನಿಗದಿಯಾಗಿತ್ತು. ದಿನಾಂಕಕ್ಕೆ ಸರಿಯಾಗಿ ನಾನು ಬೆಂಗಳೂರಿಗೆ ಬಂದೆ. ಆದರೆ ಇಲ್ಲಿ ಬಂದ ಮೇಲೆ ನನ್ನ ಕಛೇರಿ ಒಂದು ವಾರ ಮುಂದಕ್ಕೆ ಹಾಕಿರುವ ಬಗ್ಗೆ ಸಂಘಟಕರು ತಿಳಿಸಿದರು. ಅವರ ಆಹ್ವಾನ ಮನ್ನಿಸಿ ಸೀಮಿತ ರಜೆಯಲ್ಲಿ ವಿದೇಶದಿಂದ ಬಂದ ನನ್ನ ಬಗ್ಗೆ ಯಾಕಿಂಥಾ ಅಸಡ್ಡೆ? ನನ್ನ ಬಗ್ಗೆ ಏಕೆ ಈ ಮಲತಾಯಿ ಧೋರಣೆ ಎಂಬುದೇ ಅರ್ಥವಾಗಲಿಲ್ಲ.
-ಜ್ಯೋತ್ಸ್ನಾ ಶ್ರೀಕಾಂತ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.